ಕೋತಿಯೊಂದನ್ನು ಕೊಠಡಿಯೊಳಗೆ ಕೂಡಿ ಹಾಕಿದ್ದು, ಅರಣ್ಯ ಇಲಾಖೆ ಸಿಬ್ಬಂದಿ ಯಶಸ್ವಿಯಾಗಿ ಸೆರೆ ಹಿಡಿದು ಸುರಕ್ಷಿತವಾಗಿ ಕಾಡಿಗೆ ಬಿಡುವಲ್ಲಿ ಯಶಸ್ವಿಯಾಗಿದ್ದಾರೆ.

ಕಂಪ್ಲಿ: ಪಟ್ಟಣದ ವಿದ್ಯಾರ್ಥಿನಿಯರ ವಸತಿನಿಲಯಕ್ಕೆ ನುಗ್ಗಿ ಉಪಟಳ ಕೊಡುತ್ತಿದ್ದ ಕೋತಿಯೊಂದನ್ನು ಕೊಠಡಿಯೊಳಗೆ ಕೂಡಿ ಹಾಕಿದ್ದು, ಅರಣ್ಯ ಇಲಾಖೆ ಸಿಬ್ಬಂದಿ ಯಶಸ್ವಿಯಾಗಿ ಸೆರೆ ಹಿಡಿದು ಸುರಕ್ಷಿತವಾಗಿ ಕಾಡಿಗೆ ಬಿಡುವಲ್ಲಿ ಯಶಸ್ವಿಯಾಗಿದ್ದಾರೆ.ಪಟ್ಟಣದ ಡಾ. ಬಿ.ಆರ್. ಅಂಬೇಡ್ಕರ್ ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾರ್ಥಿನಿಲಯಕ್ಕೆ ಕಳೆದ ಎರಡು ತಿಂಗಳಿನಿಂದ ಕರಿಕೋತಿಯೊಂದು ಪದೇಪದೇ ನುಗ್ಗಿ ವಿದ್ಯಾರ್ಥಿನಿಯರಲ್ಲಿ ಭಯದ ವಾತಾವರಣ ಸೃಷ್ಟಿಸಿತ್ತು. ವಿದ್ಯಾರ್ಥಿನಿಯರನ್ನು ಕಂಡ ಕೂಡಲೇ ನಿಲಯದೊಳಗೆ ನುಗ್ಗುತ್ತಿದ್ದ ಕೋತಿ, ವಸತಿ ಕೋಣೆಗಳು ಹಾಗೂ ಅಡುಗೆ ಮನೆಯೊಳಗೆ ದಾಂದಲೆ ನಡೆಸುತ್ತಿತ್ತು. ಕನ್ನಡಿ ಹಾಗೂ ಸ್ಟೀಲ್ ತಟ್ಟೆಗಳಲ್ಲಿ ತನ್ನ ಪ್ರತಿಬಿಂಬವನ್ನು ಕಂಡು ಚೇಷ್ಟೆ ಮಾಡುವುದು, ಟಿವಿಯನ್ನು ಒಡೆದುಹಾಕುವುದು, ಪೈಪ್‌, ವೈರ್‌ ಸೇರಿದಂತೆ ಸಣ್ಣ ಪುಟ್ಟ ಸಾಮಾನುಗಳನ್ನು ಎಳೆದು ಹಾಳು ಮಾಡುವುದು ಅದರ ದೈನಂದಿನ ಉಪಟಳವಾಗಿತ್ತು.

ಹಾಸ್ಟೇಲ್‌ನಲ್ಲಿ 6ರಿಂದ 10ನೇ ತರಗತಿಯವರೆಗೆ ಓದುತ್ತಿರುವ ಒಟ್ಟು 120 ವಿದ್ಯಾರ್ಥಿನಿಯರು ವಾಸವಾಗಿದ್ದು, ಭಾನುವಾರ ರಜೆ ಹಿನ್ನೆಲೆ ಕೇವಲ 40 ವಿದ್ಯಾರ್ಥಿನಿಯರು ಮಾತ್ರ ನಿಲಯದಲ್ಲಿದ್ದರು. ಎಂದಿನಂತೆ ಕರಿಕೋತಿ ವಿದ್ಯಾರ್ಥಿನಿಯರ ವಸತಿ ಕೋಣೆಗೆ ನುಗ್ಗಿದ ವೇಳೆ, ಧೈರ್ಯ ಪ್ರದರ್ಶಿಸಿದ ವಿದ್ಯಾರ್ಥಿನಿಯರು ಹಾಗೂ ಸಿಬ್ಬಂದಿ ಕೂಡಲೇ ಬಾಗಿಲು ಮುಚ್ಚಿ ಅದನ್ನು ಕೋಣೆಯೊಳಗೆ ಬಂದಿಸಿ, ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.

ಮಾಹಿತಿ ಪಡೆದ ಅರಣ್ಯ ಇಲಾಖೆಯ ಎಂಟು ಮಂದಿ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಹರಸಾಹಸಪಟ್ಟು ಬಲೆ ಹಾಕುವ ಮೂಲಕ ಕರಿಕೋತಿಯನ್ನು ಸೆರೆ ಹಿಡಿದು ಕರೆದೊಯ್ದಿದ್ದಾರೆ ಎಂದು ನಿಲಯ ಪಾಲಕಿ ಎಂ.ಬಿ. ಶುಭಾ ತಿಳಿಸಿದ್ದಾರೆ.

ಹೊಸಪೇಟೆ ಪ್ರಾದೇಶಿಕ ಅರಣ್ಯ ವಲಯದ ಗಸ್ತು ಅರಣ್ಯ ಪಾಲಕ ಜಿ.ಎಸ್. ರವಿಚಂದ್ರ ಮಾತನಾಡಿ, ಸೆರೆ ಹಿಡಿದ ಕರಿಕೋತಿಯನ್ನು ವಿಜಯನಗರ ಜಿಲ್ಲೆಯ ಗರಗ ಅರಣ್ಯ ಪ್ರದೇಶದಲ್ಲಿ ಸುರಕ್ಷಿತವಾಗಿ ಬಿಡಲಾಗಿದೆ ಎಂದು ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಅರಣ್ಯ ವೀಕ್ಷಕ ನಾಗರಾಜ ಸೇರಿದಂತೆ ಸಿಬ್ಬಂದಿ ಇದ್ದರು.