ಅಭಿವೃದ್ಧಿ ವಿಚಾರ ಇಲ್ಲದ್ದರಿಂದ ಮೋದಿ ಗಾಬರಿ

| Published : Apr 30 2024, 02:09 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ತಿಕೋಟಾ: ಪ್ರಸ್ತಾಪಿಸಲು ಅಭಿವೃದ್ಧಿ ವಿಚಾರಗಳು ಇಲ್ಲದ್ದರಿಂದ ನರೇಂದ್ರ ಮೋದಿ ಅವರು ಗಾಬರಿಯಾಗಿದ್ದಾರೆ. ಮಾತಿನಲ್ಲಿಯೇ ಮೋಡಿ ಮಾಡುವ ಅವರ ಪ್ರಯತ್ನ ಯಶಸ್ವಿಯಾಗುವುದಿಲ್ಲ ಎಂದು ಸಚಿವ ಎಂ.ಬಿ.ಪಾಟೀಲ ಟೀಕಿಸಿದರು.

ಕನ್ನಡಪ್ರಭ ವಾರ್ತೆ ತಿಕೋಟಾ

ಪ್ರಸ್ತಾಪಿಸಲು ಅಭಿವೃದ್ಧಿ ವಿಚಾರಗಳು ಇಲ್ಲದ್ದರಿಂದ ನರೇಂದ್ರ ಮೋದಿ ಅವರು ಗಾಬರಿಯಾಗಿದ್ದಾರೆ. ಮಾತಿನಲ್ಲಿಯೇ ಮೋಡಿ ಮಾಡುವ ಅವರ ಪ್ರಯತ್ನ ಯಶಸ್ವಿಯಾಗುವುದಿಲ್ಲ ಎಂದು ಸಚಿವ ಎಂ.ಬಿ.ಪಾಟೀಲ ಟೀಕಿಸಿದರು.

ತಿಕೋಟಾ ತಾಲೂಕಿನ ಬರಟಗಿ ಮತ್ತು ಹಂಚನಾಳ.ಪಿ.ಎಚ್ ಗ್ರಾಮದಲ್ಲಿ ನಡೆದ ಕಾಂಗ್ರೆಸ್‌ ಅಭ್ಯರ್ಥಿ ಪ್ರೊ.ರಾಜು ಆಲಗೂರ ಪರ ಪ್ರಚಾರ ಸಭೆಯಲ್ಲಿ ಮಾತನಾಡಿ, ದೊಡ್ಡ ಇತಿಹಾಸ ಹೊಂದಿರುವ ಕಾಂಗ್ರೆಸ್‌ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದೆ. ನಂತರ, ದೇಶದಲ್ಲಿ ಹಸಿರು ಕ್ರಾಂತಿ, ಕೈಗಾರಿಕೆ, ಕ್ಷೀರ, ಶಿಕ್ಷಣ, ಔದ್ಯೋಗಿಕ ಕ್ರಾಂತಿ ಮೂಲಕ ಭಾರತೀಯರು ಬದುಕು ಕಟ್ಟಿಕೊಳ್ಳುವಂತೆ ಮಾಡಿದೆ. ಆದರೆ, ಕಾಂಗ್ರೆಸ್ ಏನೂ ಮಾಡಿಲ್ಲ ಎಂದು ಹೇಳುವ ಬಿಜೆಪಿಯವರು ತಾವೇನು ಮಾಡಿದ್ದಾರೆ ಎಂದು ಹೇಳಲಿ ಎಂದು ತಿರುಗೇಟು ನೀಡಿದರು.

ವಿಜಯಪುರ ಜಿಲ್ಲೆಯಲ್ಲಿ 15 ವರ್ಷಗಳಿಂದ ರಮೇಶ ಜಿಗಜಿಣಗಿ ಸಂಸದರಾಗಿ ಅಭಿವೃದ್ಧಿ ಮಾಡಿಲ್ಲ. ಜನರಿಗೆ ಹೊರೆಯಾಗಿರುವ ಕೇಂದ್ರ ಸರ್ಕಾರಕ್ಕೆ ತಕ್ಕ ಉತ್ತರ ನೀಡಬೇಕು, ಕಾಂಗ್ರೆಸ್‌ ಅಭ್ಯರ್ಥಿ ರಾಜು ಆಲಗೂರಗೆ ನೀಡಬೇಕು ಎಂದು ಹೇಳಿದರು.

ಬರಟಗಿ ಮುಖಂಡ ಸಂಗಮೇಶ ದಾಶ್ಯಾಳ ಮತ್ತು ಪೋಮ್‌ಸಿಂಗ್ ರಾಠೋಡ ಮಾತನಾಡಿ, ಎಂ.ಬಿ.ಪಾಟೀಲರು ಬರಪೀಡಿತ ವಿಜಯಪುರ ಜಿಲ್ಲೆಯನ್ನು ಮಲೆನಾಡನ್ನಾಗಿ ಮಾಡುತ್ತಿದ್ದಾರೆ. ಬರಟಗಿ ಗ್ರಾಮದ ಇಂಚಿಂಚೂ ಪ್ರದೇಶದಲ್ಲೂ ಕಬ್ಬು ಬೆಳೆಯಲಾಗುತ್ತಿದ್ದು, ರೈತರ ಮುಖದಲ್ಲಿ ಮಂದಹಾಸ ಮೂಡುವಂತೆ ಮಾಡಿದ್ದಾರೆ. ಕಾಂಗ್ರೆಸ್‌ ಅಭ್ಯರ್ಥಿ ಪ್ರೊ.ರಾಜು ಆಲಗೂರ ಅವರಿಗೆ ಮತ ಹಾಕಿ ಎಂ.ಬಿ.ಪಾಟೀಲ ಅವರ ಕೈ ಬಲಪಡಿಸುವಂತೆ ಮನವಿ ಮಾಡಿಕೊಂಡರು.

ಹಂಚನಾಳ ಪಿ.ಎಚ್ ಗ್ರಾಮದ ಮುಖಂಡರಾದ ಶ್ರೀಕಾಂತ ಬಿರಾದಾರ, ಸೋಮು ಚವ್ಹಾಣ ಮತ್ತು ರೇವಣಸಿದ್ಧ ತಮಗೊಂಡ ಮಾತನಾಡಿ, ಮನೆ ನಡೆಸುವುದಕ್ಕೂ ಕಷ್ಟವಾಗಿದ್ದ ಸಮಯದಲ್ಲಿ ಬಡವರ ಪಾಲಿಗೆ ರಾಜ್ಯ ಸರ್ಕಾರ ಪಂಚ ಗ್ಯಾರಂಟಿ ಯೋಜನೆಗಳು ವರದಾನವಾಗಿವೆ. ಜೀವನ ಸಾಗಿಸಲು ಅನುಕೂಲ ಕಲ್ಪಿಸಿವೆ. ನಾವೆಲ್ಲ ಕಾಂಗ್ರೆಸ್ ಪರವಾಗಿದ್ದು, ಅಭ್ಯರ್ಥಿಗೆ ಲೀಡ್‌ ಕೊಡುವುದಾಗಿ ತಿಳಿಸಿದರು.ಈ ಸಂದರ್ಭದಲ್ಲಿ ಮುಖಂಡರಾದ ಕವಿತಾ ರಜಪೂತ, ಬಾಳುಗೌಡ ಪಾಟೀಲ, ಬಸುಗೌಡ ಪಾಟೀಲ, ಸಿದ್ದನಗೌಡ ಪಾಟೀಲ, ಪದ್ದು ಚವ್ಹಾಣ, ಸಿದ್ದು ಸಜ್ಜನ, ಕಲ್ಲಪ್ಪ ಪವಾರ, ಮೋತಿಲಾಲ ನಾಯಕ, ರಾಜು ರಾಠೋಡ, ವಿಜಯ ರಜಪೂತ, ಗೋವಿಂದ ಶಿಂಧೆ, ಸತೀಶ ನಾಯಕ, ಅಶೋಕ ಪಾಟೀಲ, ಬಾಳಪ್ಪ ಹಡಪದ, ಸುಭಾಷ ರಜಪೂತ, ಶ್ರೀಶೈಲ ಪಾಟೀಲ, ಸದಾಶಿವ ಪೂಜಾರಿ ಮುಂತಾದವರು ಉಪಸ್ಥಿತರಿದ್ದರು.ಕೋಟ್----------

ಎಲೆಕ್ಟ್ರೋಲ್ ಬಾಂಡ್‌ ಪ್ರಕರಣದಲ್ಲಿ ಮೋದಿ ಪ್ರಾಮಾಣಿಕತೆ ಬಯಲಾಗಿದೆ. ಈ ಬಗ್ಗೆ ಸಂಪೂರ್ಣ ತನಿಖೆಯಾಗಬೇಕಿದೆ. ಅಭಿವೃದ್ಧಿ ಮಾಡದ ಬಿಜೆಪಿ ಮತಗಿಟ್ಟಿಸಲು ಕೋಮು ಭಾವನೆ ಕೆರಳಿಸುವುದನ್ನು ಬಿಟ್ಟು ಬೇರೇನೂ ಮಾಡುತ್ತಿಲ್ಲ. ಕಳೆದ 10 ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಬೆಲೆ ಏರಿಕೆ, ಉದ್ಯೋಗ ಕಡಿತ, ಜಿಎಸ್‌ಟಿ ಹೆಸರಿನಲ್ಲಿ ರೈತರು, ಜನಸಾಮಾನ್ಯರಿಗೆ ಹೊರೆಯಾದ ಕೊಡುಗೆ ನೀಡಿದ್ದಾರೆ.ಎಂ.ಬಿ.ಪಾಟೀಲ, ಸಚಿವ