ಆಡಳಿತ ಸೌಧಕ್ಕೆ ಕೋತಿಗಳ ಕಾಟ

| Published : Aug 01 2025, 12:30 AM IST

ಸಾರಾಂಶ

ಪಟ್ಟಣದ ಆಡಳಿತ ಸೌಧದಲ್ಲಿ ಕಳೆದೊಂದು ವರ್ಷದಿಂದ ಹೆಚ್ಚುತ್ತಿರುವ ಕೋತಿಗಳ ಹಾವಳಿಯಿಂದಾಗಿ ಅಲ್ಲಿನ ಸಿಬ್ಬಂದಿ ಹೈರಾಣಾಗುತ್ತಿದ್ದು, ಕಚೇರಿ ಕೆಲಸಗಳಿಗೆ ಆಗಮಿಸುವ ಸಾರ್ವಜನಿಕರಿಗೆ ಆತಂಕ ಎದುರಾಗುತ್ತಿದೆ.

ಬಿಜಿಕೆರೆ ಬಸವರಾಜ

ಕನ್ನಡಪ್ರಭ ವಾರ್ತೆ ಮೊಳಕಾಲ್ಮುರು ಪಟ್ಟಣದ ಆಡಳಿತ ಸೌಧದಲ್ಲಿ ಕಳೆದೊಂದು ವರ್ಷದಿಂದ ಹೆಚ್ಚುತ್ತಿರುವ ಕೋತಿಗಳ ಹಾವಳಿಯಿಂದಾಗಿ ಅಲ್ಲಿನ ಸಿಬ್ಬಂದಿ ಹೈರಾಣಾಗುತ್ತಿದ್ದು, ಕಚೇರಿ ಕೆಲಸಗಳಿಗೆ ಆಗಮಿಸುವ ಸಾರ್ವಜನಿಕರಿಗೆ ಆತಂಕ ಎದುರಾಗುತ್ತಿದೆ.ಆಡಳಿತ ಸೌಧದಲ್ಲಿ ನೂರಾರು ಕೋತಿಗಳು ಬೀಡುಬಿಟ್ಟಿದ್ದು, ಕಚೇರಿಯ ಒಳಗೂ ಹೊರಗೂ ವಿಪರೀತವಾಗುತ್ತಿರುವ ಕೋತಿ ಚೇಷ್ಟೆಯು ಜನತೆಯನ್ನು ಇಕ್ಕಟ್ಟಿಗೆ ಸಿಲುಕಿಸುತ್ತಿದೆ. ಕೆಲಸಗಳನ್ನು ಮಾಡಿಕೊಡಬೇಕಾದ ಅಧಿಕಾರಿಗಳು ಹೈರಾಣಾಗುತ್ತಿದ್ದಾರೆ. ಸದಾ ಕೈಯಲ್ಲಿ ಕೊಲೊಂದನ್ನು ಹಿಡಿದುಕೊಂಡೆ ಕಾರ್ಯನಿರ್ವಹಿಸುವ ಸಂಕಷ್ಟ ಎದುರಾಗಿದೆ.

ವಿವಿಧ ಇಲಾಖೆಯ ಸೌಲಭ್ಯಗಳು ಒಂದೇ ಸೂರಿನಡಿಯಲ್ಲಿ ಸಾರ್ವಜನಿಕ ಸೇವೆ ಸಿಗುವಂತಾಗಲಿ ಎನ್ನುವ ಕಾರಣದಿಂದ ನಿರ್ಮಿಸಿರುವ ಆಡಳಿತ ಸೌಧದಲ್ಲಿ ಪ್ರಸ್ತುತ ಕಂದಾಯ, ಉಪ ಖಜಾನೆ, ಭೂ ಮಾಪನ, ಆಹಾರ, ಚುನಾವಣಾ ಶಾಖೆಗಳು ಕರ್ತವ್ಯ ನಿರ್ವಹಿಸುತ್ತಿವೆ. ಅಷ್ಟೂ ಇಲಾಖೆಯ ಸಿಬ್ಬಂದಿಗಳಿಗೆ ಸರ್ಕಾರಿ ಕೆಲಸದ ಜತೆಗೆ ಮಂಗಗಳನ್ನು ನಿಯಂತ್ರಿಸುವ ಅನಿವಾರ್ಯತೆ ತಲೆದೋರಿದೆ. ಕೆಲವೊಮ್ಮೆ ಕಚೇರಿಗೆ ನುಗ್ಗಿ ಅಲ್ಲಿನ ಪೇಪರುಗಳನ್ನು ಕಿತ್ತುಕೊಳ್ಳಲು ಮುಂದಾಗಿರುವ ಘಟನೆಗಳು ನಡೆದಿವೆ.

ಕೆಲಸಕ್ಕಾಗಿ ಆಗಮಿಸುವ ನಾಗರಿಕರ ‌ಕೈಯಲ್ಲಿನ ಬ್ಯಾಗುಗಳನ್ನು ನೋಡಿದಾ ಕೂಡಲೇ ವಸ್ತುಗಳನ್ನು ಕಸಿಯುವುದು ಮತ್ತು ಅವರನ್ನು ಬೆನ್ನಟ್ಟಿ ದಾಳಿ ಮಾಡಲು ಮುಂದಾಗುತ್ತಿವೆ. ಅಲ್ಲಿನ ಸಿಬ್ಬಂದಿ ಮತ್ತು ನಾಗರಿಕರನ್ನು ಕಚ್ಚಿರುವ ಘಟನೆಗಳು ಜರುಗಿವೆ.

ಕಚೇರಿಗಳಿಗೆ ತೆರಳುವ ನಾಗರಿಕರು ಕೋತಿಗಳಿವೆ ಎಂಬ ಭಯದಲ್ಲೇ ಇರಬೇಕಿದೆ. ಕೆಲಸದ ನಿಮಿತ್ತ ಕಚೇರಿಗೆ ಬರುವ ನಾಗರಿಕರ ದ್ವಿಚಕ್ರ ವಾಹನಗಳ‌ ಮೇಲೆ ದಾಳಿ ಮಾಡುವ ಕೋತಿಗಳು ಅಲ್ಲಿನ ಟ್ಯಾಂಕ್ ಕವರ್ ಸೀಟ್, ಕನ್ನಡಿ ಸೇರಿದಂತೆ ಇತರ ವಸ್ತುಗಳನ್ನು ಹಾಳು ಮಾಡುತ್ತಿವೆ. ಇದರಿಂದಾಗಿ ನಾಗರಿಕರಿಗೆ ಕೋತಿಗಳಿಂದ ದ್ವಿಚಕ್ರ ವಾಹನಗಳನ್ನು ಸುರಕ್ಷಿತವಾಗಿ ಕಾಪಾಡುವುದೂ ಸವಾಲೇ ಆಗಿದೆ.

ಗುಂಪು ಗುಂಪಾಗಿ ಇರುವ ಕೋತಿಗಳು:

ಕಚೇರಿ ಮುಂದೆ ಮೆಟ್ಟಿಲುಗಳ ಮೇಲೆ ಕುಳಿತು ಕೀಟಲೆ ಮಾಡುತ್ತಿವೆ, ಕಿಟಕಿ, ಬಾಗಿಲುಗಳನ್ನು ಒಡೆದು ಹಾಳು ಮಾಡುತ್ತಿವೆ. ಮಂಗಗಳ ಮಲಮೂತ್ರಗಳ ವಿಸರ್ಜನೆಯಿಂದ ಇಡೀ ಕಚೇರಿ ಆವರಣವನ್ನು ಅನೈರ್ಮಲ್ಯಗೊಳಿಸುತ್ತವೆ. ನೆಟ್‌ವರ್ಕ್ ಸಂಪರ್ಕದ ವೈರುಗಳನ್ನು ಕಿತ್ತು ಹಾಕುತ್ತಿವೆ. ವೈರಿಗಳನ್ನು ದುರಸ್ತಿ ಗೊಳಿಸುವುದೇ ದೊಡ್ಡ ಸವಾಲಾಗಿದೆ. ಸಿಬ್ಬಂದಿಗೆ ಮಂಗಗಳ ಮಲ, ಮೂತ್ರ ಸ್ವಚ್ಛಗೊಳಿಸುವುದೇ ದೊಡ್ಡ ಸವಾಲಾಗಿದೆ.ತಹಸೀಲ್ದಾರ್ ಕಚೇರಿ, ಕಂದಾಯ ಇಲಾಖೆಯ ಆರ್‌ಆರ್‌ಟಿ ಶಾಖೆ, ಉಪ ತಹಸೀಲ್ದಾರ್ ಕಚೇರಿ, ಸಭಾಂಗಣ, ಚುನಾವಣಾ ಶಾಖೆ, ಭೂಮಾಪನ ಇಲಾಖೆಗಳಲ್ಲಿ ಕೋತಿಗಳ ಚೇಷ್ಟೆಯಿಂದ ಅಧಿಕಾರಿಗಳು, ಸಿಬ್ಬಂದಿ ರೋಸಿ ಹೋಗಿದ್ದು, ನಿತ್ಯ ಕಚೇರಿಯ ಬಾಗಿಲುಗಳನ್ನು ಮುಚ್ಚಿಕೊಂಡೇ ಕಾರ್ಯನಿರ್ವಹಿಸಬೇಕಾಗಿದೆ. ಇನ್ನಾದರೂ ಸಂಬಂಧಿಸಿದ ಅಧಿಕಾರಿಗಳು ಕೋತಿಗಳ ಹಾವಳಿಗೆ ಕಡಿವಾಣ ಹಾಕಲು ಮುಂದಾಗಬೇಕಿದೆ.

ಆಡಳಿತ ಸೌಧದಲ್ಲಿ ಮಂಗಗಳ ಕಾಟ ಮಿತಿ ಮೀರಿದೆ. ಸರ್ಕಾರಿ ಕೆಲಸಗಳಿಗೆ ಆಗಮಿಸುವ ನಾಗರಿಕರ ಕೈಲಿರುವ ಬ್ಯಾಗುಗಳನ್ನು ಕಸಿದುಕೊಳ್ಳಲು ಮುಂದಾಗುತ್ತಿವೆ. ಆವರಣದಲ್ಲಿ ನಿಲ್ಲಿಸುತ್ತಿರುವ ದ್ವಿಚಕ್ರ ವಾಹನಗಳ ಕವರುಗಳನ್ನು ಹರಿದು ಹಾಳು ಮಾಡುತ್ತಿವೆ. ಸಾರ್ವಜನಿಕರು ಭಯದಲ್ಲಿ ಕಚೇರಿಗೆ ಆಗಮಿಸುವಂತಾ ಸ್ಥಿತಿ ಎದುರಾಗಿದ್ದು, ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಕೋತಿಗಳ ಹಾವಳಿ ನಿಯಂತ್ರಿಸಬೇಕಿದೆ.- ನಾಗೇಂದ್ರಪ್ಪ, ದಸಂಸ ಮುಖಂಡ ರಾಯಾಪುರ.