ಸಾರಾಂಶ
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಜಿಲ್ಲೆಯಲ್ಲಿ ಮುಂಗಾರು ಪೂರ್ವ ಮಳೆ ಬಳಿಕ ಮುಂಗಾರು ಮಳೆ ಚುರುಕುಗೊಂಡಿದ್ದು, ಜಿಲ್ಲೆಯ ಹಲವಡೆ ದಿನವಿಡೀ ಮಳೆ ಸುರಿಯುತ್ತಿದೆ.ಕಳೆದ ಬಾರಿ ಮಳೆ ಕೊರತೆಯಿಂದಾಗಿ ಕಳೆಗುಂದಿದ್ದ ಶಿವಮೊಗ್ಗ ಜಿಲ್ಲೆ ಈ ಬಾರಿ ಮುಂಗಾರು ಪೂರ್ವ ಹಾಗೂ ಮುಂಗಾರು ಮಳೆಯಿಂದ ಕಳೆಗಟ್ಟುತ್ತಿದೆ. ಬರದಿಂದ ಬರಿದಾಗಿದ್ದ ಕರೆ, ಕಟ್ಟೆಗಳು ನಿರಂತರ ಕಂಗೊಳಿಸುತ್ತಿವೆ. ಆದರೆ, ಕೆಲವಡೆ ಸಿಡಿಲು ಸಹಿತ ಜೋರು ಮಳೆಗೆ ಮನೆಗೆ ಮರ ಬಿದ್ದು ಹಾನಿಯಾಗಿರುವ ಘಟನೆಗಳು ನಡೆದಿವೆ.
ಗಾಳಿ ಮಳೆಗೆ ಮನೆಯ ಮೇಲೆ ಉರುಳಿದ ಮರಭಾರಿ ಗಾಳಿ ಮಳೆಗೆ ರಿಪ್ಪನ್‌ಪೇಟೆ ಸಮೀಪದ ಹರತಾಳು ಗ್ರಾಮದ ದೊಂಬೆಕೊಪ್ಪ ಗ್ರಾಮದ ಮಣಿ ಎಂಬುವರ ವಾಸದ ಮನೆಯ ಮೇಲೆ ಮರವೊಂದು ಉರುಳಿ ಬಿದ್ದ ಪರಿಣಾಮ ಲಕ್ಷಾಂತರ ರುಪಾಯಿ ನಷ್ಟ ಸಂಭವಿಸಿದ ಘಟನೆ ಶನಿವಾರ ನಡೆದಿದೆ. ಗಾಳಿಮಳೆಯಿಂದ ಮನೆ ಮೇಲೆ ಮರ ಉರುಳಿಬಿದ್ದು ಸಾಕಷ್ಟು ಹಾನಿಗೀಡಾದ ಸ್ಥಳಕ್ಕೆ ಶಾಸಕ ಗೋಪಾಲಕೃಷ್ಣ ಬೇಳೂರು ಭಾನುವಾರ ಬೆಳಗ್ಗೆ ಭೇಟಿ ನೀಡಿ ಸಂತ್ರಸ್ತರಿಗೆ ಧೈರ್ಯ ತುಂಬಿ ವೈಯಕ್ತಿಕ ಧನಸಹಾಯದ ನೀಡಿ ತಕ್ಷಣ ಸರ್ಕಾರದಿಂದ ನೀಡಲಾಗುವ ಪರಿಹಾರದ ಮೊತ್ತ ಕೊಡಿಸಲು ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಸೂಚನೆ ನೀಡಿದರು. ಈ ಸಂದರ್ಭದಲ್ಲಿ ಹರತಾಳು ಗ್ರಾಮ ಪಂಚಾಯಿತಿ ಸದಸ್ಯ ಸಾಕಮ್ಮ, ಶಿವಕುಮಾರ ಮತ್ತು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಮುಖಂಡರು ಹಾಗೂ ಗ್ರಾಮಸ್ಥರು ಮತ್ತು ಸಂತ್ರಸ್ತ ಕುಟುಂಬವರ್ಗ ಹಾಜರಿದ್ದರು.
ತೀರ್ಥಹಳ್ಳಿಯಲ್ಲೂ ಮರ ಬಿದ್ದು ಮನೆಗೆ ಹಾನಿತೀರ್ಥಹಳ್ಳಿ: ಶನಿವಾರ ಸುರಿದ ಭಾರಿ ಗಾಳಿ ಮಳೆಯಿಂದ ಮೇಲಿನಕುರುವಳ್ಳಿ ಗ್ರಾಪಂ ವ್ಯಾಪ್ತಿಯ ಹುಣಸವಳ್ಳಿ ಗ್ರಾಮದ ಪುಟ್ಟಾಚಾರ್ ಎಂಬವರ ಮನೆ ಮೇಲೆ ಮರ ಬಿದ್ದು ಹಾನಿ ಸಂಭವಿಸಿದೆ. ಮನೆಯ ಮಾಡು ಪೂರ್ಣ ಜಖಂಗೊಂಡಿದ್ದು ಸಾವಿರಾರು ರುಪಾಯಿ ನಷ್ಟ ಸಂಭವಿಸಿದೆ. ಸ್ಥಳಕ್ಕೆ ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
---------------ಮಳೆಗಾಲದಲ್ಲಿ ಅಧಿಕಾರಿಗಳು ಕೇಂದ್ರ ಸ್ಥಾನ ಬಿಡುವಂತಿಲ್ಲ: ಶಾಸಕ ಬೇಳೂರು ಗೋಪಾಲಕೃಷ್ಣ ಸೂಚನೆ ಹೊಸನಗರ: ಮುಂಗಾರು ಮಳೆ ಉತ್ತಮವಾಗಿ ಆರಂಭಗೊಳ್ಳುವ ನಿರೀಕ್ಷೆಯಿದ್ದು, ಮಳೆಯಿಂದ ಆಗಬಹುದಾದ ತೊಂದರೆಗಳ ಬಗ್ಗೆ ಸ್ಥಳೀಯ ಅಧಿಕಾರಿಗಳು ಮುನ್ನೆಚ್ಚರಿಕೆ ಕ್ರಮಗಳ ಕೈಗೊಳ್ಳಬೇಕು ಎಂದು ಶಾಸಕ ಬೇಳೂರು ಗೋಪಾಲಕೃಷ್ಣ ಅಧಿಕಾರಿಗಳಿಗೆ ಸೂಚಿಸಿದರು.ತಾಲೂಕಿನ ಹರತಾಳು ಗ್ರಾಮ ಪಂಚಾಯತಿ ವ್ಯಾಪ್ತಿಯ ದೊಂಬೇಕೊಪ್ಪ ಗ್ರಾಮದಲ್ಲಿ ಶನಿವಾರ ಸುರಿದ ಬಾರಿ ಮಳೆಗೆ ಮನೆ ಕಳೆದುಕೊಂಡ ಮಣಿ ಕುಟುಂಬ ಭೇಟಿಯಾಗಿ ಸಾಂತ್ವನ ಹಾಗೂ ವೈಯಕ್ತಿಕ ಧನ ಸಹಾಯ ಮಾಡಿದರು. ಮಳೆಗಾಲ ಮುಗಿಯುವವರೆಗೂ ಅಧಿಕಾರಿಗಳು ತಮ್ಮ ಕೇಂದ್ರ ಸ್ಥಾನದಲ್ಲೇ ಇರುವಂತೆ ಸೂಚಿಸಿದರು.ಶನಿವಾರ ಬಂದ ಮಳೆಗೆ ದೊಂಬೇಕೊಪ್ಪ ಗ್ರಾಮದ ಮಣಿ ಎಂಬುವವರ ಮನೆ ಮೇಲೆ ಮರ ಉರುಳಿ ಅಪಾರ ಪ್ರಮಾಣದ ನಷ್ಟ ಉಂಟಾಗಿತ್ತು. ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದ ಶಾಸಕರ ಆಪ್ತ ಕಾರ್ಯದರ್ಶಿ ಮಂಜುನಾಥ ಸಣ್ಣಕ್ಕಿ ಶಾಸಕರ ಸಹಕಾರದ ಭರವಸೆಯ ಕುಟುಂಬಕ್ಕೆ ನೀಡಿದ್ದರು. ಅದರಂತೆ ಬೇಳೂರು ಗೋಪಾಲಕೃಷ್ಣ ಭಾನುವಾರ ಭೇಟಿ ನೀಡಿ ಮನೆ ಕಳೆದುಕೊಂಡ ಕುಟುಂಬಕ್ಕೆ ವೈಯಕ್ತಿಕವಾಗಿ ₹10 ಸಾವಿರಗಳ ಧನ ಸಹಾಯ ನೀಡಿ, ಸರ್ಕಾರದಿಂದ ಬರುವ ಸಹಾಯ ಮತ್ತು ನೆರವು ಒದಗಿಸಿಕೊಡುವ ಭರವಸೆ ನೀಡಿದರು. ಜೊತೆಗೆ ನಿರಾಶ್ರಿತ ಕುಟುಂಬದ ಮಕ್ಕಳ ಶಿಕ್ಷಣಕ್ಕೆ ಯಾವುದೇ ತೊಂದರೆ ಆಗದಂತೆ ಸ್ಥಳೀಯ ಗ್ರಾಮ ಪಂಚಾಯತಿ ಅಧಿಕಾರಿಗಳು ಕ್ರಮ ವಹಿಸುವಂತೆ ಸೂಚಿಸಿದರು.
ಈ ಸಂದರ್ಭದಲ್ಲಿ ಹರಿದ್ರಾವತಿ ಗ್ರಾಮ ಪಂಚಾಯತಿ ಅಧ್ಯಕ್ಷ ಕೆ.ಆರ್.ಮಂಜುನಾಥ, ಮುಖಂಡರುಗಳಾದ ಮಂಡಗಳಲೆ ಗಣಪತಿ, ಶೇಖರಪ್ಪ ಗೌಡ, ಸಾಕಮ್ಮ ಮನೋಹರ್, ಗುಡ್ಲೇಕೇವಿ ಹಿರಿಯಪ್ಪ, ಇಕ್ಬಾಲ್, ಏರ್ಟೆಲ್ ಚಂದ್ರು, ಸಾಧಿಕ್ ಅಲಿ, ಶಿವಮೂರ್ತಿ ಹರತಾಳು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು .ಮುನ್ನೆಚ್ಚರಿಕೆ ಕ್ರಮ ವಹಿಸಿಸದ್ಯಕ್ಕೆ ಉತ್ತಮ ಮಳೆ ಆಗುವ ವಾತಾವರಣ ಕಂಡು ಬರುತ್ತಿದ್ದು, ರೈತರ ಕೆಲಸಗಳು ಆರಂಭಗೊಂಡಿವೆ. ಸರ್ಕಾರ ಕೂಡ ರೈತರಿಗೆ ಉತ್ತಮ ಬೀಜ, ಗೊಬ್ಬರ ಸಿಗುವಂತೆ ಈಗಾಗಲೇ ಕ್ರಮ ಕೈಗೊಂಡಿದೆ. ಆದರೆ ಎಲ್ಲಿಯೂ ವ್ಯತ್ಯಾಸ ಆಗದಂತೆ ಅಧಿಕಾರಿಗಳು ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಬೇಕು.
ಬೇಳೂರು ಗೋಪಾಲಕೃಷ್ಣ, ಶಾಸಕ