ದೇಶದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಿದ ಮೋದಿ

| Published : Apr 28 2024, 01:20 AM IST

ಸಾರಾಂಶ

ನರೇಂದ್ರ ಮೋದಿ ಸಂವಿಧಾನ ವಿರೋಧಿ ಎಂದು ವಿರೋಧ ಪಕ್ಷದವರು ಸುಳ್ಳು ಪ್ರಚಾರ

ಗದಗ: ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ 10 ವರ್ಷಗಳಲ್ಲಿ ದೇಶದ ಸರ್ವಾಂಗೀಣ ಅಭಿವೃದ್ಧಿಗೆ ಹತ್ತು ಹಲವು ಯೋಜನೆ ಜಾರಿಗೆ ತಂದು ಎಲ್ಲ ವರ್ಗದ ಜನತೆಯ ಶ್ರೇಯೋಭಿವೃದ್ಧಿಗೆ ಶ್ರಮಿಸಿದ ಪ್ರಧಾನ ಸೇವಕರಾಗಿದ್ದಾರೆ ಎಂದು ಕರ್ನಾಟಕ ಮಾದಿಗ ಸಂಘರ್ಷ ಸಮಿತಿ ಜಿಲ್ಲಾಧ್ಯಕ್ಷ ರಾಘವೇಂದ್ರ ಪರಾಪೂರ ಹೇಳಿದರು. ನಗರದ ವಾರ್ಡ ನಂ. ೧೬ರ ಡಿಸಿ ಮಿಲ್, ತಳಗೇರಿ ಓಣಿಯಲ್ಲಿ ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಪರ ಕರ್ನಾಟಕ ಮಾದಿಗ ಸಂಘರ್ಷ ಸಮಿತಿಯಿಂದ ಮತಯಾಚಿಸಿ ಮಾತನಾಡಿದರು.

ನರೇಂದ್ರ ಮೋದಿ ಸಂವಿಧಾನ ವಿರೋಧಿ ಎಂದು ವಿರೋಧ ಪಕ್ಷದವರು ಸುಳ್ಳು ಪ್ರಚಾರ ಮಾಡುತ್ತಿದ್ದಾರೆ. ಮೋದಿ ಡಾ. ಬಿ.ಆರ್.ಅಂಬೇಡ್ಕರ ಅವರಿಗೆ ಇಲ್ಲಿಯವರೆಗೆ ಆಡಳಿತ ನಡೆಸಿದ ಪ್ರಧಾನ ಮಂತ್ರಿಗಳಲ್ಲಿ ಅತೀ ಹೆಚ್ಚು ಗೌರವ ನೀಡಿದ್ದಾರೆ. ಅವರ ಹೆಸರಿನಲ್ಲಿ ಭೀಮ್ ಆ್ಯಪ್ ಬಿಡುಗಡೆ ಮಾಡಿ ಡಿಜಿಟಲೀಕರಣ ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಪ್ರಥಮ ಬಾರಿಗೆ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದಾಗ ಡಾ. ಬಾಬಾಸಾಹೇಬ ಅಂಬೇಡ್ಕರವರು ನಮಗೆ ದೇಶದ ಸಂವಿಧಾನದ ಮೂಲಕ ನಮ್ಮ ಹಕ್ಕುಗಳ ರಕ್ಷಣೆಯ ಭರವಸೆ ಕೊಟ್ಟಿದ್ದಾರೆ. ಹಿಂದುಳಿದ ವರ್ಗದ ಬಡ ಕುಟುಂಬವೊಂದರ ತಾಯಿಯ ಮಗನಾದ ನನ್ನಂತವನಿಗೆ ಇಂದು ಪ್ರಧಾನಿ ಹುದ್ದೆಯಂತ ಉನ್ನತ ಸ್ಥಾನ ಅಲಂಕರಿಸುವುದಕ್ಕೆ ಡಾ. ಬಿ.ಆರ್.ಅಂಬೇಡ್ಕರ ಕಾರಣ ಎಂದು ಹೆಮ್ಮೆಯಿಂದ ಹೇಳಿದ್ದಾರೆ ಎಂದರು.

ಡಾ. ಅಂಬೇಡ್ಕರ್‌ ಸಂಬಂಧಿಸಿದ ೫ ಪವಿತ್ರ ಕ್ಷೇತ್ರಗಳನ್ನು ಅಭಿವೃದ್ಧಿಗೊಳಿಸಿ ಬಾಬಾ ಸಾಹೇಬರಿಗೆ ಗೌರವ ಸಮರ್ಪಣೆ ಮಾಡಿದ್ದಾರೆ. ಕಳೆದ ೧೦ ವರ್ಷಗಳಲ್ಲಿ ಭ್ರಷ್ಟಾಚಾರ ರಹಿತ ಆಡಳಿತ ನಡೆಸಿದ್ದಾರೆ. ವಿರೋಧ ಪಕ್ಷದವರು ಬಿಜೆಪಿ ಅಧಿಕಾರಕ್ಕೆ ಬಂದರೆ ಸಂವಿಧಾನ ಬದಲಾವಣೆ ಮಾಡುತ್ತಾರೆ ಎಂದು ಹೇಳಿದ್ದಕ್ಕೆ ಸ್ವತಃ ನರೇಂದ್ರ ಮೋದಿ ಡಾ.ಅಂಬೇಡ್ಕರವರೇ ಮತ್ತೆ ಹುಟ್ಟಿ ಬಂದರೂ ಸಂವಿಧಾನ ಬದಲಾಯಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಆದ್ದರಿಂದ ದಲಿತ ಸಮುದಾಯವು ಯಾವುದೇ ರೀತಿಯ ಇಂತಹ ಸುಳ್ಳು ಪ್ರಚಾರಕ್ಕೆ ಮರಳಾಗದೇ ದೇಶದ ದಲಿತ ಸಮುದಾಯ ಸೇರಿದಂತೆ ಎಲ್ಲ ವರ್ಗದ ಅಭಿವೃದ್ಧಿಗಾಗಿ ಬಿಜೆಪಿ ಬೆಂಬಲಿಸಿ ಎಂದು ಮನವಿ ಮಾಡಿಕೊಂಡರು.

ರಾಜ್ಯ ಸರ್ಕಾರದ ಗ್ಯಾರಂಟಿಯಿಂದ ಯಾರಿಗೂ ಒಳ್ಳೆಯದಾಗಿಲ್ಲ. ಎಲ್ಲ ಬೆಲೆ ಏರಿಕೆ ಆಗಿದೆ. ಗ್ಯಾರಂಟಿ ಯೋಜನೆ ಎಲ್ಲರಿಗೂ ತಲುಪಿಲ್ಲ. ರಾಜ್ಯದಲ್ಲಿ ದಲಿತರಿಗೆ ಮೀಸಲಿಟ್ಟ ಹಣ ಗ್ಯಾರಂಟಿ ಯೋಜನೆಗಳಿಗೆ ಉಪಯೋಗಿಸಿ ದಲಿತರಿಗೆ ಅನ್ಯಾಯ ಮಾಡಿದ್ದಾರೆ. ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಅವರಿಗೆ ಮತ ನೀಡಿ ಬರುವ ದಿನಗಳಲ್ಲಿ ಕೇಂದ್ರ ಮಂತ್ರಿಯಾಗಲಿದ್ದಾರೆ. ದಲಿತರ ಅಭಿವೃದ್ಧಿಗೆ ಶ್ರಮಿಸಲಿದ್ದಾರೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಬಿಜೆಪಿಯ ಮಹಿಳಾ ಮಂಡಳದ ಕೋಶಾಧ್ಯಕ್ಷ ಪದ್ಮಿನಿ ಮುತ್ತಲದಿನ್ನಿ, ಜೈ ಭೀಮ್ ಸಂಘರ್ಷ ಸಮಿತಿ ಜಿಲ್ಲಾಧ್ಯಕ್ಷ ಗಣೇಶ ಹುಬ್ಬಳ್ಳಿ, ಮಂಜುನಾಥ ತೌಜಲ್ ಸೇರಿದಂತೆ ಪಕ್ಷದ ಕಾರ್ಯಕರ್ತರು ಇದ್ದರು.