ಮೋದಿ, ಬಿಎಸ್‌ವೈ ನಾಮಫಲಕಗಳ ಹರೀಶ್‌ ತೆಗೆಸಲಿ

| Published : Oct 21 2025, 01:00 AM IST

ಸಾರಾಂಶ

ಬಿಜೆಪಿ ರಾಜ್ಯಾಧ್ಯಕ್ಷರಿಂದಲೇ ಬಾಯಿ ಹರುಕ ಅಂತಾ ಬಿರುದಿಗೆ ಪಾತ್ರರಾದ ಹರಿಹರ ಶಾಸಕ ಬಿ.ಪಿ.ಹರೀಶ ಮೊದಲು ನರೇಂದ್ರ ಮೋದಿ, ಬಿ.ಎಸ್.ಯಡಿಯೂರಪ್ಪ ಹೆಸರಿನ ನಾಮಫಲಕಗಳನ್ನು ತೆರವುಗೊಳಿಸಲಿ. ಆನಂತರ ಇತರರ ಹೆಸರಿನ ನಾಮಫಲಕಗಳ ಬಗ್ಗೆ ಮಾತನಾಡಲಿ ಎಂದು ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿನೇಶ ಕೆ. ಶೆಟ್ಟಿ ತಿರುಗೇಟು ನೀಡಿದ್ದಾರೆ.

- ಎಸ್‌ಎಸ್‌, ಎಸ್‌ಎಸ್‌ಎಂ ನಾಮಫಲಕ ತೆರವಿಗೆ ಒತ್ತಾಯಿಸಿದ್ದ ಹರಿಹರ ಶಾಸಕಗೆ ದಿನೇಶ್‌ ಶೆಟ್ಟಿ ತಿರುಗೇಟು - - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಬಿಜೆಪಿ ರಾಜ್ಯಾಧ್ಯಕ್ಷರಿಂದಲೇ ಬಾಯಿ ಹರುಕ ಅಂತಾ ಬಿರುದಿಗೆ ಪಾತ್ರರಾದ ಹರಿಹರ ಶಾಸಕ ಬಿ.ಪಿ.ಹರೀಶ ಮೊದಲು ನರೇಂದ್ರ ಮೋದಿ, ಬಿ.ಎಸ್.ಯಡಿಯೂರಪ್ಪ ಹೆಸರಿನ ನಾಮಫಲಕಗಳನ್ನು ತೆರವುಗೊಳಿಸಲಿ. ಆನಂತರ ಇತರರ ಹೆಸರಿನ ನಾಮಫಲಕಗಳ ಬಗ್ಗೆ ಮಾತನಾಡಲಿ ಎಂದು ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿನೇಶ ಕೆ. ಶೆಟ್ಟಿ ತಿರುಗೇಟು ನೀಡಿದರು.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಮನೂರು ಶಿವಶಂಕರಪ್ಪ, ಎಸ್.ಎಸ್. ಮಲ್ಲಿಕಾರ್ಜುನ ಹೆಸರಿನ ನಾಮಫಲಕಗಳನ್ನು ಜಿಲ್ಲಾಡಳಿತ ತೆರವುಗೊಳಿಸದಿದ್ದರೆ ಬಿಜೆಪಿಯಿಂದಲೇ ತೆರವುಗೊಳಿಸುತ್ತೇವೆಂದು ಬಿ.ಪಿ.ಹರೀಶ ಹೇಳುತ್ತಾರೆ. ಮೊದಲು ಸಂವಿಧಾನ ಬಗ್ಗೆ ಗೌರವವಿದ್ದರೆ ದೇಶದ ವಿವಿಧೆಡೆ ನರೇಂದ್ರ ಮೋದಿ ಹೆಸರಿನ ಕ್ರೀಡಾಂಗಣ, ರಾಜ್ಯದಲ್ಲಿ ಬಿ.ಎಸ್.ಯಡಿಯೂರಪ್ಪ ಹೆಸರಿನ ಬಸ್‌ ನಿಲ್ದಾಣದ ನಾಮಫಲಕಗಳ ತೆರವು ಮಾಡಿಸಿ ಎಂದು ಸವಾಲು ಹಾಕಿದರು.

ಹರಿಹರದಲ್ಲಿ ಕಾಮಗಾರಿಯೇ ಆರಂಭ ಆಗದಿದ್ದರೂ ಕಾಮಗಾರಿ ಪ್ರಗತಿಯಲ್ಲಿದೆ ಎಂಬುದಾಗಿ ಪ್ರಚಾರ ಪಡೆಯುವ ಬಿ.ಪಿ.ಹರೀಶ್‌ಗೆ ರಾಜ್ಯ ಸರ್ಕಾರ ₹5 ಕೋಟಿ ಅನುದಾನ ಕೊಟ್ಟಿದ್ದು, ಹರಿಹರ- ಶಿವಮೊಗ್ಗ ರಸ್ತೆ ಇತರೆ ರಸ್ತೆ ಅಭಿವೃದ್ಧಿಗೆ ಯಾಕೆ ಮುಂದಾಗಿಲ್ಲ? ಹರಿಹರ ಕ್ಷೇತ್ರದ ಸಾಕಷ್ಟು ರಸ್ತೆಗಳು ಹಾಳಾಗಿವೆ. ಮೊದಲು ಅವುಗಳನ್ನು ಸರಿಪಡಿಸಲಿ. ಮುಂದಿನ ಚುನಾವಣೆಗೆ ಬಿಜೆಪಿ ಟಿಕೆಟ್‌ಗಾಗಿ ಮಾಜಿ ಸಂಸದ ಜಿ.ಎಂ.ಸಿದ್ದೇಶ್ವರ, ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ, ಲೋಕಿಕೆರೆ ನಾಗರಾಜ, ಬಿ.ಪಿ.ಹರೀಶ ಸ್ಪರ್ಧೆಗೆ ಬಿದ್ದವರಂತೆ ಹೇಳಿಕೆಗಳನ್ನು ನೀಡುತ್ತಿದ್ದಾರಷ್ಟೇ ಎಂದು ದಿನೇಶ ಶೆಟ್ಟಿ ಲೇವಡಿ ಮಾಡಿದರು.

90ರ ದಶಕದಲ್ಲಿ ಕೋಮು ಸಾಮರಸ್ಯಕ್ಕೆ ಧಕ್ಕೆಯಾದಾಗ ಮೃತರ ಕುಟುಂಬಗಳಿಗೆ ಶಾಮನೂರು ಶಿವಶಂಕರಪ್ಪ, ಎಸ್‌.ಎಸ್‌. ಮಲ್ಲಿಕಾರ್ಜುನ ಮೃತರ ಕುಟುಂಬಗಳಿಗೆ, ಸಂತ್ರಸ್ಥರಿಗೆ ಪಡಿತರ ನೀಡಿ, ವೈಯಕ್ತಿಕವಾಗಿ ಸಹಾಯ ಮಾಡಿದ್ದರು. ಇದೆಲ್ಲಾ ಆಗಿ 3 ದಶಕವೇ ಕಳೆದಿವೆ. ಆದರೆ, ಬಿಜೆಪಿಯ ಯಶವಂತ ರಾವ್ ಜಾಧವ್, ರಾಜನಹಳ್ಳಿ ಶಿವಕುಮಾರಗೆ ಈಗ ಗೋಲಿಬಾರ್‌ಗೆ ಬಲಿಯಾದವರ ಕುಟುಂಬಗಳು ನೆನಪಿಗೆ ಬಂದಿವೆ. ಇದೆಲ್ಲಾ ಕೇವಲ ರಾಜಕೀಯ ನಾಟಕವಷ್ಟೇ. 8 ಜನ ಮೃತರ ಕುಟುಂಬಕ್ಕೆ ಬಿಜೆಪಿ ಸರ್ಕಾರವಿದ್ದಾಗ, ದೂಡಾ ಅಧ್ಯಕ್ಷರಿದ್ದಾಗ ಯಾಕೆ ಒಂದು ಸೂರು ಅಥವಾ ನಿವೇಶನವನ್ನೂ ಕೊಡಲಿಲ್ಲ ಎಂದು ಯಶವಂತ ರಾವ್, ರಾಜನಹಳ್ಳಿ ಶಿವಕುಮಾರ್‌ಗೆ ಅವರು ಪ್ರಶ್ನಿಸಿದರು.

ಈಗ ಹುತಾತ್ಮರ ಹೆಸರನ್ನು ಜಪ ಮಾಡುತ್ತಿದ್ದಾರೆ. 15 ಕೆಜಿ ಬೆಳ್ಳಿ ಇಟ್ಟಿಗೆಯನ್ನು ಸ್ವಾಮೀಜಿ ಕೈಗೆ ಕೊಡುವ ಬದಲು ಅದೇ ಹಣವನ್ನು 8 ಜನ ಮೃತರ ಕುಟುಂಬಕ್ಕೆ ನೀಡಿದ್ದರೆ ಆ ಕುಟುಂಬಗಳಿಗಾದರೂ ಆಸರೆಯಾಗುತ್ತಿತ್ತು. ಅಯೋಧ್ಯೆಗೆ ಬಡವರು, ಪರಿಶಿಷ್ಟರು, ಹಿಂದುಳಿದವರು, ಅಲ್ಪಸಂಖ್ಯಾತರು ಎಲ್ಲರೂ ಕೈಲಾದ ದೇಣಿಗೆ ನೀಡಿದ್ದಾರೆ. ನಾವೂ ನೀಡಿದ್ದೇವೆ. ಈಗ 15 ಕೆಜಿ ಬೆಳ್ಳಿ ಇಟ್ಟಿಗೆ ನೀಡಿದ್ದೇವೆಂದವರು ಅಯೋಧ್ಯೆಯಲ್ಲಿ ನೀಡಿದ್ದಕ್ಕೆ ರಸೀದಿ ಇದೆಯಾ? ಆದರೆ ಹಿಂದುಳಿದವರು, ಪರಿಶಿಷ್ಟರು, ಬಡವರ ಮಕ್ಕಳಿಗೆ ಪ್ರಚೋದನೆ ನೀಡುವ ಕೆಲಸ ಇಂತಹವರು ವ್ಯವಸ್ಥಿತವಾಗಿ ಮಾಡಿಕೊಂಡು ಬಂದಿದ್ದಾರೆ ಎಂದು ದಿನೇಶ್‌ ಟೀಕಿಸಿದರು.

ಮಾಜಿ ಸಂಸದ ಜಿ.ಎಂ.ಸಿದ್ದೇಶ್ವರ್‌ಗೆ ದೂಡಾ ಮಾಜಿ ಅಧ್ಯಕ್ಷರಾದ ಯಶವಂತ ರಾವ್‌ ಜಾಧವ್, ರಾಜನಹಳ್ಳಿ ಶಿವಕುಮಾರ ಇಚ್‌ಗಾರ್ಡ್‌ನಂತಿದ್ದಾರೆ. ಈ ಇಬ್ಬರ ಹೆಗಲ ಮೇಲೆ ಕೈ ಹಾಕಿಕೊಂಡೇ ಸಿದ್ದೇಶ್ವರ ನಡೆಯುತ್ತಾರೆ. ಈ ಹಿಂದೆ ಸಂಸದರಿದ್ದಾಗ, ಬಿಜೆಪಿ ಅಧಿಕಾರ ಅವಧಿಯಲ್ಲಿ ಸರ್ಕಾರಿ ಕಾರ್ಯಕ್ರಮಗಳಲ್ಲಿ ಯಾವುದೇ ಅಧಿಕಾರದಲ್ಲಿ ಇಲ್ಲದಿದ್ದರೂ ಈ ಇಬ್ಬರೂ ವೇದಿಕೆಯಲ್ಲಿ ಕೂಡುತ್ತಿದ್ದರು ಎಂದು ದಿನೇಶ ಕೆ. ಶೆಟ್ಟಿ ವಾಗ್ದಾಳಿ ನಡೆಸಿದರು.

ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಎ.ನಾಗರಾಜ, ಕೆ.ಜಿ.ಶಿವಕುಮಾರ, ಮಾಜಿ ಮೇಯರ್ ಅನಿತಾ ಬಾಯಿ ಮಾಲತೇಶ ಜಾಧವ್‌, ಅಯೂಬ್ ಪೈಲ್ವಾನ್, ವರುಣ್ ಬೆಣ್ಣೆಹಳ್ಳಿ, ಮಂಜುಳಮ್ಮ, ಮಂಗಳಮ್ಮ, ಮಾರುತಿ, ಮಂಜುನಾಥ, ಕುಬೇರ ಇತರರು ಇದ್ದರು.

- - -

(ಕೋಟ್‌) ಶಾಸಕ ಬಿ.ಪಿ.ಹರೀಶ್‌ ಮಾನಸಿಕ ಸ್ಥಿತಿ ಸರಿಯಿಲ್ಲವೆಂದು ಕಾಣುತ್ತದೆ. ಆಸ್ಪತ್ರೆಗೆ ದಾಖಲಾಗಿ ಸೂಕ್ತ ಚಿಕಿತ್ಸೆ ಪಡೆಯಲಿ. ಜಿಲ್ಲಾಧಿಕಾರಿ, ಜಿಲ್ಲಾ ಸಚಿವರು ತಮ್ಮ ಕೆಲಸ ಮಾಡುತ್ತಾರೆ. ಬಿ.ಎಸ್.ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಮೇಲೆ ಆರೋಪ ಮಾಡುವ ಹರೀಶ ಕಾನೂನು ಎಲ್ಲರಿಗೂ ಒಂದೇ ಎಂಬುದನ್ನೂ ಅರಿಯಲಿ.

- ದಿನೇಶ್‌ ಶೆಟ್ಟಿ, ಕಾಂಗ್ರೆಸ್‌ ಮುಖಂಡ. - - -

(ಟಾಪ್‌ ಕೋಟ್‌) ಯಶವಂತ ರಾವ್ ಜಾಧವ್, ರಾಜನಹಳ್ಳಿ ಶಿವಕುಮಾರ ದೂಡಾ ಅಧ್ಯಕ್ಷರಾಗಿದ್ದಾಗ ತಮ್ಮ ಸಂಬಂಧಿಗಳ ಹೆಸರಲ್ಲಿ ನಿವೇಶನಗಳನ್ನು ಬರೆದುಕೊಳ್ಳುವ ಜೊತೆಗೆ ಅಕ್ರಮ ಡೋರ್ ನಂಬರ್ ಹೆಸರಲ್ಲಿ ಹಗರಣಗಳನ್ನು ಮಾಡಿದ್ದಾರೆ. ಆದರೆ, ಶ್ರೀರಾಮ ರಥಯಾತ್ರೆ ವೇಳೆ ಹುತಾತ್ಮರಾದವರ ಕುಟುಂಬಕ್ಕೆ ತಮ್ಮ ಕೈಯಲ್ಲೇ ಅಧಿಕಾರ ಇದ್ದಾಗಲೂ ಕನಿಷ್ಟ ಒಂದೇ ಒಂದು ನಿವೇಶನ ನೀಡಲಿಲ್ಲ. ಈಗ ಹುತಾತ್ಮರ ಜಪ ಮಾಡುತ್ತಿದ್ದಾರೆ.

- ದಿನೇಶ ಕೆ. ಶೆಟ್ಟಿ, ಪ್ರಧಾನ ಕಾರ್ಯದರ್ಶಿ, ಜಿಲ್ಲಾ ಕಾಂಗ್ರೆಸ್‌.

- - -

-20ಕೆಡಿವಿಜಿ6:

ದಾವಣಗೆರೆಯಲ್ಲಿ ಸೋಮವಾರ ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿನೇಶ ಕೆ. ಶೆಟ್ಟಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.