ಬಿಜೆಪಿಗೆ ಮೋದಿ, ಕಾಂಗ್ರೆಸ್‌ಗೆ ಗ್ಯಾರಂಟಿ ಜಪ

| Published : Apr 23 2024, 12:50 AM IST

ಸಾರಾಂಶ

ಕ್ಷೇತ್ರದಾದ್ಯಂತ ಆಗಬೇಕಾಗಿರುವ ಅಭಿವೃದ್ಧಿಗಳ ಕುರಿತಾಗಲಿ ಚರ್ಚೆಯಾಗುತ್ತಲೇ ಇಲ್ಲ. ಇದು ಪ್ರಜ್ಞಾವಂತರ ಆಕ್ರೋಶಕ್ಕೆ ತುತ್ತಾಗಿದೆ.

-ಸ್ಥಳೀಯ ಅಭಿವೃದ್ಧಿ, ಸಮಸ್ಯೆಗಳ ಕುರಿತು ಚರ್ಚೆಯೇ ಇಲ್ಲ ಸೋಮರಡ್ಡಿ ಅಳವಂಡಿ

ಕನ್ನಡಪ್ರಭ ವಾರ್ತೆ ಕೊಪ್ಪಳ

ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ ಈಗ ಬಿಜೆಪಿ ಅಭ್ಯರ್ಥಿ ಪ್ರಧಾನಿ ನರೇಂದ್ರ ಮೋದಿ ಕಾರ್ಯವೈಖರಿಯನ್ನೇ ಮುಂದಿಟ್ಟುಕೊಂಡು ಮತಯಾಚನೆ ಮಾಡುತ್ತಿದ್ದರೆ, ಕಾಂಗ್ರೆಸ್ ಅಭ್ಯರ್ಥಿ ರಾಜಶೇಖರ ಹಿಟ್ನಾಳ ಗ್ಯಾರಂಟಿಗಳನ್ನು ಮುಂದಿಟ್ಟುಕೊಂಡು ಮತಯಾಚಿಸುತ್ತಿದ್ದಾರೆ. ಈ ನಡುವೆ ಸ್ಥಳೀಯ ಅಭಿವೃದ್ಧಿ, ಸಮಸ್ಯೆಗಳ ಚರ್ಚೆಯಾಗುತ್ತಿಲ್ಲ.

ಕೊಪ್ಪಳ ಲೋಕಸಭಾ ಕ್ಷೇತ್ರದಾದ್ಯಂತ ಹಲವಾರು ಸಮಸ್ಯೆಗಳು ಇವೆ. ಅವುಗಳ ಕುರಿತಾಗಲಿ ಅಥವಾ ಕ್ಷೇತ್ರದಾದ್ಯಂತ ಆಗಬೇಕಾಗಿರುವ ಅಭಿವೃದ್ಧಿಗಳ ಕುರಿತಾಗಲಿ ಚರ್ಚೆಯಾಗುತ್ತಲೇ ಇಲ್ಲ. ಇದು ಪ್ರಜ್ಞಾವಂತರ ಆಕ್ರೋಶಕ್ಕೆ ತುತ್ತಾಗಿದೆ.

ಬಿಜೆಪಿ ನಾಯಕರು ಸಹ ಪ್ರಧಾನಿ ನರೇಂದ್ರ ಮೋದಿ ಕಳೆದ 10 ವರ್ಷಗಳಲ್ಲಿ ಮಾಡಿದ ಸಾಧನೆ ಮತ್ತು ವಿಶ್ವದಾದ್ಯಂತ ಭಾರತಕ್ಕೆ ದೊರೆಯುತ್ತಿರುವ ಗೌರವವನ್ನೇ ಪದೇ ಪದೇ ಪ್ರಸ್ತಾಪ ಮಾಡುತ್ತಾ ಮತಯಾಚನೆ ಮಾಡುತ್ತಿದ್ದಾರೆ.

ಹಾಗೆಯೇ ಕಾಂಗ್ರೆಸ್ ನಾಯಕರು ರಾಜ್ಯ ಸರ್ಕಾರ ಘೋಷಣೆ ಮಾಡಿರುವ ಗ್ಯಾರಂಟಿ ಯೋಜನೆಗಳು ಹಾಗೂ ಕಾಂಗ್ರೆಸ್ ಲೋಕಸಭಾ ಚುನಾವಣೆಯಲ್ಲಿ ಘೋಷಣೆ ಮಾಡಿರುವ ಗ್ಯಾರಂಟಿಗಳನ್ನೇ ಮುಂದಿಟ್ಟುಕೊಂಡು ಮತಯಾಚನೆ ಮಾಡುತ್ತಿದ್ದಾರೆ.

ಪ್ರಸ್ತಾಪವಾಗದ ಸಮಸ್ಯೆಗಳು:

ತುಂಗಭದ್ರಾ ಜಲಾಶಯ ಹೂಳು ತುಂಬಿರುವುದು ಮತ್ತು ಅದನ್ನು ನಿರ್ವಹಣೆ ಮಾಡುವುದು ಹಾಗೂ ಪರ್ಯಾಯ ಜಲಾಶಯ ನಿರ್ಮಾಣ ಮಾಡುವ ಕುರಿತು ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರು ಪ್ರಸ್ತಾಪ ಮಾಡುತ್ತಲೇ ಇಲ್ಲ. ಈ ಹಿಂದೆ ಲೋಕಸಭಾ ಚುನಾವಣೆಯಲ್ಲಿ ಗಂಗಾವತಿಗೆ ಆಗಮಿಸಿದ್ದ ಪ್ರಧಾನಿ ನರೇಂದ್ರ ಮೋದಿ ತುಂಗಭದ್ರಾ ಜಲಾಶಯಕ್ಕೆ ಸಾವಿರ ಕೋಟಿ ರುಪಾಯಿ ನೀಡುವುದಾಗಿ ಹೇಳಿದ್ದರು. ಆದರೆ, ಆ ಬಗ್ಗೆ ಕಾಂಗ್ರೆಸ್ ನಾಯಕರು ಪ್ರಶ್ನೆ ಮಾಡುತ್ತಿಲ್ಲ. ಹಾಗೆಯೇ ತುಂಗಭದ್ರಾ ಜಲಾಶಯ ಸಮಸ್ಯೆಯ ಇತ್ಯರ್ಥದ ಕುರಿತು ಮಾತನಾಡುತ್ತಿಲ್ಲ. ಪ್ರತಿ ವರ್ಷವೂ ಜಲಾಶಯ ಭರ್ತಿಯಾಗಿ ಮಳೆಗಾಲದಲ್ಲಿ ಹರಿದುಹೋಗುವ ನೀರು ಬಳಕೆಯ ಕುರಿತು ಸಹ ಯಾರೊಬ್ಬರೂ ಮಾತನಾಡುತ್ತಿಲ್ಲ.

ಸಿಂಗಟಾಲೂರು ಏತ ನೀರಾವರಿ ಯೋಜನೆ ಜಾರಿಯಾಗಿದ್ದರೂ ಕೊಪ್ಪಳ ಭಾಗಕ್ಕೆ ಇದುವರೆಗೂ ಹನಿ ನೀರು ಬಂದಿಲ್ಲ. ಯೋಜನೆ ಲೋಕಾರ್ಪಣೆಗೊಂಡು 14 ವರ್ಷಗಳಾದರೂ ಕೊಪ್ಪಳ ಭಾಗದಲ್ಲಿ ಕಾಲುವೆ ನಿರ್ಮಾಣ ಮಾಡಿ, ನೀರು ಕೊಡುವ ಕೆಲಸ ಆಗುತ್ತಿಲ್ಲ. ರೈತರ ಸಮಸ್ಯೆ ಕುರಿತು ಚುನಾವಣೆಯಲ್ಲಿ ಚರ್ಚೆಯಾಗುತ್ತಲೇ ಇಲ್ಲ.

ಕೊಪ್ಪಳದಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಮಾಡುವ ಕುರಿತು ನಡೆದ ಪ್ರಯತ್ನ ಕೈಗೂಡಿಯೇ ಇಲ್ಲ. ಕೆಕೆಆರ್ ಡಿಬಿಯಲ್ಲಿ ಭೂಮಿ ಖರೀದಿ ಪ್ರಸ್ತಾಪಕ್ಕೆ ಅನುಮೋದನೆ ದೊರೆಯಿತಾದರೂ ಜಾರಿಯಾಗಲಿಲ್ಲ. ಉಡಾನ್ ಸ್ಥಳೀಯ ಖಾಸಗಿ ವಿಮಾನ ತಂಗುದಾಣದವರ ಅಸಹಕಾರದಿಂದ ಜಾರಿಯಾಗಲೇ ಇಲ್ಲ. ಇದ್ಯಾವುದು ರಾಜಕೀಯ ಪಕ್ಷಗಳಿಗೆ ಚುನಾವಣೆಯ ಚರ್ಚೆಗೆ ಬರುತ್ತಲೇ ಇಲ್ಲ.

ಕೊಪ್ಪಳ ಜಿಲ್ಲೆಯಲ್ಲಿ ಜಿಂಕೆ ಹಾವಳಿ ಜಾಸ್ತಿ ಇದೆ, ಕರಡಿ ದಾಳಿ ವಿಪರೀತ ಇದೆ. ಜಿಂಕೆ ಹಾವಳಿಯಿಂದ ಹತ್ತಾರು ಸಾವಿರ ಎಕರೆ ಭೂಮಿಯನ್ನು ಬಿತ್ತನೆಯನ್ನೇ ಮಾಡುತ್ತಿಲ್ಲ. ಇದಕ್ಕೆ ಪರಿಹಾರವಾಗಿ ಜಿಂಕೆವನ ನಿರ್ಮಾಣ ಮಾಡುವ ಪ್ರಸ್ತಾಪ ರಾಜ್ಯದಿಂದ ಕೇಂದ್ರಕ್ಕೆ ಈ ಹಿಂದೆ ಹೋಯಿತಾದರೂ ನಂತರ ಅದಕ್ಕೆ ಕೇಂದ್ರ ಅಸ್ತು ಎನ್ನಲೇ ಇಲ್ಲ. ಹೀಗಾಗಿ, ಸಮಸ್ಯೆ ಹಾಗೆಯೇ ಇದೆ.

ಕರಡಿ ಹಾವಳಿಯಿಂದ ಪ್ರಸಕ್ತ ವರ್ಷವೇ ಮೂವರು ಪ್ರಾಣ ತೆತ್ತಿದ್ದಾರೆ. ಚುನಾವಣೆ ಘೋಷಣೆಯಾದ ಮೇಲೆಯೇ ವಾರದ ಹಿಂದೆ ಇಬ್ಬರು ಪ್ರಾಣ ತೆತ್ತಿದ್ದಾರೆ. ಹೀಗಾಗಿ, ಕರಡಿ ಧಾಮ ಮಾಡಬೇಕು ಎನ್ನುವ ಪ್ರಸ್ತಾಪಕ್ಕೆ ಸಾಂಕೇತಿಕ ಅನುಮೋದನೆ ದೊರೆತಿದ್ದರೂ ಕಾರ್ಯಗತವಾಗುತ್ತಿಲ್ಲ ಮತ್ತು ರೈತರ ಸಮಸ್ಯೆಗೆ ಪರಿಹಾರ ದೊರೆಯುತ್ತಿಲ್ಲ. ಕರಡಿ ದಾಳಿ ಮಾಡಿ, ಮೃತಪಟ್ಟವರಿಗೂ ಪರಿಹಾರ ದೊರೆಯುತ್ತಿಲ್ಲ. ಇದನ್ನು ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರು ಪ್ರಸ್ತಾಪ ಮಾಡುತ್ತಲೇ ಇಲ್ಲ.

ಹೀಗೆ ಜಿಲ್ಲೆಯಲ್ಲಿ ಹತ್ತಾರು ಸಮಸ್ಯೆಗಳು ಇವೆ. ಇವುಗಳ ಕುರಿತು ಪ್ರಸ್ತಾಪ ಮಾಡುತ್ತಿಲ್ಲ ಮತ್ತು ಈ ಕುರಿತು ತಮ್ಮ ನಿಲುವು ಸಹ ಹೇಳುತ್ತಿಲ್ಲ. ಅಷ್ಟೇ ಅಲ್ಲ, ಅಭಿವೃದ್ಧಿ ಮಾಡುವ ಕನಸು ಸಹ ಬಿಚ್ಚಿಡುತ್ತಿಲ್ಲ ಎನ್ನುವುದು ಪ್ರಜ್ಞಾವಂತರ ಆಕ್ರೋಶವಾಗಿದೆ.

ಗ್ಯಾರಂಟಿ ಯೋಜನೆಗಳನ್ನು ಪ್ರಸ್ತಾಪ ಮಾಡುವ ಜತೆಗೆ ಸ್ಥಳೀಯ ಸಮಸ್ಯೆಗಳು ಮತ್ತು ಪರಿಹಾರದ ಕುರಿತು ಪ್ರಸ್ತಾಪ ಮಾಡುತ್ತಿದ್ದೇವೆ ಎನ್ನುತ್ತಾರೆ ಕಾಂಗ್ರೆಸ್ ಅಭ್ಯರ್ಥಿ ರಾಜಶೇಖರ ಹಿಟ್ನಾಳ.

ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಆಡಳಿತ ಮಾಡಿದ ಮೇಲೆ ಅಭಿವೃದ್ಧಿಯ ಕ್ರಾಂತಿಯಾಗಿದೆ. ಅವುಗಳು ಜತೆಗೆ ಸ್ಥಳೀಯ ಅಭಿವೃದ್ಧಿಯ ಕುರಿತು ಜನರ ಮುಂದೆ ಪ್ರಸ್ತಾಪ ಮಾಡುತ್ತೇವೆ ಎನ್ನುತ್ತಾರೆ ಬಿಜೆಪಿ ಅಭ್ಯರ್ಥಿಡಾ. ಬಸವರಾಜ.