ಧರ್ಮ, ಸಂಸ್ಕೃತಿ ಉಳಿಸಿರುವ ಮಠಗಳು

| Published : May 01 2024, 01:17 AM IST

ಸಾರಾಂಶ

ನಾಡಿನಲ್ಲಿರುವ ಮಠ-ಮಾನ್ಯಗಳಿಂದ ಜನರಿಗೆ ಧರ್ಮ, ಸಂಸ್ಕ್ರತಿ, ಸಂಸ್ಕಾರ ಸಿಗುತ್ತದೆ. ಒಂದು ವೇಳೆ ಸಮಾಜದಲ್ಲಿ ಮಠಗಳು ಇಲ್ಲದೇ ಹೋಗಿದ್ದರೆ ಜನರು ಮೃಗರಾಗುತ್ತಿದ್ದರು ಎಂದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕ್ರತ ಮಕ್ಕಳ ಸಾಹಿತಿ ಪ.ಗು. ಸಿದ್ದಾಪುರ ಹೇಳಿದರು.

ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ

ನಾಡಿನಲ್ಲಿರುವ ಮಠ-ಮಾನ್ಯಗಳಿಂದ ಜನರಿಗೆ ಧರ್ಮ, ಸಂಸ್ಕ್ರತಿ, ಸಂಸ್ಕಾರ ಸಿಗುತ್ತದೆ. ಒಂದು ವೇಳೆ ಸಮಾಜದಲ್ಲಿ ಮಠಗಳು ಇಲ್ಲದೇ ಹೋಗಿದ್ದರೆ ಜನರು ಮೃಗರಾಗುತ್ತಿದ್ದರು ಎಂದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕ್ರತ ಮಕ್ಕಳ ಸಾಹಿತಿ ಪ.ಗು. ಸಿದ್ದಾಪುರ ಹೇಳಿದರು.

ತಾಲೂಕಿನ ವಡವಡಗಿ ಗ್ರಾಮದ ನಂದಿ ಮಠದ ಗುರುವೀರಸಿದ್ದ ಶಿವಯೋಗಿಗಳ ೭೪ನೇ ಜಾತ್ರಾಮಹೋತ್ಸವ ಹಾಗೂ ಲಿಂ. ಮಲ್ಲಿಕಾರ್ಜುನ ಸ್ವಾಮೀಜಿ ಅವರ ದ್ವಿತೀಯ ಪುಣ್ಯಾರಾಧನೆಯಂಗವಾಗಿ ಸೋಮವಾರ ಸಂಜೆ ಹಮ್ಮಿಕೊಂಡಿದ್ದ ಶಿವಾನುಭವ ಚಿಂತನಗೋಷ್ಠಿ ಕಾರ್ಯಕ್ರದಲ್ಲಿ ಶ್ರೀಮಠದಿಂದ ರಾಜ್ಯಮಟ್ಟದ ನಂದಿಸಿರಿ ಪ್ರಶಸ್ತಿ ಸ್ವೀಕರಿಸಿದ ನಂತರ ಮಾತನಾಡಿದ ಅವರು, ನಾಡಿನಲ್ಲಿರುವ ಮಠಗಳು ಸರ್ವಜನಾಂಗದ ಶಾಂತಿ ತೋಟ, ಭಾವೈಕ್ಯತೆಯ ಸ್ಥಳಗಳಾಗಿವೆ. ಇಂತಹ ಮಠ-ಮಾನ್ಯಗಳು ನಾಡಿಗೆ ನೀಡಿದ ಕೊಡುಗೆ ಅಪಾರವಾಗಿದೆ ಎಂದರು.

೧೨ನೇ ಶತಮಾನದಲ್ಲಿ ಬಸವೇಶ್ವರರು ಶಿಕ್ಷಣವನ್ನು ಸಾರ್ವತ್ರಿಕಗೊಳಿಸುವ ಜೊತೆಗೆ ಸ್ತ್ರೀಯರಿಗೂ ಸಮಾನತೆ ಸ್ಥಾನ, ಕಾಯಕ-ದಾಸೋಹ, ಇಷ್ಟಲಿಂಗ ಪೂಜೆ ಸೇರಿದಂತೆ ಅನೇಕ ಸಾಮಾಜಿಕ-ಧಾರ್ಮಿಕ ಕ್ರಾಂತಿ ಬೀಜಗಳನ್ನು ಬಿತ್ತಿದ್ದಾರೆ. ಪಂಡಿತ ಪಾಮರರಿಗೆ ಮೀಸಲಾಗಿದ್ದ ಸಂಸ್ಕ್ರತವನ್ನು ಬದಿಗೆ ಸರಿಸಿ ಜನಸಾಮಾನ್ಯರಿಗೂ ಅರ್ಥವಾಗುವ ನಿಟ್ಟಿನಲ್ಲಿ ಬಸವಾದಿ ಶರಣರು ವಚನಗಳನ್ನು ಕನ್ನಡದಲ್ಲಿ ರಚಿಸಿದರು. ದೇವರಿಗೂ ಕನ್ನಡವನ್ನು ಬಸವಣ್ಣ ಕಲಿಸಿದವರು. ಸಹಕಾರ ಸಂಘದ ಕಲ್ಪನೆಯಾದ ಶಿವಸ್ವಯಂಭು ಎಂಬುವುದನ್ನು ಬಸವಣ್ಣ ನೀಡಿದ್ದಾನೆ. ಇಂತಹ ಮೇರು ಪುರುಷನನ್ನು ನಾಡಿನ ಸಾಂಸ್ಕ್ರತಿಕ ನಾಯಕ ಎಂದು ಕರೆದಿರುವುದು ಎಲ್ಲ ಶರಣರಿಗೆ ಗೌರವ ತಂದಿದೆ ಎಂದರು.

ಸಾನ್ನಿಧ್ಯ ವಹಿಸಿದ್ದ ಶಿರಹಟ್ಟಿಯ ಮಹಾರಾಜ ನಿರಂಜನ ಜಗದ್ಗುರು ಫಕೀರ ಸಿದ್ದರಾಮ ಸ್ವಾಮೀಜಿ ಮಾತನಾಡಿ, ಮಠಗಳು ಸಮಾಜಕ್ಕೆ ಸಾಕಷ್ಟು ಕೊಡುಗೆ ನೀಡಿವೆ. ಮಠಗಳೊಂದಿಗೆ ಸದ್ಭಕ್ತರು ನಿರಂತರವಾಗಿ ಸಂಪರ್ಕವಿಟ್ಟುಕೊಂಡು ತಮ್ಮ ಬದುಕನ್ನು ಸುಂದರಗೊಳಿಸಿಕೊಳ್ಳಬೇಕು. ಇಲ್ಲಿನ ಶ್ರೀಮಠದ ಪರಂಪರೆ ವಿಶಿಷ್ಟವಾಗಿದೆ. ಲಿಂ. ಮಲ್ಲಿಕಾರ್ಜುನ ಸ್ವಾಮೀಜಿ ಅವರು ಶ್ರೀಮಠದ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಪ್ರಸ್ತುತ ಪೀಠಾಧಿಪತಿಗಳು ಸಹ ಶ್ರೀಮಠದ ಶ್ರೇಯೋಭಿವೃದ್ಧಿಗೆ ಉತ್ತಮ ಕಾರ್ಯ ಮಾಡುತ್ತಿದ್ದಾರೆ. ಜಾತ್ರೆಯಂಗವಾಗಿ ವಿವಿಧ ಕಾರ್ಯಕ್ರಮಗಳನ್ನು ಆಯೋಜನೆ ಮಾಡುತ್ತಿರುವುದು ಶ್ಲಾಘನೀಯ ಎಂದರು.

ಅಧ್ಯಕ್ಷತೆ ವಹಿಸಿದ್ದ ಶ್ರೀಮಠದ ವೀರಸಿದ್ದ ಸ್ವಾಮೀಜಿ ಮಾತನಾಡಿ, ಮನುಷ್ಯನ ಜೀವನದಲ್ಲಿ ದಾನ-ಧರ್ಮ ಇರಬೇಕು. ಇದರಿಂದ ಜೀವನ ಪಾವನವಾಗುವದರಲ್ಲಿ ಸಂದೇಹವಿಲ್ಲ. ಸಮಾಜಕ್ಕೆ ಕೊಡುಗೆ ನೀಡಿದ ಮಹನೀಯರನ್ನು ಸಮಾಜ ಸದಾ ಸ್ಮರಿಸುತ್ತದೆ. ಪಾಲಕರು ತಮ್ಮ ಮಕ್ಕಳಿಗೆ ಉತ್ತಮ ವಿದ್ಯೆ, ಸಂಸ್ಕಾರ ನೀಡಿ ಉತ್ತಮ ಪ್ರಜೆಗಳಾಗುವಂತೆ ಮಾಡಬೇಕು. ಶ್ರೀಮಠದ ಶಕ್ತಿ ಅಪಾರವಾಗಿದೆ ಎಂದರು.

ಸಾನ್ನಿಧ್ಯ ವಹಿಸಿದ್ದ ಇಂಗಳೇಶ್ವರದ ಚನ್ನಬಸವ ಸ್ವಾಮೀಜಿ ಮಾತನಾಡಿದರು. ದೇವರಹಿಪ್ಪರಗಿ ಶಾಸಕ ರಾಜುಗೌಡ ಪಾಟೀಲ ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ವೇದಿಕೆಯಲ್ಲಿ ಚಡಚಣದ ಷಡಕ್ಷರ ಸ್ವಾಮೀಜಿ, ಸುರಪುರದ ಪ್ರಭುಲಿಂಗ ಸ್ವಾಮೀಜಿ, ಪಡಗಾನೂರಿನ ಕುಮಾರ ಹಿರೇಮಠ, ಗ್ರಾಪಂ ಮಾಜಿ ಅಧ್ಯಕ್ಷ ಬಸವರಾಜ ಡೆಂಗಿ, ಸಾಹಿತಿ ಸಿದ್ರಾಮ ಬಿರಾದಾರ ಇತರರು ಇದ್ದರು. ವೈ.ಎಸ್.ಗಂಗಶೆಟ್ಟಿ ಸ್ವಾಗತಿಸಿ,ನಿರೂಪಿಸಿದರು. ಇದೇ ಸಂದರ್ಭದಲ್ಲಿ ಕೃಷಿ ಕ್ಷೇತ್ರದ ಬಸವರಾಜ ಹಿಪ್ಪರಗಿ, ಸಾಹಿತ್ಯ ಕ್ಷೇತ್ರದ ಪ.ಗು.ಸಿದ್ದಾಪುರ, ಸಮಾಜ ಸೇವೆ ಕ್ಷೇತ್ರದ ವೀರಭದ್ರ ಕತ್ತಿ, ಶಿಕ್ಷಣ ಕ್ಷೇತ್ರದ ಶಿವಶರಣಪ್ಪ ಸಜ್ಜನ ಅವರಿಗೆ ಶ್ರೀಮಠದಿಂದ ರಾಜ್ಯಮಟ್ಟದ ನಂದಿಸಿರಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ನಂತರ ವಿವಿಧ ಕಲಾವಿದರಿಂದ ಸಾಂಸ್ಕ್ರತಿಕ ಕಾರ್ಯಕ್ರಮಗಳು ಜರುಗಿದವು.