ಮೋದಿ ಮತ್ತೊಮ್ಮೆ ಪ್ರಧಾನಿಯಾಗಿ ಆಯ್ಕೆ; ಬಿಜೆಪಿ ಸಂಭ್ರಮಾಚರಣೆ

| Published : Jun 11 2024, 01:35 AM IST

ಮೋದಿ ಮತ್ತೊಮ್ಮೆ ಪ್ರಧಾನಿಯಾಗಿ ಆಯ್ಕೆ; ಬಿಜೆಪಿ ಸಂಭ್ರಮಾಚರಣೆ
Share this Article
  • FB
  • TW
  • Linkdin
  • Email

ಸಾರಾಂಶ

ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗುವ ಮೂಲಕ ಇಡೀ ವಿಶ್ವದ ಗಮನ ಸೆಳೆದಿದ್ದಾರೆ.

ಬಳ್ಳಾರಿ: ಪ್ರಧಾನಮಂತ್ರಿಯಾಗಿ ನರೇಂದ್ರ ಮೋದಿ 3ನೇ ಬಾರಿ ಪದಗ್ರಹಣ ಮಾಡಿದ ಹಿನ್ನೆಲೆಯಲ್ಲಿ ಬಿಜೆಪಿ ಕಾರ್ಯಕರ್ತರು ನಗರದಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.

ಇಲ್ಲಿನ ಗಡಗಿಚನ್ನಪ್ಪ ವೃತ್ತದಲ್ಲಿ ಜಮಾಯಿಸಿದ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರು, ನರೇಂದ್ರ ಮೋದಿ ಪರ ಘೋಷಣೆಗಳನ್ನು ಕೂಗಿದರು.

ಇದೇ ವೇಳೆ ಮಾತನಾಡಿದ ಪಕ್ಷದ ಜಿಲ್ಲಾಧ್ಯಕ್ಷ ಅನಿಲ್‌ಕುಮಾರ್ ಮೋಕಾ, ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗುವ ಮೂಲಕ ಇಡೀ ವಿಶ್ವದ ಗಮನ ಸೆಳೆದಿದ್ದಾರೆ. ಭಾರತ ವಿಶ್ವಗುರು ಆಗಬೇಕು ಎಂಬ ಆಶಯ ಹೊತ್ತ ಪ್ರಧಾನಮಂತ್ರಿ ದೇಶವನ್ನು ಸಮಗ್ರ ಅಭಿವೃದ್ಧಿಯತ್ತ ಕೊಂಡೊಯ್ಯಲಿದ್ದಾರೆ. ಪ್ರಧಾನಮಂತ್ರಿಯ ಎರಡು ಅವಧಿಯಲ್ಲಿಯೇ ಇಡೀ ವಿಶ್ವವೇ ಮೆಚ್ಚುವಂತೆ ಕೆಲಸ ಮಾಡಿ ಗಮನ ಸೆಳಿದಿದ್ದಾರೆ. ಎಲ್ಲ ಸಮುದಾಯಗಳ ಕಲ್ಯಾಣಕ್ಕಾಗಿ ಹತ್ತಾರು ಯೋಜನೆಗಳನ್ನು ಜಾರಿಗೊಳಿಸಿ, ದೇಶದ ಪ್ರಗತಿಗೆ ಶ್ರಮಿಸಿದ್ದಾರೆ. ಹೀಗಾಗಿಯೇ ದೇಶದ ಮತದಾರರು ಮೂರನೇ ಬಾರಿಗೆ ನರೇಂದ್ರ ಮೋದಿ ಅವರಿಗೆ ಆಶೀರ್ವಾದ ಮಾಡಿದ್ದಾರೆ ಎಂದು ತಿಳಿಸಿದರು.

ಪಕ್ಷದ ಮಹಿಳಾ ಘಟಕದ ಉಪಾಧ್ಯಕ್ಷೆ ಡಾ.ಅರುಣಾ ಕಾಮಿನೇನಿ ಮಾತನಾಡಿ, ನರೇಂದ್ರ ಮೋದಿ ಮೂರನೇ ಬಾರಿಗೆ ಪ್ರಧಾನಿಯಾಗುತ್ತಿರುವುದು ನಮ್ಮೆಲ್ಲರ ಸುದೈವವಾಗಿದೆ. ಮೋದಿ ಆಡಳಿತದಲ್ಲಿ ಭಾರತ ಸಮಗ್ರ ಅಭಿವೃದ್ಧಿ ಕಾಣಲಿದ್ದು, ಆರ್ಥಿಕವಾಗಿ ಮುಂಚೂಣಿ ಸಾಧಿಸಲು ಸಾಧ್ಯ ಎಂದು ಹೇಳಿದರು.

ಮಹಿಳಾ ಘಟಕದ ಅಧ್ಯಕ್ಷೆ ಸುಗುಣಾ, ಸಾಧನಾ ಹಿರೇಮಠ, ವಿಜಯಲಕ್ಷ್ಮಿ, ಪುಷ್ಪಲತಾ, ಪಕ್ಷದ ಮುಖಂಡರಾದ ಮಲ್ಲನಗೌಡ, ರಾಜೇಶ್, ಗುಡಗಂಟಿ ಹನುಮಂತು, ಸುರೇಂದ್ರ, ಕೇದಾರನಾಥಸ್ವಾಮಿ ಸೇರಿದಂತೆ ಪಕ್ಷದ ಕಾರ್ಯಕರ್ತರು ಹಾಗೂ ನರೇಂದ್ರ ಮೋದಿ ಅಭಿಮಾನಿ ಬಳಗದವರು ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡಿದ್ದರು.