ಸಾರಾಂಶ
ಬೀದರ್‌ನ ಪತ್ರಿಕಾ ಭವನದಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಮುನಿಯಪ್ಪ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಕನ್ನಡಪ್ರಭ ವಾರ್ತೆ ಬೀದರ್
ರಾಜ್ಯದ ಜನರಿಗೆ ತುತ್ತು ಅನ್ನಕ್ಕೂ ಅಕ್ಕಿ ನೀಡದ ಮೋದಿ ಸರ್ಕಾರ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್.ಮುನಿಯಪ್ಪ ತಿಳಿಸಿದರು.ಬುಧವಾರ ನಗರದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೇಂದ್ರದಲ್ಲಿ ಅಕ್ಕಿ ದಾಸ್ತಾನು ಇದ್ದರೂ ಎನ್‌ಡಿಎ ಮೈತ್ರಿಕೂಟದ ಮೋದಿ ನೇತೃತ್ವದ ಕೇಂದ್ರ ಸರ್ಕಾರ ದುರುದ್ದೇಶದಿಂದ ರಾಜ್ಯ ಸರ್ಕಾರಕ್ಕೆ ಅಕ್ಕಿ ಕೊಡಲಿಲ್ಲ. ಬಡವರ ಹಸಿವು ನೀಗಿಸುವುದು ಸಂವಿಧಾನ ಬದ್ಧ ಹಕ್ಕು ಎಂದರು.
ಸಚಿವ ಈಶ್ವರ ಖಂಡ್ರೆ ಪುತ್ರ ಸಾಗರ ಖಂಡ್ರೆ ಒಬ್ಬ ನವ ಯುವಕ, ಕ್ರಿಯಾಶೀಲ. ಯುವಕರನ್ನು ಸಂಸತ್‌ಗೆ ಕಳಿಸಬೇಕೆಂಬ ಉದ್ದೇಶದಿಂದ ಟಿಕೇಟ್ ನೀಡಲಾಗಿದೆ. ಅವರನ್ನು ಆಶಿರ್ವದಿಸಿ ಎಂದರು. ಮಾದಿಗರಿಗೆ ಒಳ ಮೀಸಲಾತಿ ನೀಡುತ್ತೇವೆ ಎಂದು ಹೇಳುವ ಮೋದಿಯವರು ಹತ್ತು ವರ್ಷ ಏಕೆ ನೀಡಲಿಲ್ಲ? ಇದೊಂದು ಚುನಾವಣಾ ಗಿಮಿಕ್ ಎಂದರಲ್ಲದೆ ನುಡಿದಂತೆ ನಡೆಯುವ ಸರ್ಕಾರ ಕಾಂಗ್ರೆಸ್ ಒಂದೆ. ಗ್ಯಾರಂಟಿ ಸ್ಥಿರವಾಗಿ ಜಾರಿಗೆ ತಂದು ಜನಪರ ಜೀವಪರವಾಗಿ ಸರ್ಕಾರ ನಡೆಸುತಿದ್ದೇವೆ.ಸಾಲಮನ್ನಾ, ಬಿಪಿಎಲ್ ಕಾರ್ಡ್ ಇರುವ ಮಹಿಳೆಗೆ ವರ್ಷಕ್ಕೆ ಒಂದು ಲಕ್ಷ ಹಣ ನೀಡುವುದು, ಉದ್ಯೋಗ ಭರ್ತಿ ಸೇರಿ ಎಲ್ಲಾ ವರ್ಗದವರಿಗೂ ನ್ಯಾಯ ಒದಗಿಸಿಕೊಡುವ ಪ್ರಯತ್ನ ಮಾಡುತಿದ್ದೇವೆ ಎಂದು ಮುನಿಯಪ್ಪ ತಿಳಿಸಿದರು. ರಾಜ್ಯದಲ್ಲಿ 28 ಸ್ಥಾನಗಳಲ್ಲಿ ಗೆಲ್ಲುವ ಭರವಸೆ ಇದೆ ಎಂದು ತಿಳಿಸಿದರು.
ಇದೇ ವೇಳೆ ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ, ಎಂಎಲ್ಸಿ ಅರವಿಂದಕುಮಾರ ಅರಳಿ, ಪ್ರಮುಖರಾದ ಬಸವರಾಜ ಬುಳ್ಳಾ, ವಿಜಯಕುಮಾರ್ ರಾಮಕೃಷ್ಣ, ವಿದ್ಯಾಸಾಗರ ಶಿಂಧೆ, ಸಂಜೀವಕುಮಾರ ಡಿ.ಕೆ, ಪಕ್ಷದ ಜಿಲ್ಲಾ ಕಾರ್ಯದರ್ಶಿ ದತ್ತಾತ್ರಿ ಮೂಲಗೆ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.