ಸಮಾಜಕ್ಕೆ ದೊಡ್ಡ ಕೊಡುಗೆ ನೀಡಿದ ಮಠಗಳು

| Published : Nov 13 2023, 01:15 AM IST / Updated: Nov 13 2023, 01:16 AM IST

ಸಾರಾಂಶ

ಶೈಕ್ಷಣಿಕ, ಸಾಂಸ್ಕೃತಿಕ ವಾತಾವರಣ ಕಲ್ಪಿಸಿ ಜ್ಞಾನ, ಅನ್ನ ದಾಸೋಹ ಮಾಡಿದ ಮಠಗಳು ಸರ್ಕಾರಕ್ಕಿಂತ ಮೊದಲು ಸಮಾಜಕ್ಕೆ ದೊಡ್ಡ ಕೊಡುಗೆ ನೀಡಿದ್ದನ್ನು ಎಂದೂ ಮರೆಯಲು ಸಾಧ್ಯವಿಲ್ಲ ಎಂದು ಶಾಸಕ ಶ್ರೀನಿವಾಸ ಮಾನೆ ತಿಳಿಸಿದರು.

ಕನ್ನಡಪ್ರಭ ವಾರ್ತೆ ಹಾನಗಲ್ಲ

ಶೈಕ್ಷಣಿಕ, ಸಾಂಸ್ಕೃತಿಕ ವಾತಾವರಣ ಕಲ್ಪಿಸಿ ಜ್ಞಾನ, ಅನ್ನ ದಾಸೋಹ ಮಾಡಿದ ಮಠಗಳು ಸರ್ಕಾರಕ್ಕಿಂತ ಮೊದಲು ಸಮಾಜಕ್ಕೆ ದೊಡ್ಡ ಕೊಡುಗೆ ನೀಡಿದ್ದನ್ನು ಎಂದೂ ಮರೆಯಲು ಸಾಧ್ಯವಿಲ್ಲ ಎಂದು ಶಾಸಕ ಶ್ರೀನಿವಾಸ ಮಾನೆ ತಿಳಿಸಿದರು.

ಪಟ್ಟಣದಲ್ಲಿ ಶಾಲಾ ಶಿಕ್ಷಣ ಇಲಾಖೆ, ಜಿಪಂ, ತಾಲೂಕು ಆಡಳಿತ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ತಾಲೂಕು ಮಟ್ಟದ ಪ್ರಾಥಮಿಕ ಪ್ರೌಢ ಶಾಲೆಗಳ ಪ್ರತಿಭಾ ಕಾರಂಜಿ ಸ್ಪರ್ಧೆ ಹಾಗೂ ಕಲೋತ್ಸವವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸರ್ಕಾರದ ಸೌಲಭ್ಯಗಳಿಲ್ಲದ ಕಾಲದಲ್ಲಿ ಮಠ-ಮಂದಿರಗಳ ಆಶ್ರಯ ಪಡೆದು ಪ್ರತಿಭಾವಂತರು ಬೆಳೆದು ಬಾಳು ಕಟ್ಟಿಕೊಂಡರು. ಉನ್ನತ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದರು. ಈಗ ಸರ್ಕಾರ ಹತ್ತು ಹಲವು ಸೌಲಭ್ಯಗಳನ್ನು ವಿದ್ಯಾ ಕ್ಷೇತ್ರಕ್ಕೆ ನೀಡುತ್ತಿದೆ. ಇದರ ಸದುಪಯೋಗಕ್ಕೆ ಎಲ್ಲರೂ ಸಂಕಲ್ಪ ಮಾಡಬೇಕು. ಈ ನೆಲದ ಸಂಸ್ಕೃತಿಯನ್ನು ಬಿಂಬಿಸುವಲ್ಲಿ ನಾವು ವಿಫಲರಾಗಬಾರದು. ನಮ್ಮ ಪುರಾತನ ಗ್ರಂಥಗಳ ಪಠಣ, ಪಾಲನೆ, ಅಲ್ಲಿನ ಸತ್ಯ ಸಂದೇಶಗಳನ್ನು ಶಾಲೆಗಳ ಮೂಲಕ ನೀಡುವಲ್ಲಿ ಗುರು ಬಳಗ ಮುಂದಾಗಬೇಕು. ನಮ್ಮ ಮೂಲ ಸಂಸ್ಕೃತಿಯ ವಾಸ್ತವವನ್ನು ಹಚ್ಚ ಹಸುರಾಗಿಸಬೇಕು. ಪ್ರತಿಭಾ ಕಾರಂಜಿಗಳು ಕೇವಲ ಸ್ಪರ್ಧೆಗೆ ಸೀಮಿತವಾಗುವುದು ಬೇಡ. ಅದರ ನಿಜಾರ್ಥವನ್ನು ತಿಳಿಯುವ ಪ್ರಯತ್ನ ನಡೆಯಲಿ. ಧರ್ಮದ ಹೆಸರಿನಲ್ಲಿ ಯಾರನ್ನೂ ಒಡೆಯುವುದು ಬೇಡ. ಎಲ್ಲರನ್ನೂ ಕೂಡಿಸಲು ಮುಂದಾಗಬೇಕು. ನಮ್ಮ ಪೀಳಿಗೆಗೆ ಒಳ್ಳೆಯದನ್ನು ಕೊಡೋಣ ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ವಿ.ವಿ. ಸಾಲಿಮಠ ಮಾತನಾಡಿ, ಶಾಲೆಗಳು ಈಗ ಪರಿಪೂರ್ಣವಾದ ಶೈಕ್ಷಣಿಕ, ಸಾಂಸ್ಕೃತಿಕ ಕೇಂದ್ರಗಳಾಗುತ್ತಿವೆ. ಶಿಕ್ಷಕರಿಗೂ ಕೂಡ ನಿರಂತರ ಕ್ರಿಯಾಶೀಲತೆಯನ್ನು ಇಲಾಖೆ ನೀಡಿದೆ. ದಿನವಿಡೀ ಮಕ್ಕಳೊಂದಿಗೆ ಇದ್ದು ಶೈಕ್ಷಣಿಕ ಉನ್ನತಿಗೆ ಶ್ರಮಿಸಲು ಇಲಾಖೆಯ ಯೋಜನೆಗಳು ಸಫಲವಾಗುತ್ತಿವೆ. ಉತ್ತಮ ಪರೀಕ್ಷಾ ಫಲಿತಾಂಶ ಮಾತ್ರವಲ್ಲ, ಅತ್ಯುತ್ತಮ ಸಾಂಸ್ಕೃತಿಕ, ನೈತಿಕ ಶಿಕ್ಷಣ ನೀಡುವಲ್ಲಿಯೂ ಶಾಲೆಗಳು ಮುಂದಾಗಿವೆ. ಸಮಾಜ ಸರ್ಕಾರ ಒಟ್ಟಾಗಿ ಮುನ್ನಡೆದಾಗ ಮಕ್ಕಳಿಗೆ ಒಳ್ಳೆಯ ಶಿಕ್ಷಣ ಸಾಧ್ಯ ಎಂದರು.

ಕ್ಷೇತ್ರ ಸಮನ್ವಯಾಧಿಕಾರಿ ಎಂ.ಎಸ್. ಗುಂಡಪಲ್ಲಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸಿ.ಜಿ. ಪಾಟೀಲ, ಮಾಧ್ಯಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಡಿ.ಡಿ. ಲಂಗೋಟಿ, ವಿವಿಧ ಶಿಕ್ಷಕರ ಸಂಘಟನೆಗಳ ಮುಖಂಡರಾದ ಎ.ಐ. ಬುಡ್ಡನವರ, ಎಸ್.ವಿ. ಬೂದಿಹಾಳ, ಅನಿತಾ ಕಿತ್ತೂರ, ಜಿ.ಎಂ. ಪಂಚಾಳ, ಎಸ್.ಕೆ. ದೊಡಮನಿ, ಎ.ವಿ. ಹನುಮಾಪುರ, ಸಂತೊಷ ದೊಡ್ಡಮನಿ, ಕುಂಕೂರ, ಶಿಕ್ಷಣ ಸಂಯೋಜನ ವಿ.ಟಿ. ಪಾಟೀಲ, ವಿ.ಬಿ. ಚಿಕ್ಕೇರಿ, ಮಹೇಶ ನಾಯಕ, ಶ್ರೀಕಾಂತ ಹುಲಮನಿ, ಶಿವಾನಂದ ಚಕ್ರಸಾಲಿ, ಸಂತೋಷ ವಡ್ಡರ ಮೊದಲಾದವರಿದ್ದರು.