ಮುಂಗಾರು ಮಳೆ; ರೈತರಲ್ಲಿ ಮೂಡಿದ ಆಶಾಕಿರಣ

| Published : May 29 2024, 12:48 AM IST

ಮುಂಗಾರು ಮಳೆ; ರೈತರಲ್ಲಿ ಮೂಡಿದ ಆಶಾಕಿರಣ
Share this Article
  • FB
  • TW
  • Linkdin
  • Email

ಸಾರಾಂಶ

ಕೃಷಿ ಚಟುವಟಿಕೆ ಗರಿಗೆದರುತ್ತಿದ್ದು, ಇದಕ್ಕೆ ಪೂರಕವಾಗಿ ಕೃಷಿ ಇಲಾಖೆ ಕೂಡ ರೈತರ ಬೇಡಿಕೆಗೆ ಅನುಗುಣವಾಗಿ ಬಿತ್ತನೆ ಬೀಜ, ಗೊಬ್ಬರ, ಕೃಷಿ ಪರಿಕರ ಪೂರೈಸಲು ಎಲ್ಲಾ ರೀತಿಯಲ್ಲೂ ಸಜ್ಜಾಗಿದೆ.

ಕನ್ನಡಪ್ರಭ ವಾರ್ತೆ ಅಫಜಲ್ಪುರ

ತಾಲೂಕಿನಲ್ಲಿ ಮುಂಗಾರು ಪೂರ್ವ ಮಳೆ ರೈತಾಪಿ ವರ್ಗದಲ್ಲಿ ಭರವಸೆ ಆಶಾಕಿರಣ ಮೂಡಿಸಿದೆ. ಕೃಷಿ ಚಟುವಟಿಕೆ ಗರಿಗೆದರುತ್ತಿದ್ದು, ಇದಕ್ಕೆ ಪೂರಕವಾಗಿ ಕೃಷಿ ಇಲಾಖೆ ಕೂಡ ರೈತರ ಬೇಡಿಕೆಗೆ ಅನುಗುಣವಾಗಿ ಬಿತ್ತನೆ ಬೀಜ, ಗೊಬ್ಬರ, ಕೃಷಿ ಪರಿಕರ ಪೂರೈಸಲು ಎಲ್ಲಾ ರೀತಿಯಲ್ಲೂ ಸಜ್ಜಾಗಿದೆ.ಕಳೆದ ಒಂದು ವಾರದಿಂದ ತಾಲೂಕಿನ ಕರಜಗಿ ಅತನೂರ ಗೊಬ್ಬೂರ ಅಫಜಲ್ಪುರ ಹೋಬಳಿ ವ್ಯಾಪ್ತಿ ಎಲ್ಲೆಡೆ ಮಳೆ ವಾತಾವರಣ ಸೃಷ್ಠಿಯಾಗಿ ಬಿರುಗಾಳಿ ಸಹಿತ ಅಲ್ಲಲ್ಲಿ ಉತ್ತಮ ಮಳೆ ಸುರಿಯುತ್ತಿದ್ದು, ಬರದಿಂದ ಕಂಗೆಟ್ಟಿದ್ದ ಅನ್ನದಾತರಿಗೆ ಭರವಸೆ ಬೆಳಕು ಮೂಡಿದೆ. ಅದರಲ್ಲೂ ಒಂದು ವಾರದದಿಂದ ತಾಲೂಕಿನಾದ್ಯಂತ ಉತ್ತಮ ಮೋಡ ಕವಿದ ವಾತಾವರಣದ ಜತೆಗೆ ಉತ್ತಮ ಹಸಿ ಮಳೆಯಾಗಿದ್ದು, ರೈತರು ತಮ್ಮ ಜಮೀನಿನ ಹೊಲ ಗದ್ದೆಗಳತ್ತ ಖುಷಿಯಿಂದ ಮುಖ ಮಾಡಿ ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದಾರೆ.

ಉಳುಮೆಗೆ ಸಿದ್ಧತೆ: ತಾಲೂಕಿನಲ್ಲಿ ವಾಡಿಕೆಯಂತೆ ಮುಂಗಾರು ಪೂರ್ವ ಮಳೆ ಚುರುಕಾಗಿದ್ದು, ರೈತ ಸಮುದಾಯದಲ್ಲಿ ಮಂದಹಾಸ ಮೂಡಿಸಿದೆ. ಈ ವರ್ಷ ಉತ್ತಮ ಮಳೆ, ಬೆಳೆ ನಿರೀಕ್ಷೆಯೊಂದಿಗೆ ಕೃಷಿ ಚಟುವಟಿಕೆಗಳು ಗರಿಗೆದರಿವೆ. ಭಾರೀ ಉತ್ಸಾಹದಿಂದ ಜಮೀನುಗಳನ್ನು ಎತ್ತು, ಟ್ರ್ಯಾಕ್ಟರ್ ನೇಗಿಲು, ಕುಂಟೆಗಳ ಉಳುಮೆ ಮೂಲಕ ಹದಗೊಳಿಸುವುದು, ಕಸಕಡ್ಡಿ ಆರಿಸಿ ಹೊಲ ಸ್ವಚ್ಛಗೊಳಿಸಿ. ತಿಪ್ಪೆಗೊಬ್ಬರ, ಜಮೀನಿಗೆ ಹರಡುವ ಮೂಲಕ ಬಿತ್ತನೆಗೆ ಅನುಕೂಲವಾಗುವಂತೆ ಉಳುಮೆ ಮಾಡಿ ಭೂಮಿ ಹದಗೊಳಿಸುತ್ತಿದ್ದಾರೆ.

ಬಾಡುತ್ತಿದ್ದ ಬೆಳೆಗೆ ಜೀವಾಮೃತ: ರೈತರು ಕಬ್ಬು ಬಾಳೆ, ತರಕಾರಿ ಸೇರಿ ಇನ್ನಿತರ ಹಲವು ರೀತಿಯ ವಾಣಿಜ್ಯ ಬೆಳೆಗಳ ಬಿತ್ತನೆ ಮಾಡಿದ್ದಾರೆ. ಆದರೆ ಮಳೆ ಇಲ್ಲದೆ ಕಂಗಾಲಾಗಿದ್ದ ರೈತರ ನಿರೀಕ್ಷೆಯಂತೆ ವರುಣ ಕೃಪೆ ತೋರಿದ್ದು, ಬಾಡುತ್ತಿದ್ದ ಬೆಳೆಗೆ ಜೀವಾಮೃತ ಸಿಕ್ಕಿದಂತಾಗಿದೆ ಬೆಳೆಗಳು ಹಸಿರಿನಿಂದ ನಳನಳಿಸುತ್ತಿವೆ.

ಸದ್ಯ ಮಳೆ ಸುರಿಯುತ್ತಿರುವ ಪರಿಣಾಮ ಬರಗಾಲದಿಂದ ತತ್ತರಿಸಿ ಹೋಗಿದ್ದ ತಾಲೂಕಿನ ಜನರಿಗೆ ಒಂದಿಷ್ಟು ಸಂತಸ ತಂದಿದೆ. ನೀರಿಲ್ಲದೆ ಒಣಗಿದ್ದ ಕೆರೆ, ಕಟ್ಟೆ ಹಳ್ಳಕೊಳ್ಳಗಳಲ್ಲಿ ಮಳೆಯ ನೀರು ಶೇಖರಣೆಯಾಗುತ್ತಿದೆ. ಪರಿಸರದಲ್ಲಿ ಹಸಿರು ಕಾಣುವಂತಾಗಿದ್ದು, ಪ್ರಾಣಿ ಪಕ್ಷಿಗಳು ಸೇರಿ ಜಾನುವಾರುಗಳಿಗೆ ಕುಡಿಯವ ನೀರು ಹಾಗೂ ಮೇವಿನ ಬರ ನೀಗಿಸಿದೆ.