ಸಾರಾಂಶ
ಕನ್ನಡಪ್ರಭ ವಾರ್ತೆ ಮಳವಳ್ಳಿ
ಪಟ್ಟಣದ ಅನಂತ್ ರಾಂ ವೃತ್ತದ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷಾ ಕೇಂದ್ರಗಳಿಗೆ ಹಾಕಿದ್ದ ಸಿಸಿ ಕ್ಯಾಮೆರಾಗಳನ್ನು ಕೋತಿಗಳು ಕಿತ್ತು ಹಾಕಿದ್ದು, ಕೋತಿಗಳ ಹಾವಳಿಯಿಂದ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಹೈರಾಣಾಗಿದ್ದಾರೆ.ಪ್ರೌಢಶಾಲೆ ಸೇರಿದಂತೆ ಪಟ್ಟಣದ ಹಲವೆಡೆ ಕಳೆದ ಹಲವು ತಿಂಗಳಿಂದ ಕೋತಿಗಳ ಹಾವಳಿ ಮಿತಿ ಮೀರಿದೆ. ರಾತ್ರಿಯಿಡಿ ದಾಂಧಲೆ ನಡೆಸಿರುವ ವಾನರ ಸೇನೆ ಶಾಲೆಯಲ್ಲಿ ಅಳವಡಿಸಿದ ಸಿಸಿ ಟಿವಿ ಕೇಬಲ್, ಕಿತ್ತು ಹಾಳು ಮಾಡಿವೆ. ಶಾಲೆ ಆವರಣದಲ್ಲಿನ ತೆಂಗಿನ ಮರದಲ್ಲಿ ಎಳನೀರು ಕುಡಿಯಲು ಸುಮಾರು 30 ರಿಂದ 40 ಕೋತಿಗಳು ಭಾನುವಾರ ಬೆಳ್ಳಂ ಬೆಳಗ್ಗೆ ಬಂದಿದ್ದು ಸಿಸಿಟಿವಿ, ಶಾಲೆ ನೋಟಿಸ್ ಬೋರ್ಡ್, ಗಿಡಮರಗಳನ್ನು ಹಾಳು ಮಾಡಿವೆ.
ನೂರಾರು ಸಂಖ್ಯೆಯ ಕೋತಿಗಳು ಶಾಲೆ ಸುತ್ತಲು, ಮನೆ ಮೇಲೆ ಹೆಂಚುಗಳನ್ನು ಒಡೆದು, ಗಿಡಗಳನ್ನು ನಾಶ ಮಾಡುತ್ತಿವೆ. ಪ್ರಮುಖ ರಸ್ತೆಗಳಲ್ಲಿ ಅಂಗಡಿ, ಹೋಟೆಲ್‌ಗಳನ್ನೂ ಬಿಡದೆ ನುಗ್ಗಿ ಸಿಕ್ಕಿದ್ದನ್ನೆಲ್ಲ ತಿಂದು ಹಾಳು ಮಾಡುತ್ತಿವೆ. ಅವು ಕಚ್ಚಿದ ವಸ್ತುಗಳನ್ನು ತಿಂದರೆ ಮಂಗನ ಕಾಯಿಲೆ ಬರುತ್ತದೆ ಎಂಬ ಕಾರಣಕ್ಕೆ ಉಳಿದ ವಸ್ತುಗಳನ್ನು ಬಿಸಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಹೋಟೆಲ್ ಮಾಲೀಕರು ಅಳಲು ತೋಡಿಕೊಂಡಿದ್ದಾರೆ.ಸದರಿ ಪರೀಕ್ಷಾ ಕೇಂದ್ರದಲ್ಲಿ ಸೋಮವಾರ ಗಣಿತ ವಿಷಯದ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಯಲಿದೆ. ಈ ಪರೀಕ್ಷೆಗಾಗಿ ಮುಖ್ಯ ಶಿಕ್ಷಕರು ಹಾಗೂ ಕೇಂದ್ರದ ಉಸ್ತುವಾರಿ ಕುಮಾರಸ್ವಾಮಿ ಹಾಗೂ ಸಹ ಶಿಕ್ಷಕರು ಸೇರಿ ಸಿಸಿಟಿವಿ ವ್ಯವಸ್ಥೆ ಮತ್ತು ಇಂಟರ್ ನೆಟ್ ವ್ಯವಸ್ಥೆ ಸರಿಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಶಾಲೆಗೆ ಕ್ಷೇತ್ರ ಶಿಕ್ಷಣಾಧಿಕಾರಿ ವಿ.ಈ.ಉಮಾ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಪಟಾಕಿ ಸಿಡಿಸಿ ಬೆದರಿಸಿದ್ದರೂ ಈ ಕೋತಿಗಳು ಹೆದರುತ್ತಿಲ್ಲ. ದಾರಿಯಲ್ಲಿ ಓಡಾಡುವ ವೃದ್ಧರು, ಮಕ್ಕಳು ಮತ್ತು ಮಹಿಳೆಯರ ಮೇಲೆ ದಾಳಿ ಮಾಡಿ ಪರಚುತ್ತಿವೆ. ಕೂಡಲೇ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಕೋತಿಗಳ ಹಾವಳಿಗೆ ಕಡಿವಾಣ ಹಾಕಬೇಕು ಎಂದು ಪಟ್ಟಣದ ನಿವಾಸಿ ಸತೀಶ್ ಆಗ್ರಹಿಸಿದ್ದಾರೆ.ಈ ಬಗ್ಗೆ ವಲಯ ಅರಣ್ಯಾಧಿಕಾರಿ ಗವಿಯಪ್ಪ ಪ್ರತಿಕ್ರಿಯಿಸಿ ಅರಣ್ಯ ಇಲಾಖೆಯಲ್ಲಿ ಕೋತಿಗಳನ್ನು ಸ್ಥಳಾಂತರ ಮಾಡಲು ಅನುದಾನ ಇಲ್ಲ. ಹೀಗಾಗಿ ಸ್ಥಳೀಯ ಪುರಸಭೆ ಕೈಜೋಡಿಸಿದರೆ ಕ್ರಮ ವಹಿಸಲಾಗುವುದು ಎಂದು ಹೇಳಿದ್ದಾರೆ.