ಸಾರಾಂಶ
ಕನ್ನಡಪ್ರಭ ವಾರ್ತೆ ಕಲಬುರಗಿ
ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕ ರಾಜ್ಯದಿಂದ ಹೆಚ್ಚಿನ ಸ್ಥಾನಗಳನ್ನು ಗೆಲ್ಲುವ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿಯವರು ಶನಿವಾರ ಖರ್ಗೆ ತವರು ಕಲಬರಗಿಯಿಂದಲೇ ಲೋಕಸಭೆ ಸಮರಕ್ಕೆ ರಣಹಣ ಕಹಳೆ ಮೊಳಗಿಸಿದರು.ಉಚಿತ ಪಂಚ ಗ್ಯಾರಂಟಿಗಳನ್ನು ನೀಡಿ ಬೀಗುತ್ತಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಮಾತಿನಲ್ಲೇ ಪ್ರಹಾರ ಮಾಡಿದ ಪ್ರಧಾನಿ ಮೋದಿ, ಕೇಂದ್ರದ ಸಾಧನೆಗಳ ಸರಮಾಲೆಯನ್ನೇ ಬಿಚ್ಚಿಡುತ್ತ ಬಡವರು, ಮಧ್ಯಮ ವರ್ಗದವರ ಬದುಕು ಹಸನಾಗಿಸುವ ಕೇಂದ್ರದ ಅನೇಕ ಯೋಜನೆಗಳೇ ಮೋದಿ ಗ್ಯಾರಂಟಿ ಎಂದು ಸಾರಿ ಹೇಳಿದರು.
ತೆಲಂಗಾಣದಿಂದ ನೇರವಾಗಿ ಹೆಲಿಕಾಪ್ಟರ್ ಮೂಲಕ ಮಧ್ಯಾಹ್ನ 2 ಗಂಟೆಗೆ ಕಲಬುರಗಿಗೆ ಬಂದಿಳಿದ ಮೋದಿ 10 ರಿಂದ 15 ನಿಮಿಷಗಳ ಅವಧಿಯ ಸಂಕ್ಷಿಪ್ತ ರೋಡ್ ಷೋ ನಡೆಸಿ ನೇರವಾಗಿ ಬಹಿರಂಗ ಸಮಾವೇಶದ ವೇದಿಕೆ ಬಂದು ಅಬ್ ಕಿ ಬಾರ್- ಚಾರ್ ಸೌ ಪಾರ್ ಎಂದು ಘೋಷಣೆ ಕೂಗುತ್ತ ಸೇರಿದ್ದ ಜನಸ್ತೋಮ ಉದ್ದೇಶಿಸಿ ಶರಣರ ನಾಡಿನ ನಿಮಗೆಲ್ಲರಿಗೂ ನಮಸ್ಕಾರಗಳು ಎಂದು ಕೈ ಮುಗಿದು ನಿರರ್ಗಳವಾಗಿ 45 ನಿಮಷಗಳ ಕಾಲ ಜನರನ್ನು ಉದ್ದೇಶಿಸಿ ಮಾತನಾಡಿದರು.ನೀಲಿ ಬಣ್ಣದ ಜಾಕೆಟ್ ತೊಟ್ಟು ಆಗಮಿಸಿದ್ದ ಮೋದಿ ವೇದಿಕೆಯುದ್ದಕ್ಕೂ ಅಡ್ಡಾಡುತ್ತ ಜನರತ್ತ ಕೈ ಮಾಡಿ ನಗುಮೊಗದಿಂದ ಎಲ್ಲರಿಗೂ ಶುಭ ಕೋರಿ ನಮಿಸಿದ್ದು ವಿಶೇಷವಾಗಿತ್ತು.
ಕರ್ನಾಟಕ ದಿಲ್ಲಿ ಎಟಿಎಂ, ಕಾನೂನು, ಸುವ್ಯವಸ್ಥೆ ಕುಸಿತ: ಕರ್ನಾಟಕದಲ್ಲಿ ಕಾನೂನು- ಸುವ್ಯವಸ್ಥೆ ಹದಗೆಟ್ಟಿದೆ, ಅಸಾಮಾಜಿಕ ಕೃತ್ಯಗಳಿಗೆ, ತತ್ವಗಳಿಗೆ ಬಹಿರಂಗವಾಗಿಯೇ ಆಡಳಿತ ಸೂತ್ರ ಹಿಡಿದವರು ಪ್ರಚೋದನೆ ನೀಡುತ್ತ ಸಮರ್ಥಿಸಿಕೊಳ್ಳುತ್ತಿದ್ದಾರೆ. ಇದರಿಂದಾಗಿ ರಾಜ್ಯದ ಜನಮನದಲ್ಲಿ ಚಿಂತೆ, ಭೀತಿ ಕಾಡುತ್ತಿದೆ. ಅಧಿಕಾರಕ್ಕೆ ಬರಲು ಶತಾಯು ಗತಾಯು ಪೈಪೋಟಿ ಮಾಡಿದವರ ಮುಖವಾಡ ಇಂತಹ ಪ್ರಸಂಗಗಳಿಂದಾಗಿ ಈಗ ಬಯಲಾಗುತ್ತಿದೆ ಎಂದು ಮಾತಲ್ಲೇ ರಾಜ್ಯ ಕಾಂಗ್ರೆಸ್‌ಗೆ ತಿವಿದರು.ಕರ್ನಾಟಕ ರಾಜ್ಯದ ಕಾಂಗ್ರೆಸ್ ಸರ್ಕಾರ ದೆಹಲಿ ಎಟಿಎಂ ಆಗಿದೆ, ಪಕ್ಷ, ಪರಿವಾರದ ಖರ್ಚು ವೆಚ್ಚಕ್ಕೆಲ್ಲ ಕರುನಾಡಿನ ಜನರ ಶ್ರಮದ ತೆರಿಗೆ ಹಣವೇ ಬಳಕೆಯಾಗುತ್ತಿದೆ. ರಾಜ್ಯದ ತಿಜೋರಿಯ ಕೀಲಿ ಕೈ ದಿಲ್ಲಿಯವರ ಬಳಿ ಇದೆ ಎಂದು ಲೇವಡಿ ಮಾಡಿದರು.
ಆರ್ಥಿಕ ಮುಗ್ಗಟ್ಟಲ್ಲಿ ಸಿಲುಕಿದೆ ಕರ್ನಾಟಕ: ಕಾಂಗ್ರೆಸ್ ಪಕ್ಷದ ಉಚಿತ ಗ್ಯಾರಂಟಿಗಳಿಂದಾಗಿ ರಾಜ್ಯದಲ್ಲಿ ಆರ್ಥಿಕ ಮುಗ್ಗಟ್ಟು ಕಾಡುತ್ತಿದೆ. ಕರೆಂಟ್ ಉಚಿತ ನೀಡೋರದಿಂದ ಗುಣಮಟ್ಟದ ಹಾಗೂ ಸುಸ್ಥಿರ ವಿದ್ಯುಚ್ಚಕ್ತಿ ಮರೀಚಿಕೆಯಾಗಿದ್ದು ರೈತರು ಕಂಗಾಲಾಗಿದ್ದಾರೆ. ಉಚಿತ ವಿದ್ಯುತ್ ಘೋಷಣೆಯಿಂದಾಗಿ ಎಲ್ಲೆಡೆ ಕತ್ತಲು ಆವರಿಸಿದೆ, ರೈತರಿಗೆ ಧೋಕಾ ಆಗುತ್ತಿದೆ ಎಂದರು.ಕೇಂದ್ರದ 6 ಸಾವಿರ ರು ಕಿಸಾನ್ ಸಮ್ಮಾನ್‌ಗೆ ಪ್ರತಿಯಾಗಿ ರಾಜ್ಯದಿಂದಲೂ ಹಿಂದಿನ ಬಿಜೆಪಿ ಸರ್ಕಾರ 4 ಸಾವಿರ ಸೇರಿಸಿ 10 ಸಾವಿರ ರು ನೀಡುತ್ತಿತ್ತು, ಕಾಂಗ್ರೆಸ್ ಬಂದ ಮೇಲೆ ಇದೂ ಕೂಡಾ ನಿಂತು ಹೋಗಿದೆ. ಯಾವುದಕ್ಕೂ ಹಣವಿಲ್ಲ ಅಂತಿದ್ದಾರೆ, ಆಡಳಿತ ನಡೆಸೋದಾದರೂ ಹೇಗೆ? ಜನರ ಆಕಾಂಕ್ಷೆಗಳು ಪೂರ್ಣವಾಗೋದಾದರೂ ಹೇಗೆಂದು ಪ್ರಶ್ನಿಸಿದರು.
ಕರುನಾಡಲ್ಲಿ 2ನೇ ಸರ್ಕಾರ ಕಾಂಗ್ರೆಸ್‌ನಿಂದ ನಡೆದಿದೆ. ಎಲ್ಲರೂ ಸೇರಿಕೊಂಡು ರಾಜ್ಯದ ಸಂಪತ್ತಿನ ಲೂಟಿಗೆ ಮುಂದಾಗಿದ್ದಾರೆಯೇ ಹೊರತು ಪ್ರಗತಿ ಇಲ್ಲಿಕೊನೆಯ ಸ್ಥಾನ ಪಡೆದಿದುಕೊಂಡಿದೆ ಎಂದರು.ಕರ್ನಾಟಕಕ್ಕೆ ಮೋದಿ ಗ್ಯಾರಂಟಿ: ಕಾಂಗ್ರೆಸ್‌ನ ಪಂಚ ಗ್ಯಾರಂಟಿಗಳಿಗೆ ಪ್ರತಿಯಾಗಿ ತಮ್ಮ ಸರ್ಕಾರದ ಸಾಧನೆಗಳನ್ನು ಪಟ್ಟಿ ಮಾಡಿದ ಮೋದಿ ಕೆಲವು ಪ್ರಮುಖ ಯೋಜನೆಗಳು, ಫಲಾನುಭವಿಗಳ ಸಂಖ್ಯೆ ಉದಾಹರಿಸುತ್ತ ಉಚಿತ ಗ್ಯಾರಂಟಿಗಳಿಗಿಂತ ಸಾಧನೆಗಳೇ ಗ್ಯಾರಂಟಿಯಾದಾಗ ಅಭಿವೃದ್ಧಿ ಸಾಧ್ಯವೆಂದು ಕಾಂಗ್ರೆಸ್‌ಗೆ ಟಾಂಗ್ ನೀಡಿದರು.
ಕರ್ನಾಟಕದ ಅಭಿವೃದ್ಧಿಗೆ ಕೇಂದ್ರ ಸದಾ ಲಕ್ಷ ಕೊಟ್ಟಿದೆ. ರಾಜ್ಯದ 80 ಲಕ್ಷ ಜನರಿಗೆ ಆಯುಷ್ಮಾನ್ ಭಾರತ ಯೋಜನೆ ತಲುಪಿದೆ. ಅವರೆಲ್ಲರೂ ಇಂದು ರೋಗಮುಕ್ತರಾಗಿ ನಿತ್ಯ ಹರಸುತ್ತಿದ್ದಾರೆ. ಇದಲ್ಲವೆ ಮೋದಿ ಗ್ಯಾರಂಟಿ? ರಾಜ್ಯದ 40 ಲಕ್ಷ ಬಡವರಿಗೆ ಉಜ್ವಲ್ ಯೋಜನೆಯಡಿ ಅಡುಗೆ ಅನೀಲ ಸಿಲಿಂಡರ್ ನೀಡಿ ಅವರ ಮನೆಗಳನ್ನು ಧೂಮಮುಕ್ತವಾಗಿಸಿದ್ದೇವೆ, ಇದಕ್ಕೇನಂತೀರಿ? ಇದೂ ಕೂಡಾ ಮೋದಿ ಗ್ಯಾರಂಟಿ ತಾನೆ? ಪಿಎಂ ಆವಾಸ್ ಯೋಜನೆಯಡಿ ಸೂರಿಲ್ಲದ ಕರ್ನಾಟಕದ 8 ಲಕ್ಷ ಕುಟುಂಬಗಳಿಗೆ ಸೂರು, ಜಲ್ ಜೀವನ ಮಿಶನ್ ಅಡಿಯಲ್ಲಿ 75 ಲಕ್ಷ ಕುಟುಂಬಗಳ ಮನೆ ಮನೆಗೂ ನಲ್ಲಿನೀರು ಹರಿಸಿದ್ದೂ ಸಹ ಮೋದಿ ಗ್ಯಾರಂಟಿ ಎಂದು ಸಾರಿದರು.ಮೋದಿ ಗ್ಯಾರಂಟಿಯಂದಾಗಿ ಕರುನಾಡಿನ ಮಹಿಳೆಯರು, ಮಕ್ಕಳು, ಕಡು ಬಡವರು, ಆದಿವಾಸಿಗಳ ಬದುಕಲ್ಲಿ ಬದಲಾವಣೆ ಮೂಡುತ್ತಿದೆ. ಅವರೆಲ್ಲರೂ ಇಂದು ನನಗೆ ಹರಸುತ್ತಿದ್ದಾರೆಂದರು. ನೇರವಾಗಿ ಸೇರಿದ್ದ ಜನತೆಗೆ ಇವೆಲ್ಲವೂ ಗ್ಯಾರಂಟಿ ತಾನೆ ಎಂದು ಮೋದಿ ಪ್ರಶ್ನಿಸಿದರು. ಸಾಧನೆಗಳೇ ಗ್ಯಾರಂಟಿ ಆಗಬೇಕೇ ಹೊರತು ಭರವಸೆಗಳಲ್ಲ ಎಂದು ಕಾಂಗ್ರೆಸ್‌ಗೆ ಕುಟುಕಿದರು.
ಕಲ್ಯಾಣದ ಪ್ರಗತಿಗೆ ಕಾಂಗ್ರೆಸ್ ಶಾಪ: ಕಾಂಗ್ರೆಸ್ ಕಲ್ಯಾಣ ಕರ್ನಾಟಕ ಭಾಗದ ವಿಕಾಸಕ್ಕೆ ಶಾಪವಾಗಿದೆ. ಈ ಭಾಗಕ್ಕೆ ವಿಕಾಸ ಯೋಜನೆ ಹರಿದು ಬರಲು ಬಿಜೆಪಿ ಕಾರಣ. 6 ಸಾವಿರ ಕೋಟಿ ರು ವೆಚ್ಚದ 6 ಲೇನ್ ಹೆದ್ದಾರಿ ಯೋಜನೆ ಉ- ಕ ಭಾಗಕ್ಕೆ ನೀಡಿದ್ದೇವೆ. ಇಲ್ಲಿನ ಕೆಕೆಆರ್‌ಡಿಬಿಗೆ ಹಿಂದಿನ ಬಿಜೆಪಿ ಆಡಳಿತದಲ್ಲಿ ಸಾವಿರಾರು ಕೋಟಿ ಅನುದಾನ ನೀಡಿ ಅಭಿವೃದ್ಧಿಗೆ ಮುನ್ನುಡಿ ಬರೆದಿದ್ದೇವೆಂದರು.ಸ್ವಾತಂತ್ರ್ಯ ನಂತರ ಇದೇ ಮೊದಲ ಬಾರಿಗೆ ಕಲಬುರಗಿಯಿಂದ ಉಗಮವಾಗಿ ರಾಜಧಾನಿ ಬೆಂಗಳೂರು ತಲುಪುವ ವಂದೇ ಭಾರತ ರೈಲು ಕೊಡುಗೆ ನೀಡಿದ್ದೇವೆ.ಬೀದರ್- ಕಲಬುರಗಿ ರೇಲ್ವೆ ಯೋಜನೆ ವೇಗದಲ್ಲಿ ಪೂರ್ಣಗೊಳಿಸಿದ್ದು ಬಿಜೆಪಿ ಸರ್ಕಾರ, ಕರ್ನಾಟಕವನ್ನ ಕೃಷಿ ಹಾಗೂ ಉದ್ದಿಮೆ ಕೇಂದ್ರವಾಗಿಸುವ ಸಂಕಲ್ಪ ನಮ್ಮದು, ಇದು ಸಾಕಾರಗೊಳ್ಳಲು ಲೋಕಸಭೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿ ಸಂಸದರನ್ನ ಆರಿಸಿ ದೆಹಲಿಗೆ ಕಳುಹಿಸುವಂತೆ ಮೋದಿ ಮನವಿ ಮಾಡಿದರು.
ಕನ್ನಡ ಭಾಷೆ- ಕರ್ನಾಟಕದ ಅಸ್ಮಿತತೆಗೆ ಸದಾ ಗೌರವ: ಕೇಂದ್ರ ಕನ್ನಡ, ಕರ್ನಾಟಕದ ವಿಚಾರ ಬಂದಾಗ ರಾಜ್ಯದ ಅಸ್ಮಿತತೆಗೆ ಸದಾ ಗರವ ನೀಡಿದೆ. ತಾವು ಹೋದಲ್ಲೆಲ್ಲಾ ಲೋಕತಂತ್ರದ ವಿಚಾರ ಚರ್ಚೆಗೆ ಬಂದಾಗ ಕಲ್ಯಾಣ ನಾಡಿನ ಬಸವಣ್ಣನವರನ್ನೇ ತಾವು ಉದಾಹರಿಸೋದಾಗಿ ಹೇಳಿದ ಮೋದಿ ಜಿ 20 ಶೃಂಗದ ಭಾರತ ಮಂಟಪಮ್ ಈ ಹೆಸರು ಬಸವ ಕಲ್ಯಾಣದಲ್ಲಿ ಬಸವೇಶ್ವರರ ಅನುಭವ ಮಂಟಪದಿಂದ ತಾವು ಪಡೆದ ಪ್ರೇರಣೆಯ ದ್ಯೋತಕ ಎಂದರು.ಕನ್ನಡ ಭಾಷೆಯ ಬಗ್ಗೆ ಗೌರವವಿರುವ ಕಾರಣಕ್ಕೆ ಕೃತಕ ಬುದ್ದಿಮತ್ತೆ ತಂತ್ರಜ್ಞಾನ ಬಳಸಿ ತಮ್ಮ ಧ್ವನಿಯಲ್ಲೇ ಕನ್ನಡಿಗರ ಜೊತೆ ಮಾತನಾಡುವ ನಮೋ ಇನ್ ಕನ್ನಡ ಆ್ಯಾಪ್ ಸಿದ್ಧಪಡಿಸಲಾಗಿದ. ಅನೇಕರು ತಾವು ಕನ್ನಡ ಮಾತಾಡೋದನ್ನ ಕೇಳಲು ಉತ್ಸುಕರಾಗಿದ್ದಾರೆ. ಅದಕ್ಕೇ ತಂತ್ರಜ್ಞಾನ ಬಳಸಿ ಈ ಆ್ಯಪ್ ಸಿದ್ಧಪಡಿಸಲಾಗಿದೆ ಎಂದು ಮೋದಿ ಹೇಳಿದರು.ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ, ಪ್ರಲ್ಹಾದ ಜೋಷಿ, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ವಿರೋಧ ಪಕ್ಷ ನಾಯಕ ಆರ್ ಅಶೋಕ್, ಲೋಕ ಸಮರದ ಕಲಬುರಗಿ ಉಮೇದುವಾರ ಡಾ. ಉಮೇಶ ಜಾದವ್, ಬೀದರ್ ಉಮೇದುವಾರ ಭಗವಂತ ಖೂಬಾ, ಶಾಸಕ ಬಸವರಾಜ ಮತ್ತಿಮಡು, ಮಾಲೀಕಯ್ಯಾ ಗುತ್ತೇದಾರ್, ದತ್ತಾತ್ರೇಯ ಪಾಟೀಲ್ ರೇವೂರ್, ರಾಜ್ಯ ಮಹಿಳಾ ನಿಗಮದ ಮಾಜಿ ಅಧ್ಯಕ್ಷೆ ಶಶಿಕಲಾ ತೆಂಗಳಿ, ಕಲಬುರಗಿ, ಬೀದರ್ ಜಿಲ್ಲೆಯ ಬಿಜೆಪಿಯ ಹಾಲಿ, ಮಾಜಿ ಶಾಸಕರು ವೇದಿಕೆಯಲ್ಲಿದ್ದರು.
ಖರ್ಗೆ ಹೆಸರು ನೇರ ಪ್ರಸ್ತಾಪಿಸಲೇ ಇಲ್ಲ ಮೋದಿ: ನರೇಂದ್ರ ದಿಯವರು ಕಲಬುರಗಿಯ ತಮ್ಮ ಭಾಷಣದಲ್ಲಿ ಎಐಸಿಸಿ ಅಧ್ಯಕ್ಷ, ಇಂಡಿಯಾ ಒಕ್ಕೂಟದ ಪ್ರಧಾನಿ ಅಭ್ಯರ್ಥಿ ಎಂದೇ ಬಿಂಬಿತವಾಗಿರುವ ಡಾ. ಖರ್ಗೆಯವರ ಹೆಸರು ಎಲ್ಲಿಯೂ ನೇರವಾಗಿ ಪ್ರಸ್ತಾಪಿಸಲಿಲ್ಲ. ಆದರೆ ಒಂದು ಕಡ ಮಾತ್ರ ಅದೂ ಸಾಂಕೇತಿಕವಾಗಿ ಇಂಡಿಯಾ ಒಕ್ಕೂಟ, ಕಾಂಗ್ರೆಸ್ ಎಂದು ಟೀಕಿಸಿದರೆ ಹೊರತು ಖರ್ಗೆ ಬಗ್ಗೆ ಯಾವುದೇ ಮಾತುಗಳನ್ನು ಹೇಳಲಿಲ್ಲ. ಸೇರಿದ್ದ ಜನತೆ ಮೋದಿಯವರು ಖರ್ಗೆ ಕುರಿತಂತೆ ಏನಾದರೂ ಹೇಭಹುದು ಎಂದು ಇಟ್ಟುಕೊಂಡಿದ್ದ ನಿರೀಕ್ಷೆ ಹುಸಿಯಾಯ್ತು.;Resize=(128,128))
;Resize=(128,128))
;Resize=(128,128))
;Resize=(128,128))