ಸಾರಾಂಶ
ಮಾಗಡಿ: ಜಿಎಸ್‌ಟಿ 2.0 ಜಾರಿಯಿಂದಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಜನಸಾಮಾನ್ಯರಿಗೆ ನವರಾತ್ರಿ ಕೊಡುಗೆ ನೀಡಿದ್ದಾರೆ ಎಂದು ಸಂಸದ ಡಾ. ಮಂಜುನಾಥ್ ಹೇಳಿದರು.
ಪಟ್ಟಣದ ಸಿದ್ಧಾರೂಡ ಭವನದಲ್ಲಿ ಮಂಗಳವಾರ ಪ್ರಧಾನ ಮಂತ್ರಿ ನರೇಂದ್ರ ಮೋದಿ 75ನೇ ಹುಟ್ಟು ಹಬ್ಬದ ಅಂಗವಾಗಿ ಬಿಜೆಪಿ ಆಯೋಜಿಸಿದ್ದ ಉಚಿತ ಆರೋಗ್ಯ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಜಿಎಸ್‌ಟಿ ಪ್ರಾರಂಭವಾಗುವ ಮೊದಲು ವಿವಿಧ ರೀತಿಯ ತೆರಿಗೆ ಹಾಕಿ ಶೇ.30ರಷ್ಟು ತೆರಿಗೆ ರೂಪದಲ್ಲಿ ವಸೂಲಿ ಮಾಡಲಾಗುತ್ತಿತ್ತು. ಈಗ ಮೋದಿ 2017 ರಲ್ಲಿ ಜಿಎಸ್‌ಟಿ ಆರಂಭಿಸಿ ಹೊಸ ತಲೆಮಾರಿನ ಜಿಎಸ್‌ಟಿ ಜಾರಿಗೊಳಿಸಿರುವುದರಿಂದ ಎಲ್ಲಾ ವರ್ಗದವರಿಗೂ ಅನುಕೂಲವಾಗಲಿದೆ. ಈ ಹಿಂದೆ ಜಿಎಸ್‌ಟಿ ಶೇ.5, ಶೇ.12, ಶೇ.18 ಹಾಗೂ ಶೇ.28ರ ಬದಲಿಗೆ ಇನ್ನು ಶೇ.5 ಹಾಗೂ ಶೇ.18ರ ಸ್ತರ ಮಾತ್ರ ಇರಲಿದೆ. ಹೊಸ ನಿಯಮದಂತೆ ಶೇ.12ರಷ್ಟು ಜಿಎಸ್ಟಿ ಸ್ಲ್ಯಾಬ್ ಗೆ ಒಳಪಟ್ಟಿದ್ದ ಶೇ.99 ಸರಕುಗಳು ಶೇ.5ರಷ್ಟಕ್ಕೆ ಇಳಿಯಲಿದೆ. ಇದರಿಂದ ಸರಕು, ಸೇವೆಗಳ ಬೆಲೆಯಲ್ಲಿ ಗಮನಾರ್ಹ ಇಳಿಕೆಯಾಗಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ವಿತ್ತ ಸಚಿವೆ ನಿರ್ಮಲಾ ಸೀತಾರಾಮ್ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಜನಸಾಮಾನ್ಯರಿಗೆ ಜಿಎಸ್‌ಟಿ ಬಗ್ಗೆ ತಿಳಿವಳಿಕೆ ಮೂಡಿಸಬೇಕಿದೆ ಎಂದು ಹೇಳಿದರು.ಜೀವನ ಶೈಲಿ ಬದಲಾವಣೆ, ಒತ್ತಡದ ಜೀವನ, ಆಹಾರ ಪದ್ಧತಿ, ಧೂಮಪಾನ, ಮದ್ಯಪಾನಗಳಿಂದ ಭಾರತದ ಮೊದಲ ಕಿಲ್ಲರ್ ಹೃದಯಾಘಾತ ಮತ್ತು ಬ್ರೈನ್ ಸ್ಟ್ರೋಕ್ ಆಗಿದ್ದು, ವಾರ್ಷಿಕವಾಗಿ 30 ಲಕ್ಷ ಜನ ಇದರಿಂದ ಸಾವನ್ನಪ್ಪುತ್ತಿರುವುದು ವಿಪರ್ಯಾಸ. ಜೀವನ ಶೈಲಿ ಬದಲಾವಣೆ ಮಾಡಿಕೊಳ್ಳುವುದು ಅಗತ್ಯ. 40 ವರ್ಷ ದಾಟಿದ ಪುರುಷರು 35 ವರ್ಷ ದಾಟಿದ ಮಹಿಳೆಯರು ಕಡ್ಡಾಯವಾಗಿ ವಾರ್ಷಿಕ ತಪಾಸಣೆ ಮಾಡಿಸಿಕೊಳ್ಳಬೇಕು. ದೇಹದಲ್ಲಿ ಬೆಳವಣಿಗೆಯಾಗುತ್ತದೆ. ಈ ಬಗ್ಗೆ ಇಂತಹ ಶಿಬಿರಗಳ ಮೂಲಕ ಕಾಯಿಲೆಗಳನ್ನು ಪತ್ತೆ ಮಾಡಿ ಅದಕ್ಕೆ ಸೂಕ್ತ ಚಿಕಿತ್ಸೆ ಪಡೆದುಕೊಂಡರೆ ಆರಂಭದಲ್ಲೇ ಅದನ್ನು ತಡೆಯಬಹುದು. ಒತ್ತಡದ ಜೀವನ ಶೈಲಿಯಿಂದ ಕಾಯಿಲೆಗಳು ಹೆಚ್ಚಾಗುತ್ತಿದೆ. ಬಿಜೆಪಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಸುತ್ತಿರುವುದು ಒಳ್ಳೆಯ ಬೆಳವಣಿಗೆ. ರಾಜರಾಜೇಶ್ವರಿ ವೈದ್ಯಕೀಯ ಆಸ್ಪತ್ರೆ ಎಲ್ಲಾ ಸಿಬ್ಬಂದಿಗೂ ಅಭಿನಂದನೆಗಳು ಎಂದು ಮಂಜುನಾಥ್ ಹೇಳಿದರು.
ಸಂಸದ ಡಾ.ಮಂಜುನಾಥ್ ಹುಟ್ಟುಹಬ್ಬದ ಪ್ರಯುಕ್ತ ಬಿಜೆಪಿ ಕಾರ್ಯಕರ್ತರು ಆರೋಗ್ಯ ಶಿಬಿರದಲ್ಲಿ ಕೇಕ್ ಕತ್ತರಿಸಿ ಹುಟ್ಟಿದ ಹಬ್ಬ ಆಚರಿಸಿ ಶುಭ ಹಾರೈಸಿದರು.ಪಟ್ಟಣದ ಕಲ್ಯಾಗೇಟ್ ರಾಗಿ ಮಂಡಿ, ಸಿಮೆಂಟ್ ಅಂಗಡಿ ಹಾಗೂ ಕಾಂಡಿಮೆಂಟ್ ಅಂಗಡಿಗೆ ಸಂಸದ ಡಾ. ಮಂಜುನಾಥ್ ಭೇಟಿ ನೀಡಿ ಜಿಎಸ್‌ಟಿ ಇಳಿಸಿರುವ ಬಗ್ಗೆ ಗ್ರಾಹಕರು ಹಾಗೂ ಅಂಗಡಿ ಮಾಲೀಕರ ಜತೆ ಮಾತನಾಡಿ ಕೇಂದ್ರ ಸರ್ಕಾರದ ಕೊಡುಗೆಯನ್ನು ವಿವರಿಸಿದರು.
ಕಾರ್ಯಕ್ರಮದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಆನಂದಸ್ವಾಮಿ, ಜಿಲ್ಲಾ ಪ್ರದಾನ ಕಾರ್ಯದರ್ಶಿ ಎಂ.ಆರ್.ರಾಘವೇಂದ್ರ, ಯುವ ಮುಖಂಡರಾದ ಪ್ರಸಾದ್ ಗೌಡ್ರು, ಬಿಜೆಪಿ ತಾಲೂಕು ಅಧ್ಯಕ್ಷ ವೀರಭದ್ರಪ್ಪ, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಜಗನ್ನಾಥ್ ಗೌಡ, ಪ್ರಧಾನ ಕಾರ್ಯದರ್ಶಿ ಜಯರಾಮಯ್ಯ, ಮುಖಂಡರಾದ ಚೆನ್ನಬಸವಯ್ಯ, ಶಂಕರ್, ಚಿಕ್ಕೆಗೌಡ, ಬಿಡದಿ ಪ್ರಸನ್ನ, ಕೃಷ್ಣ, ಆನಂದ್, ಗೌತಮ್, ಬೋಪಣ್ಣ, ವಿಶಾಲ್ ಜೈನ್, ಭಾಸ್ಕರ್, ಬಾಲಾಜಿ, ಶಶಿ, ಕೂಟಗಲ್ ಅರುಣ್, ನಾಗೇಶ್ ಇತರರು ಭಾಗವಹಿಸಿದ್ದರು.(ಫೋಟೋ ಕ್ಯಾಪ್ಷನ್)
ಮಾಗಡಿಯ ಕಲ್ಯಾಗೇಟ್ ನಲ್ಲಿರುವ ಅಂಗಡಿಯೊಂದಕ್ಕೆ ತೆರಳಿದ ಸಂಸದ ಡಾ. ಮಂಜುನಾಥ್ ಕೇಂದ್ರ ಸರ್ಕಾರ ಜಿಎಸ್‌ಟಿ ಕಡಿಮೆ ಮಾಡಿರುವ ಮಾಹಿತಿ ಕುರಿತು ಮಾಲೀಕರಿಗೆ ವಿವರಿಸಿದರು. ಬಿಜೆಪಿ ಜಿಲ್ಲಾಧ್ಯಕ್ಷ ಆನಂದಸ್ವಾಮಿ, ಜಿಲ್ಲಾ ಪ್ರದಾನ ಕಾರ್ಯದರ್ಶಿ ಎಂ.ಆರ್.ರಾಘವೇಂದ್ರ ಇತರರಿದ್ದರು.