ಕನ್ನಡಪ್ರಭ ವಾರ್ತೆ ಸಾಗರ

ಚಿಕ್ಕ ಊರಿನಲ್ಲಿರುವ ಒಗ್ಗಟ್ಟು ಮತ್ತು ಶ್ರದ್ಧೆ ಎಂತಹ ಅದ್ಬುತ ಕೆಲಸವನ್ನಾದರೂ ಮಾಡಬಹುದು ಎನ್ನುವುದಕ್ಕೆ ತುಂಬೆಯ ಊರು ನಿದರ್ಶನವಾಗಿದೆ ಎಂದು ರಾಮಚಂದ್ರಾಪುರಮಠದ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಹೇಳಿದರು.

ತುಂಬೆ ಬೆಂಕಟವಳ್ಳಿಯ ಶ್ರೀರಾಮೇಶ್ವರ ಸೇವಾ ಪ್ರತಿಷ್ಠಾನದ ಆಶ್ರಯದಲ್ಲಿ ನಿರ್ಮಾಣಗೊಂಡ ಶ್ರೀ ರಾಮೇಶ್ವರ ದೇವಸ್ಥಾನದ ನೂತನ ಶಿಲಾಮಯ ಗರ್ಭಗುಡಿ ಮತ್ತು ಸುತ್ತುಪೌಳಿ ಲೋಕಾರ್ಪಣೆ, ದೇವರ ಪ್ರತಿಷ್ಠೆ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ನಂತರ ನಡೆದ ಧರ್ಮಸಭೆಯಲ್ಲಿ ಅವರು ಆಶೀರ್ವಚನ ನೀಡಿದರು.

ಹಣ ಮಾತ್ರದಿಂದ ದೇವರನ್ನು ಇರಿಸಿಕೊಳ್ಳುವುದಕ್ಕೂ, ಒಲಿಸಿಕೊಳ್ಳುವುದಕ್ಕೂ ಸಾಧ್ಯವಿಲ್ಲ. ಭಕ್ತಿಯಿಂದ ಮಾತ್ರ ದೇವರ ಸಾನ್ನಿಧ್ಯವನ್ನು ಉಳಿಸಿಕೊಳ್ಳಬಹುದು ಎಂದ ಅವರು, ಕಾಯ ಚಿಕ್ಕದಿದ್ದರೂ ಕೇವಲ ೨ ಪಾದದಲ್ಲಿ ಭೂಮಿ, ಆಕಾಶ ಅಳೆದು ನಿಂತ ವಾಮನನ ಕತೆಯನ್ನು ಉದಾಹರಣೆ ನೀಡಿ, ಊರಿನಲ್ಲಿ ಮನೆ ಎಷ್ಟಿದೆ ಎನ್ನುವುದಕ್ಕಿಂತ ಇದ್ದ ಮನಗಳ ಒಮ್ಮನಸ್ಸು ಹೇಗಿದೆ ಎನ್ನುವುದು ಮುಖ್ಯವಾಗಲಿದೆ. ಹಾಗಾಗಿಯೇ ಇಲ್ಲಿ ದೇವಸ್ಥಾನವೊಂದು ಶಾಸ್ತ್ರೀಯವಾಗಿ ಹೇಗಿರಬೇಕೋ ಹಾಗೆ ಕಟ್ಟುವ ಮೂಲಕ ತಮ್ಮ ಕಾಯಕದ ಶ್ರದ್ಧೆಯನ್ನು ಮೆರೆದಿರುವುದು ಮಾತ್ರವಲ್ಲದೆ, ಅತ್ಯಂತ ಸುಂದರವಾಗಿ ದೇವಸ್ಥಾನವನ್ನು ಕಟ್ಟಿದ್ದಾರೆ. ಹೀಗೆ ಸುಂದರವಾಗಿರುವ , ಶಾಸ್ತ್ರೀಯವೂ ಆಗಿರುವ ಮತ್ತು ವಾಸ್ತು ಪ್ರಕಾರವಾಗಿರುವ ದೇವಸ್ಥಾನದಲ್ಲಿ ಊರ ಜನರ ಭಕ್ತಿಯ ಸಂಗಮವೂ ಆಗಿರುವುದು ಶ್ರೇಯಸ್ಸಿಗೆ ಪುಷ್ಠಿ ನೀಡಿದೆ ಎಂದು ಹೇಳಿದರು.

ಇದಕ್ಕೂ ಮುನ್ನ ಶ್ರೀರಾಮೇಶ್ವರ ದೇವರ ಜೀವ ಕುಂಭಾಭಿಷೇಕಪೂರ್ವಕ ಪ್ರತಿಷ್ಠೆಯನ್ನು ಶ್ರೀಗಳವರು ನೆರವೇರಿಸಿದರು. ಶ್ರೀರಾಮೇಶ್ವರ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಪ್ರಖ್ಯಾತ ಸುಬ್ಬರಾವ್ ತುಂಬೆ ದೇವಸ್ಥಾನ ನಿರ್ಮಾಣದ ಹಿನ್ನೆಲೆಯ ಕುರಿತು ಮಾತನಾಡಿದರು.


ಪ್ರಧಾನ ತಂತ್ರಿಗಳಾದ ವೇಮೂ ಸಮರ್ಥಭಟ್ ಮಂಕಳಲೆ, ಸಿಗಂದೂರು ಕ್ಷೇತ್ರದ ಪ್ರಧಾನ ಅರ್ಚಕ ಎಸ್.ಪಿ. ಶೇಷಗಿರಿ ಭಟ್, ವರದಹಳ್ಳಿ ಶ್ರೀದುರ್ಗಾಂಬಾ ದೇವಸ್ಥಾನದ ಪ್ರಧಾನ ಅರ್ಚಕ ವಿ. ಶ್ರೀಧರ ಭಟ್, ವರದಾಪುರ ಶ್ರೀಧರ ಸೇವಾ ಮಹಾಮಂಡಲದ ಅಧ್ಯಕ್ಷ ಎಂ.ಜಿ. ಕೃಷ್ಣಮೂರ್ತಿ ಮತ್ತಿತರರು ಇದ್ದರು. ಅರುಣ್ ಬೆಂಕಟವಳ್ಳಿ ನಿರೂಪಿಸಿದರು.