ಸಭಿಕರೊಂದಿಗೆ ಸಂವಾದಿಯಾಗಿ ಭರ್ಜರಿ ಮತ ಬೆಳೆಯ ಕೊಯ್ಲು ಮಾಡಿದ ಮೋದಿ

| Published : Apr 29 2024, 01:39 AM IST

ಸಭಿಕರೊಂದಿಗೆ ಸಂವಾದಿಯಾಗಿ ಭರ್ಜರಿ ಮತ ಬೆಳೆಯ ಕೊಯ್ಲು ಮಾಡಿದ ಮೋದಿ
Share this Article
  • FB
  • TW
  • Linkdin
  • Email

ಸಾರಾಂಶ

ಜನಸ್ತೋಮ ಉತ್ಸಾಹ ಕಂಡು ಇದು ಚುನಾವಣೆ ಪ್ರಚಾರ ಸಭೆಯ ಬದಲು, ವಿಜಯೋತ್ಸವ ಅನಿಸುತ್ತಿದೆ ಎಂದು ಬಣ್ಣಿಸಿದಾಗ ಚಪ್ಪಾಳೆ ಮುಗಿಲು ಮುಟ್ಟಿ ಮಾರ್ದನಿಸಿತು.

ಶಿರಸಿ: ಇದ್ದದ್ದು ಚುನಾವಣೆ ಪ್ರಚಾರ ಸಭೆ. ಭಾಷಣ ಮಾಡಬೇಕಿದ್ದ ಪ್ರಧಾನಿ ನರೇಂದ್ರ ಮೋದಿ ನೆರೆದಿದ್ದ ಜನಸ್ತೋಮದ ಉತ್ಸಾಹ ಕಂಡು ಅವರೊಂದಿಗೆ ಸಂವಾದಿಯಾದರು. ಮಾತು ಮಾತಿಗೆ ಮೋದಿ ಮೋದಿ ಎನ್ನುತ್ತಿದ್ದವರ ಮಧ್ಯೆ ಭರ್ಜರಿ ಮತ ಕೊಯ್ಲು ಮಾಡಿದರು.

ಭಾನುವಾರ ಇಲ್ಲಿನ ಮಾರಿಕಾಂಬಾ ಕ್ರೀಡಾಂಗಣ ಇಂಥದೊಂದು ಪ್ರಧಾನಿ- ಪ್ರಜೆಗಳ ಮಧ್ಯದ ಸುದೀರ್ಘ ಸಂವಾದಕ್ಕೆ ಸಾಕ್ಷಿಯಾಯಿತು.

ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಚುನಾವಣೆ ಪ್ರಚಾರದ ಬಹಿರಂಗ ಸಭೆಗೆ ಸೇನಾ ಹೆಲಿಕ್ಯಾಪ್ಟರ್‌ನಲ್ಲಿ ಪ್ರಧಾನಿ ಮೋದಿ ಬಂದಿಳಿದಾಗ ಏರುಬಿಸಿಲು.

ಸರಿಸುಮಾರು ಒಂದು ಲಕ್ಷದಷ್ಟು ಇದ್ದ ಜನ ತಮ್ಮ ನೆಚ್ಚಿನ ಪ್ರಧಾನಿಯ ಆಗಮನ ಆಗುತ್ತಿದ್ದಂತೆ ಏಕ ಸ್ವರದಲ್ಲಿ ಮೋದಿ ಮೋದಿ ಎಂದು ಘೋಷಣೆ ಕೂಗಿದಾಗ ಅರಬ್ಬಿ ಸಮುದ್ರ ಅಲೆಗಳು ಪಶ್ಚಿಮ ಘಟ್ಟದ ಬೆಟ್ಟಕ್ಕೆ ಅಪ್ಪಳಿಸಿದಂತೆ ಭಾಸವಾಯಿತು.

ಜನಸ್ತೋಮ ಉತ್ಸಾಹ ಕಂಡು ಇದು ಚುನಾವಣೆ ಪ್ರಚಾರ ಸಭೆಯ ಬದಲು, ವಿಜಯೋತ್ಸವ ಅನಿಸುತ್ತಿದೆ ಎಂದು ಬಣ್ಣಿಸಿದಾಗ ಚಪ್ಪಾಳೆ ಮುಗಿಲು ಮುಟ್ಟಿ ಮಾರ್ದನಿಸಿತು.

ಜನರ ಉತ್ಸಾಹವನ್ನು ಸರಿಯಾಗಿಯೇ ಬಳಸಿಕೊಂಡ ಪ್ರಧಾನಿ ಮೋದಿ, ಈ ಪ್ರೀತಿ ಬರೀ ಚಪ್ಪಾಳೆಗೆ ಸೀಮಿತ ಆಗಬಾರದು. ಮತ ನೀಡಿ ಈ ನಿಮ್ಮ ಸೇವಕ ಮೋದಿಗೆ ಶಕ್ತಿ ತುಂಬಬೇಕು. ಇಲ್ಲಿಂದ ನಿಮ್ಮ ಊರಿಗೆ ಹೋಗಿ ನಿಮ್ಮ ಬಂಧುಗಳಿಗೆ, ನೆರೆಹೊರೆಯವರಿಗೆ ಈ ಮೋದಿಯ ಪ್ರಣಾಮಗಳನ್ನು ತಿಳಿಸಿ ಅವರಿಂದಲೂ ಮತ ಹಾಕಿಸಬೇಕು. ಮತ ಹಾಕಿಸುತ್ತೀರಲ್ಲ ಎಂದು ಪ್ರಶ್ನಿಸಿದರು. ಅದಕ್ಕೆ ಜನಸ್ತೋಮ ಹೌದು ಮತ ಹಾಕಿಸುತ್ತೇವೆ ಎನ್ನುವ ಅಭಯ ನೀಡಿತು.

ಹೀಗೆ ೪೭ ನಿಮಿಷಗಳ ಕಾಲ ಅಬ್ಬರದ ಭಾಷಣದ ಬದಲು ಮುಸ್ಲಿಂ ಓಲೈಕೆ, ದೇಶದ ಸುರಕ್ಷತೆ , ಆಸ್ತಿ ಹಂಚಿಕೆ, ರಾಮಮಂದಿರ ವಿರೋಧಿಸಿದವರು... ಹೀಗೆ ಕಾಂಗ್ರೆಸ್ ಧೋರಣೆಯನ್ನು ಕಟುವಾಗಿ ಖಂಡಿಸುತ್ತ ಇಂಥ ಕಾಂಗ್ರೆಸ್ ದೇಶಕ್ಕೆ ಬೇಕಾ? ಎನ್ನುವ ಪ್ರಶ್ನೆಯನ್ನು ಸಭಿಕರತ್ತ ಪುನಃ ಪುನಃ ಎಸೆದು ಅವರಿಂದ ಬೇಡ ಎನ್ನುವ ಉತ್ತರವನ್ನು ಪಡೆದರು.

ಒಮ್ಮೆ ಮಹಿಳೆಯರಿಗೆ, ಮತ್ತೊಮ್ಮೆ ಯುವಕರಿಗೆ, ಮಗದೊಮ್ಮೆ ಶಾಮಿಯಾನದ ಆಚೆ ಬಿಸಿಲಲ್ಲಿ ನಿಂತವರತ್ತ ಕೈ ಮಾಡಿ ಪ್ರಶ್ನಿಸಿದಾಗ ಅವರೆಲ್ಲ ಎರಡೂ ಕೈಗಳನ್ನು ಮೇಲೆತ್ತಿ ಮೋದಿ ಮೋದಿ ಎಂದು ಘೋಷಣೆ ಕೂಗುತ್ತ ಸಮ್ಮತಿ ಸೂಚಿಸಿದರು.

ಕೊನೆಯಲ್ಲಿ ನೀವು ಮತ ಬೆಂಬಲದ ಗ್ಯಾರಂಟಿ ನೀಡಿದರೆ ನಾನು ನಿಮಗೆ ನಿಮ್ಮ ಸುರಕ್ಷತೆ, ವಿಕಾಸ, ಸಮೃದ್ಧಿಯ ಗ್ಯಾರಂಟಿ ನೀಡುತ್ತೇನೆ. ಇದು ಈ ದೇಶಕ್ಕೆ ನೀಡುವ ಮೋದಿ ಗ್ಯಾರಂಟಿ ಎಂದಾಗ ಎರಡು ನಿಮಿಷಗಳ ಕಾಲ ಕಿವಿ ಗಡಚಿಕ್ಕುವ ಚಪ್ಪಾಳೆ ಮತ್ತೆ ಮಾರ್ದನಿಸಿತು.