ಮನುಷ್ಯನ ಬದುಕಿಗೆ ಆಧುನಿಕತೆ, ಆಧ್ಯಾತ್ಮ, ಜನಪದವೂ ಅವಶ್ಯ

| Published : Feb 13 2025, 12:47 AM IST

ಮನುಷ್ಯನ ಬದುಕಿಗೆ ಆಧುನಿಕತೆ, ಆಧ್ಯಾತ್ಮ, ಜನಪದವೂ ಅವಶ್ಯ
Share this Article
  • FB
  • TW
  • Linkdin
  • Email

ಸಾರಾಂಶ

ರಾಮನಗರ: ಆಧುನಿಕತೆ ಬೆಳಕಿನಲ್ಲಿ ಜಗತ್ತು ಇರುವ ರೀತಿ ಕಾಣುತ್ತಿಲ್ಲ. ಹೇಗಿದೆಯೋ ಹಾಗೆ ಕಾಣಿಸದಿದ್ದರೆ ಅದು ಆಧುನಿಕತೆ. ಇದರ ನಡುವೆಯೇ ನಮ್ಮನ್ನು ನಾವು ಕಾಪಾಡಿಕೊಳ್ಳಲು ಬೇಕಿರುವ ಜನಪದವನ್ನು ಸಂರಕ್ಷಿಸಿ ಬೆಳೆಸಿಕೊಂಡು ಹೋಗಬೇಕಿದೆ. ಆಗ ನಮ್ಮ ಕಲೆಗೆ ಎಂದೂ ಧಕ್ಕೆ ಬರುವುದಿಲ್ಲ ಎಂದು ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ ಅಭಿಪ್ರಾಯಪಟ್ಟರು.

ರಾಮನಗರ: ಆಧುನಿಕತೆ ಬೆಳಕಿನಲ್ಲಿ ಜಗತ್ತು ಇರುವ ರೀತಿ ಕಾಣುತ್ತಿಲ್ಲ. ಹೇಗಿದೆಯೋ ಹಾಗೆ ಕಾಣಿಸದಿದ್ದರೆ ಅದು ಆಧುನಿಕತೆ. ಇದರ ನಡುವೆಯೇ ನಮ್ಮನ್ನು ನಾವು ಕಾಪಾಡಿಕೊಳ್ಳಲು ಬೇಕಿರುವ ಜನಪದವನ್ನು ಸಂರಕ್ಷಿಸಿ ಬೆಳೆಸಿಕೊಂಡು ಹೋಗಬೇಕಿದೆ. ಆಗ ನಮ್ಮ ಕಲೆಗೆ ಎಂದೂ ಧಕ್ಕೆ ಬರುವುದಿಲ್ಲ ಎಂದು ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ ಅಭಿಪ್ರಾಯಪಟ್ಟರು.

ಜಾನಪದ ಲೋಕದಲ್ಲಿ ಜಾನಪದ ಪರಿಷತ್ತು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ 2 ದಿನಗಳ ಮಹಿಳಾ ಜಾನಪದ ಲೋಕೋತ್ಸವ-2025 ಸಮಾರೋಪ ಸಮಾರಂಭದಲ್ಲಿ ವಿವಿಧ ಜಾನಪದ ಕಲಾ ಪ್ರಕಾರಗಳ ಸಾಧಕರು ಹಾಗೂ ವಿದ್ವಾಂಸರಿಗೆ ಜಾನಪದ ಲೋಕ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು. ಆಧುನಿಕತೆಯ ಬೆಳಕಿನಲ್ಲಿರುವ ನಾವು ಭ್ರಮೆಯಲ್ಲಿ ಬದುಕುತ್ತಿದ್ದೇವೆ. ಈ ಬೆಳಕಿನಲ್ಲಿಯೇ ನಾವು ಕುಳಿತಿರುವ ರೆಂಬೆಯನ್ನು ನಾವೇ ಕತ್ತರಿಸಿಕೊಳ್ಳುತ್ತಿದ್ದೇವೆ. ಅಂದರೆ ಆಧುನಿಕತೆ ಬೆಳಕಿನಡಿ ಜಾನಪದದ ರೆಂಬೆಯನ್ನು ಕಡಿಯುವ ಕೆಲಸ ಮಾಡಲಾಗುತ್ತಿದೆ. ಮನುಷ್ಯನ ಬದುಕಿಗೆ ಆಧುನಿಕತೆ ಅಧ್ಯಾತ್ಮ ಮತ್ತು ಜನಪದವೂ ಬೇಕಿದೆ ಎಂದು ಹೇಳಿದರು.

ಪರಿಷತ್ತಿನ ಅಧ್ಯಕ್ಷ ಪ್ರೊ.ಹಿ.ಚಿ. ಬೋರಲಿಂಗಯ್ಯ ಮಾತನಾಡಿ, ಪರಿಷತ್ತಿನಿಂದ ಜಾನಪದ ಕಲಾ ಪ್ರಕಾರಗಳು ಮತ್ತು ಕಲೆಗಳ ಕುರಿತು ಕನ್ನಡದ ಜೊತೆಗೆ ಇಂಗ್ಲಿಷ್ ನಲ್ಲೂ‌ ಪುಸ್ತಕ ಪ್ರಕಟಣೆ ಮಾಡಲು ಯೋಜನೆ ರೂಪಿಸಲಾಗಿದೆ. ಆ ಮೂಲಕ, ನಮ್ಮ ನಾಡಿನ ಜಾನಪದದ ಕಂಪನ್ನು ವಿಶ್ವಾದ್ಯಂತ ಹರಡಲು ಸಿದ್ದರಾಗಿದ್ದೇವೆ ಎಂದು ತಿಳಿಸಿದರು.

ದೆಹಲಿ ಕನ್ನಡ ಸಂಘದ ಅಧ್ಯಕ್ಷ ನಾಗರಾಜು, ದೇಶದ ರಾಜಧಾನಿಯಲ್ಲಿರುವ ನಮ್ಮ ಸಂಘ 75ನೇ ವರ್ಷಕ್ಕೆ ಕಾಲಿಟ್ಟಿದೆ. ದೆಹಲಿ ಪಕ್ಕದ ನೋಯ್ಡಾದಲ್ಲಿ ಎರಡು ಎಕರೆ ಜಾಗದಲ್ಲಿ ಸಂಘದಿಂದ ಸುಸಜ್ಜಿತ ಕಟ್ಟಡ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ. ಯುಪಿಎಸ್‌ಸಿ ಪರೀಕ್ಷೆಗೆ ತಯಾರಾಗುವ ರಾಜ್ಯ ವಿದ್ಯಾರ್ಥಿಗಳಿಗೆ ಅಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲಾಗುವುದು ಎಂದರು.

ಜಾನಪದ ಲೋಕ ಪ್ರಶಸ್ತಿ ಪ್ರದಾನ :

ಜಾನಪದದ ವಿವಿಧ ಕಲಾ ಪ್ರಕಾರಗಳಲ್ಲಿ ಸಾಧನೆ ಮಾಡಿದ ಕಲಾವಿದರು ಹಾಗೂ ಜಾನಪದ ವಿದ್ವಾಂಸರು ಸೇರಿದಂತೆ 19 ಮಂದಿಗೆ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಹಾಗೂ ಶ್ರೀ ಅನ್ನದಾನೇಶ್ವರನಾಥ ಸ್ವಾಮೀಜಿ ಪ್ರಶಸ್ತಿ ಪ್ರದಾನ ಮಾಡಿದರು.

ಪ್ರಶಸ್ತಿ 10-25 ಸಾವಿರವರೆಗಿನ ನಗದು ಪುರಸ್ಕಾರ ಹಾಗೂ ಫಲಕ ಒಳಗೊಂಡಿದೆ. ಇದೇ ಸಂದರ್ಭದಲ್ಲಿ ಪದ್ಮಶ್ರೀ ಪುರಸ್ಕೃತ ಸಾಹಸ ಕಲಾವಿದ ಹಾಸನ ರಘು ಹಾಗೂ ಗಿರಿಜನ ಲೋಕದ ನಿರ್ಮಾಣಕಾರ ಹರ್ಷ ಸೊಲಬಕ್ಕನವರ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಪರಿಷತ್ತಿನ ಮ್ಯಾನೇಜಿಂಗ್ ಟ್ರಸ್ಟಿ ಆದಿತ್ಯ ನಂಜರಾಜ್, ಆಡಳಿತಾಧಿಕಾರಿ ನಂದಕುಮಾರ್ ಹೆಗಡೆ, ಕರ್ನಾಟಕ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದ ಕುಲಪತಿ ಡಾ.ನಾಗೇಶ್ ವಿ.ಬೆಟ್ಟಕೋಟೆ, ಬುಡಕಟ್ಟು ಕಲಾವಿದೆ ರತ್ನಮ್ಮ ಇತರರು ಉಪಸ್ಥಿತರಿದ್ದರು.

10ಕೆಆರ್ ಎಂಎನ್ 8.ಜೆಪಿಜಿ

ರಾಮನಗರದ ಹೊರವಲಯದ ಜಾನಪದ ಲೋಕದಲ್ಲಿ ಮಹಿಳಾ ಜಾನಪದ ಲೋಕೋತ್ಸವ-2025 ಸಮಾರೋಪ ಸಮಾರಂಭದಲ್ಲಿ ವಿವಿಧ ಜಾನಪದ ಕಲಾ ಪ್ರಕಾರಗಳ ಸಾಧಕರು ಹಾಗೂ ವಿದ್ವಾಂಸರಿಗೆ ಜಾನಪದ ಲೋಕ ಪ್ರಶಸ್ತಿ ಪ್ರದಾನ ಮಾಡಲಾಯಿತು.