ಸಂಘಟನ್ ಸೃಜನ್ ಕಾರ್ಯಕ್ರಮದಲ್ಲಿ ತಮಿಳುನಾಡು ಮೈಲದುತ್ತೂರಿ ಕ್ಷೇತ್ರದ ಸಂಸದೆ ಸುಧಾ ಹೇಳಿಕೆಕನ್ನಡಪ್ರಭ ವಾರ್ತೆ ಸಕಲೇಶಪುರ

ಕೇಂದ್ರ ಸರ್ಕಾರ ಭ್ರಷ್ಟಚಾರದ ಕೂಪದಲ್ಲಿ ಮುಳುಗಿದ್ದು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ನಿಜಬಣ್ಣ ಈಗ ಬಯಲಾಗುತ್ತಿದೆ ಎಂದು ತಮಿಳುನಾಡು ಮೈಲದುತ್ತೂರಿ ಕ್ಷೇತ್ರದ ಸಂಸದೆ ಆರ್‌ ಸುಧಾ ಹೇಳಿದರು.

ಶುಕ್ರವಾರ ಪಟ್ಟಣದ ರೈತ ಭವನದಲ್ಲಿ ಬ್ಲಾಕ್ ಕಾಂಗ್ರೆಸ್ ಆಯೋಜಿಸಿದ್ದ ಸಂಘಟನ್ ಸೃಜನ್ ಕಾರ್ಯಕ್ರಮದಲ್ಲಿ ಮಾತನಾಡಿ, ಈಗಾಗಲೇ ನೀಟ್ ಆಕ್ರಮಕ್ಕೆ ಕೇಂದ್ರ ಸರ್ಕಾರದ ಒಂದು ತಲೆದಂಡವಾಗಿದೆ. ಮುಂದಿನ ದಿನಗಳಲ್ಲಿ ಕೇಂದ್ರ ಸರ್ಕಾರದ ಮತ್ತಷ್ಟು ಅಕ್ರಮಗಳನ್ನು ರಾಹುಲ್ ಗಾಂಧಿ ನೇತೃತ್ವದ ಕಾಂಗ್ರೆಸ್ ಬಯಲಿಗೆ ಎಳೆಯುವ ಮೂಲಕ ಪ್ರಧಾನಿ ನರೇಂದ್ರ ಮೋದಿ ನೈತಿಕ ಹೊಣೆ ಹೊತ್ತು ರಾಜಿನಾಮೆ ನೀಡುವ ದಿನಗಳು ಸನಿಹದಲ್ಲಿದೆ. ಸದ್ಯ ಕಾಂಗ್ರೆಸ್ ಪಕ್ಷವನ್ನು ನೆಲಮಟ್ಟದಿಂದ ಸಂಘಟಿಸಲು ಎಐಸಿಸಿ ಸೂಚಿಸಿದೆ. ಇದರ ಅಂಗವಾಗಿ ಕಾಂಗ್ರೆಸ್ ಪಕ್ಷದ ಪಧಾಧಿಕಾರಿಗಳು ಹಾಗೂ ಪಕ್ಷದಿಂದ ರಾಜಕೀಯ ಸ್ಥಾನಮಾನ ಪಡೆದಿರುವ ವ್ಯಕ್ತಿಗಳಿಂದ ಮೊದಲಿಗೆ ಜಿಲ್ಲಾಧ್ಯಕ್ಷರ ಆಯ್ಕೆಗಾಗಿ ಹೆಸರು ಸೂಚನೆಗೆ ಈ ಸಭೆ ನಡೆಸಲಾಗುತ್ತಿದೆ. ಜಿಲ್ಲೆಯಿಂದ ಆರು ಜನರ ಹೆಸರನ್ನು ಹೈಕಮಾಂಡಿಗೆ ಕಳುಹಿಸಿಕೊಡುವ ಹೊಣೆ ನಮ್ಮ ಮೇಲಿದ್ದು ಈ ಅಭಿಯಾನದಲ್ಲಿ ಎಲ್ಲರೂ ಬಾಗವಹಿಸುವ ಮೂಲಕ ಪಕ್ಷ ಸಂಘಟನೆಗೆ ಸಹಕರಿಸ ಬೇಕು ಎಂದರು.ಪಕ್ಷದ ಮುಖಂಡ ಮುರುಳಿಮೋಹನ್ ಮಾತನಾಡಿ, ಪಕ್ಷದಲ್ಲಿ ಸಣ್ಣಪುಟ್ಟ ಮನಸ್ತಾಪಗಳು ಸಹಜ ಇದನ್ನು ಮನಸ್ಸಿನಲ್ಲಿಟ್ಟುಕೊಳ್ಳದೆ ಮುಂಬರುವ ಸ್ಥಳೀಯ ಚುನಾವಣೆಯಲ್ಲಿ ಯಾರೇ ಅಭ್ಯರ್ಥಿಯಾದರು ಕೆಲಸ ಮಾಡುವ ಮೂಲಕ ಹೆಚ್ಚಿನ ಜನರು ಆಯ್ಕೆಯಾಗುವಂತೆ ಕೆಲಸ ಮಾಡಬೇಕಿದೆ ಎಂದರು. ಈ ವೇಳೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಲಕ್ಷ್ಮಣ್, ಚಿಕ್ಕಮಗಳೂರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ವಿಜಯಕುಮಾರ್,ಸಕಲೇಶಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೈರಮುಡಿಚಂದ್ರು, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಅನ್ನಪೂರ್ಣ ಸೇರಿದಂತೆ ಹಲವರು ಉಪಸ್ಥಿತರಿದ್ದರು.