ಪ್ಲಾಸ್ಟಿಕ್ ಬಳಕೆ ವಿರುದ್ಧ ಜಾಗೃತಿ, ಪರಿಸರ ಕಾಳಜಿ ನಮ್ಮೆಲ್ಲರದ್ದಾಗಬೇಕು ಎನ್ನುವ ನಿಟ್ಟಿನಲ್ಲಿ ಮೂಡುಬಿದಿರೆ ರೋಟರಿ ಕ್ಲಬ್ ಮಾದರಿ ಹೆಜ್ಜೆಯನ್ನಿರಿಸಿದೆ.
ಮೂಡುಬಿದಿರೆ: ಪ್ಲಾಸ್ಟಿಕ್ ಬಳಕೆ ಬದುಕಿಗೆ ಅನಿವಾರ್‍ಯ ಎನ್ನುವುದು ಸರಿಯಲ್ಲ. ಮನಸ್ಸಿದ್ದರೆ ಮಾರ್ಗವಿದೆ. ನಾವು ಮಾಡುವ ಪ್ರಯತ್ನವೇ ಇತರರಿಗೆ ಸ್ಫೂರ್ತಿಯಾಗಬೇಕು. ಪ್ಲಾಸ್ಟಿಕ್ ಬಳಕೆ ವಿರುದ್ಧ ಜಾಗೃತಿ, ಪರಿಸರ ಕಾಳಜಿ ನಮ್ಮೆಲ್ಲರದ್ದಾಗಬೇಕು ಎನ್ನುವ ನಿಟ್ಟಿನಲ್ಲಿ ಮೂಡುಬಿದಿರೆ ರೋಟರಿ ಕ್ಲಬ್ ಮಾದರಿ ಹೆಜ್ಜೆಯನ್ನಿರಿಸಿದೆ.
ಪ್ಲಾಸ್ಟಿಕ್ ಬಳಕೆ ಇಲ್ಲದೆ ಸಭೆ ಸಮಾರಂಭಗಳನ್ನು ಮಾಡಬಹುದು ಎನ್ನುವುದನ್ನು ಸದ್ದಿಲ್ಲದೆ ಕಾರ್‍ಯರೂಪಕ್ಕೆ ತಂದ ರೋಟರಿ ಇದೀಗ ತನ್ನ ಶಾಲಾ ಆವರಣದಲ್ಲೂ ಸ್ಕೂಲ್ ಡೇ ಶಾಪಿಂಗ್ ಮೇಳದಲ್ಲಿನೋ ಪ್ಲಾಸ್ಟಿಕ್ ಅಭಿಯಾನ ಮೂಲಕ ಗಮನ ಸೆಳೆದಿದೆ. ಸುಸ್ಥಿರ ಪರಿಸರ ನಿರ್ಮಾಣ ನಿಟ್ಟಿನಲ್ಲಿ ಮೂಡುಬಿದಿರೆಯ ರೋಟರಿ ಶಿಕ್ಷಣ ಸಂಸ್ಥೆ ಹಾಗೂ ರೋಟರಿ ಕ್ಲಬ್ ಶಾಲಾ ಆವರಣದಲ್ಲಿಇತ್ತೀಚೆಗೆ ನಡೆದ ವಾರ್ಷಿಕೋತ್ಸವ ಸಮಾರಂಭದಲ್ಲಿ ಆಹಾರ ಮಾರಾಟಗಾರರಿಗೆ ಜೈವಿಕ ವಿಘಟನೀಯ (Biodegradable) ತಟ್ಟೆ, ಬಟ್ಟಲು ಹಾಗೂ ಚಮಚಗಳನ್ನು ವಿತರಿಸುವ ಮೂಲಕ ಪರಿಸರ ಸಂರಕ್ಷಣೆ ಜಾಗೃತಿ ಮೂಡಿಸಿದೆ.ನಾಯಕತ್ವದ ಯಶಸ್ಸು:ರೋಟರಿ ಅಧ್ಯಕ್ಷ ನಾಗರಾಜ್ ಹೆಗ್ಡೆ ಅವರ ಮಾರ್ಗದರ್ಶನ ಹಾಗೂ ತಂಡದ ಪರಿಶ್ರಮದಿಂದ ಈ ಯೋಜನೆ ಸಾಕಾರಗೊಂಡಿದೆ. ರೋಟರಿ ನಡೆಸುವ ಎಲ್ಲ ಸಭೆ ಸಮಾರಂಭಗಳಲ್ಲೂ ಪ್ಲಾಸ್ಟಿಕ್ ನಿಷೇದ ಎದ್ದು ಕಾಣುತ್ತಿದೆ. ರೋಟರಿಯ ಸದಸ್ಯರೂ ಇದೇ ಸಂದೇಶ ಪಾಲಿಸಬೇಕು. ಪ್ರೋತ್ಸಾಹಿಸಬೇಕು ಎನ್ನುವುದನ್ನು ಕ್ಲಬ್ ಮಾದರಿಯಾಗಿ ಮಾಡಿ ಗಮನ ಸೆಳೆಯುತ್ತಿದೆ. ಇದೀಗ ಪಲ್ಸ್ ಪೋಲಿಯೋ ಅಭಿಯಾನದ ನೇತೃತ್ವ ವಹಿಸಿದ್ದ ರೋಟರಿ ಬೂತ್ ಗಳ ಆರೋಗ್ಯ ಕಾರ್‍ಯಕರ್ತರಿಗೆ ಬಯೋ ಡಿಗ್ರೆಡೆಬಲ್ ಕಂಟೈನರ್ ಗಳಲ್ಲಿ ಊಟ ವಿತರಿಸಿದೆ. ಕಳೆದ ಸಾಲಿನಲ್ಲೂ ಪ್ಲಾಸ್ಟಿಕ್ ಬ್ಯಾಗ್ ಬೇಡವೆನ್ನಿ ಬಟ್ಟೆ ಕೈಚೀಲ ನೀವೇ ತನ್ನಿ ಎನ್ನುವ ಅಭಿಯಾನದಲ್ಲಿ ಪುರಸಭೆ ಜತೆಗೂಡಿ ಬಟ್ಟೆ ಚೀಲಗಳನ್ನು ವಾರದ ಸಂತೆಯ ದಿನ ವಿತರಿಸುವ ಅಭಿಯಾನದಲ್ಲೂ ರೋಟರಿ ಜತೆಗೂಡಿತ್ತು.
ಸಮಾಜ ಎದ್ದು ನಿಂತಾಗ ಯಾವುದೂ ಅಸಾಧ್ಯವಲ್ಲ, ಹೀಗೂ ಮಾಡಬಹುದು ಎಂದು ನಾವೇ ಮಾದರಿಯಾಗಬೇಕು. ಪ್ಲಾಸ್ಟಿಕ್ ಬಳಕೆ ತಡೆಗಟ್ಟಲು ಪರ್ಯಾಯ ವ್ಯವಸ್ಥೆ ಇದೆ ಎನ್ನುವುದನ್ನು ಮನದಟ್ಟು ಮಾಡುವಲ್ಲಿ ನಾವು ಹೊಸ ಸಾಧ್ಯತೆಗಳನ್ನು ಪರಿಚಯಿಸಿದಾಗ ಮಾತ್ರ ಅನೇಕರಿಗೆ ಸ್ಫೂರ್ತಿಯ ಸಂದೇಶ ನೀಡಲು ಸಾಧ್ಯ- ನಾಗರಾಜ್ ಹೆಗ್ಡೆ, ಅಧ್ಯಕ್ಷರು ಮೂಡುಬಿದಿರೆ ರೋಟರಿ ಕ್ಲಬ್