ಹುಬ್ಬಳ್ಳಿ: ಹು- ಧಾ ಮಹಾನಗರದಲ್ಲಿ ಮಳೆಯ ಅರ್ಭಟ ಭಾನುವಾರವೂ ಮುಂದುವರಿಯಿತು. ಬಿಆರ್‌ಟಿಎಸ್‌ ಕಾರಿಡಾರ್‌ ಸೇರಿದಂತೆ ವಿವಿಧೆಡೆ ಮಳೆ ನೀರು ನಿಂತು ಸಂಚಾರ ವ್ಯವಸ್ಥೆ ಅಸ್ತವ್ಯಸ್ತಗೊಂಡಿತ್ತು. ಮಳ‍ೆಯಿಂದ ಹಲವೆಡೆ ವಿದ್ಯುತ್‌ ಕೈಕೊಟ್ಟಿತ್ತು.

ಭಾನುವಾರ ಬೆಳಗ್ಗೆಯಿಂದ ಆಗಾಗ ಅಲ್ಪಸ್ವಲ್ಪ ಸುರಿಯುತ್ತಿದ್ದ ಮಳೆ, ಮಧ್ಯಾಹ್ನ 3.30ಕ್ಕೆ ರಭಸವಾಯಿತು. ಬರೋಬ್ಬರಿ 2 ಗಂಟೆ ಕಾಲ ಬಿಟ್ಟೂ ಬಿಡದೇ ಧಾರಾಕಾರವಾಗಿ ವರುಣ ಅಬ್ಬರಿಸಿದ.

ಇಲ್ಲಿನ ಉಣಕಲ್‌ ಕೆರೆ ಬಳಿಯ ಬಿಆರ್‌ಟಿಎಸ್‌ ಕಾರಿಡಾರ್‌ನಲ್ಲಿ ಮೊಳಕಾಲವರೆಗೂ ನೀರು ನಿಂತು ಒಂದೂವರೆ ಗಂಟೆಗೂ ಅಧಿಕ ಕಾಲ ವಾಹನಗಳೆಲ್ಲ ನಿಂತಲ್ಲೇ ನಿಂತಿದ್ದವು. ಇನ್ನು ಕಟ್ನೂರು, ಗಿರಿಯಾಲ ಸೇರಿದಂತೆ ರಿಂಗ್‌ ರೋಡ್‌ ಸಂಪರ್ಕಿಸುವ ಹಳ್ಳಿಗಳಲ್ಲಿ ಸರ್ವೀಸ್‌ ರಸ್ತೆಗಳಲ್ಲಿ ಮೊಳಕಾಲವರೆಗೂ ನೀರು ನಿಂತಿತ್ತು. ಸರ್ವೀಸ್‌ ರಸ್ತೆಯಲ್ಲಿನ ಸೇತುವೆ ಕೆಳಗೆ ಮಳೆ ನೀರಿನ ಮಧ್ಯೆ ದ್ವಿಚಕ್ರವಾಹನಗಳು ಚಲಿಸಲು ಸಾಧ್ಯವಾಗದೇ ಸರಿಸುಮಾರು ಒಂದುಗಂಟೆಗೂ ಅಧಿಕ ನಿಂತಲ್ಲೇ ನಿಂತಿದ್ದವು.

ಈ ನಡುವೆ ಹೆದ್ದಾರಿ ಮೇಲಿಂದ ಜಲಪಾತದಂತೆ ಕೆಳಕ್ಕೆ ಮಳೆ ನೀರು ಬೀಳುತ್ತಿತ್ತು. ಮೊದಲೇ ನೆನೆದಿದ್ದ ಯುವಕರ ಗುಂಪು ತಮ್ಮ ವಾಹನಗಳನ್ನು ಪಕ್ಕದಲ್ಲಿ ನಿಲ್ಲಿಸಿ ಹೀಗೆ ಮೇಲಿಂದ ಬೀಳುತ್ತಿದ್ದ ನೀರಲ್ಲಿ ಸ್ನಾನ ಮಾಡುತ್ತಿದ್ದ ದೃಶ್ಯವೂ ಕಂಡು ಬಂತು.

ನಗರದ ದುರ್ಗದಬೈಲ್‌, ದಾಜೀಬಾನ್‌ಪೇಟ, ಶಾ ಬಜಾರ್‌, ಕಮರಿಪೇಟೆ, ಉಣಕಲ್‌, ಸಾಯಿ ಮಂದಿರ ಹತ್ತಿರ, ಚೆನ್ನಮ್ಮ ಸರ್ಕಲ್‌, ಹಳೆ ಕೋರ್ಟ್‌ ಸರ್ಕಲ್‌‍, ನೇಕಾರ ನಗರ ಸೇರಿದಂತೆ ಕೆಲವು ಕಡೆಗಳಲ್ಲಿ ಚರಂಡಿಗಳು ಬ್ಲಾಕ್‌ ಆಗಿ ರಸ್ತೆಯ ಮೇಲೆಯೇ ನೀರು ಹರಿಯುವಂತಾಯಿತು.


ಕಳೆದ ಒಂದು ವಾರದಿಂದ ಆರಂಭವಾದ ಮಳೆಗೆ ಕೆಲವು ಪ್ರದೇಶಗಳಲ್ಲಿ ವಿದ್ಯುತ್‌ ಲೈನ್‌ ಕಡಿತಗೊಂಡ ಕಾರಣಕ್ಕೆ ವಿದ್ಯುತ್‌ ಕಣ್ಣಾಮುಚ್ಚಾಲೆ ಮುಂದುವರೆದಿತ್ತು. ಮಳೆಯಿಂದಾಗಿ ಕೆಲವು ಕಾಲೋನಿಯಲ್ಲಿ ಗಿಡ-ಮರಗಳ ಕೊಂಬೆಗಳು ಮುರಿದು ಬಿದ್ದವು. ಸಣ್ಣ-ಪುಟ್ಟ ಸಮಸ್ಯೆಗಳ ಕುರಿತು ಮಹಾನಗರದ ಜನತೆ ಹು-ಧಾ ಮಹಾನಗರ ಪಾಲಿಕೆ ಸಹಾಯವಾಣಿಗೆ ಕರೆ ಮಾಡುವ ಮೂಲಕ ದೂರುಗಳನ್ನು ಸಲ್ಲಿಸಿದರು.ಕತ್ತಲಲ್ಲಿ ಬಿಆರ್‌ಟಿಎಸ್‌: ಉಚಿತ ಪ್ರಯಾಣ

ಹುಬ್ಬಳ್ಳಿ: ಭಾರೀ ಮಳೆ, ಬಿರುಗಾಳಿ ಮತ್ತು ಕಾಮಗಾರಿ ಕಾರಣದಿಂದ ಕಳೆದ ಎರಡು ದಿನಗಳಿಂದ ಬಿಆರ್‌ಟಿಎಸ್ ನಿಲ್ದಾಣಗಳು ವಿದ್ಯುತ್ ವ್ಯತ್ಯಯವಾಗಿ ಕತ್ತಲಲ್ಲಿ ಮುಳುಗಿದ್ದು, ಚಿಗರಿ ಬಸ್ಸಿನಲ್ಲಿ ಉಚಿತ ಪ್ರಯಾಣ ಸಾಗಿದೆ.ಬೆಳಕೂ ಇಲ್ಲ, ಸರ್ವರ್ ಇಲ್ಲ. ಟಿಕೇಟ್ ತೆಗೆಯಲು ಸಾಧ್ಯವಾಗದೇ ಸಿಬ್ಬಂದಿ ಅನಿವಾರ್ಯವಾಗಿ ಪ್ರಯಾಣಿಕರನ್ನು ಹಾಗೆಯೇ ಪ್ರಯಾಣಿಸುವಂತೆ ಹೇಳುತ್ತಿದ್ದಾರೆ.