ಸಾರಾಂಶ
ದೇವದುರ್ಗ ತಾಲೂಕಿನ ಜಾಲಹಳ್ಳಿ ಗ್ರಾಮದ ಸುತ್ತಮುತ್ತಲ್ಲಿನ ಹತ್ತಿ ಬೆಳೆಗೆ ಮಂಗಳ ಕಾಟದಿಂದಾಗಿ ಬೆಳೆ ನಷ್ಟವಾಗಿರುವುದು.
ಕನ್ನಡಪ್ರಭ ವಾರ್ತೆ ದೇವದುರ್ಗ
ತಾಲೂಕಿನ ಜಾಲಹಳ್ಳಿ ಗ್ರಾಮದ ಸುತ್ತಮುತ್ತಲ್ಲಿನ ರೈತರು ನೂರಾರು ಎಕರೆ ಪ್ರದೇಶದಲ್ಲಿ ಬೆಳೆದ ಹತ್ತಿ ಬೆಳೆಗೆ ಮಂಗಳ ಕಾಟ ವಿಪರೀತವಾಗಿದ್ದು, ತಕ್ಷಣವೇ ಸಂಬಂಧಿಸಿದ ಅರಣ್ಯ ಇಲಾಖೆಯ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂದು ರೈತರು ಒತ್ತಾಯಿಸುತ್ತಿದ್ದಾರೆ.ಪ್ರಗತಿಪರ ರೈತ ಗಂಗಪ್ಪ ತೆಗ್ಗೆಳ್ಳಿ ಎಂಬುವವರು ತಮ್ಮ 4 ಎಕರೆ ಕೃಷಿ ಜಮೀನಲ್ಲಿ ಪ್ರತಿ ಎಕರೆಗೆ ₹20 ಸಾವಿರ ವೆಚ್ಚ ಮಾಡಿ ಹತ್ತಿ ಬೆಳೆ ಬೆಳೆದಿದ್ದು, ನಿರಂತರವಾಗಿ ಎರಡು ತಿಂಗಳಿಂದ ನಿರ್ವಹಣೆ ಕೂಡ ಮಾಡಲಾಗಿದೆ.
ಹತ್ತಿ ಬೆಳೆ ಈಗ ಕಾಯಿ ಕಟ್ಟಿದೆ. ಇಂತಹ ಸಂದರ್ಭದಲ್ಲಿ ಮಂಗಗಳ ಹಿಂಡು ಜಮೀನಿಗೆ ದಾಳಿ ಮಾಡಿ ನಾಶ ಪಡಿಸುತ್ತಿದ್ದು, ನಿತ್ಯ ಮಂಗಗಳಿಂದ ತಮ್ಮ ಬೆಳೆ ರಕ್ಷಣೆ ಮಾಡಿಕೊಳ್ಳುವುದೇ ಕಷ್ಟ ಸಾಧ್ಯವಾಗಿದೆ. ಮಂಗಗಳ ಕಾಟದಿಂದಾಗಿ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ.ಮಂಗಗಳು ಗ್ರಾಮಕ್ಕೆ ಹೊಂದಿ ಕೊಂಡಿರುವ ತಿಮ್ಮಪ್ಪನ ಗುಡ್ಡ ಏರಿ ಕುಳಿತುಕೊಳ್ಳುತ್ತಾವೆ. ಸಂಜೆಯಾದರೆ ಇಳಿದು ರೈತರ ಜಮೀನುಗಳಿಗೆ ಲಗ್ಗೆ ಇಡುತ್ತಿವೆ. ತಕ್ಷಣವೇ ಅರಣ್ಯ ಇಲಾಖೆಯ ಅಧಿಕಾರಿಗಳು ಮಂಗಗಳನ್ನು ಸೆರೆ ಹಿಡಿದು ಅರಣ್ಯ ಪ್ರದೇಶಕ್ಕೆ ಸ್ಥಳಾಂತರ ಮಾಡಬೇಕು. ಇಲ್ಲವಾದರೆ ಹತ್ತಿ ಬೆಳೆ ನಷ್ಟಗೊಂಡ ರೈತರಿಗೆ ಪ್ರತಿ ಎಕರೆಗೆ ₹40 ಸಾವಿರ ರು. ಪರಿಹಾರ ವಿತರಣೆ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಪ್ರಗತಿ ಪರ ರೈತ ಗಂಗಪ್ಪ ತೆಗ್ಗೆಳ್ಳಿ ಅವರು ಮನವಿ ಮಾಡಿದ್ದಾರೆ.