ಕನ್ನಡಪ್ರಭ ವಾರ್ತೆ, ಮಂಡ್ಯ/ನಾಗಮಂಗಲ

ಆದಿ ಚುಂಚನಗಿರಿ ಮಹಾಸಂಸ್ಥಾನ ಮಠದಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀ ಗುರು ಭೈರವೈಕ್ಯ ಮಂದಿರ ಲೋಕಾರ್ಪಣೆಗೆ ಪ್ರಧಾನಿ ನರೇಂದ್ರ ಮೋದಿ ಆಗಮಿಸಿದ್ದ ವೇಳೆ ನೆರೆದಿದ್ದ ಸಹಸ್ರಾರು ಜನರು ಹರ್ಷೋದ್ಘಾರದೊಂದಿಗೆ ಅಭೂತಪೂರ್ವ ಸ್ವಾಗತ ಕೋರಿದ್ದು ಮೋದಿ ಹವಾ ಸಾಕ್ಷೀಕರಿಸುವಂತಿತ್ತುಶ್ರೀ ಕ್ಷೇತ್ರಕ್ಕೆ ಪ್ರಧಾನಮಂತ್ರಿಯೊಬ್ಬರು ಇದೇ ಮೊದಲ ಬಾರಿಗೆ ಭೇಟಿ ನೀಡಿದ್ದರಿಂದ ಹೊಸ ಸಂಚಲನವೇ ಸೃಷ್ಟಿಯಾಗಿತ್ತು. ಮೋದಿಯನ್ನು ಹತ್ತಿರದಿಂದ ಕಂಡು ಪುಳಕಿತರಾದ ಜನರು ಶಿಳ್ಳೆ ಹಾಕಿ, ಮೋದಿ ಪರ ಜಯಘೋಷಗಳನ್ನು ಮೊಳಗಿಸಿದರು.ಬುಧವಾರ ಶ್ರೀ ಗುರು ಭೈರವೈಕ್ಯ ಮಂದಿರ ಉದ್ಘಾಟನೆಗೆ ಆಗಮಿಸಿದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಶ್ರೀಮಠ ಹಾಗೂ ಜಿಲ್ಲಾಡಳಿತ ಅತ್ಯಂತ ಗೌರವದೊಂದಿಗೆ ಸ್ವಾಗತಿಸಿ ಬರಮಾಡಿಕೊಳ್ಳಲಾಯಿತು.ಬೆಳಗ್ಗೆ ೧೦.೫೦ಕ್ಕೆ ಶ್ರೀ ಕ್ಷೇತ್ರದ ತಪೋವನದ ಆವರಣದಲ್ಲಿ ನಿರ್ಮಿಸಿದ್ದ ಹೆಲಿಪ್ಯಾಡ್‌ಗೆ ವಿಶೇಷ ಹೆಲಿಕಾಪ್ಟರ್‌ನಲ್ಲಿ ಬಂದಿಳಿದ ನರೇಂದ್ರ ಮೋದಿ ಅವರನ್ನು ರಸ್ತೆ ಮೂಲಕ ವಿಶೇಷ ರಕ್ಷಣಾ ತಂಡದ (ಎಸ್‌ಪಿಜಿ) ಬಿಗಿ ಭದ್ರತೆಯಲ್ಲಿ ೧.೫ಕಿ.ಮೀ ದೂರದ ಶ್ರೀಕ್ಷೇತ್ರಕ್ಕೆ ಕರೆತರಲಾಯಿತು.ಕ್ಷೇತ್ರದಲ್ಲಿ ಪರಶಿವನು ಬಂದು ತಪಸ್ಸು ಮಾಡಿದ ಸ್ಥಳಕ್ಕೆ ಮೊದಲು ತೆರಳಿದ ನರೇಂದ್ರ ಮೋದಿ ಜ್ವಾಲಾಲಾಪೀಠಕ್ಕೆ (ಹುರಿಗದ್ದುಗೆ) ನಮಸ್ಕರಿಸಿದ ಬಳಿಕ ಕ್ಷೇತ್ರದ ಅಧಿದೇವತೆ ಶ್ರೀ ಕಾಲಭೈರವೇಶ್ವರಸ್ವಾಮಿ ದೇಗುಲಕ್ಕೆ ಭೇಟಿ ಕೊಟ್ಟರು. ಈ ವೇಳೆ ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಶ್ರೀಗಳು ಪ್ರಧಾನಿ ಮೋದಿ ಅವರ ಹಣೆಗೆ ತಿಲಕವಿಟ್ಟರು. ಶ್ರೀ ಕಾಲಭೈರವೇಶ್ವರಸ್ವಾಮಿಗೆ ಸ್ವತಃ ಮಂಗಳಾರತಿ ಮಾಡಿ ಪೂಜೆ ಸಲ್ಲಿಸಿದ ಮೋದಿ ಕ್ಷೇತ್ರದ ಶ್ರೀ ಮಾಳಮ್ಮ ಮತ್ತು ಶ್ರೀ ಸ್ಥಂಬಾಭಿಕೆ ದೇವಿ ದೇವಾಲಯಗಳಿಗೂ ಭೇಟಿ ಕೊಟ್ಟು ಪೂಜೆ ಸಲ್ಲಿಸಿ ಪ್ರದಕ್ಷಿಣೆ ಹಾಕಿ ಕ್ಷೇತ್ರಾಧಿದೇವತೆಗಳ ಆಶೀರ್ವಾದ ಪಡೆದುಕೊಂಡರು. ನಂತರ ನೂತನವಾಗಿ ನಿರ್ಮಿಸಿರುವ ಶ್ರೀಗುರು ಭೈರವೈಕ್ಯ ಮಂದಿರವನ್ನು ಉದ್ಘಾಟಿಸಿ ಭೈರವೈಕ್ಯ ಶ್ರೀಗಳ ಪಾದುಕೆಗೆ ನಮಸ್ಕರಿಸಿ ಪುತ್ಥಳಿ ಇರುವ ಭವ್ಯ ಧ್ಯಾನ ಮಂದಿರ ಹಾಗೂ ನೆಲಮಹಡಿಯಲ್ಲಿರುವ ಗರ್ಭಗುಡಿಯಲ್ಲಿ ಪೂಜೆ ಸಲ್ಲಿಸಿ ಪ್ರದಕ್ಷಿಣೆ ಹಾಕಿ ಭೈರವೈಕ್ಯ ಡಾ.ಬಾಲಗಂಗಾಧರನಾಥಶ್ರೀಗಳಿಗೆ ತಮ್ಮ ಭಕ್ತಿಭಾವ ಸಮಿರ್ಪಿಸಿ ಆಶೀರ್ವಾದ ಪಡೆದುಕೊಂಡರು.ವೇದಿಕೆ ಸಮಾರಂಭ ಆರಂಭವಾಗುವ ೧೫ ನಿಮಿಷ ಮುಂಚಿತವಾಗಿಯೇ ಗಾಲಿ ಕುರ್ಚಿಯಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರನ್ನು ವೇದಿಕೆಗೆ ಕರೆತರುತ್ತಿದ್ದಂತೆ ನೆರೆದಿದ್ದ ಜನರಿಂದ ಹರ್ಷೋದ್ಘಾರ ಮೊಳಗಿಸಿದರು. ಪ್ರಧಾನಿ ನರೇಂದ್ರ ಮೋದಿ ಅವರು ವೇದಿಕೆಗೆ ಬರುತ್ತಿದ್ದಂತೆ ಮೋದಿ ಮೋದಿ ಎಂಬ ಘೋಷಣೆ ಮುಗಿಲು ಮುಟ್ಟಿತ್ತು.

-ಬಾಕ್ಸ್‌- ಬೆಳ್ಳಿ ನವಿಲಿನ ವಿಗ್ರಹ ಉಡುಗೊರೆಪ್ರಧಾನಮಂತ್ರಿಯೊಬ್ಬರು ಶ್ರೀಮಠಕ್ಕೆ ಇದೇ ಮೊದಲ ಬಾರಿಗೆ ಭೇಟಿ ಕೊಟ್ಟ ಹಿನ್ನಲೆಯಲ್ಲಿ ನಮ್ಮ ರಾಷ್ಟ್ರಪಕ್ಷಿ ಹಾಗೂ ಆದಿಚುಂಚನಗಿರಿಯ ಸಂಕೇತವೂ ನವಿಲು ಆಗಿರುವುದರಿಂದ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಯವರು ಶ್ರೀಮಠದ ಸಂಪ್ರದಾಯದಂತೆ ರೇಷ್ಮೆ ಶಾಲು ಹಾರ ಹಾಕಿ ನವಿಲಿನ ಬೆಳ್ಳಿ ವಿಗ್ರಹವನ್ನು ಉಡುಗೊರೆಯಾಗಿ ನೀಡಿ ಗೌರವಿಸಿದರು. ಸಮಾರಂಭದ ವೇದಿಕೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಸೌಂದರ್ಯ ಲಹರಿ ಮತ್ತು ಶಿವಮಹಿಮ್ನಾ ಸ್ತೋತ್ರಂ ಎಂಬ ಧಾರ್ಮಿಕ ಗ್ರಂಥವನ್ನು ಬಿಡುಗಡೆ ಮಾಡಿದರು.

ವೇದಿಕೆಯಲ್ಲಿ ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥಸ್ವಾಮೀಜಿ, ಗುಜರಾತ್‌ನ ರಾಜ್‌ಕೋಟ್‌ನ ಅರ್ಷ ವಿದ್ಯಾಮಂದಿರದ ಪೀಠಾಧ್ಯಕ್ಷ ಸ್ವಾಮಿ ಶ್ರೀ ಪರಮಾತ್ಮಾನಂದ ಸರಸ್ವತಿ ಸ್ವಾಮೀಜಿ, ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕೆ ಸಚಿವ ಎಚ್.ಡಿ.ಕುಮಾರಸ್ವಾಮಿ, ಶೋಭಾ ಕರಂದ್ಲಾಜೆ, ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ, ವಿಪಕ್ಷ ನಾಯಕ ಆರ್.ಅಶೋಕ್ ಇದ್ದರು. ಶ್ರೀಮಠದ ಪ್ರಧಾನ ಕಾರ್ಯದರ್ಶಿ ಪ್ರಸನ್ನನಾಥಸ್ವಾಮೀಜಿ, ಮೈಸೂರು ಶಾಖಾ ಮಠದ ಶ್ರೀ ಸೋಮೇಶ್ವರನಾಥ ಸ್ವಾಮೀಜಿ, ಹಾಸನ ಶಾಖಾ ಮಠದ ಶ್ರೀ ಶಂಭೂನಾಥಸ್ವಾಮೀಜಿ, ಮಾಜಿ ಸಿಎಂ ಸದಾನಂದಗೌಡ, ಮಾಜಿ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವಥನಾರಾಯಣ, ವಿವಿಧ ಮಠಾಧೀಶರು, ಶಾಖಾ ಮಠಗಳ ಶ್ರೀಗಳು, ಗಣ್ಯರು ಸೇರಿದಂತೆ ಲಕ್ಷಾಂತರ ಮಂದಿ ಭಕ್ತರು ಸಮಾರಂಭಕ್ಕೆ ಸಾಕ್ಷಿಯಾದರು.-ಬಾಕ್ಸ್‌-

ಹರಿದುಬಂದ ಭಕ್ತಸಾಗರಪ್ರಧಾನಮಂತ್ರಿಯೊಬ್ಬರು ಮೊದಲ ಬಾರಿಗೆ ಶ್ರೀ ಮಠಕ್ಕೆ ಭೇಟಿ ನೀಡಿದ್ದ ಹಿನ್ನಲೆಯಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಅಪಾರ ಸಂಖ್ಯೆಯ ಭಕ್ತ ಸಮೂಹ ಸಾಗರೋಪಾದಿಯಲ್ಲಿ ಹರಿದುಬಂದಿತ್ತು. ಮಂದಿರ ಲೋಕಾರ್ಪಣೆಗೆ ಬಂದಿದ್ದ ಎಲ್ಲ ಭಕ್ತರಿಗೂ ಕ್ಷೇತ್ರದ ಎಂಟರಿಂದ ಹತ್ತು ಸ್ಥಳಗಳಲ್ಲಿ ಪ್ರಸಾದದ ರೂಪದಲ್ಲಿ ಭೋಜನ ವ್ಯವಸ್ಥೆ ಮಾಡಲಾಗಿತ್ತು. ಬಾತು, ಮೊಸರನ್ನ, ಕಾಯಿಹೋಳಿಗೆ, ಸಿಹಿಪೊಂಗಲ್‌ನ್ನು ಪ್ರಸಾದ ರೂಪದಲ್ಲಿ ವಿತರಿಸಲಾಯಿತು. ಸುಮಾರು ಒಂದು ಲಕ್ಷ ಭಕ್ತರಿಗೆ ಅನುಕೂಲವಾಗುವಂತೆ ಭೋಜನ ವ್ಯವಸ್ಥೆ ಮಾಡಲಾಗಿತ್ತು. ಸ್ವಚ್ಛತೆಗೆ ಹೆಚ್ಚಿನ ಒತ್ತನ್ನು ನೀಡುವ ಸಲುವಾಗಿ ಊಟದ ತಟ್ಟೆಗಳನ್ನು ಒಂದೆಡೆ ಹಾಕುವಂತೆ ಅಲ್ಲಲ್ಲಿ ಕಬ್ಬಿಣದ ತಗಡಿನ ಬ್ಯಾರಿಕೇಡ್‌ಗಳನ್ನು ಹಾಕಿ ಅದರೊಳಗೆ ಹಾಕುವಂತೆ ವ್ಯವಸ್ಥೆ ಮಾಡಿತ್ತು. ನೂಕು ನುಗ್ಗಲಿಗೆ ಅವಕಾಶವಾಗದಂತೆ ಬ್ಯಾರಿಕೇಡ್‌ಗಳ ಮೂಲಕ ಸರತಿ ಸಾಲಿನಲ್ಲಿ ಬಂದು ಭಕ್ತರು ಊಟ ಪಡೆಯುವುದಕ್ಕೆ ಅನುಕೂಲ ಮಾಡಿಕೊಡಲಾಗಿತ್ತು. ದೂರದ ಊರುಗಳಿಂದ ಬಂದ ವಾಹನಗಳ ಪಾರ್ಕಿಂಗ್‌ಗೆ ತೊಂದರೆಯಾಗದಂತೆ ನಿರ್ವಹಣೆ ಮಾಡಲಾಗಿತ್ತು.