ಕನ್ನಡಪ್ರಭ ವಾರ್ತೆ ಮೈಸೂರು

ಜಿಲ್ಲೆಯಲ್ಲಿ ಈ ವರ್ಷ ಬರಗಾಲದ ಮುನ್ಸೂಚನೆ ಇರುವುದರಿಂದ ಯಾವುದೇ ಕಾರಣಕ್ಕೂ ಬೆಳೆ ಸಮೀಕ್ಷೆಯಲ್ಲಿ ಲೋಪ ಆಗಬಾರದು ಮತ್ತು ಶೇ. 100 ರಷ್ಟು ಸಮಿಕ್ಷೆಯಲ್ಲಿ ಪ್ರಗತಿ ಸಾಧಿಸಬೇಕು ಎಂದು ಜಿಲ್ಲಾಧಿಕಾರಿ ಜಿ. ಲಕ್ಷ್ಮೀಕಾಂತ ರೆಡ್ಡಿ ಹೇಳಿದರು.

ತಮ್ಮ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾ ಮಟ್ಟದ ಬೆಳೆ ಸಮೀಕ್ಷೆ ಅನುಷ್ಠಾನ ಸಮಿತಿ, ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ, ದ್ವಿದಳಧಾನ್ಯಗಳಲ್ಲಿ ಆತ್ಮ ನಿರ್ಭರತೆ ಅಭಿಯಾನ ಹಾಗೂ ಎಣ್ಣೆ ಕಾಳು ಅಭಿಯಾನ ಸಮಿತಿಗಳ ಸಭೆಯಲ್ಲಿ ಅವರು ಮಾತನಾಡಿದರು.

ಪೂರ್ವ ಮುಂಗಾರು ಬೆಳೆ ಸಮೀಕ್ಷೆಯನ್ನು ಮುಂಬರುವ 30 ದಿನಗಳ ಒಳಗಾಗಿ ಕಡ್ಡಾಯವಾಗಿ ಮುಗಿಸಬೇಕಿದೆ. ಜಿಲ್ಲೆಯಲ್ಲಿ ಒಟ್ಟು 9,96,708 ಪ್ಲಾಟ್‌ ಗಳಿದ್ದು, ಸಮೀಕ್ಷೆ ನಡೆಸಬೇಕಿದೆ. ಜಿಲ್ಲೆಯ ಒಟ್ಟು 1,301 ಗ್ರಾಮಗಳಲ್ಲಿ ಈ ಸಮೀಕ್ಷೆ ನಡೆಯಲಿದ್ದು, ಇದಕ್ಕಾಗಿ 1009 ಪಿ.ಆರ್ ಗಳನ್ನು ನೇಮಕ ಮಾಡಿಕೊಳ್ಳಲಾಗಿದೆ.

ಪ್ರತಿ ಬಾರಿ ಸಮೀಕ್ಷೆಯು ಶೇ. 94 ರಿಂದ ಶೇ. 96 ರಷ್ಟು ಮಾತ್ರ ಪ್ರಗತಿ ಕಾಣುತ್ತಿದ್ದು, ಕೆಲವೊಂದು ಭಾಗಗಳು ಕೈಬಿಟ್ಟು ಹೋಗುತ್ತಿವೆ. ಆದರೆ ಈ ಬಾರಿ ಶೇ. 1ರಷ್ಟು ಸಮೀಕ್ಷೆ ಬಾಕಿ ಉಳಿದರೂ ಸುಮಾರು 9,000 ರೈತರು ಯೋಜನೆಯಿಂದ ವಂಚಿತರಾಗುತ್ತಾರೆ. ಬರಗಾಲ ಘೋಷಣೆಯಾಗಿ ರೈತರಿಗೆ ಪರಿಹಾರ ನೀಡಬೇಕಾದ ವೇಳೆ ಬೆಳೆ ಸಮೀಕ್ಷೆಯ ಆಧಾರದ ಮೇಲೆಯೇ ಪರಿಹಾರ ವಿತರಿಸಬೇಕಾಗುತ್ತದೆ. ಆದ್ದರಿಂದ ಯಾವುದೇ ಒಬ್ಬ ರೈತರು ಕೂಡ ಸಮೀಕ್ಷೆಯಿಂದ ಹೊರಗುಳಿಯಬಾರದು ಎಂದರು.


ಸಮೀಕ್ಷೆ ಕಾರ್ಯಕ್ಕೆ ಸರಿಯಾಗಿ ಸ್ಪಂದಿಸದೆ ನಿಷ್ಕ್ರೀಯರಾಗಿರುವ ಅಥವಾ ಕೊನೆ ಕ್ಷಣದಲ್ಲಿ ಕೈಕೊಡುವ ಪಿ.ಆರ್ ಗಳನ್ನು ಈಗಲೇ ಗುರುತಿಸಿ, ಅವರ ಜಾಗಕ್ಕೆ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳುವ ಜವಾಬ್ದಾರಿಯನ್ನು ಕೃಷಿ, ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆ ಅಧಿಕಾರಿಗಳಿಗೆ ವಹಿಸಲಾಗಿದೆ. ಈ ವಿಷಯದಲ್ಲಿ ತಹಸೀಲ್ದಾರ್‌ ಗೂ ಕೂಡ ಸೂಕ್ತ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ ಎಂದರು.

ರಾಜ್ಯದಲ್ಲಿ ಪ್ರೂಟ್ ಐಡಿ ಇರುವಂತೆ ಸೆಂಟ್ರಲ್ ಪ್ರೂಟ್ ಐಡಿಯನ್ನು ಕ್ರಿಯೇಟ್ ಮಾಡಬೇಕಿದ್ದು, 50194 ಸೆಂಟ್ರಲ್ ಪ್ರೂಟ್ ಐಡಿ ಬಾಕಿ ಇದೆ. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ರೈತರಿಗೆ ಪ್ರೋತ್ಸಾಹ ಧನ ನೀಡಲು ಸೆಂಟ್ರಲ್ ಪ್ರೂಟ್ ಐಡಿ ಅವಶ್ಯವಿದೆ. ಆದ್ದರಿಂದ ಇದನ್ನು ಆದ್ಯತೆಯ ಮೇಲೆ ಮಾಡಬೇಕು. ರಾಜ್ಯದ ಪ್ರೂಟ್ ಐಡಿಯಲ್ಲಿ ಜಿಲ್ಲೆಯಲ್ಲಿ 3,31,342, ಫ್ರೂಟ್ಸ್‌ ಐಡಿಗೆ ಆಪ್ ಅಡಿಯಲ್ಲಿ ರೈತರ ಕೆಲವು ಪ್ಲಾಟ್‌ ಗಳು ಮಾತ್ರ ನೊಂದಣಿಯಾಗಿದ್ದು, ಉಳಿದಿರುವ ಪ್ಲಾಟ್‌ ಗಳನ್ನು ಫ್ರೂಟ್ಸ್‌ ಐಡಿಯಲ್ಲಿ ಸೇರ್ಪಡೆ ಮಾಡುವಂತೆ ಸೂಚಿಸಿದರು.

ಕೃಷಿ ಜಂಟಿ ನಿರ್ದೇಶಕ ಕೆ.ಎಚ್. ರವಿ ಮಾತನಾಡಿ, ಈ ಬಾರಿ ಬರಗಾಲದ ಪರಿಸ್ಥಿತಿ ಇರುವುದರಿಂದ ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿ ಹೆಚ್ಚಿನ ರೈತರು ನೋಂದಾಯಿಸಿಕೊಳ್ಳುವಂತೆ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.

ಈಗಾಗಲೇ ಕೆಲವು ದ್ವಿದಳ ಧಾನ್ಯಗಳ ವಿಮೆ ನೋಂದಣಿಗೆ ಅಂತಿಮ ದಿನ ಹತ್ತಿರವಿರುವುದರಿಂದ ಗ್ರಾಮ ಮಟ್ಟದಲ್ಲಿ ಆಟೋ ಪ್ರಚಾರ ಹಾಗೂ ಕರಪತ್ರಗಳ ಮೂಲಕ ವ್ಯಾಪಕ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.

ಪ್ರಧಾನ ಮಂತ್ರಿ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ ಅಡಿಯಲ್ಲಿ ತೋಟಗಾರಿಕೆ ಮತ್ತು ಕೃಷಿ ಇಲಾಖೆಯಿಂದ ಹನಿ ನೀರಾವರಿ ಹಾಗೂ ತುಂತುರು ನೀರಾವರಿ ಘಟಕಗಳಿಗೆ ಸಾಮಾನ್ಯ ವರ್ಗಕ್ಕೆ ಹಾಗೂ ಎಸ್ಸಿ, ಎಸ್ಟಿ ಫಲಾನುಭವಿಗಳಿಗೆ ಸಬ್ಸಿಡಿ ನೀಡಲಾಗುತ್ತಿದೆ ಇದರ ಸದುಪಯೋಗವನ್ನು ರೈತರು ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ಸಭೆಯಲ್ಲಿ ಜಿಪಂ ಸಿಇಒ ಎಸ್. ಯುಕೇಶ್ ಕುಮಾರ್ ಸೇರಿದಂತೆ ಕೃಷಿ, ತೋಟಗಾರಿಕೆ, ರೇಷ್ಮೆ ಇಲಾಖೆ ಅಧಿಕಾರಿಗಳು ಹಾಗೂ ವಿವಿಧ ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.