ದೇಶದ ಯುವಜನತೆಗೆ ಮೋದಿಯೇ ಗ್ಯಾರಂಟಿ: ಗಾಯತ್ರಿ

| Published : Apr 23 2024, 12:50 AM IST / Updated: Apr 23 2024, 12:51 AM IST

ದೇಶದ ಯುವಜನತೆಗೆ ಮೋದಿಯೇ ಗ್ಯಾರಂಟಿ: ಗಾಯತ್ರಿ
Share this Article
  • FB
  • TW
  • Linkdin
  • Email

ಸಾರಾಂಶ

ದೇಶದ ಭವಿಷ್ಯವಾದ ಯುವಜನರಿಗೆ ಪ್ರಧಾನಿ ನರೇಂದ್ರ ಮೋದಿಯೇ ಒಂದು ನಿಜವಾದ ಗ್ಯಾರಂಟಿಯಾಗಿದ್ದು, ಮೇಕ್ ಇನ್ ಇಂಡಿಯಾ, ಮೇಡ್ ಇನ್ ಇಂಡಿಯಾ, ಸ್ಟಾರ್ಟಪ್‌ ಇಂಡಿಯಾ, ಮುದ್ರಾ ಹೀಗೆ ನಾನಾ ಯೋಜನೆ ಮೂಲಕ ರಾಷ್ಟ್ರಪ್ರೇಮ ಜಾಗೃತಗೊಳಿಸುವ ಜೊತೆಗೆ ಹೊಸ ಉದ್ಯಮ, ಕೋಟ್ಯಂತರ ಉದ್ಯೋಗ ಸೃಷ್ಟಿಗೂ ಕಾರಣರಾಗಿದ್ದಾರೆ ಎಂದು ದಾವಣಗೆರೆ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಹೇಳಿದ್ದಾರೆ.

- ಹರಪನಹಳ್ಳಿ ತಾಲೂಕಿನ ಗ್ರಾಮಗಳಲ್ಲಿ ಮತಯಾಚನೆ । ಕರುಣಾಕರ ರೆಡ್ಡಿ ಸಾಥ್‌

- - - ಕನ್ನಡಪ್ರಭ ವಾರ್ತೆ ದಾವಣಗೆರೆ

ದೇಶದ ಭವಿಷ್ಯವಾದ ಯುವಜನರಿಗೆ ಪ್ರಧಾನಿ ನರೇಂದ್ರ ಮೋದಿಯೇ ಒಂದು ನಿಜವಾದ ಗ್ಯಾರಂಟಿಯಾಗಿದ್ದು, ಮೇಕ್ ಇನ್ ಇಂಡಿಯಾ, ಮೇಡ್ ಇನ್ ಇಂಡಿಯಾ, ಸ್ಟಾರ್ಟಪ್‌ ಇಂಡಿಯಾ, ಮುದ್ರಾ ಹೀಗೆ ನಾನಾ ಯೋಜನೆ ಮೂಲಕ ರಾಷ್ಟ್ರಪ್ರೇಮ ಜಾಗೃತಗೊಳಿಸುವ ಜೊತೆಗೆ ಹೊಸ ಉದ್ಯಮ, ಕೋಟ್ಯಂತರ ಉದ್ಯೋಗ ಸೃಷ್ಟಿಗೂ ಕಾರಣರಾಗಿದ್ದಾರೆ ಎಂದು ದಾವಣಗೆರೆ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಹೇಳಿದರು.

ಹರಪನಹಳ್ಳಿ ತಾಲೂಕಿನ ಬಾಗಳಿ, ಮೈದೂರು, ಚಿಗಟೇರಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಮಾಜಿ ಸಚಿವ ಜಿ.ಕರುಣಾಕರ ರೆಡ್ಡಿ ಜೊತೆಗೆ ಸೋಮವಾರ ಮತಯಾಚಿಸಿ ಮಾತನಾಡಿದ ಅವರು, ದೇಶದ ಜನತೆ, ಯುವಜನರಿಗೆ ನರೇಂದ್ರ ಮೋದಿಯೇ ನಿಜವಾದ ಗ್ಯಾರಂಟಿಯಾಗಿದ್ದಾರೆ. ದೇಶದ ಭವಿಷ್ಯವಾದ ಯುವಶಕ್ತಿಯ ಮೇಲೆ ಮೋದಿ ಸಾಕಷ್ಟು ಭರವಸೆ ಹೊಂದಿದ್ದಾರೆ ಎಂದರು.

ಯುವನಿಧಿ ನೀಡುವುದಾಗಿ ಕಾಂಗ್ರೆಸ್ ಸರ್ಕಾರ ಯುವಜನರಿಗೆ ಯಾಮಾರಿಸಿದೆ. ಈ‍ವರೆಗೆ ಎಷ್ಟು ಯುವಕರಿಗೆ ಯುವನಿಧಿ ಹಣ ಬಂದಿದೆ? ಕಾಂಗ್ರೆಸ್ಸಿನ ಗ್ಯಾರಂಟಿಗಳಿಗೇ ಮರುಳಾದರೆ ನಮಗೆ ಮತ್ತು ನಮ್ಮ ಮಕ್ಕಳಿಗೆ ಭವಿಷ್ಯ ಇರುವುದಿಲ್ಲ. ದೇಶದ ರಕ್ಷಣೆ, ನಿಮ್ಮ ರಕ್ಷಣೆ, ಅಭಿವೃದ್ಧಿಗಾಗಿ ಮೋದಿ ಮತ್ತೊಮ್ಮೆ ಪ್ರಧಾನಿ ಆಗಬೇಕಿದೆ. ನೀವೆಲ್ಲರೂ ನನ್ನ ಕ್ರಮ ಸಂಖ್ಯೆ-1, ಹೆಸರು ಗಾಯತ್ರಿ ಸಿದ್ದೇಶ್ವರ, ಚಿಹ್ನೆ-ಕಮಲದ ಹೂವಿಗೆ ಮತ ನೀಡಿ ಗೆಲ್ಲಿಸಿದರೆ, ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿ ಆಗುವುದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಹೇಳಿದರು.

ಮಾಜಿ ಸಚಿವ ಜಿ.ಕರುಣಾಕರ ರೆಡ್ಡಿ ಮಾತನಾಡಿ, ಭಾರತ ವಿಶ್ವದಲ್ಲೇ ಬಲಾಢ್ಯ ದೇಶವಾಗಿ ಹೊರಹೊಮ್ಮುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಸದಾ ರೈತಪರ ಚಿಂತಿಸುವ, ದುಡಿಯುವ ಹೃದಯವಂತರು. ಕಿಸಾನ್ ಸಮ್ಮಾನ್‌ ಮೂಲಕ ಕೇಂದ್ರವು 6 ಸಾವಿರ ರೈತರಿಗೆ ಕೊಡುತ್ತಿತ್ತು. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದ್ದಾಗ ₹6 ಸಾವಿರಕ್ಕೆ ₹4 ಸಾವಿರ ಸೇರಿಸಿ ₹10 ಸಾವಿರ ಕೊಡುತ್ತಿತ್ತು. ಆದರೆ, ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ನಾವು ಕೊಡುತ್ತಿದ್ದ ₹4 ಸಾವಿರ ನಿಲ್ಲಿಸಿದೆ. ಅದೇ ಹಣವನ್ನು ಗ್ಯಾರಂಟಿಗಳಿಗೆ ಬಳಸಿ ರೈತರಿಗೆ ಅನ್ಯಾಯ ಮಾಡಿದೆ ಎಂದು ಆರೋಪಿಸಿದರು.

ನಾನು, ಸಂಸದ ಸಿದ್ದೇಶಣ್ಣ ಹರಪನಹಳ್ಳಿ ಕ್ಷೇತ್ರಕ್ಕೆ ಸಾಕಷ್ಟು ಅನುದಾನ ತಂದಿದ್ದೇವೆ. ನಿಮ್ಮ ಗ್ರಾಮಗಳಿಗೆ ಸಿಸಿ ರಸ್ತೆ, ಚರಂಡಿ, ಕುಡಿಯುವ ನೀರು ಸೇರಿದಂತೆ ಮೂಲಸೌಕರ್ಯ ಕಲ್ಪಿಸಿದ್ದೇವೆ. ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಚಾಲನೆ ಕೊಟ್ಟಿದ್ದು ನಾವೇ. ಈ ಬಾರಿ ಗಾಯತ್ರಿ ಸಿದ್ದೇಶ್ವರ ಹೆಚ್ಚಿನ ಮತಗಳ ಅಂತರದಿಂದ ಗೆದ್ದು ದೆಹಲಿಗೆ ಹೋದರೆ, ತಾಲೂಕಿನ ಸರ್ವಾಂಗೀಣ ಅಭಿವೃದ್ಧಿಗೆ ಆದ್ಯತೆ ನೀಡುತ್ತಾರೆ. ನಮ್ಮ ಪ್ರತಿ ಕಾರ್ಯಕರ್ತರು ತಮ್ಮನ್ನೇ ಅಭ್ಯರ್ಥಿ ಎಂದುಕೊಂಡು ಮನೆ ಮನೆಗೂ ಹೋಗಿ ಗಾಯತ್ರಿ ಸಿದ್ದೇಶ್ವರ್ ಅವರ ಪರ ಮತಯಾಚಿಸಬೇಕು ಎಂದು ತಿಳಿಸಿದರು.

ಮುಖಂಡರಾದ ಕಮಲಾ ನಿರಾಣಿ, ಬಿಜೆಪಿ ಮುಖಂಡರಾದ ಗಣೇಶ, ಚಿಗಟೇರಿ ಮಂಜುನಾಥ, ಬೆಣ್ಣೇಹಳ್ಳಿ ಮಾರುತಿ, ಲೋಕೇಶ, ಕಲ್ಲಣ್ಣಗೌಡ, ಮಂಜುನಾಥ, ಹನುಮಂತಪ್ಪ‌, ಮಹಾಂತೇಶ, ಬಸವರಾಜ, ಅಂಜಿನಪ್ಪ, ಮಂಡಲ ಅಧ್ಯಕ್ಷರು, ಸದಸ್ಯರು ಗ್ರಾಪಂ ಸದಸ್ಯರು, ಬೂತ್ ಮಟ್ಟದ ಅಧ್ಯಕ್ಷರು, ಗ್ರಾಮದ ಬಿಜೆಪಿ ಮುಖಂಡರು, ಗ್ರಾಮಸ್ಥರು ಇದ್ದರು.

ಮೈದೂರು ಗ್ರಾಮದಲ್ಲಿ ಮುಖಂಡರಾದ ಅರವಿಂದ ಗೌಡ, ಲೋಹಿತ, ಸುರೇಶ, ಮಂಜುನಾಥ ಬೆಂಬಲಿಗರು, ಬೆಣ್ಣೆಹಳ್ಳಿಯಲ್ಲಿ ರೇವಣ್ಣ ಸಿದ್ದಪ್ಪ ಬೆಂಬಲಿಗರು ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದರು. ನರೇಂದ್ರ ಮೋದಿ ಆಡಳಿತ, ಸಿದ್ದೇಶಣ್ಣನ ಅಭಿವೃದ್ಧಿ ಕೆಲಸ ನೋಡಿ ಬಿಜೆಪಿ ಸೇರ್ಪಡೆಯಾಗುತ್ತಿದ್ದೇವೆ ಎಂದರು.

- - - ಬಾಕ್ಸ್ ನೇಹಾ ಹತ್ಯೆ: ಚಕಾರ ಎತ್ತದ ಕಾಂಗ್ರೆಸ್ ಅಭ್ಯರ್ಥಿ ಹುಬ್ಬಳ್ಳಿಯಲ್ಲಿ ನೇಹಾ ಹಿರೇಮಠ ಹತ್ಯೆಗೆ ರಾಜ್ಯವೇ ಆಕ್ರೋಶಗೊಂಡಿದೆ. ದಾವಣಗೆರೆ ಕಾಂಗ್ರೆಸ್ ಅಭ್ಯರ್ಥಿ ಮಾತ್ರ ಒಂದೇ ಒಂದು ಮಾತು ಆಡಿಲ್ಲ. ಮಹಿಳೆಯರ ಬಗ್ಗೆ ಯಾವ ಕಳಕಳಿ ಹೊಂದಿದ್ದಾರೆ? ನೇಹಾ ಹತ್ಯೆಗೆ ಖಂಡನಾ ಹೇಳಿಕೆ ನೀಡಿದರೆ ಒಂದು ಕೋಮಿನ ಜನ ಸಿಟ್ಟಾಗುತ್ತಾರೋ ಎಂಬ ಭಯ ಕಾಂಗ್ರೆಸ್ಸಿಗರಿಗೆ ಇದೆ. ಇದು ಒಂದು ಕೋಮಿನ ತುಷ್ಠೀಕರಣ ಅಲ್ಲದೇ ಮತ್ತೇನು? ಕಾಂಗ್ರೆಸ್ ಅಭ್ಯರ್ಥಿಯೂ ಒಂದು ಹೆಣ್ಣಾಗಿ ಮತ್ತೊಂದು ಹೆಣ್ಣಿನ ಹತ್ಯೆ ಖಂಡಿಸದಿರುವುದು ದುರಂತ. ಇದನ್ನು ಕ್ಷೇತ್ರದ ಜನ ಗಮನಿಸಬೇಕು ಎಂದು ಗಾಯತ್ರಿ ಸಿದ್ದೇಶ್ವರ ಚಾಟಿ ಬೀಸಿದರು.

- - - ಕೋಟ್‌ ಲೋಕಸಭೆ ಚುನಾವಣೆಯ ಮತದಾನಕ್ಕೆ ಇನ್ನು ಕೆಲ ದಿನಗಳಷ್ಟೇ ಬಾಕಿ ಇದೆ. ಮೋದಿಜೀ ಪ್ರಧಾನಿ ಆಗಬೇಕೆಂದು ದೇಶದ ಜನ ತೀರ್ಮಾನ ಮಾಡಿದ್ದಾರೆ. ಗಾಯತ್ರಿ ಅಕ್ಕನವರು ದಾವಣಗೆರೆ ಪ್ರಥಮ ಮಹಿಳಾ ಸಂಸದೆ ಆಗಬೇಕು. ಇದು ಈ ಕ್ಷೇತ್ರದ ಜನರ ತೀರ್ಮಾನವೂ ಆಗಿದೆ. ನಮ್ಮೆಲ್ಲಾ ಕಾರ್ಯಕರ್ತರು ವಾನರ ಸೇನೆಯಂತೆ ಗಾಯತ್ರಿ ಸಿದ್ದೇಶ್ವರ ಅವರನ್ನು ಭಾರಿ ಮತಗಳ ಅಂತರದಲ್ಲಿ ಗೆಲ್ಲಿಸಿ, ನರೇಂದ್ರ ಮೋದಿ ಅವರಿಗೆ ಮತ್ತೊಮ್ಮೆ ಪ್ರಧಾನಿ ಮಾಡಲು ಶ್ರಮಿಸಬೇಕು

- ಕಮಲಾ ನಿರಾಣಿ, ಮಹಿಳಾ ಮುಖಂಡರು

- - -

ಟಾಪ್‌ ಕೋಟ್‌ ಹರಪನಹಳ್ಳಿಯ ಕೆಲ ಗ್ರಾಮಗಳ ಜನ ಉದ್ಯೋಗ ಅರಸಿ ಮಲೆನಾಡು, ಘಟ್ಟ ಪ್ರದೇಶಕ್ಕೆ ಕಾಫಿ ತೋಟಗಳ ಕಡೆಗೆ ಗುಳೆ ಹೋಗುವುದು ಸರ್ವೇ ಸಾಮಾನ್ಯ. ಶಾಶ್ವತವಾಗಿ ಗುಳೆ ತಡೆಗಟ್ಟಿ, ಸ್ವಗ್ರಾಮಗಳಲ್ಲೇ ಉದ್ಯೋಗ ಖಾತ್ರಿ ಮೂಲಕ ಉದ್ಯೋಗ ದೊರಕಿಸಿಕೊಟ್ಟು, ಇಲ್ಲಿನ ಕೂಲಿ ಕಾರ್ಮಿಕರು ನೆಮ್ಮದಿಯಿಂದ ಜೀವನ ನಡೆಸುವಂತಾಗಲು ಕ್ರಮ ಕೈಗೊಳ್ಳುತ್ತೇನೆ

- ಗಾಯತ್ರಿ ಸಿದ್ದೇಶ್ವರ, ಬಿಜೆಪಿ ಅಭ್ಯರ್ಥಿ

- - --22ಕೆಡಿವಿಜಿ4, 5, 6:

ದಾವಣಗೆರೆ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹರಪನಹಳ್ಳಿ ತಾಲೂಕಿನಲ್ಲಿ ಮಾಜಿ ಸಚಿವ ಜಿ.ಕರುಣಾಕರ ರೆಡ್ಡಿ, ಕಮಲಾ ನಿರಾಣಿ ನೇತೃತ್ವದಲ್ಲಿ ಮತಯಾಚಿಸಿದರು.