ಟ್ರಂಪ್‌ ಹೆಸರು ಹೇಳುವುದಕ್ಕೆ ಮೋದಿಗೆ ಭಯ: ದಿನೇಶ್‌ ಗುಂಡೂರಾವ್‌

| N/A | Published : May 18 2025, 11:53 PM IST / Updated: May 19 2025, 01:09 PM IST

ಟ್ರಂಪ್‌ ಹೆಸರು ಹೇಳುವುದಕ್ಕೆ ಮೋದಿಗೆ ಭಯ: ದಿನೇಶ್‌ ಗುಂಡೂರಾವ್‌
Share this Article
  • FB
  • TW
  • Linkdin
  • Email

ಸಾರಾಂಶ

 ‘ಕದನ ವಿರಾಮ ಆಗಿದ್ದು ಪ್ರಪಂಚಕ್ಕೆ ಗೊತ್ತಾಗಿದ್ದು ಟ್ರಂಪ್ ಹೇಳಿದ ಮೇಲೆ. ನಂತರ ಪಾಕಿಸ್ತಾನ ಕೂಡ ಹೇಳಿದೆ, ನಮ್ಮ ದೇಶವೂ ಹೇಳಿತು. ಆಗಲೇ ನಮ್ಮ ದೇಶದವರು(ಪ್ರಧಾನಿ) ಹೇಳಬೇಕಿತ್ತು.

 ಮಂಗಳೂರು : ‘ಕದನ ವಿರಾಮ ಆಗಿದ್ದು ಪ್ರಪಂಚಕ್ಕೆ ಗೊತ್ತಾಗಿದ್ದು ಟ್ರಂಪ್ ಹೇಳಿದ ಮೇಲೆ. ನಂತರ ಪಾಕಿಸ್ತಾನ ಕೂಡ ಹೇಳಿದೆ, ನಮ್ಮ ದೇಶವೂ ಹೇಳಿತು. ಆಗಲೇ ನಮ್ಮ ದೇಶದವರು(ಪ್ರಧಾನಿ) ಹೇಳಬೇಕಿತ್ತು. ಪ್ರಧಾನಿ ಏನು ಹೇಳಿದ್ದಾರೆ ಅದನ್ನು ನಾವು ಬಯಸುತ್ತಿದ್ದೇವೆ. ಟ್ರಂಪ್ ಎಂದು ಹೆಸರು ಹೇಳುವುದಕ್ಕೆ ಮೋದಿ ಭಯ ಪಡುತ್ತಾರೆ.’

ಹೀಗೆಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್‌ ಹೇಳಿದ್ದಾರೆ. ಕಾಂಗ್ರೆಸ್ ಶಾಸಕ ಕೊತ್ತೂರು ಮಂಜುನಾಥ ವಿವಾದಾತ್ಮಕ ಹೇಳಿಕೆ ವಿಚಾರಕ್ಕೆ ಸಂಬಂಧಿಸಿ ಮಂಗಳೂರಲ್ಲಿ ಶುಕ್ರವಾರ ಸುದ್ದಿಗಾರರಲ್ಲಿ ಪ್ರತಿಕ್ರಿಯಿಸಿದ ಸಚಿವ ದಿನೇಶ್‌ ಗುಂಡೂರಾವ್‌, ಶಾಸಕರೇನೋ ಹೇಳುತ್ತಾರೆ, ಆದರೆ ಇವತ್ತು ಇಡೀ ದೇಶವೇ ಪ್ರಶ್ನೆ ಮಾಡುತ್ತಿದೆ. ದೇಶದ ಜನರು ಸ್ಪಷ್ಟ ಉತ್ತರ ಬಯಸುತ್ತಿದ್ದಾರೆ. ಭಾರತ-ಪಾಕಿಸ್ತಾನ ಯುದ್ಧ ವಿಚಾರದಲ್ಲಿ ಟ್ರಂಪ್ ಘೋಷಣೆ ಮಾಡಿದ್ದು ಸತ್ಯ. ಘೋಷಣೆ ಆದ ನಂತರ ಕದನ ವಿರಾಮ ಘೋಷಣೆ ಆದದ್ದು ಸತ್ಯ. ಹಾಗಾದರೆ ಟ್ರಂಪ್ ಹೇಳಿದ್ದು ಸುಳ್ಳಾ ಎಂದು ಮರು ಪ್ರಶ್ನಿಸಿದ್ದಾರೆ. ಈ ಮೂಲಕ ತಮ್ಮದೇ ಪಕ್ಷದ ಶಾಸಕರ ವಿವಾದಾತ್ಮಕ ಹೇಳಿಕೆಯನ್ನು ಸಮರ್ಥಿಸಿಕೊಂಡರು.

56 ಇಂಚು ಎದೆ ಇರುವ ಮೋದಿ ಟರ್ಕಿ ಬಗ್ಗೆ ಟೀಕೆ ಮಾಡುತ್ತಾರೆ. ಆದರೆ ಚೈನಾ ಶಸ್ತ್ರಾಸ್ತ್ರವನ್ನು ಪಾಕಿಸ್ತಾನ ಉಪಯೋಗಿಸುತ್ತದೆ, ಚೈನಾ ಬಗ್ಗೆ ಮಾತನಾಡುವುದಿಲ್ಲ. ಅಜರ್ ಬೈಜಾನ್ ಹಾಗೂ ಟರ್ಕಿ ಜೊತೆ ವ್ಯಾಪಾರ ನಿಲ್ಲಿಸುತ್ತಾರೆ. ಆದರೆ ಟ್ರಂಪ್ ಬಗ್ಗೆ ಮಾತನಾಡುವುದಿಲ್ಲ. ಟ್ರಂಪ್ ಬಗ್ಗೆ ಹೇಳಲು ತಯಾರಿಲ್ಲ ಎಂದು ದಿನೇಶ್‌ ಗುಂಡೂರಾವ್‌ ಟೀಕಿಸಿದರು. ಸೈನ್ಯವನ್ನು ಕಾಂಗ್ರೆಸ್‌ ಟೀಕಿಸಿಲ್ಲ:

ಕಾಂಗ್ರೆಸ್‌ನವರು ಸೈನ್ಯವನ್ನು ಟೀಕೆ ಮಾಡುತ್ತಿಲ್ಲ. ಬಿಜೆಪಿಯ ಮಂತ್ರಿಯೊಬ್ಬರು ಕರ್ನಲ್ ಸೋಫಿಯಾ ಖುರೇಷಿ ಬಗ್ಗೆ ಮಾತನಾಡಿದ್ದನ್ನು ಗಮನಿಸಿದೆ. ಅವರ ವಿರುದ್ಧ ಕೇಸು ದಾಖಲಿಸುವಂತೆ ಕೋರ್ಟ್‌ ನಿರ್ದೇಶನ ನೀಡುವ ಸನ್ನಿವೇಶ ಬಂದೊದಗಿದೆ. ಪೆಹಾಲ್ಗಮ್‌ನಲ್ಲಿ ಗಂಡಂದಿರನ್ನು ಕಳೆದುಕೊಂಡವರೇ ಇದನ್ನು ಹಿಂದೂ ಮುಸ್ಲಿಂ ಮಾಡಬೇಡಿ ಎಂದಿದ್ದಾರೆ.ಬಿಜೆಪಿಯ ಕಾರ್ಯಕರ್ತರಿಗೆ ಕೇವಲ ಈ ಪ್ರಕರಣವನ್ನು ಹಿಂದೂ ಮುಸ್ಲಿಂ ಮಾಡಬೇಕು ಅಷ್ಟೆ. ಬಿಜೆಪಿ ಕಾರ್ಯಕರ್ತರು ನಮ್ಮ ವಿದೇಶಾಂಗ ಕಾರ್ಯದರ್ಶಿ ಮಗಳಿಗೆ ಏನೆಲ್ಲ ಟೀಕೆ ಮಾಡಿದ್ದಾರೆ. ಕದನ ವಿರಾಮ ಘೋಷಣೆ ಮಾಡಿದ ಪ್ರಧಾನಿಯನ್ನು ಟ್ರೋಲ್ ಮಾಡಬೇಕಿತ್ತು. ಪ್ರಧಾನಿಯವರ ಒಪ್ಪಿಗೆ ಇಲ್ಲದೆ ಕದನ ವಿರಾಮ ಘೋಷಣೆ ಮಾಡಲು ಸಾಧ್ಯವಿಲ್ಲ. ದೇಶಕ್ಕೆ ಸ್ಪಷ್ಟವಾದ ವಿಚಾರವನ್ನು ರಾಜಕೀಯ ಮಾಡದೆ ಹೇಳಬೇಕು ಎಂದರು.

ಪಾಕಿಸ್ತಾನದವರು ನಮ್ಮ ಐದು ಜೆಟ್‌ಗಳನ್ನು ಹೊಡೆದು ಹಾಕಿದ್ದೇವೆ ಎಂದಿದ್ದಾರೆ. ಇದಕ್ಕೆ ಉತ್ತರ ಕೊಡಲು ಮೋದಿ ತಯಾರಿಲ್ಲ. ಪೆಹಾಲ್ಗಮ್‌ನಲ್ಲಿ ನರಮೇಧ ಮಾಡಿದವರನ್ನು ಹುಡುಕಿ ಮಣ್ಣುಪಾಲು ಮಾಡುತ್ತೇವೆ ಎಂದಾಗ ನಾವೆಲ್ಲ ಪ್ರಧಾನಿಗಳ ಜೊತೆ ನಿಂತುಕೊಂಡೆವು. ಟ್ರಂಪ್ 20 ಬಾರಿ ಮಾಧ್ಯಮ ಮುಂದೆ ಬರುತ್ತಾರೆ, ಪತ್ರಕರ್ತರ ಪ್ರಶ್ನೆಗೆ ಉತ್ತರ ಕೊಡುತ್ತಾರೆ. ಆದರೆ ನಮ್ಮ ಪ್ರಧಾನಿಗಳಿಗೆ ಯಾರು ಪ್ರಶ್ನೆಗಳನ್ನು ಕೇಳಲು ಆಗುವುದಿಲ್ಲ. ಅವರಿಗೆ ಪತ್ರಕರ್ತರು ಎಂದರೆ ಕ್ಯಾರೇ ಇಲ್ಲ. ಮೀಡಿಯಾ ಬಗ್ಗೆ ಮೋದಿ ಕಿಂಚಿತ್ತೂ ಕ್ಯಾರೇ ಮಾಡುವುದಿಲ್ಲ ಎಂದರು. ಅಧಿವೇಶನ ಕರೆಯಲಿ:

ಸರ್ವ ಪಕ್ಷದ ಸಭೆ ಕರೆದು ಎಲ್ಲ ಪ್ರಶ್ನೆಗಳಿಗೆ ಮೋದಿ ಉತ್ತರ ನೀಡಬೇಕು. ಮೋದಿ ಹೇಳಿದ್ದೆಲ್ಲ ವೇದ ವಾಕ್ಯ ಎಂದು ನಾವು ನಂಬಲು ಸಾಧ್ಯವಿಲ್ಲ. ಇಡಿ ದೇಶದಲ್ಲಿ ಅತೀ ದೊಡ್ಡ ಸುಳ್ಳುಗಾರ ಮೋದಿ. ಸುಳ್ಳಿನ ಆಧಾರದಲ್ಲಿ ದಂತ ಕಥೆ ಹೇಳುವುದರಲ್ಲಿ ಮೋದಿ ನಿಸ್ಸಿಮ. ನಮಗೆ ನಂಬಿಕೆಯ ಉತ್ತರ ನೀಡಲಿ. ಇದಕ್ಕಾಗಿ ಲೋಕಸಭಾ ಅಧಿವೇಶನ ಕರೆಯಲಿ ಎಂದು ನಮ್ಮ ಮುಖಂಡರು ಹೇಳಿದ್ದಾರೆ. ಅದನ್ನು ಮೋದಿ ಮೊದಲು ಮಾಡಲಿ ಎಂದರು.

ಮುಂಜಾಗ್ರತಾ ಕ್ರಮವಾಗಿ ಬೇಗನೆ ಪೇಟೆ ಬಂದ್‌: ಸುಹಾಸ್ ಹತ್ಯೆ ಪ್ರಕಾರಣ ಸೇರಿದಂತೆ ಎಲ್ಲವನ್ನೂ ಎನ್‌ಐಎ, ಸಿಬಿಐಗೆ ಕೊಡಿ ಎಂದು ಬಿಜೆಪಿಯವರು ಜಪ ಮಾಡುತ್ತಿರುತ್ತಾರೆ ಅಷ್ಟೆ. ಇದು ಬಿಜೆಪಿಗರ ರಾಜಕೀಯದ ದುರುದ್ದೇಶವಷ್ಟೇ. ನಮ್ಮ ಪೊಲೀಸರ ಬಗ್ಗೆ ಸಂಪೂರ್ಣ ವಿಶ್ವಾಸ ಇದೆ. ಪಿಎಫ್‌ಐ ಆಗಿರಲಿ ಯಾರೇ ಆಗಿರಲಿ ನಮಗೆ ಸಂಬಂಧ ಇಲ್ಲ. ಇಲ್ಲಿನ ಸಂಸದರು ರಾಜಕೀಯ ಮಾಡುವುದು ಬಿಟ್ಟರೆ ಒಂದು ದಿನವಾದರೂ ಇಲ್ಲಿನ ಪೊಲೀಸರನ್ನು ಹೋಗಳಿದ್ದಾರಾ? ಪೊಲೀಸರು ಮಂಗಳೂರು ನಗರವನ್ನು ಬೇಗ ಬಂದ್ ಮಾಡಿಸುತ್ತಿದ್ದಾರೆ ಎನ್ನುತ್ತಿದ್ದಾರೆ. ಪೊಲೀಸರಿಗೆ ಮಾಹಿತಿ ಇರುತ್ತದೆ, ಹಾಗಾಗಿ ಮುಂಜಾಗ್ರತಾ ಕ್ರಮವಾಗಿ ಬೇಗ ಬಂದ್‌ ಮಾಡುತ್ತಾರೆ. ನಮಗೆ ಜನರ ಸುರಕ್ಷತೆ ಮುಖ್ಯ ಎಂದರು.

ಕುಕ್ಕೆ ದೇವಸ್ಥಾನ ಅಧ್ಯಕ್ಷ ಸ್ಥಾನ ಪರಿಶೀಲನೆ:

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಅಧ್ಯಕ್ಷ ಗಾದಿಗೆ ಮಾಜಿ ರೌಡಿ ಶೀಟರ್ ಆಯ್ಕೆ ವಿಚಾರಕ್ಕೆ ಸಂಬಂಧಿಸಿ ಸಚಿವ ದಿನೇಶ್ ಗುಂಡೂರಾವ್ ಪ್ರತಿಕ್ರಿಯಿಸಿ, ಅಲ್ಲಿನ ಆಯ್ಕೆ ಪ್ರಕ್ರಿಯೆಗಳ ಬಗ್ಗೆ ನನಗೆ ಸಮಾಧಾನವಿಲ್ಲ. ಮುಂದೆ ಇದರ ಬಗ್ಗೆ ಪರಿಶೀಲನೆ ಮಾಡುತ್ತೇವೆ ಎಂದರು.

ಸುಹಾಸ್ ಶೆಟ್ಟಿ ರೌಡಿ ಶೀಟರ್ ವಿಚಾರ ಬೇರೆ, ಈ ವಿಚಾರ ಬೇರೆ ಎಂದ ಸಚಿವರು, ಹರೀಶ್ ಇಂಜಾಡಿ ಮಾಜಿ ರೌಡಿ ಶೀಟರ್. ಪ್ರತಿಯೊಬ್ಬರೂ ಸುಧಾರಣೆ ಆಗುವ ವಿಚಾರವೂ ಇರುತ್ತದಲ್ಲ. ಎಲ್ಲರನ್ನೂ ಶಾಶ್ವತವಾಗಿ ರೌಡಿ ಶೀಟರ್ ದೃಷ್ಟಿಯಲ್ಲೇ ನೋಡುತ್ತೀರಾ? ಎಲ್ಲ ರೌಡಿ ಶೀಟರ್‌ಗಳೂ ಏನೂ ಆಗಬಾರದು ಎಂದು ಹೇಳೋಕೆ ಆಗುತ್ತಾ? ರೌಡಿ ಶೀಟರ್ ಎಂದೇ ಹೇಳಿಕೊಂಡು ಹೋಗೋದು ಬೇಡ, ಆ ವಿಚಾರದಲ್ಲಿ ನನಗೂ ಆಕ್ಷೇಪಗಳಿವೆ ಎಂದರು.

Read more Articles on