ಸಾರಾಂಶ
ದೇಶದ ಸುರಕ್ಷತೆ, ಅಭಿವೃದ್ಧಿಗೆ ಭದ್ರ ಬುನಾದಿ ಹಾಕಿಕೊಟ್ಟಿರುವ ಸರ್ಕಾರ ನಮ್ಮದು. ಅದನ್ನು ಮುಂದುವರಿಸಲು ಮತ್ತೊಮ್ಮೆ ಆಶೀರ್ವದಿಸಿ ಎಂದು ಪ್ರಹ್ಲಾದ ಜೋಶಿ ಮನವಿ ಮಾಡಿದರು.
ಹುಬ್ಬಳ್ಳಿ: ನರೇಂದ್ರ ಮೋದಿ ಅವರು 10 ವರ್ಷಗಳ ಕಾಲ ಪ್ರಧಾನಮಂತ್ರಿಯಾಗಿ ಕೆಲಸ ಮಾಡಿದ್ದಾರೆ. ಈ ಅವಧಿಯಲ್ಲಿ ಪ್ರತಿಪಕ್ಷಗಳು ಮೋದಿ ವಿರುದ್ಧ 25 ಪೈಸೆ ಭ್ರಷ್ಟಾಚಾರದ ಆರೋಪ ಮಾಡಲು ಸಾಧ್ಯವಾಗಲಿಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.
ಇಲ್ಲಿನ ಹೂಗಾರ ಓಣಿಯಲ್ಲಿ ಬುಧವಾರ ಬೆಳಗ್ಗೆ ಪ್ರಚಾರ ಸಭೆ ನಡೆಸಿ ಮಾತನಾಡಿದರು.ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಪೊಲಿಟಿಕಲ್ ಭ್ರಷ್ಟಾಚಾರವನ್ನು ತೊಡೆದು ಹಾಕುತ್ತಿದೆ ಎಂದ ಅವರು, ಪಾರದರ್ಶಕತೆ ಆಡಳಿತದಿಂದ ಮೋದಿ ದೇಶದಲ್ಲೇ ಮಾದರಿಯಾಗಿದ್ದಾರೆ ಎಂದರು.
ದೇಶದ ಸುರಕ್ಷತೆ, ಅಭಿವೃದ್ಧಿಗೆ ಭದ್ರ ಬುನಾದಿ ಹಾಕಿಕೊಟ್ಟಿರುವ ಸರ್ಕಾರ ನಮ್ಮದು. ಅದನ್ನು ಮುಂದುವರಿಸಲು ಮತ್ತೊಮ್ಮೆ ಆಶೀರ್ವದಿಸಿ ಎಂದು ಜೋಶಿ ಮನವಿ ಮಾಡಿದರು.ಹುಬ್ಬಳ್ಳಿಯಲ್ಲಿ ರೈಲ್ವೆ ನಿಲ್ದಾಣ, ವಿಮಾನ ನಿಲ್ದಾಣ, ಕಿಮ್ಸ್ ಕಟ್ಟಡ, ಹೆದ್ದಾರಿ ಹೀಗೆ ನಾನಾ ಅಭಿವೃದ್ಧಿ ಕಾರ್ಯಗಳು ಕಾರ್ಯಗತವಾಗಿವೆ ಎಂದ ಅವರು, ಇನ್ಮುಂದೆ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಕಾರ್ಗೋ ಸೇವೆ ಆರಂಭಿಸುವ ಗುರಿ ಇದ್ದು, ಇದರಿಂದ ಇಲ್ಲಿಯ ಹೂವು-ತರಕಾರಿ ಇತ್ಯಾದಿ ಬೆಳೆಗಳನ್ನು ದೇಶ- ವಿದೇಶಿ ಮಾರುಕಟ್ಟೆಗೆ ಸಾಗಿಸಿ ರೈತರನ್ನು ಮತ್ತಷ್ಟು ಆರ್ಥಿಕ ಸದೃಢರನ್ನಾಗಿ ಮಾಡುವ ಯೋಜನೆ ಹೊಂದಿರುವುದಾಗಿ ತಿಳಿಸಿದರು.
ಇದಕ್ಕೂ ಮೊದಲು ಶ್ರೀ ರಾಮನವಮಿ ನಿಮಿತ್ತ ಶ್ರೀ ರಾಮನಿಗೆ ಪೂಜೆ ಸಲ್ಲಿಸಿದರು. ಮಾಜಿ ಶಾಸಕ ಅಶೋಕ ಕಾಟವೆ, ಮುಖಂಡರಾದ ಬಸವರಾಜ ಚಿಕ್ಕಮಠ, ಶಿವಾನಂದ ಹೊಸೂರ್, ಸಿದ್ರಾಮಪ್ಪ ಬಾಳಿಕಾಯಿ, ವೀರಭದ್ರಪ್ಪ ಬಾಳಿಕಾಯಿ, ಈರಣ್ಣ ಜಡಿ, ನೀಲಕ್ಕ ಎತ್ತಿನಮಠ, ರಂಗಾ ಬದ್ದಿ, ವಿಜಯಲಕ್ಷ್ಮಿ ಎಮ್ಮಿ, ಗುರುಸಿದ್ದಮ್ಮ ಸಾಲಿಮಠ, ಪೂಜಾ ರಾಯಕರ್ ಇದ್ದರು.