ಐದು ಗ್ಯಾರಂಟಿಗಳಿಗೆ ನೀಡುವ ಹಣ ವ್ಯರ್ಥವಲ್ಲ: ಶಾಸಕ ಗವಿಯಪ್ಪ

| Published : Mar 05 2024, 01:37 AM IST

ಸಾರಾಂಶ

ಐದು ಗ್ಯಾರಂಟಿಗಳಿಂದ ಮನೆ ಮನೆಗೆ ಸರ್ಕಾರದ ಯೊಜನೆಗಳನ್ನು ತಲುಪಿಸಿದೆ. 1,20 ಕೋಟಿ ಮಹಿಳೆಯರಿಗೆ ಗೃಹಲಕ್ಷ್ಮೀ ಯೋಜನೆ ತಲುಪಿದೆ.

ಹೊಸಪೇಟೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರ್ಕಾರದ ಐದು ಗ್ಯಾರಂಟಿಗಳಿಗೆ ಹಾಕುವ ಹಣ ಬೀದಿಗೆ ಹಾಕುವ ಹಣ ಅಲ್ಲ, ಜನರ ಹೊಟ್ಟೆಗೆ ಹಾಕುವ ಹಣವಾಗಿದೆ ಎಂದು ಶಾಸಕ ಎಚ್.ಆರ್‌. ಗವಿಯಪ್ಪ ತಿಳಿಸಿದರು.

ನಗರದ ಕೇಂದ್ರೀಯ ಬಸ್‌ ನಿಲ್ದಾಣದಲ್ಲಿ ಸರ್ಕಾರದ ವಿವಿಧ ಯೋಜನೆಗಳ ಮಾಹಿತಿಯ ವಸ್ತು ಪ್ರದರ್ಶನ ಮಳಿಗೆಗೆ ಸೋಮವಾರ ಚಾಲನೆ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ ನುಡಿದಂತೆ ನಡೆದಿದೆ, ಐದು ಗ್ಯಾರಂಟಿಗಳನ್ನು ಅನುಷ್ಠಾನ ಮಾಡಿದೆ ಎಂದರು.ಚುನಾವಣೆ ಮೊದಲೇ ಐದು ಗ್ಯಾರಂಟಿಗಳ ಕುರಿತು ರೂಪುರೇಷೆ ಸಿದ್ಧವಾಗಿತ್ತು. ಪಕ್ಷದ ನಾಯಕಿ ಪ್ರಿಯಾಂಕಾ ಗಾಂಧಿ ಜತೆಗೆ ರಾಜ್ಯದ ನಾಯಕರು ಚರ್ಚಿಸಿದ್ದರು. ಇದಕ್ಕೆ ರಾಹುಲ್‌ ಗಾಂಧಿ ಕೂಡ ಸಹಮತ ವ್ಯಕ್ತಪಡಿಸಿದ್ದರು. ರಾಹುಲ್‌ ಗಾಂಧಿ ಹೆಚ್ಚು ಶ್ರಮಜೀವಿಯಾಗಿದ್ದಾರೆ. ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೂ ಭಾರತ ಜೋಡೋ ಯಾತ್ರೆ ನಡೆಸಿದ್ದಾರೆ. ಕಾಲ್ನಡಿಗೆಯಲ್ಲೇ ದೇಶದಲ್ಲಿ ಇಷ್ಟು ದೂರ ಅವರಷ್ಟು ಯಾರೂ ನಡೆದಿಲ್ಲ. ಈಗ ಮತ್ತೆ ಭಾರತ ಜೋಡೋ ನ್ಯಾಯಯಾತ್ರೆ ಮೂಲಕ ವಾಹನಗಳನ್ನು ಬಳಸಿ ದೇಶದಲ್ಲಿ ತಿರುಗಾಡುತ್ತಿದ್ದಾರೆ. ಲೋಕಸಭೆಗೆ ಸಮಯ ಕಡಿಮೆ ಇದೆ. ಹಾಗಾಗಿ ಅವರು ಪಾದಯಾತ್ರೆ ಮಾಡುತ್ತಿಲ್ಲ. ವಾಹನ ಬಳಕೆ ಮಾಡುತ್ತಿದ್ದಾರೆ. ಎಲ್ಲರ ಬಗ್ಗೆಯೂ ಕಾಳಜಿ ಹೊಂದಿರುವ ನಾಯಕರಾಗಿರುವ ರಾಹುಲ್‌ ಗಾಂಧಿ ಅವರಿಗೆ ದೇಶದ ಜನರು ಒಮ್ಮೆ ಅವಕಾಶ ಮಾಡಿಕೊಡಬೇಕಿದೆ. ಅವರು ಪ್ರಧಾನಿಯಾದರೆ, ದೇಶವನ್ನು ಸಮರ್ಥವಾಗಿ ಮುನ್ನಡೆಸಬಲ್ಲರು. ಅವರು ಬುದ್ಧಿವಂತರು ಇದ್ದಾರೆ ಎಂದರು.

ತೆರಿಗೆ ಹಣ ನೇರ ಜನರಿಗೆ: ದೇಶದ ಯಾವ ರಾಜ್ಯದಲ್ಲೂ ಜನರ ತೆರಿಗೆ ಹಣ ನೇರ ಜನರ ಜೇಬಿಗೆ ಹೋಗುವಂತಹ ಯೋಜನೆ ರೂಪಿಸಲಾಗಿಲ್ಲ. ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯದ ಕಾಂಗ್ರೆಸ್‌ ಸರ್ಕಾರ ಇಂತಹ ಕಾರ್ಯ ಮಾಡಿದೆ. ಐದು ಗ್ಯಾರಂಟಿಗಳಿಂದ ಮನೆ ಮನೆಗೆ ಸರ್ಕಾರದ ಯೊಜನೆಗಳನ್ನು ತಲುಪಿಸಿದೆ. 1,20 ಕೋಟಿ ಮಹಿಳೆಯರಿಗೆ ಗೃಹಲಕ್ಷ್ಮೀ ಯೋಜನೆ ತಲುಪಿದೆ. ಇನ್ನೂ ಏಳು ಲಕ್ಷ ಮಹಿಳೆಯರು ಉಳಿದಿದ್ದಾರೆ. ಅವರಿಗೂ ಈ ಯೋಜನೆ ಶೀಘ್ರ ಸಿಗಲಿದೆ ಎಂದರು.

ವಿಜಯನಗರ ಜಿಲ್ಲೆಯಲ್ಲೂ ಗ್ಯಾರಂಟಿ ಯೋಜನೆ ಸಮಾವೇಶ ನಡೆಸಲಾಗುವುದು. ಸ್ಥಳೀಯ ನಗರಸಭೆಗೆ ಜಿಲ್ಲಾಧಿಕಾರಿ ಜತೆಗೂಡಿ ಶೀಘ್ರ ಭೇಟಿ ನೀಡಿ ಅಧಿಕಾರಿಗಳ ಸಭೆ ನಡೆಸುವೆ. ಈಗ ಹೊಸ ಪೌರಾಯುಕ್ತರು ಬಂದಿದ್ದಾರೆ. ಎಂಜಿನಿಯರ್‌ ಸೇರಿದಂತೆ ಕೆಲವು ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ಬದಲಿಸಲಾಗುವುದು. ನಗರಸಭೆ ಆಡಳಿತ ಸುಧಾರಣೆಗೆ ಎಲ್ಲ ಬಗೆಯ ಕ್ರಮ ವಹಿಸಲಾಗುವುದು. ನಗರಸಭೆಗೆ ಖಂಡಿತ ನಾನು ಹೋಗಿ; ಸಭೆ ನಡೆಸಿ ಸಮಸ್ಯೆ ಆಲಿಸಿ ಪರಿಹಾರ ಸೂಚಿಸುವೆ ಎಂದರು.

ವಿಜಯನಗರ ಕ್ಷೇತ್ರದಲ್ಲಿ ಶಾಸಕರ ಕೆಲಸಗಳು ಹಿಂದೆ ಬೀಳುತ್ತಿವೆ ಎಂಬ ಆರೋಪಗಳು ಕೂಡ ಇವೆ ಎಂದು ಕೇಳಲಾದ ಪ್ರಶ್ನೆಗೆ, ಹಾಗೇನಿಲ್ಲ, ಈಗಾಗಲೇ ₹40 ಕೋಟಿಯ ವಿವಿಧ ಅನುದಾನಗಳು ಬಂದಿವೆ. ಟೀಕೆಗಳನ್ನು ನಾನು ಮುಕ್ತವಾಗಿ ಸ್ವೀಕರಿಸುವೆ. ಬರಗಾಲ ಇದೆ. ಕುಡಿಯುವ ನೀರಿನ ಸಮಸ್ಯೆ ಕೂಡ ಪರಿಹರಿಸುವೆ. ಪ್ರತಿ, ಓಣಿ, ವಾರ್ಡ್‌ಗಳ ಅಭಿವೃದ್ಧಿಗೂ ಆದ್ಯತೆ ನೀಡಲಾಗುವುದು ಎಂದರು.

ಅನಂತಶಯನಗುಡಿ ರೈಲ್ವೆ ಗೇಟ್‌ ಮೇಲ್ಸೇತುವೆ ನಿರ್ಮಾಣಕ್ಕಾಗಿ ರಸ್ತೆ ಬದಿ ಮನೆಗಳ ಸಮೀಕ್ಷೆ ನಡೆಸಬೇಕಿದೆ. ನಗರಸಭೆ ಪೌರಾಯುಕ್ತರು ಸಮೀಕ್ಷೆ ನಡೆಸಿ ಸಹಾಯಕ ಆಯುಕ್ತರಿಗೆ ನೀಡಿದರೆ, ಮನೆಗಳನ್ನು ಕಳೆದುಕೊಳ್ಳುವ ಜನರಿಗೆ ಸೂಕ್ತ ಪರಿಹಾರ ಒದಗಿಸಿ ಸೇತುವೆ ನಿರ್ಮಾಣ ಮಾಡಬೇಕಿದೆ. ಹಾಗಾಗಿ ಮೇಲ್ಸೇತುವೆ ನಿರ್ಮಾಣ ಕಾಮಗಾರಿ ತಡವಾಗಿದೆ ಎಂದರು.

ಮುಖಂಡರಾದ ಗುಜ್ಜಲ ನಿಂಗಪ್ಪ, ಅಂಜಿನಪ್ಪ, ಜಿ. ಮಂಜುನಾಥ, ಗೌಡರ ರಾಮಣ್ಣ, ಕೆ. ಬಡಾವಲಿ, ಕೆ. ರವಿಕುಮಾರ, ಸೋಮಶೇಖರ ಬಣ್ಣದಮನೆ, ಯೋಗಲಕ್ಷ್ಮಿ, ನಗರಸಭೆ ಸದಸ್ಯರಾದ ಮುನ್ನಿ ಕಾಸಿಂ, ಕೆ. ಮಹೇಶ್‌ ಕುಮಾರ, ಸಾರಿಗೆ ಇಲಾಖೆಯ ವಿಭಾಗಿಯ ನಿಯಂತ್ರಣಾಧಿಕಾರಿ ಜಗದೀಶ್‌ ವಿ.ಎಸ್‌., ವಾರ್ತಾಧಿಕಾರಿ ಗವಿಸಿದ್ದಪ್ಪ ಹೊಸಮನಿ ಮತ್ತಿತರರಿದ್ದರು.