ಸರ್ಕಾರದ ನಿಲುವು ಖಂಡಿಸಿ ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ । ಟೈರ್‌ಗೆ ಬೆಂಕಿ ಹಚ್ಚಿ ಆಕ್ರೋಶ

ಕನ್ನಡಪ್ರಭ ವಾರ್ತೆ ಮೊಳಕಾಲ್ಮುರು

ಬರಪೀಡಿತ ಪ್ರದೇಶಗಳ ಪಟ್ಟಿಯಿಂದ ತಾಲೂಕು ಕೈಬಿಟ್ಟಿರುವ ಸರ್ಕಾರದ ನಿಲುವನ್ನು ಖಂಡಿಸಿ ಬಿಜೆಪಿ ಕಾರ್ಯಕರ್ತರು ಶನಿವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.

ಪಟ್ಟಣದ ಕೆಇಬಿ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿದ ಕಾರ್ಯಕರ್ತರು ಟೈರ್‌ಗೆ ಬೆಂಕಿ ಹಚ್ಚಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಮುಖ್ಯ ರಸ್ತೆಯಲ್ಲಿ ಮೆರವಣಿಗೆ ನಡೆಸಿ ತಾಲೂಕು ಕಚೇರಿಗೆ ಆಗಮಿಸಿದ ಕಾರ್ಯಕರ್ತರು ರಸ್ತೆ ತಡೆ ನಡೆಸಿ ತಾಲೂಕನ್ನು ಬರ ಪಟ್ಟಿಗೆ ಸೇರ್ಪಡೆಗೊಳಿಸುವಂತೆ ಒತ್ತಾಯಿಸಿ ಘೋಷಣೆಗಳನ್ನು ಕೂಗಿದರು.

ಜಿಲ್ಲೆಯಲ್ಲಿಯೇ ಅತ್ಯಂತ ಹಿಂದುಳಿದ ತಾಲೂಕುಗಳಲ್ಲಿ ಮೊಳಕಾಲ್ಮೂರು ಪ್ರಮುಖವಾಗಿದ್ದು ಸದಾ ಬರ ಪರಿಸ್ಥಿತಿಗೆ ತುತ್ತಾಗುತ್ತಿರುವ ತಾಲೂಕನ್ನು ಬರ ಪಟ್ಟಿಯಿಂದ ಕೈಬಿಟ್ಟಿರುವುದು ರೈತರು ಹಾಗೂ ಜನಸಾಮಾನ್ಯರಿಗೆ ಮಾಡಿದ ಅನ್ಯಾಯವಾಗಿದೆ. ಇದು ಈ ಭಾಗದ ಜನರಿಗೆ ಮಾಡಿದ ಅತ್ಯಂತ ವಂಚನೆ

ಎಂದು ಪ್ರತಿಭಟನಾಕಾರರು ಕಿಡಿಕಾರಿದರು.

ತಾಲೂಕಿನಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿದ್ದು ಪ್ರಮುಖ ನೀರಾವರಿ ಮೂಲಗಳಿಲ್ಲದೆ ಬಹುತೇಕ ರೈತರು ಮಳೆಯನ್ನೇ ಆಶ್ರಯಿಸಿ ಕೃಷಿ ಮಾಡುತ್ತಿದ್ದಾರೆ. ಸಮರ್ಪಕ ಮಳೆಯಾಗದೆ ಬಿತ್ತನೆ ಮಾಡಿದ ಬೆಳೆಗಳು ಕೈಕೊಡುವ ಪರಿಸ್ಥಿತಿ ನಿರ್ಮಾಣವಾಗಿದ್ದು ಹಾಕಿದ ಬಂಡವಾಳವೂ ವಾಪಸ್ ಬಾರದಂತಾಗಿದೆ. ಮಳೆ ಕೊರತೆಯಿಂದ ಜನ-ಜಾನುವಾರುಗಳು ಪರಿತಪಿಸುವಂತಾಗಿದ್ದು ಹಲವು ಗ್ರಾಮಗಳಲ್ಲಿ ಮೇವಿನ ಕೊರತೆ ಹಾಗೂ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದೆ ಎಂದು ಸರ್ಕಾರದ ನಿಲುವಿನ ಕುರಿತು ಆಕ್ರೋಶ ವ್ಯಕ್ತ ಪಡಿಸಿದರು.

ಮಳೆ ಬಾರದೆ ಕೃಷಿ ಭೂಮಿಗಳು ಕಣ್ಮರೆಯಾಗತೊಡಗಿವೆ. ಜನರು ಉದ್ಯೋಗ ಹರಿಸಿ ಗುಳೆ ಹೋಗುವ ಪರಿಸ್ಥಿತಿ ಎದುರಾಗಿದೆ. ಈಗಿದ್ದರೂ ತಾಲೂಕಿನ ವಾಸ್ತವ ಪರಿಸ್ಥಿತಿ ಪರಿಶೀಲಿಸದೆ ಸರ್ಕಾರ ಬರ ಪಟ್ಟಿಯಿಂದ ಕೈ ಬಿಟ್ಟು ತಾಲೂಕನ್ನು ಕಡೆಗಣಿಸಲಾಗಿದೆ. ಇದಕ್ಕೆ ನಿರ್ಲಕ್ಷವೇ ನೇರ ಕಾರಣ ಎಂದು ಆಕ್ರೋಶ ವ್ಯಕ್ತ ಪಡಿಸಿದ ಅವರು, ಕೂಡಲೇ ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಿಸಬೇಕು ಎಂದು ಆಗ್ರಹಿಸಿದರು.

ಬಿಜೆಪಿ ಜಿಲ್ಲಾ ಪ್ರದಾನ ಕಾರ್ಯದರ್ಶಿ ಡಾ.ಪಿ.ಎಂ.ಮಂಜುನಾಥ ಮಾತನಾಡಿ, ಸತತ ಬರಕ್ಕೆ ತುತ್ತಾಗುತ್ತಿರುವ ತಾಲೂಕನ್ನು ಬರ ಪಟ್ಟಿಯಿಂದ ಕೈ ಬಿಟ್ಟು ಕಾಂಗ್ರೆಸ್ ಸರ್ಕಾರ ಈ ಭಾಗದ ಜನರಿಗೆ ಬಹುದೊಡ್ಡ ಶಾಕ್ ಕೊಟ್ಟಿದೆ.ಕಳೆದ ಬಾರಿಯೂ ಉತ್ತಮ ಮಳೆಬಾರದೆ ,ಬೆಳೆ ವಿಮೆಯ ಹಣವೂ ರೈತರ ಕೈ ಸೇರದೆ ಅನೇಕರು ಸಂಕಷ್ಟಕ್ಕೆ ಸಿಲುಕಿದ್ದರು.ಈ ಬಾರಿಯೂ ಮಳೆ ಇಲ್ಲದೇ ಸಾಲ ಮಾಡಿ ಬಂಡವಾಳ ಹಾಕಿದ ರೈತರು ಮಳೆ ಇಲ್ಲದೆ ಸಂಕಷ್ಟದಲ್ಲಿದ್ದಾರೆ.ಈಗಿದ್ದರೂ ಸರ್ಕಾರ ಬರ ಪಟ್ಟಿಯಿಂದ ಕೈ ಬಿಟ್ಟು ಜನತೆಯನ್ನು ಇನ್ನಷ್ಟು ಸಂಕಷ್ಟಕ್ಕೆ ಸಿಲುಕಿಸಿದೆ.ಕೂಡಲೇ ಸರ್ಕಾರ ಪರಿಶೀಲಿಸಬೇಕು.ತಾಲೂಕನ್ನು ಬರ ಪಟ್ಟಿಗೆ ಸೇರಿಸಬೇಕು ಎಂದರು.

ಇದೇ ವೇಳೆ ಬಿಜೆಪಿರಾಜ್ಯ ಎಸ್.ಟಿ.ಮೋರ್ಚಾ ಉಪಾಧ್ಯಕ್ಷ ಅನಿಲ್ ಕುಮಾರ್ ಮಾತನಾಡಿ ಬರ ಪಟ್ಟಿಯಲ್ಲಿ ತಾಲೂಕನ್ನು ಕೈಬಿಟ್ಟಿರುವ ನಿರ್ಧಾರವನ್ನು ಸರ್ಕಾರ ಕೂಡಲೇ ಮರುಪರಿಶೀಲಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ತಾಲೂಕು ಮಟ್ಟದಲ್ಲಿ ಇನ್ನಷ್ಟು ತೀವ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.

ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ

ರಾಮದಾಸ್ ಮಾತನಾಡಿ ಹಲವು ದಶಕದಿಂದ ಮಳೆ ಬಾರದೆ ನಷ್ಟ ಅನುಭವಿಸುತ್ತಿರುವ ರೈತರಿಗೆ ಈ ಬಾರಿಯೂ ವರುಣನ ಮುನಿಸಿನಿಂದ ಮತ್ತೊಂದು

ಸಾಲದ ಸುಳಿಗೆ ಸಿಲುಕಿ ಸಂಸ್ಕಷ್ಟ ಅನುಭವಿಸುವಂತಾಗಿದೆ.ಇದೀಗ ಬರದ ಪರಿಸ್ಥಿತಿಯಲ್ಲೂ ಸರ್ಕಾರ ರೈತರ ನೆರವಿಗೆ ನಿಲ್ಲದೆ ನಿರ್ಲಕ್ಷ್ಯ ಮಾಡುತ್ತಿರುವುದು ಖಂಡನೀಯ.ಸರ್ಜಾರ ಕೂಡಲೇ ತಾಲೂಕನ್ನು ಬರ ಪಟ್ಟಿಗೆ ಸೇರ್ಪಡೆ ಗೊಳಿಸುವ ಮೂಲಕ ರೈತರಿಗೆ ಪರಿಹಾರ, ಕುಡಿಯುವ ನೀರು ಹಾಗೂ ಜಾನುವಾರುಗಳಿಗೆ ಮೇವು ಒದಗಿಸಬೇಕು ಎಂದರು.

ಈ ಸಂದರ್ಭದಲ್ಲಿ ಮಂಡಲ ಅಧ್ಯಕ್ಷ ಕೆ.ಟಿ.ಶ್ರೀರಾಮರೆಡ್ಡಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಾ.ಮಂಜುನಾಥ್, ಪ್ರಭಾಕರ್ ಮ್ಯಾಸನಾಯಕ, ಮಂಡಲದ ನಿಕಟ ಪೂರ್ವ ಅಧ್ಯಕ್ಷರಾದ ಈ.ರಾಮರೆಡ್ಡಿ, ಟಿ ರೇವಣ್ಣ, ಹಿರಿಯ ಮುಖಂಡ ಜಿಂಕಲ್ ಬಸವರಾಜ್, ಜಿರಳ್ಳಿ ತಿಪ್ಪೇಸ್ವಾಮಿ, ಕೆ.ಬಿ. ಮಹೇಶ್, ಶಾಂತರಾಂ ಬಸಪತಿ, ಲೋಕೇಶ್ ರೆಡ್ಡಿ, ಸಣ್ಣ ಮಾರಣ್ಣ,ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷ ಟಿ‌.ಟಿ. ರವಿಕುಮಾರ್ ,ಸಿದ್ದಣ್ಣ ,ಬಿ,ಮಂಜಣ್ಣ ,ತಿಪ್ಪೇಸ್ವಾಮಿ, ಕಿರಣ್ ಗಾಯಕ್ವಾಡ್,ನಿಂಗಣ್ಣ , ತಿಮ್ಲಾಪುರ ಮೂರ್ತಿ, ಕೃಷ್ಣಪ್ಪ ಬೈರಾಪುರ, ಸ್ಟಾರ್ ನಾಗರಾಜ್, ಎಸ್.ಸಿ.ಮೋರ್ಚಾ ಅಧ್ಯಕ್ಷ ಬಲರಾಮ್ ದೇವಸಮುದ್ರ ಚಂದ್ರಣ್ಣ,ತುಮಕೂರ್ಲಹಳ್ಳಿ ಮಂಜುನಾಥ್ ಪಾಲ್ಗೊಂಡಿದ್ದರು.