ಶಿರಸಿಗೆ ಮೋದಿ: ಬಿಜೆಪಿಯಲ್ಲಿ ಸಂಚಲನ

| Published : Apr 24 2024, 02:19 AM IST

ಸಾರಾಂಶ

ಮೋದಿ ಎಲ್ಲೇ ಇದ್ದರೂ ಮೋದಿ ಹೆಸರಿನಲ್ಲಿ ಇಲ್ಲಿ ವೋಟ್ ಕೇಳಲಾಗುತ್ತಿತ್ತು. ಈಗ ಸ್ವತಃ ಮೋದಿ ಅವರೇ ಕ್ಷೇತ್ರಕ್ಕೆ ಆಗಮಿಸುತ್ತಿರುವುದು ಬಿಜೆಪಿಗರಲ್ಲಿ ಸಂಭ್ರಮ ಮನೆಮಾಡಿದೆ.

ಕಾರವಾರ: ಪ್ರಧಾನಿ ನರೇಂದ್ರ ಮೋದಿ ಏ. 28ಕ್ಕೆ ಶಿರಸಿಯಲ್ಲಿ ಪ್ರಚಾರ ಸಭೆ ನಡೆಸಲಿರುವುದು ಬಿಜೆಪಿಯಲ್ಲಿ ಸಂಚಲನವನ್ನು ಮೂಡಿಸಿದೆ. ಉತ್ತರ ಕನ್ನಡ ಚುನಾವಣೆ ಕಣ ರಂಗೇರಿದಂತಾಗಿದೆ.

ಉತ್ತರ ಕನ್ನಡ ಲೋಕಸಭೆ ಕ್ಷೇತ್ರದ 8 ವಿಧಾನಸಭೆ ಕ್ಷೇತ್ರಗಳ ಜನತೆಯನ್ನುದ್ದೇಶಿಸಿ ಅಂದು ಬೆಳಗ್ಗೆ 11 ಗಂಟೆಗೆ ನರೇಂದ್ರ ಮೋದಿ ಪ್ರಚಾರ ಸಭೆ ನಡೆಸಲಿದ್ದಾರೆ. ಇದು ಮೋದಿ ಪ್ರಧಾನಿಯಾದ ತರುವಾಯ ಜಿಲ್ಲೆಗೆ ನೀಡಲಿರುವ ಎರಡನೇ ಭೇಟಿಯಾಗಿದೆ.

ನರೇಂದ್ರ ಮೋದಿ ಆಗಮನ ಬಿಜೆಪಿಯಲ್ಲಿ ಹೊಸ ಉತ್ಸಾಹವನ್ನು ಮೂಡಿಸಿದೆ. ರಾಮಮಂದಿರ ಲೋಕಾರ್ಪಣೆ ತರುವಾಯ ಮೋದಿ ಹಾಗೂ ಬಿಜೆಪಿ ಬಗ್ಗೆ ಸಾರ್ವಜನಿಕರಿಂದ ಮೆಚ್ಚುಗೆ ಇನ್ನಷ್ಟು ಹೆಚ್ಚಿದೆ. ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗಿಂತ ಮೋದಿ ಅವರಿಗೆ ವೋಟ್ ಹಾಕುತ್ತೇನೆ ಎನ್ನುವವರ ಸಂಖ್ಯೆಯೇ ದೊಡ್ಡದಿದೆ. ಕಾಗೇರಿ ಅವರೂ ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕು. ಇದಕ್ಕಾಗಿ ಬಿಜೆಪಿಯನ್ನು ಬೆಂಬಲಿಸಿ ಎಂದು ಪ್ರಚಾರ ನಡೆಸುತ್ತಿದ್ದಾರೆ. ಮೋದಿ ಎಲ್ಲೇ ಇದ್ದರೂ ಮೋದಿ ಹೆಸರಿನಲ್ಲಿ ಇಲ್ಲಿ ವೋಟ್ ಕೇಳಲಾಗುತ್ತಿತ್ತು. ಈಗ ಸ್ವತಃ ಮೋದಿ ಅವರೇ ಕ್ಷೇತ್ರಕ್ಕೆ ಆಗಮಿಸುತ್ತಿರುವುದು ಬಿಜೆಪಿಗರಲ್ಲಿ ಸಂಭ್ರಮ ಮನೆಮಾಡಿದೆ.

ವಿಧಾನಸಭೆ ಚುನಾವಣೆಯಲ್ಲಿ ಅಂಕೋಲಾದಲ್ಲಿ ಮೋದಿ ಪ್ರಚಾರ ಸಭೆ ನಡೆಸಿದ್ದರು. ಆಗ ಜಿಲ್ಲೆಯ 4 ವಿಧಾನಸಭೆ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿತ್ತು. ಇದಕ್ಕೆ ರಾಜ್ಯದ ಬಿಜೆಪಿಯ ದುರಾಡಳಿತ, ಬಿಜೆಪಿ ವಿರೋಧಿ ಅಲೆಯೇ ಕಾರಣವಾಗಿತ್ತು. ಈಗ ಲೋಕಸಭೆ ಚುನಾವಣೆ ನಡೆಯುತ್ತಿದೆ. ಆಗಿನ ವಾತಾವರಣವೇ ಬೇರೆ. ಈಗಿನ ವಾತಾವರಣವೇ ಬೇರೆ. ಕೇಂದ್ರದ ಬಿಜೆಪಿ ಸರ್ಕಾರ ಯಾವುದೇ ಭ್ರಷ್ಟಾಚಾರ, ಹಗರಣಗಳಿಲ್ಲದೆ ಸುಭದ್ರ ಸರ್ಕಾರ ನೀಡಿರುವ ಹಿನ್ನೆಲೆ, ಅದರಲ್ಲೂ ಮೋದಿ ಅಲೆ ಹೆಚ್ಚಿರುವ ಸಂದರ್ಭದಲ್ಲಿ ಮೋದಿ ಪ್ರಚಾರ ನಡೆಸಲಿರುವುದು ಬಿಜೆಪಿಗೆ ವರದಾನವಾಗಲಿದೆ ಎಂದು ರಾಜಕೀಯ ವಲಯದಲ್ಲಿ ವಿಶ್ಲೇಷಿಸಲಾಗುತ್ತಿದೆ. ಬಾಕ್ಸ್...ಸಂಸದ ಅನಂತ್‌ ಪಾಲ್ಗೊಳ್ಳುವರೇ?

ಸಂಸದ ಅನಂತಕುಮಾರ ಹೆಗಡೆ ಅವರ ಊರಿನಲ್ಲೇ ಮೋದಿ ಅವರು ಭಾಗವಹಿಸುವ ಕಾರ್ಯಕ್ರಮ ನಡೆಯಲಿದೆ. ಈ ಸಮಾವೇಶದಲ್ಲಿ ಹೆಗಡೆ ಪಾಲ್ಗೊಳ್ಳಲಿದ್ದಾರೆಯೇ? ಇಲ್ಲವೇ ಎಂಬ ಕುತೂಹಲ ಉಂಟಾಗಿದೆ. ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಮೋದಿ ಅಂಕೋಲಾಕ್ಕೆ ಆಗಮಿಸಿದಾಗ ಹೆಗಡೆ ಗೈರಾಗಿದ್ದರು. ಈಗ ಟಿಕೆಟ್ ಸಿಕ್ಕಿಲ್ಲ ಎಂದು ಕೋಪಗೊಂಡಿರುವ ಹೆಗಡೆ ಮೋದಿ ಶಿರಸಿಗೆ ಬಂದಾಗ ಏನು ಮಾಡಲಿದ್ದಾರೆ ಎನ್ನುವುದು ಏ. 28ಕ್ಕೆ ಗೊತ್ತಾಗಲಿದೆ.

ಇನ್ನು ಕಾಂಗ್ರೆಸ್ ಕಡೆಗೆ ಹೆಜ್ಜೆ ಇಟ್ಟಿರುವ ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ್ ಸಹ ಸಮಾವೇಶಕ್ಕೆ ಬರುತ್ತಾರಾ ಎನ್ನುವ ಪ್ರಶ್ನೆಯೂ ಹುಟ್ಟಿಕೊಂಡಿದೆ.