ಸಾರಾಂಶ
ರಾಮಜನ್ಮಭೂಮಿ ಹಾಗೂ ಹನುಮ ಜನಿಸಿದ ನಾಡಿನಲ್ಲಿ ಬಿಜೆಪಿ ಸೋತಿದ್ದು, ಧರ್ಮಕ್ಕೆ ಜಯ ಸಿಕ್ಕಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಹೇಳಿದರು.
ಕನಕಗಿರಿ: ರಾಮಜನ್ಮಭೂಮಿ ಹಾಗೂ ಹನುಮ ಜನಿಸಿದ ನಾಡಿನಲ್ಲಿ ಬಿಜೆಪಿ ಸೋತಿದ್ದು, ಧರ್ಮಕ್ಕೆ ಜಯ ಸಿಕ್ಕಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಹೇಳಿದರು. ಬಿಜೆಪಿಯವರು ಚುನಾವಣೆಯಲ್ಲಿ ಶ್ರೀರಾಮ, ಹನುಮನ ಹೆಸರು ಬಳಸಿ ಮತಗಿಟ್ಟಿಸಿಕೊಳ್ಳಲು ಯತ್ನಿಸಿದ್ದರು. ಆದರೆ ದೇಶದ ಜನ ಬಿಜೆಪಿಗೆ ಸರಿಯಾದ ಉತ್ತರ ನೀಡಿದ್ದಾರೆ. ಇದೇ ಮುಂದುವರಿದರೆ ಮತದಾರರು ಮುಂದಿನ ದಿನಗಳಲ್ಲಿ ಬಿಜೆಪಿಗೆ ತಕ್ಕ ಪಾಠ ಕಲಿಸುತ್ತಾರೆ ಎಂದರು.
ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಕೆಲವೇ ತಿಂಗಳಲ್ಲಿ ಪತನವಾಗಲಿದೆ. ಸಂವಿಧಾನ ಬದಲಾವಣೆ ಮಾಡುತ್ತೇವೆ ಎಂಬ ಮಾತುಗಳು ಈ ಸರ್ಕಾರದಲ್ಲಿ ಬರುವುದಿಲ್ಲ. ಮೋದಿಯವರು ಈ ಹಿಂದೆ ನೀಡಿದ ಆಡಳಿತವನ್ನು ಈ ಬಾರಿ ಮಾಡಲು ಸಾಧ್ಯವಿಲ್ಲ. ಬಿಜೆಪಿ ಲೆಕ್ಕಾಚಾರಗಳೆಲ್ಲವೂ ಲೋಕಸಭಾ ಚುನಾವಣೆಯಲ್ಲಿ ತಲೆಕೆಳಗಾಗಿದ್ದು, ದೇಶದ ಜನ ಕಾಂಗ್ರೆಸ್ ಬೆಂಬಲಕ್ಕೆ ನಿಂತಿದ್ದಾರೆ ಎಂದರು. ಮುಖ್ಯಮಂತ್ರಿಯವರು ಎಸ್‌ಟಿ ನಿಗಮದ ಹೊಣೆ ನೀಡಿದರೆ ನಾನು ನಿಭಾಯಿಸುವೆ ಎಂದರು.ಎಸ್‌ಟಿ ಅಭಿವೃದ್ಧಿ ನಿಗಮದ ಬಹುಕೋಟಿ ಹಗರಣದ ವಿಚಾರವಾಗಿ ಮಾತನಾಡಿ, ನಾಗೇಂದ್ರ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ತನಿಖೆ ನಡೆಯುತ್ತಿದೆ. ತಪ್ಪಿತಸ್ಥರು ಯಾರೇ ಇರಲಿ ಅವರಿಗೆ ಶಿಕ್ಷೆಯಾಗಬೇಕು.
ಕಲ್ಯಾಣ ಕರ್ನಾಟಕದಲ್ಲಿ ಗ್ಯಾರಂಟಿ ಯೋಜನೆಗಳಿಂದ ಕಾಂಗ್ರೆಸ್ ಅಭೂತಪೂರ್ವ ಗೆಲುವು ಸಾಧಿಸಿದ್ದು, ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವುದಿಲ್ಲ ಎಂದು ಹೇಳಿದರು.