ತಮ್ಮ ಮಾಸಿಕ ಮನ್ ಕೀ ಬಾತ್ ರೇಡಿಯೋ ಭಾಷಣದಲ್ಲಿ ದೇಶದಲ್ಲಿನ ಜೇನು ಕೃಷಿಯನ್ನು ಶ್ಲಾಘಿಸಿರುವ ಪ್ರಧಾನಿ ನರೇಂದ್ರ ಮೋದಿ, ಕರ್ನಾಟಕದಲ್ಲಿ ಜೇನು ಕೃಷಿಯಲ್ಲಿ ತೊಡಗಿರುವ ತುಮಕೂರು ಹಾಗೂ ಪುತ್ತೂರಿನ 2 ಸಂಸ್ಥೆಗಳ ಬಗ್ಗೆಯೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ನವದೆಹಲಿ : ತಮ್ಮ ಮಾಸಿಕ ಮನ್ ಕೀ ಬಾತ್ ರೇಡಿಯೋ ಭಾಷಣದಲ್ಲಿ ದೇಶದಲ್ಲಿನ ಜೇನು ಕೃಷಿಯನ್ನು ಶ್ಲಾಘಿಸಿರುವ ಪ್ರಧಾನಿ ನರೇಂದ್ರ ಮೋದಿ, ಕರ್ನಾಟಕದಲ್ಲಿ ಜೇನು ಕೃಷಿಯಲ್ಲಿ ತೊಡಗಿರುವ ತುಮಕೂರು ಹಾಗೂ ಪುತ್ತೂರಿನ 2 ಸಂಸ್ಥೆಗಳ ಬಗ್ಗೆಯೂ ಮೆಚ್ಚುಗೆ ವ್ಯಕ್ತಪಡಿಸಿದ್ದು. ಇದರಿಂದ ಅನೇಕರು ಸ್ವಾವಲಂಬಿಗಳಾಗಿದ್ದಾರೆ ಎಂದಿದ್ದಾರೆ.
‘ನೀವೆಲ್ಲರೂ ಜೇನುತುಪ್ಪದ ಮಾಧುರ್ಯವನ್ನು ಸವಿದಿದ್ದೀರಿ, ಆದರೆ ಅದರ ಹಿಂದೆ ಎಷ್ಟು ಕಠಿಣ ಪರಿಶ್ರಮ, ಪರಂಪರೆ ಮತ್ತು ಪ್ರಕೃತಿಯೊಂದಿಗೆ ಅದು ಹೊಂದಿರುವ ಸುಂದರ ಸಾಮರಸ್ಯವಿದೆ ಎಂಬುದರ ಅರಿವು ಬಹುಶಃ ನಮಗಿರುವುದಿಲ್ಲ’ ಎಂದು ಹೇಳುತ್ತ ಅವರು ಕರ್ನಾಟಕದ 2 ಉದಾಹರಣೆ ನೀಡಿದ್ದಾರೆ.
ಪುತ್ತೂರಿನ ರೈತರಿಗೆ ಭೇಷ್:
‘ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ, ಅಲ್ಲಿನ ಸಸ್ಯವರ್ಗವನ್ನು ಜೇನು ಉತ್ಪಾದನೆಗೆ ಉತ್ಕೃಷ್ಟ ಎಂದು ಪರಿಗಣಿಸಲಾಗುತ್ತದೆ. ಇಲ್ಲಿ, ‘ಗ್ರಾಮಜನ್ಯ’ ಎಂಬ ರೈತ ಸಂಘಟನೆಯು ಈ ನೈಸರ್ಗಿಕ ಉಡುಗೊರೆಗೆ ಹೊಸ ಆಯಾಮವನ್ನು ನೀಡುತ್ತಿದೆ. ‘ಗ್ರಾಮಜನ್ಯ’ ಆಧುನಿಕ ಸಂಸ್ಕರಣಾ ಘಟಕವನ್ನು ನಿರ್ಮಿಸಿದೆ ಮತ್ತು ಪ್ರಯೋಗಾಲಯ, ಬಾಟಲ್, ಸಂಗ್ರಹಣೆ ಮತ್ತು ಡಿಜಿಟಲ್ ಟ್ರ್ಯಾಕಿಂಗ್‌ನಂತಹ ಸೌಲಭ್ಯಗಳನ್ನು ಒದಗಿಸುತ್ತಿದೆ. ಈಗ, ಈ ಜೇನುತುಪ್ಪ ಬ್ರಾಂಡೆಡ್ ಉತ್ಪನ್ನವಾಗಿ ಹಳ್ಳಿಗಳಿಂದ ನಗರಗಳವರೆಗೆ ತಲುಪುತ್ತಿದೆ. ಎರಡೂವರೆ ಸಾವಿರಕ್ಕೂ ಹೆಚ್ಚು ರೈತರು ಈ ಪ್ರಯತ್ನದಿಂದ ಪ್ರಯೋಜನ ಪಡೆದಿದ್ದಾರೆ’ ಎಂದರು.
ತುಮಕೂರಿನ ಸಂಘಕ್ಕೂ ಮೆಚ್ಚುಗೆ:
‘ತುಮಕೂರು ಜಿಲ್ಲೆಯ ‘ಶಿವಗಂಗಾ ಕಾಲಂಜಿಯಾ’ ಎಂಬ ಸಂಸ್ಥೆಯ ಪ್ರಯತ್ನಗಳು ಸಹ ಶ್ಲಾಘನೀಯ. ಪ್ರತಿಯೊಬ್ಬ ಸದಸ್ಯರಿಗೂ ಆರಂಭದಲ್ಲಿ 2 ಜೇನು ಪೆಟ್ಟಿಗೆಗಳನ್ನು ಇಲ್ಲಿ ನೀಡಲಾಗುತ್ತದೆ. ಹೀಗೆ, ಸಂಸ್ಥೆಯು ಅನೇಕ ರೈತರನ್ನು ತನ್ನ ಅಭಿಯಾನದಲ್ಲಿ ಸೇರ್ಪಡೆಗೊಳಿಸಿಕೊಂಡಿದೆ. ಈಗ, ಈ ಸಂಸ್ಥೆಯೊಂದಿಗೆ ಕೈಜೋಡಿಸಿದ ರೈತರು ಜಂಟಿಯಾಗಿ ಜೇನುತುಪ್ಪವನ್ನು ಹೊರತೆಗೆದು, ಅದನ್ನು ಸುಂದರವಾಗಿ ಪ್ಯಾಕ್ ಮಾಡಿ ಸ್ಥಳೀಯ ಮಾರುಕಟ್ಟೆಗೆ ತಲುಪಿಸುತ್ತಾರೆ. ಇದರಿಂದ ಅವರಿಗೆ ಲಕ್ಷಾಂತರ ರುಪಾಯಿಗಳ ಗಳಿಕೆಯಾಗುತ್ತಿದೆ’ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಜೇನು ಉತ್ಪಾದನೆ ದಾಖಲೆ:
‘ಇಂದು ಭಾರತವು ಜೇನುತುಪ್ಪ ಉತ್ಪಾದನೆಯಲ್ಲಿ ಹೊಸ ದಾಖಲೆಗಳನ್ನು ಸೃಷ್ಟಿಸುತ್ತಿದೆ. 11 ವರ್ಷಗಳ ಹಿಂದೆ, ದೇಶದ ಜೇನುತುಪ್ಪ ಉತ್ಪಾದನೆ 76 ಸಾವಿರ ಮೆಟ್ರಿಕ್ ಟನ್‌ಗಳಷ್ಟಿತ್ತು. ಈಗ ಅದು 1.5 ಲಕ್ಷ ಮೆಟ್ರಿಕ್ ಟನ್‌ಗಳಿಗಿಂತ ಹೆಚ್ಚಾಗಿದೆ. ಕಳೆದ ಕೆಲವು ವರ್ಷಗಳಲ್ಲಿ ಜೇನುತುಪ್ಪದ ರಫ್ತು ಕೂಡ ಮೂರು ಪಟ್ಟು ಹೆಚ್ಚಾಗಿದೆ. ಹನಿ ಮಿಷನ್ ಕಾರ್ಯಕ್ರಮದಡಿಯಲ್ಲಿ, ಖಾದಿ ಗ್ರಾಮೋದ್ಯೋಗಗಳು ಜನರಿಗೆ 2.25 ಲಕ್ಷಕ್ಕೂ ಹೆಚ್ಚು ಜೇನು ಪೆಟ್ಟಿಗೆಗಳ ವಿತರಣೆ ಮಾಡಿವೆ. ಇದರಿಂದ ಸಾವಿರಾರು ಜನರಿಗೆ ಹೊಸ ಉದ್ಯೋಗಾವಕಾಶಗಳು ದೊರೆತಿದೆ. ಇದರರ್ಥ ದೇಶದ ಮೂಲೆ ಮೂಲೆಗಳಲ್ಲಿ ಜೇನಿನ ಸಿಹಿ ವೃದ್ಧಿಸುತ್ತಿದೆ. ಈ ಸಿಹಿ ರೈತರ ಆದಾಯವನ್ನೂ ಹೆಚ್ಚಿಸುತ್ತಿದೆ’ ಎಂದು ಕೊಂಡಾಡಿದರು.
