ಬಿಜೆಪಿ ಮಂಗಳೂರು ದಕ್ಷಿಣ ಮಂಡಲದ ವತಿಯಿಂದ ಬಿಕರ್ನಕಟ್ಟೆ ಸಮೀಪದ ಮೈದಾನದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಕ್ಯಾಪ್ಟನ್‌ ಬ್ರಿಜೇಶ್‌ ಚೌಟ ಮಾತನಾಡಿದರು.

ಮಂಗಳೂರು: ದೇಶದ ಭವಿಷ್ಯದ ದೃಷ್ಟಿಯಿಂದ ಈ ದೇಶದಲ್ಲಿ ಹಿಂದುತ್ವ ಉಳಿಯುವುದಕ್ಕಾಗಿ, ಮಕ್ಕಳ ಭವಿಷ್ಯಕ್ಕಾಗಿ ಮೋದಿಯನ್ನು ಮತ್ತೆ ಪ್ರಧಾನಿಯಾಗಿಸುವುದು ಅನಿವಾರ್ಯ. ರಾಮನ ಮಂದಿರ ನಾವು ಬದುಕಿರುವಾಗಲೇ ಆಗುತ್ತೋ ಇಲ್ಲವೋ ಅನ್ನುವ ಸಂಶಯ ಇತ್ತು. ಕಳೆದ ಬಾರಿ ಮೋದಿಯವರಿಗೆ 303 ಸ್ಥಾನ ಕೊಟ್ಟಿದ್ದಕ್ಕಾಗಿ ರಾಮ ಮಂದಿರ ಸಾಧ್ಯವಾಯಿತು. 500 ವರ್ಷಗಳ ಬಳಿಕ ನಾವು ರಾಮ ನವಮಿಯನ್ನು ವಿಜೃಂಭಣೆಯಿಂದ ಆಚರಿಸುವ ಸ್ಥಿತಿ ಬಂದಿದೆ ಎಂದು ದಕ್ಷಿಣ ಕನ್ನಡ ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್ ಬ್ರಿಜೇಶ್ ಚೌಟ ಹೇಳಿದ್ದಾರೆ.

ಬಿಜೆಪಿ ಮಂಗಳೂರು ದಕ್ಷಿಣ ಮಂಡಲದ ವತಿಯಿಂದ ಬಿಕರ್ನಕಟ್ಟೆ ಸಮೀಪದ ಮೈದಾನದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.

ಕಳೆದ ಹತ್ತು ವರ್ಷಗಳ ಸಾಧನೆ ಏನಂದ್ರೆ ಭ್ರಷ್ಟಾಚಾರ ರಹಿತ ಆಡಳಿತ. ಹತ್ತು ವರ್ಷಗಳಲ್ಲಿ ಯಾವುದೇ ಭಯೋತ್ಪಾದನೆ, ವಿಧ್ವಂಸಕ ಕೃತ್ಯದ ಭಯ ಇಲ್ಲದೆ ಜನರು ಜೀವನ ಮಾಡುವಂತಾಗಿದ್ದು ಸಾಧನೆ. ಹಿಂದುಗಳಿಗೆ ತಲೆಯೆತ್ತಿ ನಿಲ್ಲುವ ಸ್ಥಾನಮಾನವನ್ನು ಮೋದಿ ಕೊಡಿಸಿದ್ದಾರೆ ಎಂದರು.

ಸೇನೆಯಲ್ಲಿದ್ದಾಗ ಕಾಶ್ಮೀರದಲ್ಲಿ ಕೆಲಸ ಮಾಡಿ ಬಂದವನು ನಾನು. 370ನೇ ವಿಧಿ ರದ್ದುಪಡಿಸಿದ ವಿಚಾರದಲ್ಲಿ ಅಲ್ಲಿನ ಜನರಲ್ಲಿ ಮಾತನಾಡಿದ್ದೇನೆ. ಈ ದೇಶದಲ್ಲಿ ಎರಡು ಕಾನೂನು 70 ವರ್ಷಗಳ ಕಾಲ ಇತ್ತು ಎನ್ನುವುದೇ ನಮ್ಮ ದುರಂತ. ಅದರಿಂದ ನೆಹರು ಮತ್ತು ಶೇಖ್ ಅಬ್ದುಲ್ಲಾ ಕುಟುಂಬಕ್ಕೆ ಮಾತ್ರ ಲಾಭ ಆಗಿದ್ದು ಬಿಟ್ಟರೆ ದೇಶಕ್ಕೆ ಆಗಿಲ್ಲ. ಇವರ ಸ್ವಾರ್ಥಕ್ಕಾಗಿ ದೇಶವನ್ನು ಬಲಿಕೊಡಲು ಹೇಸದವರು ಕಾಂಗ್ರೆಸಿಗರು. 370 ವಿಧಿಯನ್ನು ರದ್ದುಪಡಿಸಿದ್ದರಿಂದ ಯಾವ ರೀತಿಯ ಬದಲಾವಣೆ ಆಗಿದೆ ಅನ್ನುವುದನ್ನು ಅಲ್ಲಿ ಹೋಗಿಯೇ ನೋಡಬೇಕು ಎಂದು ಕ್ಯಾ.ಚೌಟ ಹೇಳಿದರು.

ಈ ಸಲ ಮೋದಿಯವರು 400 ಸ್ಥಾನ ಕೇಳುತ್ತಿದ್ದಾರೆ. ಇದು ಮೋದಿಯವರ ಸ್ವಾರ್ಥಕ್ಕಾಗಿ ಅಲ್ಲ. ದೇಶದಲ್ಲಿ ಎಲ್ಲರಿಗೂ ಸಮಾನ ಅವಕಾಶ ಸಿಗಬೇಕು, ಸಮಾನತೆ ಆಗಬೇಕು ಅನ್ನುವ ಕಾರಣಕ್ಕಾಗಿ 400 ಸ್ಥಾನ ಬೇಕು. ತುಷ್ಟೀಕರಣಕ್ಕಾಗಿ ಧ್ವನಿ ಎತ್ತುವ ಧೈರ್ಯವೂ ಕಾಂಗ್ರೆಸಿಗರಿಗೆ ಬರಬಾರದು. ಇನ್ನಿರುವುದು ಎಂಟು ದಿನ. ಪ್ರತಿ ಬೀದಿಯಲ್ಲೂ ಮೋದಿಯವರು ಈ ದೇಶಕ್ಕೆ ಯಾಕೆ ಬೇಕು ಅನ್ನುವುದು ಪ್ರತಿ ಜನರ ಮಾತಾಗಬೇಕು ಎಂದರು.

ವಿಧಾನಸೌಧದಲ್ಲಿ ಕಾಂಗ್ರೆಸಿಗನ್ಯಾರೋ ಪಾಕಿಸ್ತಾನ್ ಜಿಂದಾಬಾದ್ ಹೇಳಿದ್ದನ್ನು ನಾವು ನೋಡಿದ್ದೇವೆ. ಆದರೆ, ದೇಶ ವಿರೋಧಿ ಘೋಷಣೆ ಕೂಗಿದ ಘಟನೆಯನ್ನು ಖಂಡಿಸುವುದಕ್ಕೂ ಕಾಂಗ್ರೆಸಿಗರಿಗೆ ಧೈರ್ಯ ಇಲ್ಲ ಅಂದ್ರೆ ಏನನ್ನಬೇಕು. ಮಾಜಿ ಡಿಸಿಎಂ ಸವದಿ ಅವರು ಬೆಳಗಾವಿಯ ಕಾಂಗ್ರೆಸ್ ಸಭೆಯಲ್ಲಿ ಭಾರತ್ ಮಾತಾ ಕೀ ಜೈ ಹಾಕಲು ಪಕ್ಕದಲ್ಲಿದ್ದ ಮಲ್ಲಿಕಾರ್ಜು ಖರ್ಗೆ ಬಳಿ ಪರ್ಮಿಶನ್ ಕೇಳಬೇಕಾಯಿತು. ಇದೆಂಥಾ ದುರವಸ್ಥೆ ಎಂದರು.

ಸಭೆಯಲ್ಲಿ ಶಾಸಕ ವೇದವ್ಯಾಸ ಕಾಮತ್, ವಿಕಾಸ್ ಪುತ್ತೂರು, ರವಿಶಂಕರ ಮಿಜಾರ್ ಮತ್ತಿತರರಿದ್ದರು.