ಅನುಮತಿ ಇಲ್ಲದೇ ಹಣ ವರ್ಗಾವಣೆ

| Published : May 06 2024, 12:32 AM IST

ಸಾರಾಂಶ

ನಗರದ ಎಪಿಎಂಸಿ ರಿಂಗ್ ರಸ್ತೆಯ ಹಿಂದಿನ ಪ್ರಧಾನ ವ್ಯವಸ್ಥಾಪಕ ರವೀಶ ಅಚ್ಯುತ ಹೆಗಡೆ, ರಾಮಕೃಷ್ಣ ಶ್ರೀಪಾದ ಹೆಗಡೆ ಕಡವೆ, ಅನಿಲಕುಮಾರ ಸಿದ್ದಪ್ಪ ಮುಷ್ಟಗಿ ಹಾಗೂ ಗಿರೀಶ ಮಂಜು ಪೂಜಾರಿ ವಿರುದ್ಧ ಪ್ರಕರಣ ದಾಖಲಾಗಿದೆ.

ಶಿರಸಿ: ಟಿಎಸ್ಎಸ್ ಹಿಂದಿನ ಪ್ರಧಾನ ವ್ಯವಸ್ಥಾಪಕ ಸಂಘದ ಆಡಳಿತ ಮಂಡಳಿಯ ಅನುಮತಿ ಪಡೆಯದೇ, ಕ್ರಯ ಕರಾರು ಮಾಡಿಕೊಂಡು ಅದೇ ದಿನವೇ ಸಂಘದಿಂದ ಹಣ ವರ್ಗಾವಣೆ ಮಾಡಿಕೊಂಡಿರುವ ಕುರಿತು ಹೊಸ ಮಾರುಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಗರದ ಎಪಿಎಂಸಿ ರಿಂಗ್ ರಸ್ತೆಯ ಹಿಂದಿನ ಪ್ರಧಾನ ವ್ಯವಸ್ಥಾಪಕ ರವೀಶ ಅಚ್ಯುತ ಹೆಗಡೆ, ರಾಮಕೃಷ್ಣ ಶ್ರೀಪಾದ ಹೆಗಡೆ ಕಡವೆ, ಅನಿಲಕುಮಾರ ಸಿದ್ದಪ್ಪ ಮುಷ್ಟಗಿ ಹಾಗೂ ಗಿರೀಶ ಮಂಜು ಪೂಜಾರಿ ವಿರುದ್ಧ ಪ್ರಕರಣ ದಾಖಲಾಗಿದೆ.

ಈ ಕುರಿತಂತೆ ಟಿಎಸ್ಎಸ್ ಸಂಸ್ಥೆಯ ಪ್ರಭಾರಿ ಪ್ರಧಾನ ವ್ಯವಸ್ಥಾಪಕ ವಿಜಯಾನಂದ ಸುಬ್ರಹ್ಮಣ್ಯ ಭಟ್ಟ ನೀಡಿದ ದೂರಿಣಲ್ಲಿ, ಶಿರಸಿ ತಾಲೂಕು ಶಿರಸಿ ಗ್ರಾಮದ ಸರ್ವೇ ನಂ.: 58 ಅ4, ಕ್ಷೇತ್ರ 0-19-10.50 ಖುಲ್ಲಾ ಜಾಗವನ್ನು 2020ರ ಸೆ. 23ರಂದು ಇಮ್ಮಿಯಾಜ್ ಸುಲೇಮಾನ್ ಸಾಬ ತಲಖಣಿ ಎಂಬವರಿಂದ ಮೊಹಮ್ಮದ ಅಕಬರ ಎ.ಎಸ್. ಅಹಮ್ಮದ ಶೇಖ ಎಂಬವರು ₹14.50 ಲಕ್ಷಕ್ಕೆ ಖರೀದಿಸಿದ್ದಾರೆ. ಅದೇ ಆಸ್ತಿಯನ್ನು 2022ರ ಸೆ. 2ರಂದು ಗಿರೀಶ ಮಂಜು ಪೂಜಾರಿ ಎಂಬವರು ಮೊಹಮ್ಮದ ಅಕಬರ ಎ.ಎಸ್. ಅಹಮ್ಮದ ಶೇಖ ಅವರಿಂದ ₹6 ಕೋಟಿಗೆ ಖರೀದಿಸಿದ್ದು, ಆನಂತರ ಕೇವಲ 14 ದಿನಗಳಲ್ಲಿ (2022ರ ಸೆ. 16ರಂದು) ಆ ಆಸ್ತಿಯನ್ನು ಸಂಘದ ಹಿಂದಿನ ಪ್ರಧಾನ ವ್ಯವಸ್ಥಾಪಕ ರವೀಶ ಅಚ್ಯುತ ಹೆಗಡೆ ಸಂಘದ ಆಡಳಿತ ಮಂಡಳಿಯ ಯಾವುದೇ ಅನುಮತಿ ಪಡೆಯದೇ, ಕ್ರಯ ಕರಾರು ಮಾಡಿಕೊಂಡು ಅದೇ ದಿನವೇ ಸಂಘದಿಂದ ₹11.88 ಕೋಟಿ (ಬ್ಯಾಂಕ್ ಆಫ್‌ ಬರೋಡಾ ಚೆಕ್ ನಂ.: 08201) ಮೊತ್ತವನ್ನು ಗಿರೀಶ ಮಂಜು ಪೂಜಾರಿಗೆ ಸಂದಾಯ ಮಾಡಿದ್ದಾರೆ. ಅದೇ ರೀತಿ ಕ್ರಯ ಮೊತ್ತದ ಶೇ‌. 1ರಷ್ಟು ಹಣವಾದ ₹12 ಲಕ್ಷವನ್ನು ಟಿಡಿಎಸ್ ಮಾಡಿದ್ದಾರೆ. ಆ ಆಸ್ತಿಗೆ ಒಟ್ಟೂ ₹12 ಕೋಟಿಗಳನ್ನು ಸಂಘದಿಂದ ಪಾವತಿ ಮಾಡಿದ್ದಾರೆ ಎಂದು ವಿವರಿಸಿದ್ದಾರೆ.

ಇದಕ್ಕೆ ಸಂಘದ ಹಿಂದಿನ ಕಾರ್ಯಾಧ್ಯಕ್ಷ ರಾಮಕೃಷ್ಣ ಹೆಗಡೆ ಸಂಘದ ಆಡಳಿತ ಮಂಡಳಿಯಿಂದ ಈ ಕ್ರಯದ ವ್ಯವಹಾರಕ್ಕೆ ಅನುಮತಿ ಕೊಡಿಸುವ ಭರವಸೆ ಕೊಟ್ಟಿರುವುದು ಕಂಡುಬಂದಿದೆ. ಆನಂತರ 2022ರ ನ. 29ರಂದು ಸಂಘದ ಆಡಳಿತ ಮಂಡಳಿಯ ಸಭೆಯಲ್ಲಿ ಠರಾವು ಸಂಖ್ಯೆ: 23ರಂತೆ ಠರಾವು ಮಾಡಿ ಇದನ್ನು ಅನುಮೋದಿಸಿದ್ದಾರೆ. 2023ರ ಮೇ 16ರಂದು ಆಸ್ತಿಯ ಕುರಿತು ಸಂಘದ ಕ್ರಯ ದಸ್ತಾವೇಜು ಆಗಿದೆ. ಆರೋಪಿತರಾದ ರವೀಶ ಅಚ್ಯುತ ಹೆಗಡೆ, ರಾಮಕೃಷ್ಣ ಶ್ರೀಪಾದ ಹೆಗಡೆ ಕಡವೆ, ಅನಿಲಕುಮಾರ ಸಿದ್ದಪ್ಪ ಮುಷ್ಟಗಿ ಸಂಘದಿಂದ ದೊಡ್ಡ ಪ್ರಮಾಣದ ಹಣವನ್ನು ಲೂಟಿ ಮಾಡಲು ಸಂಚು ನಡೆಸಿದ್ದು ಸ್ಪಷ್ಟವಾಗಿ ಗೋಚರಿಸುತ್ತದೆ. ಸಂಘವು ಆಸ್ತಿ ಖರೀದಿಸಿದ ಗಿರೀಶ ಮಂಜು ಪೂಜಾರಿಯು ಅನಿಲಕುಮಾರ ಮುಷ್ಟಗಿ ಸಹಾಯಕನಾಗಿ ಕೆಲಸ ಮಾಡಿಕೊಂಡಿದ್ದು 2022ರ ಸೆ. 2ರಂದು ₹6 ಕೋಟಿಗೆ ಆಸ್ತಿ ಖರೀದಿಸಲು ಆರ್ಥಿಕವಾಗಿ ಚೈತನ್ಯ ಹೊಂದಿದವನಲ್ಲ. ಅವರಿಗೆ ರವೀಶ ಹೆಗಡೆ, ರಾಮಕೃಷ್ಣ ಹೆಗಡೆ ಸೇರಿ ಅನಿಲಕುಮಾರ ಮುಷ್ಟಗಿ ಖಾತೆಗೆ ಖರ್ಚು ಹಾಕಿ ನಂತರ ಗಿರೀಶ ಮಂಜು ಪೂಜಾರಿ ಖಾತೆಗೆ ವರ್ಗಾಯಿಸಿದ್ದಾರೆ. ಅನಂತರ ಇದೇ ಹಣದಿಂದ ಗಿರೀಶ ಪೂಜಾರಿ ಮೊಹಮ್ಮದ ಅಕಬರ ಎ.ಎಸ್. ಇವರಿಗೆ ಬೇರೆ ಬೇರೆ ದಿನಾಂಕದಂದು ಹಣ ಪಾವತಿ ಮಾಡಿ, 2022ರ ಸೆ. 2ರಂದು ನೋಂದಾಯಿತ ಕ್ರಯ ದಸ್ತಾವೇಜು ಮಾಡಿಸಿದ್ದಾರೆ. ಕೇವಲ 14 ದಿನಗಳಲ್ಲಿ ₹12 ಕೋಟಿಗೆ ಖರೀದಿಸಿ ನಾಲ್ವರು ಆರೋಪಿತರು ಅಧಿಕಾರ ದುರುಪಯೋಗ, ಮೋಸ ಸಂಚಿನಿಂದಾಗಿ ನಮ್ಮ ಸಂಘಕ್ಕೆ ಕೇವಲ ₹2 ಕೋಟಿ ಬೆಲೆಯ ಆಸ್ತಿಯನ್ನು ₹12 ಕೋಟಿಗೆ ಖರೀದಿಸಿ ಸಂಘಕ್ಕೆ ಸುಮಾರು ₹10 ಕೋಟಿಗಳಷ್ಟು ವಂಚನೆ ಮಾಡಿದ್ದಾರೆ ಎಂದು ದೂರಿದ್ದಾರೆ.

ಸಂಘದಿಂದ ಗಿರೀಶ ಮಂಜು ಪೂಜಾರಿಗೆ ಸಂಘದಿಂದ ಆದಾಯ ಕರ ಮುರಿತಾಯ ಮಾಡಿ ₹11.88 ಕೋಟಿಗಳನ್ನು ಪಾವತಿ ಮಾಡಲಾದ ಹಣದಲ್ಲಿ, ಅದೇ ದಿನ ಅನಿಲ ಮುಷ್ಟಗಿ ಖಾತೆಗೆ ₹11.42 ಕೋಟಿ ವರ್ಗಾಯಿಸಿರುತ್ತಾರೆ ಮತ್ತು ಅನಿಲಕುಮಾರ ಮುಷ್ಟಗಿ ಅದರಲ್ಲಿನ ಹಣದಿಂದ ₹10 ಲಕ್ಷಗಳನ್ನು ಗೋಪಾಲಕೃಷ್ಣ ಸುಬ್ರಾಯ ಭಟ್ಟ, ಪರಮೇಶ್ವರ ಮಂಜುನಾಥ ಹೆಗಡೆ, ಶಿವರಾಮ ಕೃಷ್ಣ ಹೆಗಡೆ ಹಾಗೂ ರವೀಶ ಅಚ್ಯುತ ಹೆಗಡೆ ಜಂಟಿ ಖಾತೆಗೆ ವರ್ಗಾಯಿಸಿ, ಸಂಘಕ್ಕೆ ಮೋಸ ಮಾಡಿದ್ದಾರೆ. ನಾಲ್ವರು ಆರೋಪಿತರ ಮೇಲೆ ಕ್ರಿಮಿನಲ್‌ ಪ್ರಕರಣ ದಾಖಲಿಸಿಕೊಂಡು ಆರೋಪಿಗಳಿಗೆ ಸೂಕ್ತ ಶಿಕ್ಷೆ ನೀಡುವಂತೆ ವಿಜಯಾನಂದ ಸುಬ್ರಹ್ಮಣ್ಯ ಭಟ್ಟ ದೂರಿದ್ದಾರೆ.