ಸಾರಾಂಶ
ಭಟ್ಕಳ: ದೇಶದಲ್ಲಿ ಎನ್‌ಡಿಎ ವರ್ಚಸ್ಸು ತಗ್ಗಿದ್ದು, ಪ್ರಧಾನಮಂತ್ರಿ ಹತಾಶರಾಗಿ ಏನೇನೋ ಮಾತನಾಡುತ್ತಿದ್ದಾರೆ. ಮೋದಿಯವರು ಇತ್ತೀಚೆಗೆ ಆಡುತ್ತಿರುವ ಮಾತುಗಳು ಅವರ ಸ್ಥಾನಕ್ಕೆ ಶೋಭೆ ತರುವಂತದ್ದಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಂ. ವೀರಪ್ಪ ಮೊಯ್ಲಿ ತಿಳಿಸಿದರು.
ಸೋಮವಾರ ರಾತ್ರಿ ಶಿರಾಲಿಯ ಸಾರದಹೊಳೆಯ ನಾಮಧಾರಿ ಸಭಾಭವನದಲ್ಲಿ ಕಾಂಗ್ರೆಸ್ ಪ್ರಚಾರ ಸಭೆ ಉದ್ಘಾಟಿಸಿ ಮಾತನಾಡಿ, ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಮುಖದಲ್ಲಿ ಸೋಲಿನ ಛಾಯೆ ಕಾಣುತ್ತಿದೆ. ತಮಗೆ ಈ ಬಾರಿ ಸೋಲು ಖಚಿತ ಎನ್ನುವುದು ಅವರಿಗೆ ಗೊತ್ತಾಗಿದ್ದರಿಂದಲೇ ಹೋದಲ್ಲೆಲ್ಲಾ ಅವರು ಹತಾಶರಾಗಿ ಮಾತನಾಡುತ್ತಿದ್ದಾರೆ.ಕಳೆದ ಬಾರಿ ಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದರೆ ದೇಶ ಬಿಟ್ಟು ಹೋಗುತ್ತೇನೆ ಎಂದು ಹೇಳಿದ್ದ ಜೆಡಿಎಸ್ ವರಿಷ್ಠ ದೇವೇಗೌಡ ಅವರು ಈ ಬಾರಿ ಮೋದಿಯೊಂದಿಗೆ ಸೇರಿ ಭಾಷಣ ಮಾಡುತ್ತಿದ್ದಾರೆ. ಕಳೆದ ಬಾರಿ ಮೋದಿಯನ್ನು ದೂಷಿಸಿದ್ದ ದೇವೇಗೌಡರು ಇಂದು ಮೋದಿಯನ್ನು ಹಾಡಿ ಹೊಗಳುತ್ತಿದ್ದಾರೆ ಎಂದರು.
ಗ್ಯಾರಂಟಿ ಬಗ್ಗೆ ಬಿಜೆಪಿಯವರು ಲೇವಡಿ, ಅವಹೇಳನ ಮಾಡಿದ್ದರು. ಆದರೆ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಯಿಂದ ಕರ್ನಾಟಕದಲ್ಲಿ ಕೋಟ್ಯಂತರ ಮಂದಿಗೆ ಅನುಕೂಲವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ನುಡಿದಂತೆ ನಡೆದಿದ್ದಾರೆ. ಸರ್ಕಾರ ರಚನೆಯಾಗಿ 100 ದಿನಗಳಲ್ಲಿ ಗ್ಯಾರಂಟಿ ಯೋಜನೆ ಅನಷ್ಠಾನಕ್ಕೆ ತಂದು ದೇಶದಲ್ಲಿ ಮಾದರಿ ಎನಿಸಿದ್ದಾರೆ. ರಾಜ್ಯದಲ್ಲಿ ಮಹಿಳೆಯರು ಕಾಂಗ್ರೆಸ್ ಪರವಾಗಿ ನಿಂತಿದ್ದು, ಈ ಬಾರಿ ಉತ್ತರ ಕನ್ನಡ ಸೇರಿ ರಾಜ್ಯದಲ್ಲಿ ಕಾಂಗ್ರೆಸ್ ಅತಿ ಹೆಚ್ಚಿನ ಸ್ಥಾನ ಪಡೆಯಲಿದೆ ಎಂದರು.ಮಾಜಿ ಸಚಿವ ಆರ್.ವಿ. ದೇಶಪಾಂಡೆ ಮಾತನಾಡಿ, ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಯಿಂದ ರಾಜ್ಯದ ಜನರಿಗೆ ಅನುಕೂಲ ಆಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಹಿಳೆಯರ ಪರವಾಗಿದ್ದಾರೆ. ಕಾಂಗ್ರೆಸ್ ಸರ್ಕಾರ ಸಾಮಾಜಿಕ ನ್ಯಾಯ, ಜಾತ್ಯತೀತ ತತ್ವ ಇರುವ ಪಕ್ಷ ಆಗಿದೆ. ಬಿಜೆಪಿ ಅಭ್ಯರ್ಥಿ ಆರು ಬಾರಿ ಆಯ್ಕೆ ಆದರೂ ಏನೂ ಅಭಿವೃದ್ಧಿ ಕೆಲಸ ಮಾಡಿಲ್ಲ ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಮಾಂಕಾಳ್ ವೈದ್ಯ ಮಾತನಾಡಿ, ಅತಿಕ್ರಮಣ ಸಮಸ್ಯೆ ಬಗ್ಗೆ ಸಂಸದರೂ ಸೇರಿ ಯಾವ ಬಿಜೆಪಿಗರೂ ಮಾತನಾಡಿಲ್ಲ. ಬಿಜೆಪಿಯವರು ಬರೀ ಸುಳ್ಳು ಹೇಳುತ್ತಿದ್ದಾರೆ. ಇಂದು ಇಡೀ ದೇಶ ಸಂಕಷ್ಟದಲ್ಲಿದೆ. ಬೆಲೆ ಏರಿಕೆ ಮಿತಿಮೀರಿದೆ. ದೇಶವನ್ನು ಕೆಟ್ಟ ಪರಿಸ್ಥಿಗೆ ತಂದು ನಿಲ್ಲಿಸಿದ್ದಾರೆ. ಬೆಲೆ ಏರಿಕೆ ಬಗ್ಗೆ ಬಿಜಿಪಿಗರು ತುಟಿ ಬಿಚ್ಚುತ್ತಿಲ್ಲ. ಜಿಲ್ಲೆಯ ಹೆದ್ದಾರಿ ಸಮಸ್ಯೆಗೆ ಸಾವಿರಾರು ಜನರು ಮೃತಪಟ್ಟಿದ್ದಾರೆ. ಹೆದ್ದಾರಿ, ಸಿಆರ್‌ಝೆಡ್ ಸಮಸ್ಯೆಯಿಂದ ಜನರು ತೀರಾ ಸಂಕಷ್ಟ ಎದುರಿಸುತ್ತಿದ್ದಾರೆ ಎಂದರು.ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೆಂಕಟೇಶ್ ನಾಯ್ಕ, ಪ್ರಮುಖರಾದ ರಾಮ ಮೊಗೇರ್, ಚಂದ್ರಶೇಖರ ಗೌಡ, ವನಿತಾ ನಾಯ್ಕ, ಜಯಶ್ರೀ ಮೊಗೇರ್, ಗೋವಿಂದ ನಾಯ್ಕ, ವೆಂಕಟಯ್ಯ ಬೈರುಮನೆ, ಬೈರುಮನೆ, ಆಲ್ಬರ್ಟ್ ಡಿಕೊಸ್ಟ್, ಶ್ರೀಕಂಠ ಹೆಬ್ಬಾರ ಮುಂತಾದವರಿದ್ದರು. ಪ್ರಧಾನ ಕಾರ್ಯದರ್ಶಿ ಸುರೇಶ ನಾಯ್ಕ ನಿರೂಪಿಸಿದರು.