ಸಾರಾಂಶ
ಹಾವೇರಿ: ಚುನಾವಣಾ ವೆಚ್ಚಗಳ ಮೇಲೆ ತೀವ್ರತರ ನಿಗಾವಹಿಸಬೇಕು. ಪ್ರತಿ ರಾಜಕೀಯ ಚಟುವಟಿಕೆಗಳು, ಚುನಾವಣಾ ಸಭೆ-ಸಮಾರಂಭ, ರ‍್ಯಾಲಿಗಳು ಹಾಗೂ ಸಂಶಯಾಸ್ಪದ ಬ್ಯಾಂಕ್ ವಹಿವಾಟು ಹಾಗೂ ವ್ಯಾಲೆಟ್ ಮೂಲಕ ಹಣ ವರ್ಗಾವಣೆಯ ಚಟುವಟಿಕೆ ಮೇಲೆ ನಿಗಾ ವಹಿಸಿ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ರಘುನಂದನ್ ಮೂರ್ತಿ ಸೂಚನೆ ನೀಡಿದರು.
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಲೋಕಸಭಾ ಚುನಾವಣೆಯ ಗದಗ ಹಾಗೂ ಹಾವೇರಿ ಜಿಲ್ಲೆಯಲ್ಲಿ ನೇಮಕಗೊಂಡಿರುವ ವಿಧಾನಸಭಾ ಕ್ಷೇತ್ರವಾರು ವೆಚ್ಚ ನಿಗಾ ತಂಡಗಳ ಮುಖ್ಯಸ್ಥರು, ಸದಸ್ಯರು ಹಾಗೂ ಸಹಾಯಕ ವೆಚ್ಚ ವೀಕ್ಷಕರ ತಂಡದ ಮುಖ್ಯಸ್ಥರು ಹಾಗೂ ಸದಸ್ಯರಿಗೆ ಆಯೋಜಿಸಲಾದ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಾದರಿ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳ ಮೇಲೆ ನಿಗಾವಹಿಸುವುದರ ಜೊತೆಗೆ ರಾಜಕೀಯ ಪಕ್ಷ ಹಾಗೂ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳ ದೈನಂದಿನ ಚುನಾವಣಾ ವೆಚ್ಚಗಳ ಮೇಲೆ ನಿಗಾ ವಹಿಸಬೇಕು. ಅಭ್ಯರ್ಥಿಗಳು ನಡೆಸುವ ಸಭೆ-ಸಮಾರಂಭ, ಸಮಾವೇಶ, ರ‍್ಯಾಲಿಗಳ ಮೇಲೆ ಗಮನ ಹರಿಸಬೇಕು. ಪ್ರತಿ ಚಟುವಟಿಕೆಗಳನ್ನು ವಿಡಿಯೋ ಚಿತ್ರೀಕರಣದ ಮೂಲಕ ಸಾಕ್ಷ್ಯಗಳನ್ನು ಕ್ರೋಢೀಕರಿಸಿ ವೆಚ್ಚದ ಮಾಹಿತಿಯನ್ನು ಸಲ್ಲಿಸಬೇಕು ಎಂದರು.
ಸುವಿಧಾ ಆ್ಯಪ್‌ನಲ್ಲಿ ಚುನಾವಣಾ ಸಭೆ-ಸಮಾರಂಭ, ರ‍್ಯಾಲಿಗಳ ಅನುಮತಿಗೆ ಅರ್ಜಿ ಸಲ್ಲಿಸಲಾಗುತ್ತದೆ. ವೆಚ್ಚ ನಿಗಾ ತಂಡದ ಮುಖ್ಯಸ್ಥರು ಆಯಾ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿಗಳ ನಿರಂತರ ಸಂಪರ್ಕ ಹಾಗೂ ಸಮನ್ವತೆಯನ್ನು ಹೊಂದಬೇಕು. ಕೇವಲ ಅನುಮತಿ ಪಡೆದ ಸಭೆ-ಸಮಾರಂಭಗಳಲ್ಲದೆ ಅನುಮತಿ ಪಡೆಯದೇ ಇರುವ ಸಮಾರಂಭಗಳ ವಿಡಿಯೋ ಚಿತ್ರೀಕರಣ ಮಾಡಬೇಕು ಹಾಗೂ ಹುಟ್ಟಿದ ಹಬ್ಬದ ಸಮಾರಂಭ, ಇತರ ಖಾಸಗಿ ಸಮಾರಂಭಗಳಲ್ಲಿ ರಾಜಕೀಯ ಚಟುವಟಿಕೆಗಳ ಕುರಿತಂತೆ ನಿಗಾ ವಹಿಸಬೇಕು ಎಂದು ಸೂಚನೆ ನೀಡಿದರು.
ಸ್ಟಾರ್ ಕ್ಯಾಂಪೇನರ್ ವೆಚ್ಚ: ಚುನಾವಣಾ ಪ್ರಚಾರಕ್ಕಾಗಿ ಆಗಮಿಸುವ ಸ್ಟಾರ್ ಕ್ಯಾಂಪೆನೇರ್ ಬಳಸುವ ಹೆಲಿಕ್ಯಾಪ್ಟರ್ ವೆಚ್ಚ ಆಯಾ ಪಕ್ಷದ ಚುನಾವಣಾ ವೆಚ್ಚಕ್ಕೆ ಸೇರಿಸಬೇಕು. ಆದರೆ ಹೆಲಿಪ್ಯಾಡ್ ನಿರ್ಮಾಣ ವೆಚ್ಚ ಆಯಾ ಕ್ಷೇತ್ರದ ಅಭ್ಯರ್ಥಿಗಳ ಚುನಾವಣಾ ವೆಚ್ಚಕ್ಕೆ ಸೇರ್ಪಡೆ ಮಾಡಬೇಕು. ಸ್ಟಾರ್ ಕ್ಯಾಂಪೆನೇರ್ ನಡೆಸುವ ಚುನಾವಣಾ ಸಮಾರಂಭದ ವೇದಿಕೆಯಲ್ಲಿ ಆಯಾ ಕ್ಷೇತ್ರದ ಅಭ್ಯರ್ಥಿ ಜೊತೆಗೆ ಇತರ ಕ್ಷೇತ್ರದ ಅಭ್ಯರ್ಥಿಗಳು ವೇದಿಕೆ ಹಂಚಿಕೊಂಡರೆ ಸಮಾರಂಭದ ವೆಚ್ಚವನ್ನು ಎಲ್ಲ ಅಭ್ಯರ್ಥಿಗಳಿಗೆ ವಿಂಗಡಣೆಮಾಡಿ ವೆಚ್ಚಕ್ಕೆ ಸೇರ್ಪಡೆ ಮಾಡಬೇಕು ಎಂದು ತಿಳಿಸಿದರು.
ಚುನಾವಣಾ ರ‍್ಯಾಲಿ, ಸಮಾರಂಭಗಳಿಗೆ ಆಗಮಿಸುವ ಸಾರ್ವಜನಿಕರಿಗೆ ಊಟ-ಉಪಹಾರ ಪೂರೈಕೆ ಮಾಡುವುದು ಮಾದರಿ ನೀತಿ ಸಂಹಿತೆಯ ಉಲ್ಲಂಘನೆಯಾಗುತ್ತದೆ. ಆದರೆ ಅಭ್ಯರ್ಥಿ ಜೊತೆಗೆ ಪ್ರಚಾರಕ್ಕೆ ಬರುವ ಕಾರ್ಯಕರ್ತರಿಗೆ ಪೂರೈಸುವ ಊಟ-ಉಪಹಾರ ವೆಚ್ಚವನ್ನು ಈಗಾಗಲೇ ಜಿಲ್ಲಾ ಚುನಾವಣಾ ಅಧಿಕಾರಿಗಳು ಅಧಿಸೂಚಿತ ದರಪಟ್ಟಿಯಂತೆ ಅಭ್ಯರ್ಥಿಯ ಚುನಾವಣಾ ವೆಚ್ಚಕ್ಕೆ ಸೇರಿಸಬೇಕು.
ಚುನಾವಣಾ ಸಭೆ-ಸಮಾರಂಭ, ರ‍್ಯಾಲಿ ಒಳಗೊಂಡಂತೆ ಅವರು ಬಳಸುವ ವಾಹನ, ಪ್ರಚಾರ ಸಾಮಗ್ರಿ, ವೇದಿಕೆ ಸಾಮಗ್ರಿ ಒಳಗೊಂಡಂತೆ ಪ್ರತಿಯೊಂದಕ್ಕೂ ದರ ನಿಗದಿಪಡಿಸಿ ರಾಜಕೀಯ ಪಕ್ಷಗಳ ಪದಾಧಿಕಾರಿಗಳೊಂದಿಗೆ ಚರ್ಚಿಸಿ ದರ ನಿಗದಿಪಡಿಸಿ ಅಧಿಸೂಚಿಸಲಾಗಿದೆ. ಆಯಾ ಜಿಲ್ಲಾ ಚುನಾವಣಾಧಿಕಾರಿಗಳು ಈಗಾಗಲೇ ದರಪಟ್ಟಿಯನ್ನು ಅಧಿಕೃತವಾಗಿ ಪ್ರಕಟಗೊಳಿಸಿದ್ದಾರೆ. ಅಧಿಕೃತವಾಗಿ ನಿಗಧಿಪಡಿಸಿದಂತೆ ಪ್ರತಿ ವಸ್ತುವಿಗೂ ವೆಚ್ಚವನ್ನು ಹಾಕಬೇಕು. ಹಾವೇರಿ ಲೋಕಸಭಾ ವ್ಯಾಪ್ತಿಗೆ ಬರುವ ಗದಗ-ಹಾವೇರಿ ಜಿಲ್ಲೆಯಲ್ಲಿ ದರಗಳ ವ್ಯತ್ಯವಿದ್ದರೂ ಆಯಾ ಜಿಲ್ಲೆಯಲ್ಲಿ ನಿಗದಿಪಡಿಸಿದ ದರವನ್ನೇ ಪರಿಗಣಿಸಬೇಕು ಎಂದು ವೆಚ್ಚ ನಿರ್ವಹಣಾ ತಂಡದ ಮುಖ್ಯಸ್ಥರಿಗೆ ಸೂಚನೆ ನೀಡಿದರು.
ಚುನಾವಣೆಯ ವೆಚ್ಚ ನಿರ್ವಾಹಣಾ ತಂಡದ ನೋಡಲ್ ಅಧಿಕಾರಿ ವಸಂತಕುಮಾರ್ ಅವರು ಚುನಾವಣಾ ವೆಚ್ಚಗಳ ನಿರ್ವಹಣೆ, ವರದಿ ಹಾಗೂ ವಿವಿಧ ತಂಡಗಳ ಸಮನ್ವಯತೆ, ಚುನಾವಣಾ ವೆಚ್ಚದ ದರಪಟ್ಟಿ, ಅಭ್ಯರ್ಥಿಗಳ ಹಾಗೂ ರಾಜಕೀಯ ಪಕ್ಷಗಳ ವೆಚ್ಚದ ವರ್ಗೀಕರಣ ಹಾಗೂ ಸ್ಥಿರ ಕಣ್ಗಾವಲು ತಂಡ(ಚೆಕ್ ಪೋಸ್ಟ್), ಸ್ಕ್ವಾಡ್, ವಿಡಿಯೋ ಚಿತ್ರೀಕರಣ ತಂಡ, ವಿಡಿಯೋ ವಿವಿಧ ತಂಡ, ಮಾಧ್ಯಮ ಪ್ರಮಾಣೀಕರಣ ಹಾಗೂ ಮಾಧ್ಯಮ ನಿರ್ವಹಣಾ ತಂಡ, ಸಹಾಯಕ ಚುನಾವಣಾ ವೆಚ್ಚ ನಿರ್ವಹಣಾಧಿಕಾರಿ, ಲೆಕ್ಕ ಪರಿಶೀಲನಾ ತಂಡ, ಸಹಾಯಕ ಚುನಾವಣಾಧಿಕಾರಿಗಳ ಸಮನ್ವಯತೆ ಚುನಾವಣಾ ವೆಚ್ಚ ನಿರ್ವಹಣಾ ಸಂದರ್ಭದಲ್ಲಿ ನಿರ್ವಹಿಸಬೇಕಾದ ಕರ್ತವ್ಯಗಳ ಕುರಿತಂತೆ ವಿವರವಾಗಿ ಮಾಹಿತಿ ನೀಡಿದರು.
ಚುನಾವಣಾ ಲೆಕ್ಕ ಪರಿಶೀಲನಾ ತಂಡ ಹಾಗೂ ಲೆಕ್ಕ ನಿರ್ವಹಣಾ ತಂಡದ ಪಾತ್ರ ಮಹತ್ತರವಾಗಿದ್ದು, ತಮಗೆ ನಿರ್ವಹಿಸಿದ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಬೇಕು. ಪರಸ್ಪರ ಹೊಂದಾಣಿಕೆ, ಸಂವಹನದಿಂದ ರಾಜಕೀಯ ಪಕ್ಷ ಹಾಗೂ ಚುನಾವಣಾ ಅಭ್ಯರ್ಥಿಗಳು ಚುನಾವಣೆಗಾಗಿ ಮಾಡುವ ಪ್ರತಿ ಚಟುವಟಿಕೆ ಹಾಗೂ ವೆಚ್ಚದ ಮೇಲೆ ನಿಗಾವಹಿಸಬೇಕು ಎಂದು ತಿಳಿಸಿದರು.
ಲೋಕಸಭಾ ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗೆ ಗರಿಷ್ಠ ರು.95 ಲಕ್ಷ ಮಿತಿಯೊಳಗೆ ಖರ್ಚುಮಾಡುವ ಅವಕಾಶವನ್ನು ಚುನಾವಣಾ ಆಯೋಗ ನಿಗದಿಪಡಿಸಿದೆ. ರು.10 ಸಾವಿರಕ್ಕಿಂತ ಹೆಚ್ಚು ಮೊತ್ತದ ಖರ್ಚನ್ನು ನಗದಾಗಿ ಭರಿಸುವಂತಿಲ್ಲ. ಉಳಿದ ಹಣವನ್ನು ಬ್ಯಾಂಕ್ ಖಾತೆ ಮೂಲಕ ಪಾವತಿಸಬೇಕು, ಪ್ರತಿ ವೆಚ್ಚಕ್ಕೂ ರಸೀದಿ ಸಲ್ಲಿಸಬೇಕು ಎಂದರು.ನಾಮಪತ್ರ ಸಲ್ಲಿಕೆ ದಿನದಿಂದ ಅಭ್ಯರ್ಥಿಯ ಖಾತೆಗೆ ವೆಚ್ಚ ಪರಿಗಣನೆ ಮಾಡಬೇಕು. ಪ್ರತಿ ಅಭ್ಯರ್ಥಿಯು ದಿನದ ವೆಚ್ಚ, ನಗದು ವಹಿವಾಟು, ಬ್ಯಾಂಕು ವಹಿವಾಟುಗಳ ಕುರಿತಾಗಿ ಎ,ಬಿ,ಸಿ ವಹಿಯನ್ನು ಪರಿಶೀಲನೆ ಮಾಡಬೇಕು. ಪ್ರತಿ ದಿನ ಎಸ್.ಒ. ವಹಿಯಲ್ಲಿ ವೆಚ್ಚದ ಮಾಹಿತಿಯನು ಅಪ್‌ಡೆಟ್ ಮಾಡಬೇಕು ಎಂದರು.
ಚುನಾವಣಾ ಸಂದರ್ಭದ ಯಾವುದೇ ವ್ಯಕ್ತಿಯು ಸೂಕ್ತ ದಾಖಲೆಗಳು ಇಲ್ಲದೆ ರು.೫೦ ಸಾವಿರಕ್ಕಿಂತ ಹೆಚ್ಚು ಹಣವನ್ನು ತನ್ನೊಂದಿಗೆ ಕಂಡೊಯ್ಯುವಂತಿಲ್ಲ. ದಾಖಲೆಗಳಿಲ್ಲದ ವಸ್ತು, ಆಭರಣ, ನಗದನ್ನು ಸೀಜರ್ ಕಮಿಟಿಗೆ ವರ್ಗಾಯಿಸಬೇಕು ಎಂದು ಹೇಳಿದರು.ಅಪರ ಜಿಲ್ಲಾಧಿಕಾರಿ ಪೂಜಾರ ವೀರಮಲ್ಲಪ್ಪ ಮಾತನಾಡಿ, ಚುನಾವಣಾ ನೀತಿ ಸಂಹಿತೆ ಹಾಗೂ ಚುನಾವಣಾ ಅಕ್ರಮಗಳ ನಿಗಾಕ್ಕೆ ನಿಯೋಜಿಸಲಾದ ತಂಡಗಳು ಪರಸ್ಪರ ಸಮನ್ವಯತೆಯಿಂದ ಕಾರ್ಯನಿರ್ವಹಿಸುವಂತೆ ಸಲಹೆ ನೀಡಿದರು.