ಮೋದಿ, ಶಾಗೆ ಕನ್ನಡದ ನೆಲದ ಮೇಲೆ ಕಾಲಿಡಲು ಹಕ್ಕಿಲ್ಲ: ಸುರ್ಜೇವಾಲಾ

| Published : Apr 25 2024, 01:01 AM IST

ಮೋದಿ, ಶಾಗೆ ಕನ್ನಡದ ನೆಲದ ಮೇಲೆ ಕಾಲಿಡಲು ಹಕ್ಕಿಲ್ಲ: ಸುರ್ಜೇವಾಲಾ
Share this Article
  • FB
  • TW
  • Linkdin
  • Email

ಸಾರಾಂಶ

ಬರ ಪರಿಹಾರ ವಿಚಾರದಲ್ಲಿ ರಾಜ್ಯಕ್ಕೆ ಕೇಂದ್ರ ಸರ್ಕಾರ ಅನ್ಯಾಯ ಮಾಡಿದೆ. ನಾವು ಪ್ರಧಾನ ಮಂತ್ರಿಯವರ ಹತ್ತಿರ ಭಿಕ್ಷೆ ಕೇಳುತ್ತಿಲ್ಲ. ನಮ್ಮ ತೆರಿಗೆಯ ಪಾಲಿನ ಹಕ್ಕನ್ನು ನಾವು ಕೇಳುತ್ತಿದ್ದೇವೆ ಎಂದು ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪಸಿಂಗ್ ಸುರ್ಜೇವಾಲಾ ಹೇಳಿದರು.

ಹಾವೇರಿ: ಬರ ಪರಿಹಾರ ನೀಡದ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಮಂತ್ರಿ ಅಮಿತ್ ಶಾ ಅವರಿಗೆ ಕರ್ನಾಟಕದ ಪವಿತ್ರ ಭೂಮಿಯ ಮೇಲೆ ಕಾಲಿಡಲು ಯಾವುದೇ ಹಕ್ಕು ಇಲ್ಲ. ರಾಜ್ಯದ ಜನತೆಯ ಬಳಿ ಮತ ಕೇಳಲು ನೈತಿಕತೆಯಿಲ್ಲ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ, ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪಸಿಂಗ್ ಸುರ್ಜೇವಾಲಾ ವಾಗ್ದಾಳಿ ನಡೆಸಿದರು.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬರ ಪರಿಹಾರ ವಿಚಾರದಲ್ಲಿ ರಾಜ್ಯಕ್ಕೆ ಕೇಂದ್ರ ಸರ್ಕಾರ ಅನ್ಯಾಯ ಮಾಡಿದೆ. ನಾವು ಪ್ರಧಾನ ಮಂತ್ರಿಯವರ ಹತ್ತಿರ ಭಿಕ್ಷೆ ಕೇಳುತ್ತಿಲ್ಲ. ನಮ್ಮ ತೆರಿಗೆಯ ಪಾಲಿನ ಹಕ್ಕನ್ನು ನಾವು ಕೇಳುತ್ತಿದ್ದೇವೆ. ಕಳೆದ ಸೆಪ್ಟೆಂಬರ್‌ನಲ್ಲಿ ರಾಜ್ಯ ಸರ್ಕಾರ ಬರ ಘೋಷಿಸಿದೆ. ಅಂದೇ ಪ್ರಧಾನಿ ಮೋದಿ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ ಮಾಡಿ ₹18 ಸಾವಿರ ಕೋಟಿ ಪರಿಹಾರಕ್ಕೆ ಮನವಿ ಮಾಡಿದ್ದಾರೆ. ಆದರೂ ಅವರು ಈ ಬಗ್ಗೆ ಚಕಾರ ಎತ್ತುತ್ತಿಲ್ಲ. ಈ ಕೂಡಲೇ ಪರಿಹಾರ ಕೊಡಿ, ನಂತರವಷ್ಟೇ ಮತ ಕೇಳಲು ಬನ್ನಿ ಎಂದು ಹೇಳಿದರು.

ಮೇಕೆದಾಟು, ಮಹದಾಯಿ, ಕಳಸಾ ಬಂಡೂರಿ ಯೋಜನೆಯನ್ನು ಮೋದಿ ಅವರು ನಿಲ್ಲಿಸಿದ್ದಾರೆ. ಭದ್ರಾ ಡ್ಯಾಮ್‌ನ ₹6 ಸಾವಿರ ಕೋಟಿ ಬಿಡುಗಡೆ ಮಾಡಿಲ್ಲ. ರಾಜ್ಯದಿಂದ ಕೇಂದ್ರಕ್ಕೆ ನೂರು ರು. ಕೊಟ್ಟರೆ ಅಲ್ಲಿಂದ ರಾಜ್ಯಕ್ಕೆ ಕೇವಲ ₹13 ವಾಪಸ್ ಕೊಡುತ್ತಿದ್ದಾರೆ. ನಮ್ಮ ಹಣ ನಮಗೆ ಕೊಡದಿರುವ ಕೇಂದ್ರ ಸರ್ಕಾರಕ್ಕೆ ಈಗ ಮತ ಕೇಳಲು ಹಕ್ಕು ಇಲ್ಲ ಎಂದರು.

ಮೋದಿ ಅವರು ಹತ್ತು ವರ್ಷಗಳಲ್ಲಿ ಮಾಡಲಾಗದ್ದನ್ನು ಕಾಂಗ್ರೆಸ್ ಹತ್ತು ತಿಂಗಳಲ್ಲಿ ಮಾಡಿದೆ. ಪ್ರಧಾನ ಮಂತ್ರಿ ಅವರಿಗೆ ಅವರು ಬಳಸುವ ಭಾಷೆಯ ಬಗ್ಗೆ ನಾಚಿಕೆಯಾಗಬೇಕು. ಕರ್ನಾಟಕದ ಗ್ಯಾರಂಟಿಯಿಂದ ಅವರಿಗೆ ಸಂಕಷ್ಟ ಇದೆ. ಅವರ ನಿದ್ದೆಗಡಿಸಿದೆ. ಕರ್ನಾಟಕ ಮಾಡೆಲ್ ದೇಶದಲ್ಲಿ ತರುತ್ತೇವೆ. ಗ್ಯಾರಂಟಿ ಯೋಜನೆಗಳಿಂದ ಜನರಿಗೆ ಆಗುತ್ತಿರುವ ಅನುಕೂಲ ನೋಡಿ ಮೋದಿ ಅವರಿಗೆ ಯಾಕೆ ಹೊಟ್ಟೆ ಉರಿ ಎಂದು ಅವರು ಪ್ರಶ್ನಿಸಿದರು.

ಜನ ತಿರಸ್ಕರಿಸಿದ ನಾಯಕ ಬೊಮ್ಮಾಯಿ: ಕಾಂಗ್ರೆಸ್ ಕಾರ್ಯಕ್ರಮಗಳ ಆಧಾರದ ಮೇಲೆ ನಾವು ಮತ ಕೇಳುತ್ತೇವೆ. ಗ್ಯಾರಂಟಿ ಯೋಜನೆಗಳ ಮೇಲೆ ಮತ ಕೇಳುತ್ತೇವೆ. ಬಸವರಾಜ ಬೊಮ್ಮಾಯಿ ಅವರನ್ನು ಕರ್ನಾಟಕದ ಜನರು ತಿರಸ್ಕಾರ ಮಾಡಿದ್ದಾರೆ. ಜನ ತಿರಸ್ಕಾರ ಮಾಡಿದ ನಾಯಕ ಬೊಮ್ಮಾಯಿ. ಅವರ 40 ಪರ್ಸೆಂಟ್ ಸರ್ಕಾರವನ್ನು ಜನರೇ ಕಿತ್ತೊಗೆದಿದ್ದಾರೆ ಎಂದು ಸುರ್ಜೇವಾಲಾ ಕುಟುಕಿದರು.

ಸಚಿವ ಎಚ್‌.ಕೆ. ಪಾಟೀಲ, ಪಕ್ಷದ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ, ಜಿಲ್ಲಾಧ್ಯಕ್ಷ ಸಂಜೀವಕುಮಾರ ನೀರಲಗಿ, ಸಲೀಂ ಅಹ್ಮದ್‌, ವಿನಯ ಕುಲಕರ್ಣಿ, ಐ.ಜಿ. ಸನದಿ, ಶಾಸಕರಾದ ಬಸವರಾಜ ಶಿವಣ್ಣನವರ, ರುದ್ರಪ್ಪ ಲಮಾಣಿ, ಶ್ರೀನಿವಾಸ ಮಾನೆ, ಯು.ಬಿ. ಬಣಕಾರ, ಜಿ.ಎಸ್‌. ಪಾಟೀಲ, ರಾಮಣ್ಣ ಲಮಾಣಿ, ಬಿ.ಎಚ್‌. ಬನ್ನಿಕೋಡ, ರಾಮಕೃಷ್ಣ ದೊಡ್ಡಮನಿ, ಸೋಮಣ್ಣ ಬೇವಿನಮರದ, ಎಸ್‌.ಆರ್‌. ಪಾಟೀಲ ಇತರರು ಇದ್ದರು.ಖಾಲಿ ಚೊಂಬಿನ ಬಗ್ಗೆ ಚರ್ಚೆಗೆ ಸಿದ್ಧ: ರಾಜ್ಯದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಇಲ್ಲ. ಇಲ್ಲಿ ಕೇವಲ ಎರಡು ಅಂಗಡಿ ನಡೆಯುತ್ತಿವೆ. ಒಂದು ಬಿ.ಎಸ್. ಯಡಿಯೂರಪ್ಪ ಮತ್ತು ಮಕ್ಕಳು, ಮತ್ತೊಂದು ಎಚ್.ಡಿ. ಕುಮಾರಸ್ವಾಮಿ, ಬ್ರದರ್ಸ್ ಮತ್ತು ಕುಟುಂಬದ ಅಂಗಡಿ. ಈ ಬಗ್ಗೆ ಬೇಕಾದರೆ ಯತ್ನಾಳ ಅವರನ್ನು ಕೇಳಿ. ಬಿಜೆಪಿಯ ಖಾಲಿ ಚೊಂಬಿನ ಬಗ್ಗೆ ಚರ್ಚೆಗೆ ಆಹ್ವಾನಿಸುತ್ತೇವೆ. ನಾವು ನಮ್ಮ ಸಿಎಂ, ಡಿಸಿಎಂ ಕರೆದುಕೊಂಡು ಬರುತ್ತೇವೆ. ನೀವೇ ದಿನಾಂಕ ನಿಗದಿಪಡಿಸಿ ಎಂದು ರಣದೀಪಸಿಂಗ್ ಸುರ್ಜೇವಾಲಾ ಸವಾಲು ಹಾಕಿದರು.