ಸಾರಾಂಶ
ಹರಿಹರ: ಸಾಲದ ವಿವಾದಕ್ಕೆ ಸಂಬಂಧಿಸಿದಂತೆ ನಗರಸಭೆ ಸದಸ್ಯೆ ನಿಂಬಕ್ಕ ಚಂದಾಪುರ ಮತ್ತವರ ಕುಟುಂಬ ಸದಸ್ಯರ ವಿರುದ್ಧ ಜಾತಿ ನಿಂದನೆ, ಹಲ್ಲೆ ಮಾಡಿದ್ದಾರೆಂದು ಆರೋಪಿಸಿ ರಾಣೆಬೆನ್ನೂರು ತಾಲೂಕು, ಹೀಲದಹಳ್ಳಿಯ ಸೋಮಪ್ಪ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಸೋಮವಾರ ಎಫ್‌ಐಆರ್ ದಾಖಲಾಗಿದೆ.
೮ ವರ್ಷಗಳ ಹಿಂದೆ ನಿಂಬಕ್ಕ ಚಂದಾಪುರ ಅವರಿಂದ ಶೇ.೫ರ ಮಾಸಿಕ ಬಡ್ಡಿ ದರದಂತೆ ₹೫೦ ಸಾವಿರ ಸಾಲ ಪಡೆದುಕೊಳ್ಳುವಾಗ ತಮ್ಮಿಂದ 2 ಖಾಲಿ ಚೆಕ್‌ಗಳ ಪಡೆದುಕೊಳ್ಳಲಾಗಿತ್ತು. ಸಕಾಲಕ್ಕೆ ಸಾಲ ಮರುಪಾವತಿಸದ ಕಾರಣ ತಮ್ಮ ವಿರುದ್ಧ ಚೆಕ್ ಬೌನ್ಸ್ ಪ್ರಕರಣ ದಾಖಲಿಸಿದಾಗ ಅವರ ಹಣ ವಾಪಸ್ ನೀಡಿ ಪ್ರಕರಣ ಮುಕ್ತಾಯ ಮಾಡಿಕೊಳ್ಳಲಾಗಿತ್ತು.ಆದರೂ ನಿಂಬಕ್ಕ ತಮ್ಮ ಬಳಿ ಇದ್ದ ಮತ್ತೊಂದು ಚೆಕ್ ಬಳಸಿ ₹೯ ಲಕ್ಷದ ಚೆಕ್ ಬೌನ್ಸ್ ಕೇಸ್ ದಾಖಲಿಸಿದ್ದು, ಇದರ ವಾರಂಟ್ ಬಂದಿತ್ತು. ಈ ಬಗ್ಗೆ ಕೇಳಲು ಹೋದಾಗ, ನಿಂಬಕ್ಕ, ಅವರ ಪತಿ ನಿಂಗಪ್ಪ, ಮಗ ವಾಸು ಚಂದಾಪುರ ಜಾತಿನಿಂದನೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿದರು. ಘಟನೆಯಿಂದ ಮನನೊಂದು ವಿಷ ಸೇವಿಸಿದ್ದ ತಮ್ಮನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ ಎಂದು ಸೋಮಪ್ಪ ಪೊಲೀಸರಿಗೆ ನೀಡಿರುವ ಹೇಳಿಕೆಯಲ್ಲಿ ವಿವರಿಸಿದ್ದಾರೆ.
ಪ್ರತಿ ದೂರು ದಾಖಲು:ತಮ್ಮಿಂದ ₹೮.೫ ಲಕ್ಷ ಸಾಲ ಪಡೆದಿದ್ದ ಸೋಮಪ್ಪ ಕೇವಲ ₹೫೦ ಸಾವಿರ ಮಾತ್ರ ವಾಪಸ್ ನೀಡಿದ್ದಾರೆ. ಉಳಿದ ₹೮ ಲಕ್ಷಗಳಿಗೆ ನೀಡಿದ ಚೆಕ್ ಬೌನ್ಸ್ ಆಗಿದೆ. ೨೦೧೮ರಿಂದಲೇ ಈ ಬಗ್ಗೆ ನ್ಯಾಯಾಲಯದಲ್ಲಿ ಪ್ರಕರಣ ವಿಚಾರಣೆ ನಡೆಯುತ್ತಿದೆ. ನ್ಯಾಯಾಲಯದ ವಾರಂಟ್ ಬಂದ ಕಾರಣ, ಸೋಮಪ್ಪ ತಮ್ಮ ಕುಟುಂಬಸ್ಥರೊಂದಿಗೆ ತಮ್ಮ ಮನೆಗೆ ಬಂದು ಹಲ್ಲೆ ನಡೆಸಿ, ನಿಮ್ಮ ಮೇಲೆ ಅಟ್ರಾಸಿಟಿ ಕೇಸ್ ಹಾಕುತ್ತೇವೆ ಎಂದು ಬೆದರಿಸಿದ್ದಾರೆ. ತಮ್ಮ ತಲೆ ಕೂದಲು, ಸೀರೆ ಎಳೆದಾಡಿ ಮಾನಹಾನಿ ಮಾಡಿದ್ದಾರೆ. ಜಗಳ ಬಿಡಿಸಲು ಬಂದ ತಮ್ಮ ಗಂಡನ ಕುತ್ತಿಗೆಗೆ ಬಟ್ಟೆ ಸುತ್ತಿ ಕೊಲೆ ಮಾಡಲೂ ಯತ್ನಿಸಿದ್ದಾರೆ ಎಂದು ನಿಂಬಕ್ಕ ಚಂದಾಪುರ ಅವರು ಪ್ರತಿ ದೂರು ದಾಖಲಿಸಿದ್ದು, ನಾಲ್ವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
- - -(ಸಾಂದರ್ಭಿಕ ಚಿತ್ರ)