ಬಜೆಟ್‌ನಲ್ಲಿ ಸುರಂಗ ರಸ್ತೆ, ಸ್ಕೈಡೆಕ್‌ಗೆ ಹಣ?

| Published : Feb 13 2024, 01:45 AM IST / Updated: Feb 13 2024, 11:40 AM IST

ಸಾರಾಂಶ

ಪ್ರತಿ ವರ್ಷದಂತೆ ಈ ವರ್ಷವೂ ಬೆಂಗಳೂರಿನಲ್ಲಿ ಯೋಜನೆಗಳನ್ನು ಅನುಷ್ಠಾನಗೊಳಿಸಲು ರಾಜ್ಯ ಬಜೆಟ್‌ನಲ್ಲಿ ಅನುದಾನ ಮೀಸಲಿಡುವಂತೆ ಬಿಬಿಎಂಪಿಯಿಂದ ಪ್ರಸ್ತಾವನೆ ಸಲ್ಲಿಸಲಾಗಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಲಿರುವ ರಾಜ್ಯ ಬಜೆಟ್‌ನಲ್ಲಿ ಈ ಬಾರಿ ಬೆಂಗಳೂರಿಗೆ ಹಲವು ದೊಡ್ಡ ಪ್ರಮಾಣದ ಯೋಜನೆಗಳು ಘೋಷಣೆಯಾಗುವ ಸಾಧ್ಯತೆಗಳಿವೆ. 

ಅದಕ್ಕೆ ಪೂರಕವಾಗಿ ಬಿಬಿಎಂಪಿಯಿಂದ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆಯಾಗಿದ್ದು, ಪ್ರಮುಖವಾಗಿ ಸುರಂಗ ರಸ್ತೆ, ಸ್ಕೈಡೆಕ್‌ ವೀಕ್ಷಣಾ ಗೋಪುರ ನಿರ್ಮಾಣದಂತಹ ಹೊಸ ಯೋಜನೆಗಳನ್ನು ಬಜೆಟ್‌ನಲ್ಲಿ ಘೋಷಣೆಗೆ ಮನವಿ ಮಾಡಿಕೊಂಡಿದೆ.

ಪ್ರತಿ ವರ್ಷದಂತೆ ಈ ವರ್ಷವೂ ಬೆಂಗಳೂರಿನಲ್ಲಿ ಯೋಜನೆಗಳನ್ನು ಅನುಷ್ಠಾನಗೊಳಿಸಲು ರಾಜ್ಯ ಬಜೆಟ್‌ನಲ್ಲಿ ಅನುದಾನ ಮೀಸಲಿಡುವಂತೆ ಬಿಬಿಎಂಪಿಯಿಂದ ಪ್ರಸ್ತಾವನೆ ಸಲ್ಲಿಸಲಾಗಿದೆ. 

ಬಾಕಿ ಬಿಲ್‌ ಹಾಗೂ ಚಾಲ್ತಿ ಕಾಮಗಾರಿಗಳ ಬಿಲ್‌ ಪಾವತಿ ಸೇರಿದಂತೆ ಹೊಸ ಕಾಮಗಾರಿಗಳ ಅನುಷ್ಠಾನಕ್ಕಾಗಿ ₹8,050 ಕೋಟಿ ಅನುದಾನ ನೀಡುವಂತೆ ಪ್ರಸ್ತಾವನೆಯಲ್ಲಿ ಉಲ್ಲೇಖಿಸಲಾಗಿದೆ. 

ಬಿಬಿಎಂಪಿ ಕೋರಿರುವಷ್ಟು ಅನುದಾನ ನೀಡಿದರೆ ಯಾವೆಲ್ಲ ಯೋಜನೆಗಳನ್ನು ಅನುಷ್ಠಾನಗೊಳಿಸಬಹುದು ಎಂಬುದನ್ನೂ ಪ್ರಸ್ತಾವನೆಯಲ್ಲಿ ಉಲ್ಲೇಖಿಸಲಾಗಿದೆ. ಪ್ರ

ಮುಖವಾಗಿ ಸುರಂಗ ರಸ್ತೆ ನಿರ್ಮಾಣ, ಇಂದಿರಾ ಕ್ಯಾಂಟೀನ್‌ ನಿರ್ವಹಣೆ, ಘನತ್ಯಾಜ್ಯ ನಿರ್ವಹಣೆ ಸೇರಿದಂತೆ ಇನ್ನಿತರ ಯೋಜನೆಗಳ ಪಟ್ಟಿಯನ್ನು ಸಲ್ಲಿಸಲಾಗಿದೆ.

ಹೊಸ ಯೋಜನೆ, ನಿರ್ವಹಣೆಗೆ ₹5 ಸಾವಿರ ಕೋಟಿ: ಬಿಬಿಎಂಪಿ ಅಧಿಕಾರಿಗಳು ಲೆಕ್ಕ ಹಾಕಿರುವಂತೆ ₹3 ಸಾವಿರ ಕೋಟಿ ಬಾಕಿ ಬಿಲ್‌ ಹಾಗೂ ಚಾಲ್ತಿ ಕಾಮಗಾರಿಗಳ ಬಿಲ್‌ ಪಾವತಿಗೆ ಬಳಕೆಯಾಗಲಿದೆ. 

ಉಳಿದ ₹5 ಸಾವಿರ ಕೋಟಿಗಳು ಹೊಸ ಕಾಮಗಾರಿಗಳ ಅನುಷ್ಠಾನ ಹಾಗೂ ಈಗಾಗಲೇ ಚಾಲ್ತಿಯಿರುವ ಯೋಜನೆಗಳ ನಿರ್ವಹಣೆಗೆ ಬಳಕೆ ಮಾಡಲಾಗುತ್ತದೆ. 

ಅದರ ಪ್ರಕಾರ ಮೊದಲ ಹಂತದ ಸುರಂಗ ರಸ್ತೆ ನಿರ್ಮಾಣಕ್ಕಾಗಿ ₹1,500 ಕೋಟಿ, ಇಂದಿರಾ ಕ್ಯಾಂಟೀನ್‌ ನಿರ್ವಹಣೆಗೆ ₹200 ಕೋಟಿ, ಘನತ್ಯಾಜ್ಯ ನಿರ್ವಹಣೆಗೆ ₹600 ಕೋಟಿ, ರಾಜಕಾಲುವೆ ಅಭಿವೃದ್ಧಿಗೆ ₹200 ಕೋಟಿ, 75 ಜಂಕ್ಷನ್‌ಗಳ ಅಭಿವೃದ್ಧಿಗೆ ₹100 ಕೋಟಿ ಅನುದಾನ ಕೋರಲಾಗಿದೆ.

ಉಳಿದ ಅನುದಾನವನ್ನು ಸ್ಕೈಡೆಕ್‌ ವೀಕ್ಷಣಾ ಗೋಪುರ ನಿರ್ಮಾಣ, ಶಾಲಾ-ಕಾಲೇಜು ಅಭಿವೃದ್ಧಿ, ಬಿಬಿಎಂಪಿಯಿಂದ ಆಂಗ್ಲ ಮಾಧ್ಯಮ ಶಾಲೆ ಆರಂಭಕ್ಕೆ, ಮಡಿಕಲ್‌ ಕಾಲೇಜು ನಿರ್ಮಾಣ ಸೇರಿ ಇನ್ನಿತರ ಯೋಜನೆಗಳಿಗಾಗಿ ವ್ಯಯಿಸುವುದಾಗಿ ಕೇಳಲಾಗಿದೆ. 

ಆ ಪ್ರಸ್ತಾವನೆಯಲ್ಲಿ ಇರುವಂತೆ ನಿರ್ವಹಣಾ ಯೋಜನೆಗಳ ಜತೆಗೆ ರಾಜ್ಯ ಬಜೆಟ್‌ನಲ್ಲಿ ಸುರಂಗ ರಸ್ತೆ ನಿರ್ಮಾಣ, ಸ್ಕೈಡೆಕ್‌ ನಿರ್ಮಾಣದಂತಹ ಯೋಜನೆಗಳು ಘೋಷಣೆಯಾಗುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.