ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ ಪ್ರಧಾನಿಯಾಗಿ ಜವಾಹರಲಾಲ್ ನೆಹರು ಅವರ ದಾಖಲೆ ಮುರಿದಿದ್ದಲ್ಲದೆ, ಭಾರತವನ್ನು ವಿಶ್ವನಾಯಕ ಮಟ್ಟಕ್ಕೆ ಏರಿಸುತ್ತಿದ್ದಾರೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ ಪ್ರಧಾನಿಯಾಗಿ ಜವಾಹರಲಾಲ್ ನೆಹರು ಅವರ ದಾಖಲೆ ಮುರಿದಿದ್ದಲ್ಲದೆ, ಭಾರತವನ್ನು ವಿಶ್ವನಾಯಕ ಮಟ್ಟಕ್ಕೆ ಏರಿಸುತ್ತಿದ್ದಾರೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅಭಿವೃದ್ಧಿ ಮತ್ತು ಅಸಾಮಾನ್ಯ ಜನರ ಕಲ್ಯಾಣಕ್ಕೋಸ್ಕರ ಗರೀಬ್ ಕಲ್ಯಾಣ್ ಯೋಜನೆ, ಗ್ರಾಮೀಣ ಜನರಿಗೆ ಕುಡಿಯುವ ರಿನ ಜಲಜೀವನ್ ಮಿಷನ್ ಯೋಜನೆ, ರೈತರಿಗೆ ಪಿಎಂ ಕಿಸಾನ್ ಯೋಜನೆ, ಜನ್ ಧನ್ ಯೋಜನೆ, ಯುವಜನ ಸಬಲೀಕರಣ, ಬಡ ಮಹಿಳೆಯರಿಗಾಗಿ ಉಜ್ವಲ್ ಯೋಜನೆ, ಡಿಜಿಟಲ್ ಇಂಡಿಯಾ, ಆರೋಗ್ಯ ಕಾಳಜಿಗಾಗಿ ಆಯುಷ್‌ಮಾನ್ ಆರೋಗ್ಯ ಯೋಜನೆಗಳಂಥಹ ಜನ ಪರ ಯೋಜನೆಗಳನ್ನು ಜಾರಿಗೊಳಿಸಿದ್ದಲ್ಲದೆ ಅವುಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿದ ಹೆಗ್ಗಳಿಕೆಗೆ ಪ್ರಧಾನಿ ನರೇಂದ್ರ ಮೋದಿ ಪಾತ್ರರಾಗಿದ್ದಾರೆ ಎಂದರು.

ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ 2014ರಿಂದ ಇಲ್ಲಿಯವರೆಗೆ ವಿವಿಧ ಅಭಿವೃದ್ಧಿ ಯೋಜನೆಗಳಿಗಾಗಿ ಕೇಂದ್ರ ಸರ್ಕಾರದಿಂದ 73 ಯೋಜನೆಗಳಿಗೆ ಸುಮಾರು 20ರಿಂದ 22 ಸಾವಿರ ಕೋಟಿ ರು.ಗಳ ಅನುದಾನ ಬಂದಿದೆ. 990 ಕೋಟಿ ರೂ.ವೆಚ್ಚದಲ್ಲಿ ಸ್ಮಾರ್ಟ್ ಸಿಟಿ ಯೋಜನೆ ಜಾರಿಗೆ ತರಲಾಗಿದೆ. ಶಿವಮೊಗ್ಗದಲ್ಲಿ ಕುವೆಂಪು ಹೆಸರಿನಲ್ಲಿ ವಿಮಾನ ನಿಲ್ದಾಣ, ಶರಾವತಿ ನದಿಗೆ ಅಡ್ಡಲಾಗಿ ಸಿಗಂಧೂರು ಸೇತುವೆ ನಿರ್ಮಾಣವಾಗಿದೆ. ಈಗ ಶಿವಮೊಗ್ಗ-ಶೃಂಗೇರಿ-ಮಂಗಳೂರಿಗೆ ರೈಲ್ವೆ ಮಾರ್ಗಕ್ಕಾಗಿ ಸರ್ವೇ ಕಾರ್ಯ ಆರಂಭಿಸಲಾಗಿದೆ ಎಂದು ಮಾಹಿತಿ ನೀಡಿದರು.

ಒಂದು ದೇಶ ಒಂದು ತೆರಿಗೆ ನೀತಿಯಲ್ಲಿ ಜಿಎಸ್‌ಟಿ ಪದ್ಧತಿ ತರಲಾಗಿದೆ. ಇದರಿಂದ ಉದ್ಯೋಗಸ್ಥರು, ಕೈಗಾರಿಕೋದ್ಯಮಿಗಳು ಮತ್ತು ವ್ಯಾಪಾರಸ್ಥರಿಗೆ ಅನುಕೂಲವಾಗಿದೆ. ಶಿವಮೊಗ್ಗದ ಕೈಗಾರಿಕಾ ಕೇಂದ್ರ ಮಾಚೇನಹಳ್ಳಿಯಿಂದ ಸುಮಾರು ೩೦ ದೇಶಗಳಿಗೆ ವಿವಿಧ ಉತ್ಪಾದಿತ ವಸ್ತುಗಳು ರಪ್ತಾಗುತ್ತಿವೆ ಎಂದ ಅವರು ಮೋದಿ ಆಡಳಿತದಲ್ಲಿ ಇಡೀ ದೇಶದ ಜತೆಗೆ ಶಿವಮೊಗ್ಗ ಕ್ಷೇತ್ರಕ್ಕೂ ಹೆಚ್ಚಿನ ಅನುದಾನ ಬಿಡುಗಡೆಯಾಗುತ್ತಿದ್ದು ಜನತೆಗೆ ಅಭಿವೃದ್ಧಿ ಪಥದಲ್ಲಿ ಸಾಗಲು ಅನುಕೂಲ ಕಲ್ಪಿಸಲಾಗುತ್ತಿದೆ ಎಂದು ಹೇಳಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಕೆ.ಜಗದೀಶ್, ಪ್ರಮುಖರಾದ ಹರಿಕೃಷ್ಣ, ಎನ್.ಡಿ.ಸತೀಶ್, ಕುಪೇಂದ್ರಪ್ಪ ಆಯನೂರು, ದರ್ಶನ್, ಪದ್ಮಿನಿ, ಚಂದ್ರಶೇಖರ್, ಮಂಜುನಾಥ್ ಇತರರು ಹಾಜರಿದ್ದರು.

ವರ್ಷಕ್ಕೆ 4 ಸಿಲಿಂಡರ್: ಸಮರ್ಥಿಸಿಕೊಂಡ ಸಂಸದ

ಪ್ರಧಾನಿ ನರೇಂದ್ರ ಮೋದಿ ಮಹತ್ವಾಕಾಂಕ್ಷೆ ಯೋಜನೆಯಾದ ಉಜ್ವಲ ಯೋಜನೆಯಲ್ಲಿ ಪ್ರತಿ ಬಡಕುಟುಂಬಕ್ಕೆ ವರ್ಷಕ್ಕೆ 8 ಸಿಲಿಂಡರ್ ಕೊಡಲಾಗುತ್ತಿದ್ದು, ಅದನ್ನು ಈಗ 4 ಸಿಲಿಂಡರ್‌ಗೆ ನಿಗಧಿಪಡಿಸಿದ್ದನ್ನು ಸಂಸದ ಬಿ.ವೈ .ರಾಘವೇಂದ್ರ ಸಮರ್ಥಿಸಿಕೊಂಡರು.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಯುದ್ಧ ನಡೆಯುತ್ತಿರುವ ಕಾರಣ ತೈಲ ಸಾಗಾಣಿಕೆಯಲ್ಲಿ ವ್ಯತ್ಯಯವಾಗಿದೆ. ಪರಿಸ್ಥಿತಿ ಸರಿ ಹೋದ ನಂತರ ಸಿಲಿಂಡರ್ ಸರಬರಾಜಿನ ಸಂಖ್ಯೆಯನ್ನು ಪುನಃ ನಾಲ್ಕಕ್ಕೆ ಏರಿಸಬಹುದು ಎಂದ ಅವರು, ಕೇಂದ್ರ ಸರ್ಕಾರ ಜಾರಿಗೆ ತಂದ ವಿಬಿ ಜಿ ರಾಮ್ ಜಿ ಯೋಜನೆಗೆ ರಾಜ್ಯ ಸರ್ಕಾರ ಸರಿಯಾಗಿ ಸ್ಪಂದಿಸದೇ ಇದ್ದ ಕಾರಣ ಕೇಂದ್ರದ ಅನುದಾನ ಪಡೆಯುವಲ್ಲಿ ಎಡವುತ್ತಿದೆ ಎಂದರು.