ಲೋಕಸಭಾ ಚುನಾವಣೆಯ ಖರ್ಚುವೆಚ್ಚದ ಮೇಲೆ ನಿಗಾ ವಹಿಸಿ: ಪ್ರಶಾಂತ್ ಕುಮಾರ್

| Published : Feb 27 2024, 01:38 AM IST

ಲೋಕಸಭಾ ಚುನಾವಣೆಯ ಖರ್ಚುವೆಚ್ಚದ ಮೇಲೆ ನಿಗಾ ವಹಿಸಿ: ಪ್ರಶಾಂತ್ ಕುಮಾರ್
Share this Article
  • FB
  • TW
  • Linkdin
  • Email

ಸಾರಾಂಶ

ಚುನಾವಣೆ ಕರ್ತವ್ಯವನ್ನು ನಿಷ್ಪಕ್ಷ ಹಾಗೂ ನ್ಯಾಯಸಮ್ಮತವಾಗಿ ನಡೆಸುವ ಹಿನ್ನೆಲೆಯಲ್ಲಿ ನಿಯೋಜನೆಗೊಂಡ ಎಲ್ಲ ತಂಡಗಳೂ ಖರ್ಚು ವೆಚ್ಚಗಳ ಬಗ್ಗೆ ಗಮನ ವಹಿಸಬೇಕು.

ಬಳ್ಳಾರಿ: ಲೋಕಸಭಾ ಚುನಾವಣೆಯನ್ನು ಮುಕ್ತ ಹಾಗೂ ನ್ಯಾಯಸಮ್ಮತವಾಗಿ ನಡೆಯಲು ಚುನಾವಣೆ ಖರ್ಚುವೆಚ್ಚದ ಮೇಲೆ ನಿಗಾ ವಹಿಸುವಂತೆ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿಯ ಕೆಸ್ವಾನ್ ಸಭಾಂಗಣದಲ್ಲಿ ಚುನಾವಣಾ ಖರ್ಚು ವೆಚ್ಚದ ನಿಗಾ ಕುರಿತು ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರದ ಆರ್‌ಒ, ಎಇಆರ್‌ಒ ಅಧಿಕಾರಿಗಳೊಂದಿಗೆ ವಿಡಿಯೋ ಸಂವಾದ ಸಭೆ ನಡೆಸಿದರು.

ಚುನಾವಣೆ ಕರ್ತವ್ಯವನ್ನು ನಿಷ್ಪಕ್ಷ ಹಾಗೂ ನ್ಯಾಯಸಮ್ಮತವಾಗಿ ನಡೆಸುವ ಹಿನ್ನೆಲೆಯಲ್ಲಿ ನಿಯೋಜನೆಗೊಂಡ ಎಲ್ಲ ತಂಡಗಳೂ ಖರ್ಚು ವೆಚ್ಚಗಳ ಬಗ್ಗೆ ಗಮನ ವಹಿಸಬೇಕು. ಅಭ್ಯರ್ಥಿಗಳು ಮಾಡುವ ಖರ್ಚುವೆಚ್ಚಗಳ ಬಗ್ಗೆಯೂ ತೀವ್ರ ನಿಗಾ ಇಡಬೇಕು ಎಂದು ತಾಕೀತು ಮಾಡಿದರು.

ಈ ಬಾರಿಯ ಚುನಾವಣೆಗಾಗಿ ಅಭ್ಯರ್ಥಿಗಳ ಮೂಲಕ ವೆಚ್ಚ ಮಾಡುವ ಹಣದ ಮಿತಿಯನ್ನು ಗರಿಷ್ಠ ₹95 ಲಕ್ಷಕ್ಕೆ ನಿಗದಿಪಡಿಸಿದ್ದು, ಖರ್ಚಿನ ಬಗ್ಗೆ ತೀವ್ರ ನಿಗಾ ಇಡುವ ಜತೆಗೆ ಚುನಾವಣಾ ಆಯೋಗದ ಮಾರ್ಗಸೂಚಿಯಂತೆ ದಾಖಲಿಸಿ ಇಟ್ಟುಕೊಂಡು ಕಾಲಕಾಲಕ್ಕೆ ವರದಿಯನ್ನು ಕಳುಹಿಸಬೇಕು ಎಂದರು.

ಚುನಾವಣೆ ಸಂದರ್ಭದಲ್ಲಿ ಅಕ್ರಮವಾಗಿ ಬಳಕೆ ಮತ್ತು ಸಾಗಾಣಿಕೆ ಮಾಡುತ್ತಿರುವ ಬಗ್ಗೆ ಖಾತ್ರಿಪಡಿಸಿಕೊಂಡು, ಈ ಕುರಿತು ಸಾಕ್ಷಿಗಾಗಿ ವೀಡಿಯೋ ರೆಕಾರ್ಡಿಂಗ್ ಮಾಡಿಕೊಂಡು ಪರಿಸ್ಥಿತಿಗೆ ಅನುಗುಣವಾಗಿ ಪ್ರಕರಣಗಳನ್ನು ದಾಖಲಿಸಿಕೊಳ್ಳಬೇಕು ಎಂದರು.

ಅಪರ ಜಿಲ್ಲಾಧಿಕಾರಿ ಮೊಹಮ್ಮದ್ ಝುಬೇರ್ ಮಾತನಾಡಿ, ಸಾರ್ವಜನಿಕ ಕಾರ್ಯಕ್ರಮಗಳಿಗೆ ನಿಯಮಾನುಸಾರ ಪೂರ್ವಾನುಮತಿ ಪಡೆಯಬೇಕಿದೆ. ಪೂರ್ವಾನುಮತಿಯಿಲ್ಲದ ಹಾಗೂ ಕಾನೂನು ಉಲ್ಲಂಘನೆಯ ಚಟುವಟಿಕೆಗಳ ಬಗ್ಗೆ ನಿಯೋಜಿತ ನಿಗಾ ತಂಡಗಳು ತಕ್ಷಣ ಕಾರ್ಯಪ್ರವೃತ್ತರಾಗಬೇಕು ಎಂದರು.

ಚುನಾವಣಾ ಅಭ್ಯರ್ಥಿಗೆ ಮತ್ತು ತಾರಾ ಪ್ರಚಾರಕರು ಪ್ರಚಾರಕ್ಕಾಗಿ ಬಂದ ಸಂದರ್ಭದಲ್ಲಿ, ತಂಡಗಳು ಕಾರ್ಯಕ್ರಮ ಅಥವಾ ಸಮಾರಂಭಗಳಲ್ಲಿ ಆಗುವ ಖರ್ಚುವೆಚ್ಚಗಳ ಬಗ್ಗೆ ಕಟ್ಟುನಿಟ್ಟಿನ ನಿಗಾ ವಹಿಸಬೇಕು. ಮತದಾರರಿಗೆ ಆಮಿಷವೊಡ್ಡಲು ಹಣ, ಮದ್ಯ ಅಥವಾ ಉಚಿತ ಉಡುಗೊರೆಗಳ ಬಗ್ಗೆ ಸಂಪೂರ್ಣ ಸಾಕ್ಷ್ಯ ಸಂಗ್ರಹಿಸಬೇಕು ಎಂದರು.

ಲೆಕ್ಕ ಅಧೀಕ್ಷಕ ಡಾ. ಶಶಿಶೇಖರ ರೆಡ್ಡಿ ಮಾತನಾಡಿದರು. ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಸೇರಿದಂತೆ ಇತರರಿದ್ದರು.