ಸಾರಾಂಶ
ಜಿ.ಡಿ. ಹೆಗಡೆ
ಕಾರವಾರ:ಬೇಸಿಗೆ ಆರಂಭವಾಗುತ್ತಿದ್ದಂತೆ ಉತ್ತರ ಕನ್ನಡದ ಕಾಡಂಚಿನ ಗ್ರಾಮಗಳಲ್ಲಿ ಮಂಗನ ಕಾಯಿಲೆ (ಕೆಎಫ್ಡಿ) ಆತಂಕ ಆರಂಭವಾಗಿದೆ. ಜನವರಿ ೨೦೨೪ರಿಂದ ಈ ವರೆಗೆ ಮೂರು ಜನರಲ್ಲಿ ಈ ಸೋಂಕು ಕಾಣಿಸಿಕೊಂಡಿದೆ.
ಸಿದ್ದಾಪುರ ತಾಲೂಕಿನ ಬಿಳಗಿ, ಹಲಗೇರಿ, ಕೊರ್ಲಕೈ ಭಾಗದ ೩ ಜನರಿಗೆ ಈ ಬಾರಿ ಸೋಂಕು ಕಾಣಿಸಿಕೊಂಡಿದ್ದು, ಮೂವರು ಚೇತರಿಸಿಕೊಳ್ಳುತ್ತಿದ್ದಾರೆ. ಸಿದ್ದಾಪುರ ತಾಲೂಕಿನ ಬಿಳಗಿಯಲ್ಲಿ ಒಂದು ಮಂಗ ಮೃತಪಟ್ಟಿದೆ. ೨೦೨೩ರಲ್ಲಿ ಕೆಎಫ್‌ಡಿ ಸೋಂಕು ಕಂಡುಬಂದಿರಲಿಲ್ಲ. ಈ ಬಾರಿ ಮಳೆಯ ಪ್ರಮಾಣ ಕಡಿಮೆಯಾಗಿದ್ದು, ಮಲೆನಾಡಿನ ಪ್ರದೇಶದಲ್ಲಿ ಜನವರಿಯಲ್ಲೇ ಬಿಸಿಲು ಬೀಳಲು ಆರಂಭವಾಗಿದೆ. ಹೀಗಾಗಿ ಮಂಗನ ಕಾಯಿಲೆ ಆತಂಕ ಮತ್ತಷ್ಟು ಹೆಚ್ಚು ಮನೆ ಮಾಡಿದೆ. ಬೇಸಿಗೆಯ ಒಂದೆರಡು ತಿಂಗಳು ಮಾತ್ರ ಈ ವೈರಾಣು (ಉಣ್ಣೆ) ಜೀವಿತಾವಧಿಯಾಗಿದ್ದು, ಮಳೆ ಬೀಳುತ್ತಿದ್ದಂತೆ ಉಣ್ಣೆ(ಉಣಗು) ನೀರಿನಲ್ಲಿ ಕೊಚ್ಚಿಕೊಂಡು ಹೋಗುವುದರಿಂದ ಕಾಯಿಲೆ ಆತಂಕ ಇರುವುದಿಲ್ಲ.ಪ್ರತಿ ವರ್ಷವೂ ಜನವರಿಯಿಂದ ಏಪ್ರಿಲ್ ಅವಧಿಯಲ್ಲಿ ಸಿದ್ದಾಪುರ, ಹೊನ್ನಾವರ ತಾಲೂಕಿನ ಕಾಡಂಚಿನ ಗ್ರಾಮೀಣ ಭಾಗದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಈ ಕಾಯಿಲೆ ಕಾಣಿಸಿಕೊಳ್ಳುತ್ತಿದ್ದು, ಉರುವಲು ತರಲು, ಜಾನುವಾರು ಮೇಯಿಸಲು, ಸೊಪ್ಪು ತರಲು ಹೀಗೆ ವಿವಿಧ ಕಾರಣಗಳಿಗೆ ಅರಣ್ಯಕ್ಕೆ ತೆರಳುವವರಿಗೆ ಉಣ್ಣೆ ಕಡಿದು ಜ್ವರದಿಂದ ಬಳಲುತ್ತಾರೆ. ನಿರ್ಲಕ್ಷ್ಯ ಮಾಡಿದರೆ ಜೀವಕ್ಕೆ ಅಪಾಯವಾಗುತ್ತದೆ.
ಆರೋಗ್ಯ ಇಲಾಖೆಯಿಂದ ಜಾಗೃತಿ ಕಾರ್ಯಕ್ರಮ ಹಾಕಿಕೊಳ್ಳಲಾಗಿದೆ. ಜತೆಗೆ ಕಾಡಿಗೆ ತೆರಳುವ ಮೊದಲು ದೇಹಕ್ಕೆ ಹಚ್ಚಿಕೊಳ್ಳಲು ಔಷಧವನ್ನು ಪೂರೈಕೆ ಮಾಡಲಾಗಿದೆ. ಪಶು ಪಾಲನಾ ಇಲಾಖೆಯಿಂದ ಕೊಟ್ಟಿಗೆ ಸ್ವಚ್ಛ ಮಾಡಲು, ಜಾನುವಾರುಗಳ ಮೈ ತೊಳೆಯುವಾಗ ಬಳಸಲು ಔಷಧ ನೀಡಲಾಗಿದೆ. ಮುಂಜಾಗೃತೆಯೇ ಈ ರೋಗಕ್ಕೆ ಪ್ರಮುಖ ಔಷಧವಾಗಿದ್ದು, ಸಾರ್ವಜನಿಕರು ಮಂಗನ ಕಾಯಿಲೆ ಕುರಿತಾಗಿ ಎಚ್ಚರಿಕೆ ವಹಿಸಿ ಈ ಕಾಯಿಲೆಯಿಂದ ದೂರವಾಗಬೇಕಿದೆ.ಜನವರಿ ೨೦೨೪ರಿಂದ ಈ ವರೆಗೆ ೩ ಜನರಲ್ಲಿ ಸೋಂಕು ದೃಢವಾಗಿದೆ. ಸಾಕಷ್ಟು ಮುಂಜಾಗ್ರತೆ ತೆಗೆದುಕೊಳ್ಳಲಾಗಿದ್ದು, ಕರಪತ್ರ ವಿತರಿಸಲಾಗಿದೆ. ಸ್ಥಳೀಯ ಗ್ರಾಪಂನಿಂದ ಮೈಕಿಂಗ್ ಮಾಡಿದ್ದಾರೆ. ಆರೋಗ್ಯ ಇಲಾಖೆಯಿಂದ ಉಣ್ಣೆ ನಿಷ್ಕರ್ಷ ಆಯಿಲ್ ನೀಡಲಾಗಿದೆ. ಪಶು ಇಲಾಖೆ ಜಾನುವಾರು, ಕೊಟ್ಟಿಗೆ ಸ್ವಚ್ಛ ಮಾಡಲು ಕೆಲವು ಔಷಧ ನೀಡಿದ್ದಾರೆ. ಮಂಗ ಮೃತಪಟ್ಟಾಗ ಕೂಡಲೇ ಮಾಹಿತಿ ಪಡೆಯಲು, ಜ್ವರ ಕಾಣಿಸಿಕೊಂಡರೆ ಕೂಡಲೇ ರಕ್ತದ ಮಾದರಿ ಪ್ರಯೋಗಾಲಯಕ್ಕೆ ಕಳಿಸಲೂ ಸಿಬ್ಬಂದಿಗೆ ಸೂಚಿಸಲಾಗಿದೆ ಎಂದು ಕೆಎಫ್‌ಡಿ ಕೇಂದ್ರದ ವೈದ್ಯಾಧಿಕಾರಿ ಡಾ. ಸತೀಶ ಶೇಟ್ ತಿಳಿಸಿದ್ದಾರೆ.೨೦೦೫, ೨೦೦೭ರಲ್ಲಿ ತಲಾ ೨ ಜನರಲ್ಲಿ ರೋಗ ಖಚಿತಪಟ್ಟಿತ್ತು. ೨೦೦೮ರಲ್ಲಿ ೧೨ ಜನರಲ್ಲಿ ಸೋಂಕು ಕಂಡಿತ್ತು. ೨೦೧೦ ಎರಡು ಜನರಲ್ಲಿ ರೋಗ ಕಾಣಿಸಿಕೊಂಡಿದ್ದು, ಒಬ್ಬರು ಮೃತಪಟ್ಟಿದ್ದರು. ೨೦೧೨ರಲ್ಲಿ ೮ ಜನರಲ್ಲಿ ಸೋಂಕು ದೃಢಪಟ್ಟಿದ್ದು, ಒಬ್ಬರು ಮೃತಪಟ್ಟಿದ್ದರು. ೨೦೧೩ರಲ್ಲಿ ೧೭ ಜನರಲ್ಲಿ ಸೋಂಕು ಕಾಣಿಸಿಕೊಂಡಿತ್ತು. ೨೦೧೯ರಲ್ಲಿ ೮೬ ಜನರಲ್ಲಿ ಕೆಎಫ್‌ಡಿ ಪಾಸಿಟಿವ್ ಬಂದಿದ್ದು, ೩ ಜನರು ಸೋಂಕಿನಿಂದ ಮೃತಪಟ್ಟಿದ್ದರು. ೨೦೨೦ರಲ್ಲಿ ಒಬ್ಬರು ಮೃತಪಟ್ಟಿದ್ದರು.