ಸಾರಾಂಶ
- ನಗರದ ಮಹಾಲಕ್ಷ್ಮೀ ಲೇಔಟ್ ವಾಸಿ, ವ್ಯಾಪಾರಿ ವಿ.ಶ್ರೀನಿವಾಸ ಅಲಿಯಾಸ್ ಶಿವಣ್ಣ ಬಂಧಿತ ಆರೋಪಿ
- ಆಂಧ್ರ ಪ್ರದೇಶದ ಕಂಪಮಲ್ಲಾ ಗ್ರಾಮದ ವಾಸಿ, ಬತ್ತದ ಬ್ರೋಕರ್ ಎಂ.ನರಸಯ್ಯ ವಂಚನೆಗೆ ಒಳಗಾದ ವ್ಯಕ್ತಿ- ಮೊದಲು 15 ಲೋಡ್ ಬತ್ತದ ಹಣಕ್ಕೆ ₹75 ಲಕ್ಷ ಕೊಟ್ಟು ನಂಬಿ ಗಿಟ್ಟಿಸಿದ್ದ ಆರೋಪಿ ಶಿವಣ್ಣ
- ರೈತ, ದಲ್ಲಾಳಿ, ವರ್ತಕರಿಗೆ ಕೋಟಿಗಟ್ಟಲೇ ಹಣ ಪಂಗನಾಮ, ವಿವಿಧ ಪೊಲೀಸ್ ಠಾಣೆಗಳಲ್ಲಿ ದೂರು ದಾಖಲು - - - ಕನ್ನಡಪ್ರಭ ವಾರ್ತೆ ದಾವಣಗೆರೆರೈತರು, ದಲ್ಲಾಳಿಗಳಿಂದ ಮೆಕ್ಕೇಜೋಳ ಹಾಗೂ ಬತ್ತ ಖರೀದಿಸಿ ರೈತರಿಗೆ ಕೋಟ್ಯಂತರ ರು. ವಂಚನೆ ಮಾಡಿದ್ದ ಪ್ರಕರಣದ ಆರೋಪಿಯನ್ನು ನಗರದ ಆರ್‌ಎಂಸಿ ಯಾರ್ಡ್ ಪೊಲೀಸರು ಬಂಧಿಸಿದ್ದಾರೆ.
ನಗರದ ಮಹಾಲಕ್ಷ್ಮೀ ಲೇಔಟ್ ವಾಸಿ, ವ್ಯಾಪಾರಿ ವಿ.ಶ್ರೀನಿವಾಸ ಅಲಿಯಾಸ್ ಶಿವಣ್ಣ (46) ಬಂಧಿತ ಆರೋಪಿ. ಆಂಧ್ರ ಪ್ರದೇಶದ ಕಂಪಮಲ್ಲಾ ಗ್ರಾಮದ ವಾಸಿ, ಬತ್ತದ ಬ್ರೋಕರ್ ಎಂ.ನರಸಯ್ಯ ತಮ್ಮ ಊರಿನ ಸುತ್ತಮುತ್ತಲಿನ ರೈತರಿಂದ ಬತ್ತ ಕೊಡಿಸುವ ಬ್ರೋಕರ್ ಕೆಲಸ ಮಾಡುತ್ತಿದ್ದರು. ಆಂಧ್ರದ ನರಸಯ್ಯ ಹಾಗೂ ಆರೋಪಿ ಶ್ರೀನಿವಾಸ ಮಧ್ಯೆ ಅಕ್ಟೋಬರ್ 2023ರಲ್ಲಿ ಬತ್ತದ ವ್ಯವಹಾರ ನಡೆದಿದೆ.ಆರೋಪಿ ಶ್ರೀನಿವಾಸ ಅಲಿಯಾಸ್ ಶಿವಣ್ಣ ಅವರು ಆಂಧ್ರದ ಬತ್ತದ ಬ್ರೋಕರ್ ನರಸಯ್ಯಗೆ ಕರೆ ಮಾಡಿ, ನಾನು ನಿಮ್ಮ ಲಾರಿ ಚಾಲಕನಿಂದ ನಿಮ್ಮ ಮೊಬೈಲ್ ನಂಬರ್ ಪಡೆದಿದ್ದೇನೆ. ನನ್ನದು ಬತ್ತದ ಮಿಲ್ ಇದೆ. ನೀವು ಬತ್ತ ಕಳಿಸಿದರೆ, ತಾವು ₹50 ಹೆಚ್ಚಿಗೆ ನೀಡುವುದಾಗಿ, ಬತ್ತ ಮಾರಾಟಕ್ಕೆತಮ್ಮ ಜಿಎಸ್‌ಟಿ ಇದೆ. ಬೇಕಾದರೆ ಕೊಡುವುದಾಗಿ ಪರಿಚಯ ಮಾಡಿಕೊಂಡಿದ್ದ.
2023ರ ಏ.28 ರಿಂದ 2023ರ ಮೇ 21ರ ಅವದಿಯಲ್ಲಿ 40 ಲೋಡ್ ಬತ್ತವನ್ನು ನರಸಯ್ಯ ಕಳಿಸಿದ್ದರು. ಅದರ ಮೊತ್ತವೇ ₹2,58,65,200 ಆಗಿದೆ. ಮೊದಮೊದಲು 15 ಲೋಡ್ ಬತ್ತದ ಹಣಕ್ಕೆ ಅದರ ಮೊತ್ತ ₹75 ಲಕ್ಷವನ್ನು ಆರೋಪಿ ಶ್ರೀನಿವಾಸ ಅಲಿಯಾಸ್ ಶಿವಣ್ಣ ಕೊಟ್ಟು, ನಂಬಿ ಹುಟ್ಟಿಸಿದ್ದನು.ಅದೇ ನಂಬಿಕೆಯಿಂದ ನರಸಯ್ಯ ಉಳಿದ 25 ಲೋಡ್ ಬತ್ತವನ್ನು ನೆರೆಹೊರೆಯ ರೈತರಿಂದ ಪಡೆದು, ದಾವಣಗೆರೆಯ ಶ್ರೀನಿವಾಸ ಅಲಿಯಾಸ್ ಶಿವಣ್ಣಗೆ ಕಳಿಸಿದ್ದರು. ಅನಂತರ 25 ಲೋಡ್ ಬತ್ತದ ಬಾಕಿ, ಉಳಿದ ₹1,83,65,20 ಗಳನ್ನು ಕೊಡಲು ಶ್ರೀನಿವಾಸ ಅಲಿಯಾಸ್ ಶಿವಣ್ಣ ಸಬೂಬು ಹೇಳಲಾರಂಭಿಸಿದ್ದನು. ಆಂಧ್ರದ ಬತ್ತದ ವ್ಯಾಪಾರಿ ನರಸಯ್ಯ ಕರೆ ಮಾಡಿದರೂ ಕರೆ ಸ್ವೀಕರಿಸದೇ ನಿರ್ಲಕ್ಷ್ಯ ಮಾಡಲಾರಂಭಿಸಿದ್ದನು. ಕಡೆಗೆ ಶ್ರೀನಿವಾಸನನ್ನು ಹುಡುಕಿಕೊಂಡು ಆಂಧ್ರದ ನರಸಯ್ಯ ದಾವಣಗೆರೆಗೆ ಬಂದಿದ್ದಾರೆ. ಆದರೆ ಶ್ರೀನಿವಾಸನ ವಿಳಾಸ, ಇತರೆ ಮಾಹಿತಿ ಎಲ್ಲಿಯೂ ಸಿಗಲಿಲ್ಲ.
ಮೋಸ ಮಾಡುವ ಉದ್ದೇಶದಿಂದಲೇ ಆರಂಭದಲ್ಲಿ ಸರಿಯಾಗಿ ಹಣ ಕೊಟ್ಟು, 25 ಲೋಡ್ ಬತ್ತ ತರಿಸಿಕೊಂಡು, ₹1,83,65,200 ಹಣ ನೀಡದೇ ಮೋಸ ಮಾಡಿರುವ ಶ್ರೀನಿವಾಸ ಅಲಿಯಾಸ್ ಶಿವಣ್ಣ ವಿರುದ್ಧ ಕ್ರಮ ಕೈಗೊಳ್ಳುವಂತೆ ಆರ್‌ಎಂಸಿ ಯಾರ್ಡ್ ಠಾಣೆಗೆ ನರಸಯ್ಯ ದೂರು ನೀಡಿದ್ದರು. ಜಿಲ್ಲಾ ಪೊಲೀಸ್ ಅಧೀಕ್ಷಕರು ಮುಂದಿನ ತನಿಖೆಗೆ ಪ್ರಕರಣವನ್ನು ಸಿಇಎನ್ ಪೊಲೀಸ್ ಠಣೆ ಡಿವೈಎಸ್‌ಪಿ ಅವರಿಗೆ ವರ್ಗಾವಣೆ ಮಾಡಿದ್ದರು.ದಾವಣಗೆರೆಯ ಆರೋಪಿ ಶ್ರೀನಿವಾಸ ಅಲಿಯಾಸ್ ಶಿವಣ್ಣನ ಪತ್ತೆಗಾಗಿ ಎಎಸ್‌ಪಿಗಳಾದ ವಿಜಯಕುಮಾರ ಎಂ. ಸಂತೋಷ, ಜಿ,ಮಂಜುನಾಥ, ಡಿವೈಎಸ್‌ಪಿ ಪದ್ಮಶ್ರೀ ಗುಂಜೀವರ್ ಮಾರ್ಗದರ್ಶನದಲ್ಲಿ ಪಿಎಸ್ಐ ರೂಪಾ ತೆಂಬದ್, ಸಿಬ್ಬಂದಿ ಸೋಮಶೇಖರಪ್ಪ, ಲೋಹಿತ್, ಮಲ್ಲಿಕಾರ್ಜುನ ಹಾದಿಮನಿ, ಗೋವಿಂದರಾಜ, ಸಣ್ಣ ಬುಡೇನ್ ವಲಿ ಅವರನ್ನು ಒಳಗೊಂಡ ತಂಡವು ನ.13ರಂದು ಆರೋಪಿ ಶ್ರೀನಿವಾಸ ಅಲಿಯಾಸ್ ಶಿವಣ್ಣನನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರಪಡಿಸಿತು. ಈಗ ಆರೋಪಿ ನ್ಯಾಯಾಂಗ ಬಂಧನದಲ್ಲಿದ್ದಾನೆ.
ಬಂಧಿತ ಶ್ರೀನಿವಾಸ ಅಲಿಯಾಸ್ ಶಿವಣ್ಣ ವಿರುದ್ಧ ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆ, ಆರ್‌ಎಂಸಿ ಯಾರ್ಡ್ ಠಾಣೆ, ಬಸವ ನಗರ ಠಾಣೆ, ಹದಡಿ ಠಾಣೆ ಹಾಗೂ ಆಂಧ್ರದ ತಿರುಪತಿ ಜಿಲ್ಲೆಯ ಸತ್ಯವೇಡು ಪೊಲೀಸ್ ಠಾಣೆಯಲ್ಲಿ 2021ರಿಂದ 2024 ಅವಧಿಯಲ್ಲಿ ಕಲಂ 406, 420 ಐಪಿಸಿನಡಿ ಪ್ರಕರಣಗಳು ದಾಖಲಾಗಿವೆ. ರಾಜ್ಯದ ರೈತರಲ್ಲಿ ಬತ್ತ ಪಡೆದು, ಹಣ ಕೊಡದೇ ವಂಚಿಸಿದ ಅನೇಕ ದೂರು ದಾಖಲಾದ ಮಾಹಿತಿ ಇದೆ. ಇದನ್ನು ಖಚಿತಗೊಳಿಸಿಕೊಳ್ಳುವ ಕೆಲಸ ಇಲಾಖೆ ಮಾಡುತ್ತಿದೆ. ವಂಚಕ ಶ್ರೀನಿವಾಸ ಅಲಿಯಾಸ್ ಶಿವಣ್ಣನನ್ನು ಬಂಧಿಸುವಲ್ಲಿ ಯಶಸ್ವಿಯಾದ ಪೊಲೀಸ್ ಅಧಿಕಾರಿ, ಸಿಬ್ಬಂದಿ ತಂಡದ ಕಾರ್ಯಕ್ಕೆ ಜಿಲ್ಲಾ ಎಸ್‌ಪಿ ಉಮಾ ಪ್ರಶಾಂತ ಶ್ಲಾಘಿಸಿ, ಪ್ರಶಂಸಾ ಪತ್ರ ನೀಡಿದ್ದಾರೆ.- - - (ಸಾಂದರ್ಭಿಕ ಚಿತ್ರ)