ಮುಂಗಾರು ಮಳೆ ಕೈಕೊಟ್ಟಿರುವ ಆತಂಕದ ನಡುವೆ ಗಣಿಜಿಲ್ಲೆ ಬಳ್ಳಾರಿಯ ರೈತರು ಈ ಬಾರಿ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯತ್ತ ಹೆಚ್ಚಿನ ಆಸಕ್ತಿ ತೋರಿದ್ದಾರೆ. ಕಳೆದ ನಾಲ್ಕೈದು ವರ್ಷಗಳಿಗೆ ಹೋಲಿಸಿದರೆ ಈ ಬಾರಿ ದಾಖಲೆ ಪ್ರಮಾಣದಲ್ಲಿ ರೈತರು ಬೆಳೆ ವಿಮೆಗೆ ಮೊರೆ ಹೋಗಿದ್ದಾರೆ.
ಮಂಜುನಾಥ ಕೆ.ಎಂ.
ಬಳ್ಳಾರಿ: ಮುಂಗಾರು ಮಳೆ ಕೈಕೊಟ್ಟಿರುವ ಆತಂಕದ ನಡುವೆ ಗಣಿ ಜಿಲ್ಲೆ ಬಳ್ಳಾರಿಯ ರೈತರು ಈ ಬಾರಿ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯತ್ತ ಹೆಚ್ಚಿನ ಆಸಕ್ತಿ ತೋರಿದ್ದಾರೆ. ಕಳೆದ ನಾಲ್ಕೈದು ವರ್ಷಗಳಿಗೆ ಹೋಲಿಸಿದರೆ ಈ ಬಾರಿ ದಾಖಲೆ ಪ್ರಮಾಣದಲ್ಲಿ ರೈತರು ಬೆಳೆ ವಿಮೆ ಮಾಡಿಸಿರುವುದು ವಿಶೇಷ.ಜಿಲ್ಲೆಯಲ್ಲಿ ಈ ಮುಂಗಾರು ಹಂಗಾಮಿನಲ್ಲಿ ಇದುವರೆಗೆ 37,740 ರೈತರು ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ನೋಂದಣಿಯಾಗಿದ್ದಾರೆ. ಒಟ್ಟು 26,580 ಹೆಕ್ಟೇರ್ ಪ್ರದೇಶದ ಬೆಳೆಗಳಿಗೆ ₹6.68 ಕೋಟಿ ಮೊತ್ತದ ವಿಮೆ ಮಾಡಿಸಲಾಗಿದೆ. ನೋಂದಣಿಯ ಪ್ರಕ್ರಿಯೆ ಅಂತಿಮ ಹಂತದಲ್ಲಿದ್ದು, ಇನ್ನಷ್ಟು ರೈತರು ಯೋಜನೆಗೆ ಸೇರುವ ಸಾಧ್ಯತೆ ಇದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಸಂಪೂರ್ಣ ಬೆಳೆನಷ್ಟದ ಆತಂಕ: ಈ ವರ್ಷ ಮುಂಗಾರು ಆರಂಭದಲ್ಲೇ ಸಮರ್ಪಕ ಮಳೆಯಾಗದ ಕಾರಣ ಜಿಲ್ಲೆಯ ಹಲವು ಭಾಗಗಳಲ್ಲಿ ಬಿತ್ತನೆಯಾದ ಬೆಳೆಗಳು ಒಣಗುವ ಸ್ಥಿತಿಗೆ ತಲುಪಿವೆ. ಕೆಲವು ಪ್ರದೇಶಗಳಲ್ಲಿ ಮಳೆಯ ಕೊರತೆಯಿಂದ ರೈತರು ಮರುಬಿತ್ತನೆ ಮಾಡಬೇಕಾದ ಪರಿಸ್ಥಿತಿ ಎದುರಾಗಿದೆ. ಬಿತ್ತನೆ, ಬೀಜ, ರಸಗೊಬ್ಬರ, ಕಾರ್ಮಿಕ ವೆಚ್ಚ ಸೇರಿದಂತೆ ಕೃಷಿ ಚಟುವಟಿಕೆಗೆ ಈಗಾಗಲೇ ಲಕ್ಷಾಂತರ ರುಪಾಯಿ ವೆಚ್ಚ ಮಾಡಿರುವ ರೈತರು, ಬೆಳೆ ಕೈಕೊಟ್ಟರೆ ಸಂಪೂರ್ಣ ನಷ್ಟ ಅನುಭವಿಸುವ ಆತಂಕದಲ್ಲಿದ್ದಾರೆ.ಕಳೆದ ಮುಂಗಾರು ಹಂಗಾಮಿನಲ್ಲಿ ಬೆಳೆ ಹಾನಿಗೊಳಗಾದ ಅನೇಕ ರೈತರಿಗೆ ಫಸಲ್ ಬಿಮಾ ಯೋಜನೆಯಡಿ ಪರಿಹಾರ ದೊರೆತಿತ್ತು. ಈ ಅನುಭವವೇ ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಯೋಜನೆಗೆ ಸೇರುವಂತೆ ಮಾಡಿದೆ. ಪ್ರಕೃತಿ ವೈಪರೀತ್ಯದಿಂದ ಬೆಳೆ ಹಾನಿಯಾದರೂ ಕನಿಷ್ಠ ಆರ್ಥಿಕ ನೆರವು ದೊರೆಯುತ್ತದೆ ಎಂಬ ವಿಶ್ವಾಸ ರೈತರದ್ದು. ಹೀಗಾಗಿ ಫಸಲ್ ಬಿಮಾ ಯೋಜನೆಗೆ ನೋಂದಣಿ ರೈತ ವಲಯದಿಂದ ಭಾರೀ ಸ್ಪಂದನೆ ಸಿಕ್ಕಿದೆ.
ಬಿಸಿಲೂರು ಖ್ಯಾತಿಯ ಬಳ್ಳಾರಿ ಜಿಲ್ಲೆ ಆಗಾಗ ಬರದ ಪರಿಸ್ಥಿತಿ ಎದುರಿಸುವ ಜಿಲ್ಲೆಗಳಲ್ಲಿ ಒಂದಾಗಿದೆ. ಹವಾಮಾನ ವೈಪರೀತ್ಯ, ಅನಿಯಮಿತ ಮಳೆ ಹಾಗೂ ಹೆಚ್ಚುತ್ತಿರುವ ಕೃಷಿ ವೆಚ್ಚದಿಂದ ರೈತರ ಆದಾಯ ಕುಸಿಯುತ್ತಿರುವ ಸಂದರ್ಭದಲ್ಲಿ ಬೆಳೆ ವಿಮೆ ಯೋಜನೆ ಒಂದು ಭದ್ರತಾ ಕವಚವಾಗಿ ಪರಿಣಮಿಸುತ್ತಿದೆ. ವಿಶೇಷವಾಗಿ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಈ ಯೋಜನೆ ಒಂದಷ್ಟು ಆರ್ಥಿಕ ಸಮಸ್ಯೆ ನೀಗಿಸುವ ನಿರೀಕ್ಷೆ ಮೂಡಿಸಿದೆ.ಹೆಚ್ಚು ರೈತರ ಸೇರ್ಪಡೆ: ಕೃಷಿ ಇಲಾಖೆಯು ಗ್ರಾಮಮಟ್ಟದಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಿ, ರೈತರಿಗೆ ಯೋಜನೆಯ ಮಹತ್ವವನ್ನು ವಿವರಿಸುತ್ತಿದೆ. ಸಾಮಾನ್ಯ ಸೇವಾ ಕೇಂದ್ರಗಳು, ಬ್ಯಾಂಕುಗಳು ಹಾಗೂ ಕೃಷಿ ಇಲಾಖೆಯ ಮೂಲಕ ನೋಂದಣಿಗೆ ಅಗತ್ಯ ನೆರವು ನೀಡಲಾಗುತ್ತಿದೆ. ಇದರ ಪರಿಣಾಮವಾಗಿಯೇ ಕಳೆದ ವರ್ಷಗಳಿಗಿಂತ ಹೆಚ್ಚಿನ ರೈತರು ಈ ಬಾರಿ ಯೋಜನೆಗೆ ಸೇರ್ಪಡೆಯಾಗಿದ್ದಾರೆ. ಆದರೆ, ರೈತರು ಬೆಳೆ ವಿಮೆ ಮಾಡಿಸಿಕೊಂಡಷ್ಟೇ ಸಾಲದು; ಬೆಳೆ ಹಾನಿಯಾದ ಸಂದರ್ಭದಲ್ಲಿ ನಿಗದಿತ ಅವಧಿಯೊಳಗೆ ಮಾಹಿತಿ ನೀಡುವುದು ಹಾಗೂ ಬೆಳೆ ಸಮೀಕ್ಷೆಗೆ ಸಹಕರಿಸುವುದು ಅಗತ್ಯವಾಗಿದೆ. ಇದರಿಂದ ಪರಿಹಾರ ವಿತರಣೆಯಲ್ಲಿ ವಿಳಂಬವಾಗುವುದನ್ನು ತಪ್ಪಿಸಬಹುದು ಎಂದು ಕೃಷಿ ಇಲಾಖೆ ಅಧಿಕಾರಿಗಳು ಹೇಳುತ್ತಾರೆ.
ಜಿಲ್ಲೆಯಲ್ಲಿ ಮಳೆಯ ಕೊರತೆ ಮುಂದುವರಿದರೆ ಬೆಳೆ ನಷ್ಟದ ಪ್ರಮಾಣ ಹೆಚ್ಚುವ ಸಾಧ್ಯತೆಯಿದೆ. ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯೇ ರೈತರಿಗೆ ಪ್ರಮುಖ ಆಸರೆಯಾಗಿದ್ದು, ನೋಂದಣಿ ಸಂಖ್ಯೆ ಏರಿಕೆಯಾಗಿರುವುದು ಕೃಷಿ ಕ್ಷೇತ್ರದ ಆತಂಕದ ಚಿತ್ರಣ ಪ್ರತಿಬಿಂಬಿಸಿದೆ.ಈ ಬಾರಿ ಮಳೆಯಿಲ್ಲದೆ ಬೆಳೆಗಳು ಒಣಗಿ ಹೋಗುತ್ತಿದ್ದು, ಈ ಬಾರಿ ಬೆಳೆವಿಮೆ ಮಾಡಿಸಿರುವೆ. ವಿಮೆ ಹಣ ಸಿಕ್ಕರೆ ಒಂದಷ್ಟು ಸಮಸ್ಯೆ ನಿವಾರಣೆಯಾಗುವ ನಿರೀಕ್ಷೆಯಲ್ಲಿದ್ದೇನೆ ಎಂದು ಬಳ್ಳಾರಿ ತಾಲೂಕು ಶಿಡಗಿನಮೊಳ ರೈತ ಹುಸೇನಪ್ಪ ಹೇಳಿದರು.
2026/27ನೇ ಸಾಲಿನ ಮುಂಗಾರು ಹಂಗಾಮಿನ ತಾಲೂಕುವಾರು ಬೆಳೆವಿಮೆ ನೋಂದಣಿಬಳ್ಳಾರಿ ತಾಲೂಕು: ನೊಂದಣಿಯಾದ ರೈತರು 5575
ವಿಸ್ತ್ರೀರ್ಣ 4752 ಹೆಕ್ಟೇರ್ರೈತರ ವಿಮಾಕಂತು ₹120 ಲಕ್ಷ
ಕುರುಗೋಡು: ರೈತರು 3348ವಿಸ್ತ್ರೀರ್ಣ 2184 ಹೆಕ್ಟೇರ್
ರೈತರ ವಿಮಾಕಂತು ₹55 ಲಕ್ಷಸಿರುಗುಪ್ಪ: ರೈತರು 16,381
ವಿಸ್ತ್ರೀರ್ಣ 11,370 ಹೆಕ್ಟೇರ್ರೈತರ ವಿಮಾಕಂತು ₹288 ಲಕ್ಷ
ಕಂಪ್ಲಿ:ರೈತರು 3985
ವಿಸ್ತ್ರೀರ್ಣ 2426 ಹೆಕ್ಟೇರ್ರೈತರ ವಿಮಾಕಂತು ₹61 ಲಕ್ಷ
ಸಂಡೂರು:ರೈತರು 8451
ವಿಸ್ತ್ರೀರ್ಣ 5846ರೈತರ ವಿಮಾಕಂತು ₹141 ಲಕ್ಷ