ಸಾರಾಂಶ
ಕಾಂಗ್ರೆಸ್ ಚುನಾವಣೆ ಪ್ರಚಾರ ಕಾರ್ಯಕ್ರಮದಲ್ಲಿ ಮಾಜಿ ಸಂಸದ
ಕನ್ನಡಪ್ರಭ ವಾರ್ತೆ ಕುಷ್ಟಗಿಬಿಜೆಪಿ ಪ್ರಣಾಳಿಕೆಗೆಳಿಗೆ ನರೇಂದ್ರ ಮೋದಿ ಅವರು ಮೋದಿ ಗ್ಯಾರಂಟಿ ಎಂದು ತಮ್ಮ ಹೆಸರನ್ನು ಇಟ್ಟುಕೊಂಡಿದ್ದು ಅವರು ಸ್ವನಾಮ ಪ್ರೇಮಿಯಾಗಿದ್ದಾರೆ. ಇದು ಅವರಿಗೆ ಶೋಭೆ ತರುವಂತಹದ್ದು ಅಲ್ಲ ಎಂದು ಮಾಜಿ ಸಂಸದ ಸಂಗಣ್ಣ ಕರಡಿ ಹೇಳಿದರು.
ತಾಲೂಕಿನ ಹಿರೇಮನ್ನಾಪುರದಲ್ಲಿ ನಡೆದ ಕಾಂಗ್ರೆಸ್ ಚುನಾವಣೆ ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಪ್ರಧಾನಿ ನರೇಂದ್ರ ಮೋದಿಯವರು ಬಿಜೆಪಿಯ ಪ್ರಣಾಳಿಕೆಗಳನ್ನು ತಮ್ಮ ಗ್ಯಾರಂಟಿಯಂದು ಹೇಳುತ್ತಾ ತಮ್ಮ ಹೆಸರನ್ನು ಪ್ರಚಾರ ಮಾಡಿಕೊಳ್ಳುತ್ತಿರುವ ಕೆಲಸ ಮಾಡುತ್ತಿದ್ದಾರೆ ಎಂದರು.ಕಾಂಗ್ರೆಸ್ ಸರ್ಕಾರವು ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದು, ಇವುಗಳಿಗೆ ಸರ್ಕಾರದ ಗ್ಯಾರಂಟಿ ಯೋಜನೆಗಳು ಎನ್ನುತ್ತಿದ್ದಾರೆ. ಆದರೆ ಬಿಜೆಪಿ ಪ್ರಣಾಳಿಕೆಗಳಿಗೆ ಪಕ್ಷದ ಹೆಸರು ಎಲ್ಲಿಯೂ ಕಾಣುತ್ತಿಲ್ಲ ಕೇವಲ ಮೋದಿ ಗ್ಯಾರಂಟಿ ಮಾತ್ರ ಎನ್ನುತ್ತಿದ್ದಾರೆ ಎಂದು ಹೇಳಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯನವರು ರಾಜ್ಯದಲ್ಲಿ ಭ್ರಷ್ಟಾಚಾರ ರಹಿತ ಆಡಳಿತದ ಮೂಲಕ ಜನಪರವಾದ ಆಡಳಿತ ನೀಡುತ್ತಿದ್ದಾರೆ. ಆದ ಕಾರಣ ಕೊಪ್ಪಳ ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿಯಾದ ರಾಜಶೇಖರ ಹಿಟ್ನಾಳಗೆ ಮತ ಹಾಕುವ ಮೂಲಕ ಅಭಿವೃದ್ಧಿಗೆ ಮುಂದಾಗಬೇಕು ಎಂದರು.ಕುಷ್ಟಗಿಯಲ್ಲಿ ನಡೆಯುತ್ತಿರುವ ರೈಲ್ವೆ ಕಾಮಗಾರಿಯಾದ ಮುನಿರಾಬಾದನ ಮೈಬೂಬು ನಗರ ಹಾಗೂ ಗದಗ-ವಾಡಿ ರೈಲ್ವೆ ಮಾರ್ಗ ನಿರ್ಮಾಣ ಮುಖ್ಯಮಂತ್ರಿ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಅವರ ಶ್ರಮದಿಂದ ಸಾಧ್ಯವಾಗಿದೆ. ಕಾಂಗ್ರೆಸ್ ಅನೇಕ ಅಭಿವೃದ್ಧಿ ಕಾರ್ಯ ಮಾಡುತ್ತಿದ್ದು, ಪಕ್ಷವನ್ನು ಬೆಂಬಲಿಸುವಂತಹ ಕೆಲಸಮಾಡಬೇಕು ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಮಾತನಾಡಿ, ಬಿಜೆಪಿಯವರಿಗೆ ಅಭಿವೃದ್ಧಿ ಮುಂದೆ ಇಟ್ಟುಕೊಂಡು ಮತ ಕೇಳುವ ತಾಕತ್ತು ಇಲ್ಲ. ನಾವು ಅಧಿಕಾರಕ್ಕೆ ಬಂದ ತಕ್ಷಣವೇ ಗ್ಯಾರಂಟಿ ಯೋಜನೆ ಜಾರಿಗೆ ತಂದಿದ್ದು, ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಮತ ಹಾಕಬೇಕು ಎಂದು ಕೇಳಿಕೊಂಡರು.ಮುಖ್ಯಮಂತ್ರಿ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಮರೇಗೌಡ ಪಾಟೀಲ ಬಯ್ಯಾಪೂರ ಮಾತನಾಡಿದರು. ಈ ಸಂದರ್ಭದಲ್ಲಿ ಶಾಸಕ ರಾಘವೇಂದ್ರ ಹಿಟ್ನಾಳ, ಕಾಡಾ ನಿಗಮದ ಅಧ್ಯಕ್ಷ ಹಸನಸಾಬ ದೋಟಿಹಾಳ, ಪ್ರಮುಖರಾದ ಮಾಲತಿ ನಾಯಕ, ಮೈನುದ್ದೀನ್ ಮುಲ್ಲಾ, ಉಮೇಶ ಮಂಗಳೂರು ಸೇರಿದಂತೆ ಇತರರು ಇದ್ದರು.