ಆಧುನಿಕ ಜೀವನ ಶೈಲಿಯಿಂದ ನಮ್ಮ ಆರೋಗ್ಯದ ಮೇಲೆ ಗಂಭೀರ ದುಷ್ಪರಿಣಾಮ ಉಂಟಾಗುತ್ತಿದೆ. ನಾವು ನಮ್ಮ ಹಿರಿಯರ ನೈಸರ್ಗಿಕ ಆಹಾರ ಪದ್ಧತಿಗೆ ಹಿಂತಿರುಗಬೇಕು. ನಮ್ಮ ಆಹಾರವೇ ನಮ್ಮ ಔಷಧಿ ಎನ್ನುವುದನ್ನು ಮರೆಯಬಾರದು.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಕ್ರಿಯಾಶೀಲ ಕಾರ್ಯ ಚಟುವಟಿಕೆಗಳಲ್ಲಿ ತಮ್ಮನ್ನು ನಾವು ನಿತ್ಯ ತೊಡಗಿಸಿಕೊಳ್ಳುವ ಮೂಲಕ ತಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದು ರಾಜ್ಯ ಆರ್‌ಟಿಒ ಅಧಿಕಾರಿಗಳ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ್ ಅಭಿಪ್ರಾಯಪಟ್ಟರು.

ತಾಲೂಕಿನ ತೇಗನಹಳ್ಳಿ ಸರ್ಕಾರಿ ಪ್ರಾಥಮಿಕ ಪಾಠಶಾಲೆ ಆವರಣದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ವತಿಯಿಂದ ಪಟ್ಟಣದ ಮಾದೇಗೌಡ ಸ್ಮಾರಕ ಆಸ್ಪತ್ರೆ, ನ್ಯೂ ಅಪೂರ್ವ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮತ್ತು ಬೆಂಗಳೂರಿನ ಬೆಳಕು ಕಣ್ಣಿನ ಆಸ್ಪತ್ರೆ ಸಹಯೋಗದಲ್ಲಿ ಗ್ರಾಮೀಣ ಜನರಿಗೆ ಆಯೋಜಿಸಿದ್ದ ಉಚಿತ ಆರೋಗ್ಯ ಮತ್ತು ಕಣ್ಣಿನ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು.

ನಮ್ಮ ಆರೋಗ್ಯ ಚೆನ್ನಾಗಿದ್ದರೆ ನಾವು ಎಷ್ಟು ಬೇಕಾದರೂ ಹಣ ಸಂಪಾದಿಸಬಹುದು. ಹಣದಿಂದ ಆರೋಗ್ಯ ಸಂಪಾದನೆ ಸಾಧ್ಯವಿಲ್ಲ. ಜನ ಹಣ ಸಂಪಾದನೆಗಿಂತ ಮುಖ್ಯವಾಗಿ ಆರೋಗ್ಯ ಸಂಪಾದನೆಗೆ ಆದ್ಯತೆ ನೀಡಬೇಕು ಎಂದರು.

ಆಧುನಿಕ ಜೀವನ ಶೈಲಿಯಿಂದ ನಮ್ಮ ಆರೋಗ್ಯದ ಮೇಲೆ ಗಂಭೀರ ದುಷ್ಪರಿಣಾಮ ಉಂಟಾಗುತ್ತಿದೆ. ನಾವು ನಮ್ಮ ಹಿರಿಯರ ನೈಸರ್ಗಿಕ ಆಹಾರ ಪದ್ಧತಿಗೆ ಹಿಂತಿರುಗಬೇಕು. ನಮ್ಮ ಆಹಾರವೇ ನಮ್ಮ ಔಷಧಿ ಎನ್ನುವುದನ್ನು ಮರೆಯಬಾರದು ಎಂದರು.

ರಾಸಾಯನಿಕ ಗೊಬ್ಬರ ಬಳಕೆ, ಅತಿಯಾದ ಕೀಟ ನಾಶಕ ಮತ್ತು ಕಳೆ ನಾಶಕಗಳ ಬಳಕೆಯಿಂದ ಇಂದು ನಮ್ಮ ಆಹಾರವೂ ವಿಷಯುಕ್ತವಾಗುತ್ತಿದೆ. ಪ್ರತಿಯೊಬ್ಬ ವ್ಯಕ್ತಿಯ ಆರೋಗ್ಯದ ಮೇಲೆ ಇದರ ಪರಿಣಾಮವಾಗುತ್ತಿದೆ. ರೈತ ಸಮುದಾಯ ಸಾವಯವ ಕೃಷಿ ಪದ್ಧತಿಗೆ ಆದ್ಯತೆ ನೀಡಿ ಎಂದರು.

ಕಾರ್ಯಕ್ರಮದಲ್ಲಿ ಹಿರೀಕಳಲೆ ಗ್ರಾಪಂ ಸದಸ್ಯ ಟಿ.ಎನ್.ಮಹೇಶ್ ಅಧ್ಯಕ್ಷತೆ ವಹಿಸಿದ್ದರು. ಶ್ರೀಕ್ಷೇತ್ರ ಯೋಜನೆ ಜಿಲ್ಲಾ ನಿರ್ದೇಶಕ ಡಾ.ಎ.ಯೋಗೇಶ್, ಯೋಜನಾಧಿಕಾರಿ ಕೆ.ಪ್ರಸಾದ್, ವೈದ್ಯರಾದ ಡಾ.ಎಂ.ಬಿ.ಲೋಹಿತ್, ಡಾ.ಶಿಲ್ಪ, ಡಾ.ತನುಶ್ರೀ, ಡಾ.ಅನನ್ಯ, ಡಾ.ಅವಿನಾಶ್, ಡಾ.ಶಶಿಕಾಂತ್, ಗ್ರಾ.ಪಂ ಸದಸ್ಯೆ ರಾಜಮ್ಮ ರಾಮಕೃಷ್ಣ, ಆಶಾ, ಧರ್ಮಸ್ಥಳ ಸಂಸ್ಥೆ ಮೇಲ್ವಿಚಾರಕಿ ಗುಣಶ್ರೀ ಸೇರಿದಂತೆ ಹಲವರಿದ್ದರು.