ಸಾರಾಂಶ
ಕನ್ನಡಪ್ರಭ ವಾರ್ತೆ ಹಾಸನ ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷೀಯ ಚುನಾವಣೆಯಲ್ಲಿ ಹಣ ಹಾಗೂ ರಾಜಕೀಯ ಭಾರೀ ಪ್ರಭಾವ ಬೀರಿದ್ದು, ಆ ಕಾರಣದಿಂದಾಗಿ ನನ್ನ ಜತೆ ಇದ್ದ ಕೆಲವರು ಆಮಿಷಗಳಿಗೆ ಒಳಗಾದರು. ಅದರ ಪರಿಣಾಮ ಸ್ವಾಭಿಮಾನಿ ತಂಡದಿಂದ ಸ್ಪರ್ಧೆ ಮಾಡಿದ್ದ ನನಗೆ ಸೋಲಾಯಿತು. ಮುಂದಿನ ದಿನಗಳಲ್ಲಿ ನಾನು ಈ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷೀಯ ಚುನಾವಣೆಯ ಪರಾಜಿತ ಅಭ್ಯರ್ಥಿ ಶ್ರೀನಿವಾಸ್ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿ, ನಮ್ಮ ಎದುರಾಳಿ ಅಭ್ಯರ್ಥಿ ಕೃಷ್ಣೇಗೌಡರನ್ನೇ ಆಯ್ಕೆ ಮಾಡಬೇಕೆಂದು ಪಣತೊಟ್ಟು ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು, ಹಾಲಿ ಜೆಡಿಎಸ್ ಶಾಸಕರು ಹಾಗೂ ಮಾಜಿ ಸಚಿವರು ಮತ್ತು ಕಾಂಗ್ರೆಸ್ ಮುಖಂಡರಾದ ಮಂಜೇಗೌಡರ ಜೊತೆ ಸೇರಿ ಒಬ್ಬ ಬಡ ಉಪನ್ಯಾಸಕನ ವಿರುದ್ಧ ದೊಡ್ಡ ಮಟ್ಟದ ರಾಜಕಾರಣ ಮಾಡಿದರು. ಡಿಸೆಂಬರ್ ೩ರವರೆಗೂ ಅನೇಕರು ನಮ್ಮ ಜೊತೆ ಗುರುತಿಸಿಕೊಂಡು ಸಂಘಟನೆಗೆ ದುಡಿದರು. ಆದರೆ, ಚುನಾವಣೆ ಹಿಂದಿನ ದಿನ ರಾತ್ರಿಯಲ್ಲಿ ನಡೆದಂತ ವ್ಯವಹಾರಗಳು ಎಲ್ಲವನ್ನೂ ಬದಲಾಯಿಸಿತು ಎಂದರು. ಈ ಚುನಾವಣೆ ಇತಿಹಾಸ ಸೃಷ್ಟಿಸಿದೆ. ಆತ್ಮೀಯರು ಎನಿಸಿಕೊಂಡಿದ್ದ ನಿರ್ದೇಶಕರೇ ಮೋಸ ಮಾಡಿದರು. ರಾಜಕೀಯ ಮುಖಂಡರಾದ ಬಾಗೂರು ಮಂಜೇಗೌಡ, ಎಚ್.ಡಿ.ರೇವಣ್ಣ ಒಂದಾಗಿದ್ದರಿಂದ ನಾನು ಸೋತೆ. ಈ ನಡೆ ಭಾರಿ ಬೇಸರ ತರಿಸಿದೆ. ಯಾರೂ ಸಂಘದ ಹಿತದೃಷ್ಟಿಯಿಂದ ಚುನಾವಣೆಯನ್ನು ನೋಡಲಿಲ್ಲ. ಐಪಿಎಲ್ ಮಾದರಿಯಲ್ಲಿ ಈ ಚುನಾವಣೆ ನಡೆದಿದೆ. ಯಾರ್ಯಾರು, ಎಲ್ಲೆಲ್ಲಿ ಒಂದಾದರು ಗೊತ್ತಾಗಲೇ ಇಲ್ಲ. ಶಿವಸ್ವಾಮಿ ಮತ್ತು ನಾನು ಒಟ್ಟಾದಾಗ ಬೆಂಬಲಿಸಿದವರೇ ನಂತರ ನಮಗೆ ಮೋಸ ಮಾಡಿದರು. ಐದು ವರ್ಷಗಳ ಹಿಂದೆಯೂ ಇದೇ ರೀತಿ ರಾಜಕೀಯ ಮಾಡಿ ನನ್ನನ್ನು ಸೋಲಿಸಿದರು. ನಮ್ಮ ತಂಡ ಗೆಲ್ಲಬೇಕೆಂಬ ಆಸೆ ಎಲ್ಲರದ್ದಾಗಿತ್ತು. ರಾಜಕೀಯ ಮುಖಂಡರಾದ ಬಾಗೂರು ಮಂಜೇಗೌಡ ಹಾಗೂ ಎಚ್.ಡಿ.ರೇವಣ್ಣ ಒಂದಾಗಿದ್ದರಿಂದ ನಾನು ಸೋಲಬೇಕಾಯಿತು. ಹಾಗಾಗಿ ನಾನು ಇನ್ನು ಮುಂದೆ ಯಾವ ಚುನಾವಣೆಯಲ್ಲೂ ಭಾಗವಹಿಸುವುದಿಲ್ಲ. ಹಲವು ಆಮಿಷಗಳ ನಡುವೆಯೂ ನನಗೆ ೩೧ ಮತಗಳನ್ನು ನೀಡಿ ಸಹಕಾರ ಕೊಟ್ಟವರಿಗೆ ಧನ್ಯವಾದ ಎಂದು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಪರಿಷತ್ ನೂತನ ಸದಸ್ಯರಾದ ಟಿ. ರಾಜು, ಖಜಾಂಚಿ ಅಭ್ಯರ್ಥಿ ಮಧು, ಸಂಘದ ನಿರ್ದೇಶಕ ವಿಶ್ವನಾಥ್ ಮೊದಲಾದವರಿದ್ದರು.