ಸಾರಾಂಶ
- 28ರಂದು ಬೆಳಗಾವಿ, ಉತ್ತರ ಕನ್ನಡ, ದಾವಣಗೆರೆ, ಹೊಸಪೇಟೆಯಲ್ಲಿ ಸಮಾವೇಶ: ರಾಜ್ಯಾಧ್ಯಕ್ಷ ವಿಜಯೇಂದ್ರ - 29ರಂದು ಬಾಗಲಕೋಟೆಯಲ್ಲಿ ಪ್ರಚಾರ । ಮೋದಿ ಮತ್ತೆ ಪ್ರಧಾನಿ ಅನುಮಾನ ಕಾಂಗ್ರೆಸ್‌ಗಿಲ್ಲ ಎಂದ ಬಿವೈಆರ್ - - -
ಕನ್ನಡಪ್ರಭ ವಾರ್ತೆ, ದಾವಣಗೆರೆಪ್ರಧಾನಿ ನರೇಂದ್ರ ಮೋದಿ ಏ.28 ಮತ್ತು 29ರಂದು ರಾಜ್ಯದ 5 ಕಡೆ ಬೃಹತ್ ಪ್ರಚಾರ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು.
ನಗರದ ಹೈಸ್ಕೂಲ್ ಮೈದಾನದಲ್ಲಿ ಗುರುವಾರ ದಾವಣಗೆರೆ- ಹಾವೇರಿ ಲೋಕಸಭಾ ಕ್ಷೇತ್ರಗಳ ಅಭ್ಯರ್ಥಿಗಳಾದ ಗಾಯತ್ರಿ ಸಿದ್ದೇಶ್ವರ, ಬಸವರಾಜ ಬೊಮ್ಮಾಯಿ ಪರ ಪ್ರಚಾರ ಸಮಾವೇಶಕ್ಕೆ ಮೋದಿ ಆಗಮಿತ್ತಿದ್ದಾರೆ. ಈ ಹಿನ್ನೆಲೆ ಸಮಾವೇಶ ಸ್ಥಳದ ಸಿದ್ಧತೆ ಪರಿಶೀಲಿಸಿ ಅವರು ಮಾತನಾಡಿದರು.ಏ.28ರ ಬೆಳಗ್ಗೆ 10 ಗಂಟೆಗೆ ಬೆಳಗಾವಿ, ಮಧ್ಯಾಹ್ನ 12 ಗಂಟೆಗೆ ಉತ್ತರ ಕನ್ನಡ, 2 ಗಂಟೆಗೆ ದಾವಣಗೆರೆ, ಸಂಜೆ 4 ಗಂಟೆಗೆ ಹೊಸಪೇಟೆಯಲ್ಲಿ ನರೇಂದ್ರ ಮೋದಿ ಪ್ರಚಾರ ಕೈಗೊಳ್ಳುವರು. ಏ.29ರಂದು ಬಾಗಲಕೋಟೆಯಲ್ಲಿ ಪ್ರಚಾರ ನಡೆಸುವರು ಎಂದರು.
ನರೇಂದ್ರ ಮೋದಿ ರಾಜ್ಯದಲ್ಲಿ ಹೆಚ್ಚು ಪ್ರವಾಸ ಕೈಗೊಂಡಿದ್ದರಿಂದ ಕಾಂಗ್ರೆಸ್ ಸರ್ಕಾರದ ಜಾಹೀರಾತು ಹೆಚ್ಚುತ್ತಿವೆ. ಕಾಂಗ್ರೆಸ್ ಮತ್ತು ಕಾಂಗ್ರೆಸ್ ಸರ್ಕಾರದ ಆತ್ಮವಿಶ್ವಾಸವೇ ಕುಗ್ಗುತ್ತಿರುವುದೇ ಇದಕ್ಕೆ ಕಾರಣ. ಮೋದಿ ಜನಪ್ರಿಯತೆಯಿಂದ ಕಾಂಗ್ರೆಸ್ ಕಂಗಾಲಾಗುತ್ತಿದೆ. ಮೋದಿ ಮುಂದೆ ಕಾಂಗ್ರೆಸ್ಸಿನದ್ದು ಏನೂ ನಡೆಯುವುದಿಲ್ಲವೆಂಬ ಜ್ಞಾನೋದಯವೂ ಕಾಂಗ್ರೆಸ್ಸಿಗಿಗೆ ಆಗುತ್ತಿದೆ ಎಂದು ಕುಟುಕಿದರು.ಬಿಜೆಪಿ ಸಂಕಲ್ಪ ದಿನದಿಂದ ಮೋದಿ ಅವರಿಂದಾಗಿ ದಿನದಿಂದ ದಿನಕ್ಕೆ ಬಿಜೆಪಿ ಉತ್ಸಾಹ ಹೆಚ್ಚುತ್ತಿದೆ. ನಮ್ಮೆಲ್ಲಾ ಮುಖಂಡರು, ಕಾರ್ಯಕರ್ತರು, ಮೋದಿ ಅಭಿಮಾನಿಗಳ ಉತ್ಸಾಹವೂ ನೂರ್ಮಡಿಯಾಗುತ್ತಿದೆ. ರಾಜ್ಯದ 28ಕ್ಕೆ 28 ಲೋಕಸಭಾ ಕ್ಷೇತ್ರಗಳನ್ನೂ ಗೆಲ್ಲುವ ಸಂಕಲ್ಪವೂ ಈಡೇರಲಿದೆ. ವಿಶ್ವವೇ ಮೆಚ್ಚಿದ ನರೇಂದ್ರ ಮೋದಿ 3ನೇ ಬಾರಿಗೆ ಪ್ರಧಾನಿಯಾಗಲು ಪ್ರತಿಯೊಂದು ಕ್ಷೇತ್ರದಲ್ಲೂ ಗೆಲುವು ಅತಿ ಮುಖ್ಯ. ಪ್ರತಿ ಕ್ಷೇತ್ರವನ್ನೂ ನಾವು ಗೆದ್ದು, ಮೋದಿ ಅವರ ಕೈ ಬಲಪಡಿಸಬೇಕು ಎಂದು ತಿಳಿಸಿದರು.
ಕಾಂಗ್ರೆಸ್ ಗೆಲ್ಲುವುದರಿಂದ ಯಾವುದೇ ಅಭಿವೃದ್ಧಿ ಆಗುವುದಿಲ್ಲ. 2047ರಲ್ಲಿನ ಅಭಿವೃದ್ಧಿ ಭಾರತದ ನಿರ್ಮಾಣದ ಬಗ್ಗೆ ನರೇಂದ್ರ ಮೋದಿ ಯೋಚನೆ ಮಾಡುತ್ತಿದ್ದಾರೆ. ಹಾಗಾಗಿ, ನಾವು ಎಲ್ಲ ಕ್ಷೇತ್ರಗಳಲ್ಲೂ ಬಿಜೆಪಿಯನ್ನು ಗೆಲ್ಲಿಸುವ ಮೂಲಕ ಮೋದಿ ಅವರ ಕೈಗಳಿಗೆ ಮತ್ತಷ್ಟು ಶಕ್ತಿ ತುಂಬಬೇಕಿದೆ ಎಂದು ನಮ್ಮೆಲ್ಲಾ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು, ಮತದಾರಿಗೆ ಕೈಮುಗಿದು ಪ್ರಾರ್ಥನೆ ಮಾಡುತ್ತೇನೆ ಎಂದು ವಿಜಯೇಂದ್ರ ಹೇಳಿದರು.ಏ.26ರಂದು ಚಿತ್ರದುರ್ಗ, ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಮೈಸೂರು, ಮಂಡ್ಯ ಒಳಗೊಂಡಂತೆ ಮೊದಲ ಹಂತದಲ್ಲಿ ನಡೆಯುವ 14 ಲೋಕಸಭಾ ಕ್ಷೇತ್ರಗಳಲ್ಲೂ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳು ಗೆದ್ದೇ ಗೆಲ್ಲುತ್ತಾರೆ. ಎಲ್ಲ ಕ್ಷೇತ್ರಗಳನ್ನೂ ಗೆಲ್ಲುವ ಕಾಂಗ್ರೆಸ್ಸಿನ ಬಹು ನಿರೀಕ್ಷೆಯೂ ಹುಸಿಯಾಗಲಿದೆ. ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟವು ಅತಿ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದೆ. ನರೇಂದ್ರ ಮೋದಿ ಮೂರನೇ ಬಾರಿಗೆ ಪ್ರಧಾನಿ ಆಗುತ್ತಾರೆ ಎಂಬುದರಲ್ಲಿ ಕಾಂಗ್ರೆಸ್ಸಿಗೂ ಅನುಮಾನ ಇಲ್ಲ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಅವರು, ಹಾಸನ ಕ್ಷೇತ್ರದ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣನವರ ಸೀಡಿ ಬಿಡುಗಡೆ ಮಾಡಿದ್ದಾರೆನ್ನುವ ಬಗ್ಗೆ ಮಾಹಿತಿ ಇಲ್ಲ. ತಿಳಿದುಕೊಳ್ಳುವುದಾಗಿ ಹೇಳಿದರು.
ಸಂಸದ ಜಿ.ಎಂ.ಸಿದ್ದೇಶ್ವರ, ಬಿಜೆಪಿ ಜಿಲ್ಲಾಧ್ಯಕ್ಷ ಎನ್.ರಾಜಶೇಖರ ನಾಗಪ್ಪ, ಪ್ರಧಾನ ಕಾರ್ಯದರ್ಶಿ ಧನಂಜಯ ಕಡ್ಲೇಬಾಳು, ಅನಿಲಕುಮಾರ ನಾಯ್ಕ, ಅಣ್ಣೇಶ ಐರಣಿ, ದೂಡಾ ಮಾಜಿ ಅಧ್ಯಕ್ಷ ದೇವರಮನಿ ಶಿವಕುಮಾರ, ಅಜ್ಜಂಪುರ ಶೆಟ್ರು ಮೃತ್ಯುಂಜಯ, ಪಿ.ಸಿ.ಶ್ರೀನಿವಾಸ ಭಟ್, ಧನುಷ್ ರೆಡ್ಡಿ, ಆರ್.ಎಲ್.ಶಿವಪ್ರಕಾಶ, ಮುರುಗೇಶ ಆರಾಧ್ಯ, ಟೀಪು ಇತರರು ಇದ್ದರು.- - -
ಬಾಕ್ಸ್* ಮೋದಿ ಪರವಿರಲು ಮತದಾರರ ಗಟ್ಟಿ ನಿರ್ಧಾರ
- ಮತದಾರರ ಮನಸ್ಸು ಗೆಲ್ಲಲು ಕಾಂಗ್ರೆಸ್ ಇನ್ನಿಲ್ಲದ ವ್ಯರ್ಥ ಪ್ರಯತ್ನ- ದಾವಣಗೆರೆಯಲ್ಲಿ ಗಾಯತ್ರಿ, ಶಿವಮೊಗ್ಗದಲ್ಲಿ ರಾಘವೇಂದ್ರ ಗೆಲುವು: ವಿಶ್ವಾಸ
- - - ಕನ್ನಡಪ್ರಭ ವಾರ್ತೆ, ದಾವಣಗೆರೆ ಮತದಾರರ ಮನಸ್ಸು ಗೆಲ್ಲಬೇಕೆಂದು ಕಾಂಗ್ರೆಸ್ಸಿನವರು ಇನ್ನಿಲ್ಲದ ಪ್ರಯತ್ನ ಮಾಡುತ್ತಿದ್ದಾರೆ. ಕಾಂಗ್ರೆಸ್ಸಿನವರು ಎಷ್ಟೇ ಪ್ರಯತ್ನಪಟ್ಟರೂ ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಪರ ಮತದಾರರಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನರೇಂದ್ರ ಮೋದಿ ಪರ ಇರಬೇಕೆಂದು ಮತದಾರರು ಗಟ್ಟಿ ತೀರ್ಮಾನ ಮಾಡಿದ್ದು, ರಾಜ್ಯದಲ್ಲಿ ನಿರೀಕ್ಷೆ ಮೀರಿ ಬಿಜೆಪಿ ಪರವಾದ ವಾತಾವರಣ ಇದೆ ಎಂದರು.
ರಾಜ್ಯದ 28 ಕ್ಷೇತ್ರದಲ್ಲೂ ಗೆದ್ದೇ ಗೆಲ್ಲುತ್ತೇವೆಂಬ ವಿಶ್ವಾಸ ನಮಗಿದೆ. ದಾವಣಗೆರೆ ಕ್ಷೇತ್ರದಲ್ಲಿ ಬೂತ್ ಅಧ್ಯಕ್ಷರ ಸಭೆ, ಹರಿಹರದಲ್ಲಿ ರೋಡ್ ಶೋನಲ್ಲಿ ಭಾಗವಹಿಸುವೆ. ದಾವಣಗೆರೆ ಕ್ಷೇತ್ರದಲ್ಲಿ ಬಿಜೆಪಿ ನೂರಕ್ಕೆ ನೂರರಷ್ಟು ಗೆಲ್ಲುತ್ತದೆ. ಪ್ರಧಾನಿ ನರೇಂದ್ರ ಮೋದಿ ಸಹ ಏ.28ಕ್ಕೆ ಇಲ್ಲಿ ಪ್ರಚಾರಕ್ಕೆ ಇಲ್ಲಿಗೆ ಬರಲಿದ್ದಾರೆ. ಗಾಯತ್ರಿ ಸಿದ್ದೇಶ್ವರ ಭಾರೀ ಮತಗಳ ಅಂತರದಲ್ಲಿ ಜಯ ಸಾಧಿಸಲಿದ್ದಾರೆ ಎಂದರು.ಚುನಾವಣೆ ಘೋಷಣೆಗೆ ಮುನ್ನ ದಾವಣಗೆರೆಯಲ್ಲಿ ತುಂಬಾ ಗೊಂದಲ ಇತ್ತು. ಈಗ ಅದೆಲ್ಲವನ್ನೂ ಮರೆತು, ಒಗ್ಗಟ್ಟಿನಿಂದ ನಮ್ಮೆಲ್ಲಾ ಮುಖಂಡರು ಒಟ್ಟಾಗಿ ಕೆಲಸ ಮಾಡುತ್ತಿದ್ದಾರೆ. ಶಿವಮೊಗ್ಗ ಕ್ಷೇತ್ರದಲ್ಲೂ ದಿನದಿಂದ ದಿನಕ್ಕೆ ವಾತಾವರಣ ಚನ್ನಾಗಿ ಆಗುತ್ತಿದೆ. ಅಲ್ಲಿನ ಕಾರ್ಯಕರ್ತರೆಲ್ಲರೂ ರಣೋತ್ಸಾಹದಲ್ಲಿದ್ದಾರೆ. ನಾವು ಬಿ.ವೈ. ರಾಘವೇಂದ್ರ 2 ಲಕ್ಷ ಮತಗಳ ಅಂತರದಲ್ಲಿ ಗೆಲ್ಲುತ್ತಾರೆ ಎಂದುಕೊಂಡಿದ್ದೆವು. ಈಗ ಅಲ್ಲಿನ ಕಾರ್ಯಕರ್ತರ ಉತ್ಸಾಹ ನೋಡಿ, ರಾಘವೇಂದ್ರರವರು 4 ಲಕ್ಷ ಮತಗಳ ಅಂತರದ ಜಯ ದಾಖಲಿಸಲಿದ್ದಾರೆ ಎಂದು ತಿಳಿಸಿದರು.
ಶಿವಮೊಗ್ಗ ಕ್ಷೇತ್ರದಲ್ಲಿ ರಾಘವೇಂದ್ರ ಬಿಟ್ಟು ಬೇರೆ ಯಾರೂ ಇಲ್ಲ. ರಾಘವೇಂದ್ರ ಅವರಿಗೆ ಸರಿಸಾಟಿಯಾಗಿ ಕೂಡ ಯಾರೂ ಅಲ್ಲಿಲ್ಲ. ಚಿಕ್ಕಮಗಳೂರು, ಚಿತ್ರದುರ್ಗ, ಬೆಂಗಳೂರು ಗ್ರಾಮಾಂತರ, ಚಾಮರಾಜ ನಗರ ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವಿನ ಕನಸು ಕಾಣುತ್ತಿದೆ. ಎಲ್ಲ ಕಡೆಯೂ ಪ್ರಧಾನಿ ಮೋದಿ ಹಾಗೂ ಬಿಜೆಪಿ ಪರ ವಾತಾವರಣ ಇದೆ. ನಾವಂತೂ ರಾಜ್ಯದ 28 ಕ್ಷೇತ್ರಗಳನ್ನೂ ಗೆಲ್ಲಲಿದ್ದೇವೆ ಎಂದು ವಿಜಯೇಂದ್ರ ಪುನರುಚ್ಛರಿಸಿದರು.- - - -(ಫೋಟೋ ಬರಲಿವೆ)