ಸಾರಾಂಶ
ದೊಡ್ಡಬಳ್ಳಾಪುರ ನಗರ ವ್ಯಾಪ್ತಿಯಲ್ಲಿ ಸಾರ್ವಜನಿಕ ಗಣೇಶೋತ್ಸವ ಆಚರಿಸುವ ಸಂಘ-ಸಂಸ್ಥೆಗಳಿಗೆ ವಿವಿಧ ಇಲಾಖೆಗಳ ಅನುಮತಿ ಪತ್ರವನ್ನು ಒದಗಿಸಲು ಇಲ್ಲಿನ ನಗರಸಭೆಯಲ್ಲಿ ಏಕಗವಾಕ್ಷಿ ವ್ಯವಸ್ಥೆ ಜಾರಿಗೆ ತರಲಾಗಿದ್ದು, ಮಂಗಳವಾರ ಅನುಮತಿ ಪತ್ರ ವಿತರಣೆ ಪ್ರಕ್ರಿಯೆಗೆ ಚಾಲನೆ ನೀಡಲಾಯಿತು.
ಕನ್ನಡಪ್ರಭ ವಾರ್ತೆ ದೊಡ್ಡಬಳ್ಳಾಪುರ
ಗೌರಿ-ಗಣೇಶ ಹಬ್ಬದ ಹಿನ್ನಲೆ ದೊಡ್ಡಬಳ್ಳಾಪುರ ನಗರ ವ್ಯಾಪ್ತಿಯಲ್ಲಿ ಸಾರ್ವಜನಿಕ ಗಣೇಶೋತ್ಸವ ಆಚರಿಸುವ ಸಂಘ-ಸಂಸ್ಥೆಗಳಿಗೆ ವಿವಿಧ ಇಲಾಖೆಗಳ ಅನುಮತಿ ಪತ್ರವನ್ನು ಒದಗಿಸಲು ಇಲ್ಲಿನ ನಗರಸಭೆಯಲ್ಲಿ ಏಕಗವಾಕ್ಷಿ ವ್ಯವಸ್ಥೆ ಜಾರಿಗೆ ತರಲಾಗಿದ್ದು, ಮಂಗಳವಾರ ಅನುಮತಿ ಪತ್ರ ವಿತರಣೆ ಪ್ರಕ್ರಿಯೆಗೆ ಚಾಲನೆ ನೀಡಲಾಯಿತು.ಗಣೇಶ ವಿಗ್ರಹ ಪ್ರತಿಷ್ಠಾಪನೆ ಕುರಿತು ಅನುಮತಿಗಾಗಿ ನಗರಸಭೆಯಲ್ಲಿ ಸಿಂಗಲ್ ವಿಂಡೋ (ಏಕ ಗವಾಕ್ಷಿ) ವ್ಯವಸ್ಥೆ ಮಾಡಲಾಗಿದ್ದು, ಒಂದೇ ಅರ್ಜಿ, ಒಂದೇ ಅಫಿಡವಿಟ್ ಹಾಗೂ ಮತ್ತಿತರೆ ದಾಖಲೆಗಳನ್ನು ಸಲ್ಲಿಸಿ, ನಿಗಧಿ ಪಡಿಸಿರುವ ಎಲ್ಲಾ ಇಲಾಖೆಗಳಿಂದ ನಿರ್ದಿಷ್ಟ ಶುಲ್ಕ ಪಾವತಿಸಿ ಅನುಮತಿ ಪಡೆಯಬಹುದಾಗಿದೆ.
ಮಂಗಳವಾರ ನಗರಸಭೆ ಪೌರಾಯುಕ್ತರ ಸಮ್ಮುಖದಲ್ಲಿ ಸಂಘ-ಸಂಸ್ಥೆಗಳಿಗೆ ಅನುಮತಿ ಪತ್ರ ವನ್ನು ನೀಡಲಾಯಿತು. ಪೊಲೀಸ್ ಇಲಾಖೆ, ಬೆಸ್ಕಾಂ, ಅಗ್ನಿ ಶಾಮಕ ದಳ, ತಾಲೂಕು ಪಂಚಾಯಿತಿಗಳ ಅನುಮತಿ ಪತ್ರ ಒಂದೇ ಕಡೆ ದೊರೆಯುವಂತೆ ವ್ಯವಸ್ಥೆ ಮಾಡಲಾಗಿದೆ. ಅರ್ಜಿದಾರರು ಆಧಾರ್ ಕಾರ್ಡ್, ಅರ್ಜಿ, ಸ್ಥಳ ಮಾಹಿತಿ ಇತ್ಯಾದಿಗಳನ್ನು ಸಲ್ಲಿಸಬೇಕು.ಏಕಗಾವಕ್ಷಿ ವ್ಯವಸ್ಥೆ ಬೆಳಗ್ಗೆ 10.30ರಿಂದ ಸಂಜೆ 5.30ರವರೆಗೆ ಸೆಪ್ಟೆಂಬರ್ 5ರ ಗುರುವಾರದವರೆಗೆ ಇರಲಿದೆ ಎಂದು ನಗರಸಭೆ ಮೂಲಗಳು ತಿಳಿಸಿವೆ.ಗಣೇಶೋತ್ಸವ ಅನುಮತಿಗಾಗಿ ಪೊಲೀಸ್ ನೋಡಲ್ ಅಧಿಕಾರಿ ಎಎಸೈ ನಾರಾಯಣ ರಾವ್(7975059056), ನಗರಸಭೆ: 9448854868, ಅಗ್ನಿಶಾಮಕ: 8310790404, ಬೆಸ್ಕಾಂ: 9449844785, ತಾಲೂಕು ಪಂಚಾಯತಿ: 9916254000 ಸಂಪರ್ಕಿಸಬಹುದಾಗಿದೆ.