ಮಂಗನ ಕಾಯಿಲೆಯು ಒಂದು ಸಾಂಕ್ರಾಮಿಕ ರೋಗವಾಗಿದ್ದರೂ ಸಹ ಇದು ಮನುಷ್ಯನಿಂದ ಮನುಷ್ಯನಿಗೆ ಹರಡಲ್ಲ. ಮಂಗಗಳಿಗೆ ಕಚ್ಚಿದ ಸೋಂಕಿತ ಉಣುಗುಗಳಿಂದ ಈ ಕಾಯಿಲೆ ಹರಡುತ್ತದೆ ಎಂದು ತಾಲೂಕು ಆರೋಗ್ಯ ಅಧಿಕಾರಿ ಡಾ.ಮಹೇಂದ್ರ ಕಿರಿಟಿ ಹೇಳಿದರು.
ಕನ್ನಡಪ್ರಭ ವಾರ್ತೆ ಬಾಳೆಹೊನ್ನೂರು
ಮಂಗನ ಕಾಯಿಲೆಯು ಒಂದು ಸಾಂಕ್ರಾಮಿಕ ರೋಗವಾಗಿದ್ದರೂ ಸಹ ಇದು ಮನುಷ್ಯನಿಂದ ಮನುಷ್ಯನಿಗೆ ಹರಡಲ್ಲ. ಮಂಗಗಳಿಗೆ ಕಚ್ಚಿದ ಸೋಂಕಿತ ಉಣುಗುಗಳಿಂದ ಈ ಕಾಯಿಲೆ ಹರಡುತ್ತದೆ ಎಂದು ತಾಲೂಕು ಆರೋಗ್ಯ ಅಧಿಕಾರಿ ಡಾ.ಮಹೇಂದ್ರ ಕಿರಿಟಿ ಹೇಳಿದರು.ಕರ್ಕೇಶ್ವರ ಗ್ರಾಮ ಪಂಚಾಯಿತಿ ವ್ಯಾಫ್ತಿಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವತಿಯಿಂದ ಗ್ರಾಮಸ್ಥರಿಗೆ ಮತ್ತು ಕಾರ್ಮಿಕರಿಗೆ ಮಂಗನ ಕಾಯಿಲೆಯ ಕುರಿತು ಮಾಹಿತಿ ನೀಡಿ, ಡೆಪಾ ಆಯಿಲ್ (ಉಣ್ಣೆ ನಿಷ್ಕರ್ಷಕ ತೈಲ) ವಿತರಿಸಿ ಮಾತನಾಡಿದರು.
ಮಂಗನ ಕಾಯಿಲೆಯು ಪ್ಲಾವಿ ಜಾತಿಗೆ ಸೇರಿರುವ ವೈರಸ್‌ನಿಂದ ಉಂಟಾಗುತ್ತದೆ. ಸೋಂಕಿತ ಮಂಗಗಳಿಗೆ ಕಚ್ಚಿದ, ಸೋಂಕಿತ ಉಣುಗುಗಳು ಕಚ್ಚುವುದರಿಂದ, ಈ ಕಾಯಿಲೆ ಮನುಷ್ಯನಿಗೆ ಬರುತ್ತದೆ. ಈ ಕಾಯಿಲೆಯ ಪ್ರಮುಖ ಲಕ್ಷಣ ವಿಪರೀತ ಜ್ವರ, ಕಣ್ಣು ಕೆಂಪಾಗುವುದು, ಮೈ ಕೈ ಗಂಟುಗಳಲ್ಲಿ ನೋವು, ಒಸಡಿನಲ್ಲಿ ರಕ್ತಸ್ರಾವ, ಮಲದಲ್ಲಿ ರಕ್ತ, ಕಪ್ಪು ಮಲ ವಿಸರ್ಜನೆ ಆಗಿರುತ್ತದೆ. ಈ ರೀತಿ ಲಕ್ಷಣಗಳು ಕಂಡು ಬಂದ ತಕ್ಷಣ ಸಮೀಪದ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ರಕ್ತ ತಪಾಸಣೆ ಮಾಡಿಸುವುದರಿಂದ ಈ ಕಾಯಿಲೆ ಪತ್ತೆ ಹಚ್ಚಬಹುದು ಎಂದರು.ಕಾಡಿನಲ್ಲಿ ಮಂಗಗಳು ಸಾಯುವುದು ಕೂಡ ಕಾಯಿಲೆ ಈ ವ್ಯಾಪ್ತಿಯಲ್ಲಿ ಹರಡಿದೆ ಎಂಬುದಕ್ಕೆ ಸ್ಪಷ್ಟ ಸಂದೇಶ ನೀಡಿದಂತಾಗುತ್ತದೆ. ಕಾಯಿಲೆಗೆ ನಿರ್ದಿಷ್ಟವಾದ ಚಿಕಿತ್ಸೆ ಇರುವುದಿಲ್ಲ. ಲಕ್ಷಣ ಆಧಾರಿತ ಚಿಕಿತ್ಸೆಯನ್ನು ನೀಡುತ್ತೇವೆ. ಕಾಯಿಲೆ ತೀವ್ರ ಸ್ವರೂಪಕ್ಕೆ ಹೋಗುವವರೆಗೆ ಕಾಯದೆ ತಕ್ಷಣ ಸಮೀಪದ ಆಸ್ಪತ್ರೆಗೆ ಬಂದು ತಪಾಸಣೆ ಮಾಡಿಸಿಕೊಂಡರೆ ಉಚಿತವಾದ ಚಿಕಿತ್ಸೆ ಸರ್ಕಾರದ ವತಿಯಿಂದ ನೀಡಲಾಗುತ್ತದೆ ಎಂದರು.
ಕಾಡಿನೊಂದಿಗೆ ನಿಕಟ ಸಂಪರ್ಕವಿಟ್ಟುಕೊಂಡಂತವರು ಕಾಡಿಗೆ ಹೋಗುವ ಮುಂಚೆ ಮೈ ತುಂಬ ಬಟ್ಟೆ ಧರಿಸಿ ಡೆಪಾ ಆಯಿಲ್ ಮುಖಕ್ಕೆ ಹೊರತುಪಡಿಸಿ ಕೈ ಕಾಲುಗಳಿಗೆ ಹಚ್ಚಿಕೊಂಡು ಹೋಗಬೇಕು ಎಂದರು.ಯಾವುದೇ ಮಂಗ ಸತ್ತರೆ ಅದನ್ನು ಮುಟ್ಟದೆ ಕೂಡಲೇ ಸಮೀಪದ ಅರಣ್ಯ ಇಲಾಖೆ ಹಾಗೂ ಆರೋಗ್ಯ ಇಲಾಖೆಗೆ ಮಾಹಿತಿ ನೀಡಬೇಕು. ಸತ್ತ ಮಂಗದ ಮರಣೋತ್ತರ ಪರೀಕ್ಷೆಯನ್ನು ನಡೆಸಿ ಯಾವುದರಿಂದ ಸತ್ತಿದೆ ಎಂಬುದನ್ನು ಖಚಿತಪಡಿಸಿಕೊಂಡು ನಂತರದಲ್ಲಿ ಮಂಗದ ಕಳೆಬರಹವನ್ನು ನಿಯಮಾನಸಾರ ಅಂತ್ಯಸಂಸ್ಕಾರ ನಡೆಸಲಾಗುತ್ತದೆ ಎಂದರು.
ವೈದ್ಯಾಧಿಕಾರಿ ಡಾ.ಅಭ್ಯುದಯ, ಕರ್ಕೇಶ್ವರ ಗ್ರಾಪಂ ಅಧ್ಯಕ್ಷ ಕೆ.ಎಸ್.ರಾಜೇಶ್ ಕೇಶವತ್ತಿ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಭಗವಾನ್, ತಾಲೂಕು ಆರೋಗ್ಯ ನಿರೀಕ್ಷಣಾಧಿಕಾರಿ ದರ್ಶನ್, ಪ್ರಾಥಮಿಕ ಆರೋಗ್ಯ ಸುರಕ್ಷಣಾಧಿಕಾರಿ ದಿವ್ಯ, ತಾಲೂಕು ಕೆಡಿಪಿ ಸದಸ್ಯ ಶಶಿಕುಮಾರ್, ,ತಾಲೂಕು ಸಾಂಕ್ರಾಮಿಕ ರೋಗಶಾಸ್ತ್ರಜ್ಞ ಡಾ.ಆಕರ್ಶ್, ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಪಿ.ಪಿ.ಬೇಬಿ, ತಾಲೂಕು ವ್ಯವಸ್ಥಾಪಕ ಕಿರಣ್, ಪರಶುರಾಮ್, ಸುಮಿತ್ರ ಇತರರು ಹಾಜರಿದ್ದರು.